ಆರ್ಥಿಕ ಕ್ಲಿಷ್ಟ ಪರಿಸ್ಥಿತಿ; ವಸತಿ ಶಾಲೆಗಳಿಗೆ ಶೇ.10 ಪ್ರವೇಶ ಹೆಚ್ಚಳಕ್ಕೆ 11.29 ಕೋಟಿ ರು. ಹಣವಿಲ್ಲ, ಕೈ ಚೆಲ್ಲಿದ ಇಲಾಖೆ

ಬೆಂಗಳೂರು; ವಸತಿ ಶಾಲೆಗಳಲ್ಲಿ ಹೆಚ್ಚುವರಿಯಾಗಿ ಶೇ.10ರಷ್ಟು ವಿದ್ಯಾರ್ಥಿಗಳಿಗೆ ಪ್ರವೇಶ ಮತ್ತು ಡೇ ಸ್ಕಾಲರ್ಸ್‌ಗೆ 6.00 ಕೋಟಿ ರು. ಸೇರಿ ಒಟ್ಟಾರೆ 17 ಕೋಟಿ ರು.ಗಳ ಹೆಚ್ಚುವರಿ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲವಾಗಿದೆ. ಹೀಗಾಗಿ 2024-25ನೇ ಸಾಲಿನ ಆಯವ್ಯಯ ತಯಾರಿಕೆ ಸಂದರ್ಭದಲ್ಲಿ ಪ್ರಸ್ತಾಪಿಸಬೇಕು ಎಂದು ಹಣಕಾಸು ಇಲಾಖೆಯು  ಕಡತವನ್ನು ಸಮಾಜ ಕಲ್ಯಾಣ ಇಲಾಖೆಗೆ ಹಿಂದಿರುಗಿಸಿದೆ.

 

ಸಮಾಜ ಕಲ್ಯಾಣ ಇಲಾಖೆಯ ಈ ಪ್ರಸ್ತಾವನೆ ಒಪ್ಪದ ಹಣಕಾಸು ಇಲಾಖೆಯು ಇದಕ್ಕೆ ಆರ್ಥಿಕ ಕ್ಲಿಷ್ಟಕರ ಪರಿಸ್ಥಿತಿಯನ್ನು ಮುಂದಿರಿಸಿದೆ. ಇದೇ ಕಾರಣವನ್ನು ಮುಂದಿರಿಸಿ ಸಮಾಜ ಕಲ್ಯಾಣ ಇಲಾಖೆಯ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಾಗುತ್ತಿಲ್ಲ ಎಂದು ಹಣಕಾಸು ಇಲಾಖೆಯು ತನ್ನ ಅಸಹಾಯಕತೆ ವ್ಯಕ್ತಪಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ‘ದಿ ಫೈಲ್‌’ ಗೆ ದಾಖಲೆಗಳು (FD/743/EXP 3/2023-FINANCE DEPT (COMPUTER NUMBER 1183343) ಲಭ್ಯವಾಗಿವೆ.

 

ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯಲ್ಲಿದ್ದ 11,000 ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮಾರ್ಗಪಲ್ಲಟ ಮಾಡಿದೆ. ಮತ್ತು ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮತ್ತು ಸಾಲ ಎತ್ತುವಳಿ ಮಾಡಲು ಏದುಸಿರು ಬಿಡುತ್ತಿದೆ. ಇದೇ ಹೊತ್ತಿನಲ್ಲೇ ವಸತಿ ಶಾಲೆಗಳಲ್ಲಿ ಹೆಚ್ಚುವರಿ ಪ್ರವೇಶ ನೀಡಲು ಅನುದಾನಕ್ಕೂ ಹಣವಿಲ್ಲದಂತಾಗಿರುವುದು ಮುನ್ನೆಲೆಗೆ ಬಂದಿದೆ.

