ಬೆಂಗಳೂರು; ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಣ ಮತ್ತು ಸದ್ಯ ಎದುರಾಗಿರುವ ಬರ ಪರಿಸ್ಥಿತಿ, ಬರ ಪರಿಹಾರಕ್ಕೆ ಅನುದಾನ ಒದಗಿಸಲು ಏದುಸಿರು ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ಅನುದಾನ ಲಭ್ಯವಿಲ್ಲದಿದ್ದರೂ ಸಚಿವರಿಗೆ ಹೊಸ ಕಾರು ಖರೀದಿಸಲು ಹೆಚ್ಚುವರಿಯಾಗಿ ಅನುದಾನ ಒದಗಿಸಿತ್ತು ಎಂಬುದು ಇದೀಗ ಬಹಿರಂಗವಾಗಿದೆ.
ಅಲ್ಲದೇ ಹಳೆಯ ವಾಹನಗಳನ್ನು ಬದಲಾಯಿಸುವುದನ್ನು ಒಳಗೊಂಡಂತೆ ಹೊಸ ವಾಹನಗಳನ್ನು ಖರೀದಿಸಲು ಸಂಪೂರ್ಣವಾಗಿ ತಡೆಹಿಡಿಯಲಾಗಿತ್ತು. ಆದರೂ ರಾಜ್ಯ ಕಾಂಗ್ರೆಸ್ ಸರ್ಕಾರವು ಅನುದಾನವಿಲ್ಲದಿದ್ದರೂ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಲು 9.90 ಕೋಟಿ ರು. ಅನುದಾನ ಒದಗಿಸಿತ್ತು ಎಂಬುದು ಆರ್‌ಟಿಐ ದಾಖಲೆಗಳಿಂದ ಗೊತ್ತಾಗಿದೆ.
ಅಲ್ಲದೇ ಹೊಸ ವಾಹನಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿದಂತೆ ಹಿಂದಿನ ಸರ್ಕಾರವು 26.00 ಲಕ್ಷ ರು. ಮಿತಿ ವಿಧಿಸಿತ್ತು. ಅದನ್ನು ತೆರವುಗೊಳಿಸದೆಯೇ 30.00 ಲಕ್ಷ ರು.ವೆಚ್ಚದಲ್ಲಿ ಸಚಿವರಿಗೆ ಹೊಸ ವಾಹನಗಳನ್ನು ಖರೀದಿಸಿದೆ. ಸುತ್ತೋಲೆಯನ್ನೇ ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸಚಿವರಿಗೆ ಹೊಸ ಕಾರುಗಳ ಖರೀದಿ ಸಂಬಂಧ ‘ದಿ ಫೈಲ್’ ಆರ್‌ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಇದರ ಮಧ್ಯೆಯೇ ಸರ್ಕಾರವು ಹೊರಡಿಸಿದ್ದ ಸುತ್ತೋಲೆ ಮತ್ತು ವಾಹನಗಳ ಖರೀದಿಗೆ ವಿಧಿಸಿದ್ದ ಮಿತಿಯನ್ನೂ ಉಲ್ಲಂಘಿಸಿ 9.90 ಕೋಟಿ ರು. ವೆಚ್ಚದಲ್ಲಿ ಹೊಸ ಕಾರುಗಳನ್ನು ಖರೀದಿಸಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗೆ ಗುರಿಯಾಗಿದೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಆದ ಪ್ರವಾಹ ಪೀಡಿತ ಕುಟುಂಬಗಳ ಪುನರ್ ವಸತಿ ಕಲ್ಪಿಸಲು ಹಾಗೂ ರಸ್ತೆ, ಸೇತುವೆ ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಸುಸ್ಥಿತಿಗೆ ತರಲು ಸಂಪನ್ಮೂಲವನ್ನು ಕ್ರೋಢಿಕರಿಸಲು 2009ರ ಅಕ್ಟೋಬರ್ 21ರಂದೇ ಆರ್ಥಿಕ ಇಲಾಖೆಯು ಹಲವು ನಿರ್ಬಂಧಗಳನ್ನು ವಿಧಿಸಿ ಸುತ್ತೋಲೆ ಹೊರಡಿಸಿತ್ತು. 14 ವರ್ಷಗಳ ಹಿಂದೆಯೇ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದುಕೊಂಡಿಲ್ಲ. ಹೀಗಾಗಿ ಇದೇ ಸುತ್ತೋಲೆಯು 2023ರಲ್ಲಿಯೂ ಚಾಲ್ತಿಯಲ್ಲಿದೆ.
ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆರ್ಥಿಕ ಇಲಾಖೆಯು ನೇರಾ ನೇರ ಸುತ್ತೋಲೆಯನ್ನು ಉಲ್ಲಂಘಿಸಿ 9.90 ಕೋಟಿ ರು. ವೆಚ್ಚದಲ್ಲಿ ಹೊಸ ಕಾರುಗಳನ್ನು ಖರೀದಿಸಿದೆ. ಅಲ್ಲದೇ 2009ರಲ್ಲಿ ಹೊರಡಿಸಿದ್ದ ಸುತ್ತೋಲೆ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಆದಿಯಾಗಿ ಯಾವೊಬ್ಬ ಅಧಿಕಾರಿಯೂ ಕಡತದಲ್ಲಿ ಉಲ್ಲೇಖಿಸಿಲ್ಲ, ಪ್ರಸ್ತಾವಿಸಿಯೂ ಇಲ್ಲ.
ಸುತ್ತೋಲೆಯಲ್ಲೇನಿದೆ?
ಯಾವುದೇ ಹೊಸ ಹುದ್ದೆಗಳನ್ನು ಸೃಜಿಸುವ ಹಾಗೂ ಭರ್ತಿ ಮಾಡುವುದನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಅಂದರೆ ಯೋಜನಾ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾದಲ್ಲಿ ಅಥವಾ ಕೇಂದ್ರ ಸಹಾಯದ ಕಾರ್ಯಕ್ರಮಗಳಲ್ಲಿ ಆಡಳಿತ ಇಲಾಖೆಯು ಆರ್ಥಿಕ ಇಲಾಖೆಯ ಪರಿಶೀಲನೆಗೆ ಅಂತಹ ಪ್ರಸ್ತಾವನೆ ಕಳಿಸಬೇಕು.
ಹಳೆಯ ವಾಹನಗಳನ್ನು ಬದಲಾಯಿಸುವುದನ್ನು ಒಳಗೊಂಡಂತೆ ಹೊಸ ವಾಹನಗಳನ್ನು ಖರೀದಿಸುವುದನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಸಹಾಯನುದಾನಕ್ಕೆ ಒಳಪಡಿಸುವ ಯಾವುದೇ ಹೊಸ ಪ್ರಕರಣಗಳನ್