 

ಗ್ಯಾರಂಟಿ ಯೋಜನೆಗಳಿಗೆ ಪ್ರತೀ ವರ್ಷವು ದೊಡ್ಡ ಮೊತ್ತವನ್ನು ನೀಡುವುದು ಕಷ್ಟಕರ ಮತ್ತು ಒಂದೊಮ್ಮೆ ಜಾರಿಗೊಳಿಸಿದರೆ ಇತರೆ ಯೋಜನೆಗಳ ಲೆಕ್ಕ ಶೀರ್ಷಿಕೆಗಳಲ್ಲಿ ಅನುದಾನ ಹಂಚಿಕೆಯಲ್ಲಿ ಕೊರತೆಯಾಗಲಿದೆ ಎಂದು ಆರ್ಥಿಕ ಇಲಾಖೆಯು ಎಚ್ಚರಿಸಿತ್ತು. ಇದನ್ನು ಬದಿಗೊತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಪರಿಣಾಮ, ವಸತಿ ಶಾಲೆಗಳಲ್ಲಿ ಹೆಚ್ಚುವರಿ ಪ್ರವೇಶಕ್ಕೂ ಅನುದಾನಕ್ಕೆ ಕೊರತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಆರ್ಥಿಕ ಕ್ಲಿಷ್ಟ ಪರಿಸ್ಥಿತಿ

 

‘ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ತಿಳಿಸಿದಂತೆ ಶೇ.10ರಷ್ಟು ಹೆಚ್ಚಳ ಮಾಡಿದಲ್ಲಿ ಒಟ್ಟು 4,035 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ. ಇದರ ನಿರ್ವಹಣಾ ವೆಚ್ಚ 11.29 ಕೋಟಿ ರು ಗಳಾಗಲಿದೆ. ಎರಡನೇಯದಾಗಿ ಡೇ ಸ್ಕಾಲರ್ಸ್‌ ಪ್ರವೇಶಾತಿಯಲ್ಲಿಯೂ ಶೇ.10ರಷ್ಟು ಹೆಚ್ಚಳ ಮಾಡಿದಲ್ಲಿ ನಿರ್ವಹಣಾ ವೆಚ್ಚ 6.00 ಕೋಟಿ ರು ಆಗಲಿದೆ. ಈಗ ಕರ್ನಾಟಕ ವಿಧಾನಮಂಡಳದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ನಿರ್ದೇಶನದಂತೆ ಮತ್ತೆ ಕಡತ ಮರು ಸಲ್ಲಿಸಿರುವುದರಿಂದ ಆರ್ಥಿಕ ಕ್ಲಿಷ್ಟ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಒಪ್ಪಲು ಸಾಧ್ಯವಾಗುತ್ತಿಲ್ಲವೆಂಬ ಅಂಶವನ್ನು ಮುಖ್ಯಮಂತ್ರಿ ಅವರ ಅವಗಾಹನೆಗೆ ಸಲ್ಲಿಸಿ ನಂತರ ಆಡಳಿತ ಇಲಾಖೆಗೆ ತಿಳಿಸಬಹುದು,’ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು 2023ರ ನವೆಂಬರ್‍‌ 16ರಂದು ತಿಳಿಸಿದ್ದಾರೆ ಎಂದು ಗೊತ್ತಾಗಿದೆ.

 

ಈ ಸಂಬಂಧ  ಪ್ರಸ್ತಾವನೆಗೆ ಸಂಬಂಧಿಸಿದಂತೆ 2024-25ನೇ ಸಾಲಿನ ಆಯವ್ಯಯ ತಯಾರಿಕೆ ಸಂದರ್ಭದಲ್ಲಿ ಪ್ರಸ್ತಾಪಿಸಬೇಕು ಎಂದು ಆರ್ಥಿಕ ಇಲಾಖೆಯ (ವೆಚ್ಚ-3 ಮತ್ತು 9)  ಸರ್ಕಾರದ ಅಧೀನ ಕಾರ್ಯದರ್ಶಿ ಬಿ ದಯಾನಂದ ಅವರು ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಡಿಸೆಂಬರ್‍‌ 27ರಂದು ಅಭಿಪ್ರಾಯ ತಿಳಿಸಿರುವುದು ಗೊತ್ತಾಗಿದೆ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಹೆಚ್ಚುವರಿ 10 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಂಘದ 76ನೇ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಘಿತ್ತು. ಈ ಕುರಿತು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ನೋಡಲ್‌ ಏಜೆನ್ಸಿಯ ಸಲಹೆಗಾರ ಇ ವೆಂಕಟಯ್ಯ ಅವರು ಅಭಿಪ್ರಾಯ ನೀಡಿದ್ದರು.

 

ಅಭಿಪ್ರಾಯದಲ್ಲೇನಿದೆ?

 

ಈಗಾಗಲೇ ಶಿಕ್ಷಕ ಮತ್ತು ವಿದ್ಯಾರ್ಥಿಗಳ ಅನುಪಾತ ಸಾಮಾನ್ಯವಾಗಿ 27ರಿಂದ 40ರವರೆಗೆ ಇರಬಹುದು. ಆದರೆ ಕ್ರೈಸ್‌ ಶಾಲೆಗಳಲ್ಲಿ ಒಂದನೇ ತರಗತಿಯಲ್ಲಿ 50 ವಿದ್ಯಾರ್ಥಿಗಳು ಇರುತ್ತಾರೆ. ಆದ್ದರಿಂದ ಇನ್ನೂ 10 ವಿದ್ಯಾರ್ಥಿಗಳನ್ನು ಸೇರಿಸಿದಲ್ಲಿ ಶಿಕ್ಷಕರು ತರಗತಿಯಲ್ಲಿ ಪರಿಣಾಮಕಾರಿಯಾಗಿ ಬೋಧಿಸಲು ಕಷ್ಟ ಸಾಧ್ಯ. ಆದ್ದರಿಂದ ಕ್ರೈಸ್‌ ಶಾಲೆಗಳಿಗೆ 6ನೇ ತರಗತಿಗೆ ಪ್ರವೇಶ ಪಡೆಯಲು ಸುಮಾರು 2ರಿಂದ 5 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

 

50 ವಿದ್ಯಾರ್ಥಿಗಳ ಇನ್ನೊಂದು ಸೆಕ್ಷನ್‌ ಪ್ರಾರಂಭಿಸುವುದು ಸೂಕ್ತ. ಆದ್ದರಿಂದ ಅದರ ಅಂದಾಜು ವೆಚ್ಚ ತಯಾರಿಸಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯೊಂದಿಗೆ ಅನುಮೋದನೆ ಪಡೆಯಬಹುದು. ಪ್ರತೀ ವರ್ಷ ಹಂತ ಹಂತವಾಗಿ ಪ್ರತಿ ತರಗತಿಗೆ ಒಂದು ಸೆಕ್ಷನ್‌ ಹೆಚ್ಚುವರಿಯಾಗುತ್ತದೆ.

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ವಾರ್ಷಿಕ 28,004 ರು.ನಂತೆ 5 ವಿದ್ಯಾರ್ಥಿಗಳಿಗೆ ವಾರ್ಷಿಕ 1,40,020 ರು. ಆಗಲಿದೆ. ಒಟ್ಟು 807 ಶಾಲೆಗಳಿಗೆ 5 ವಿದ್ಯಾರ್ಥಿಗಳ ಹೆಚ್ಚುವರಿಯಂತೆ ದಾಖಲು ಮಾಡಿಕೊಂಡಲ್ಲಿ ಹೆಚ್ಚುವರಿಯಾಗಿ 4,035 ವಿದ್ಯಾರ್ಥಿಗಳಿಗೆ (ಶೇ.10ರಷ್ಟು) ಪ್ರವೇಶಾತಿ ನೀಡಲು 11,29,96,140 ರು. ವೆಚ್ಚವಾಗಲಿದೆ ಎಂದು ವೆಂಕಟಯ್ಯ ಅವರು ಅಭಿಪ್ರಾಯ ನೀಡಿದ್ದರು ಎಂದು ಗೊತ್ತಾಗಿದೆ.

 

ಪ್ರಸ್ತುತ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ 833 ವಸತಿ ಶಾಲೆ, ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ 628 ವಸತಿ, ಶಾಲೆ ಕಾಲೇಜುಗಳು ಸ್ವಂತ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಈ ವಸತಿ ಶಾಲೆಗಳಲ್ಲಿ ಸುಮಾರು  5 ವರ್ಷಗಳಿಂದ 25 ವರ್ಷಗಳಷ್ಟು ಹಳೆಯದಾದ 415 ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿದು ಬಂದಿದೆ.

 

 

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವ ಪರಿಶಿಷ್ಟ ಜಾತಿ ಸರ್ಕಾರಿ ವಸತಿ ಶಾಲೆಗಳ ಪೈಕಿ 12 ವಸತಿ ಶಾಲೆಗಳಿಗೆ  ಸ್ವಂತ ಕಟ್ಟಡ ನಿರ್ಮಾಣ ಮಾಡಲು 250 ಕೋಟಿ ರು. ಮೊತ್ತದ ಕ್ರಿಯಾ ಯೋಜನೆಗೆ ಸರ್ಕಾರವು 2023ರ ನವೆಂಬರ್ 20ರಂದು ಅನುಮೋದನೆ ನೀಡಿತ್ತು.

the fil favicon

SUPPORT THE FILE

Latest News

Related Posts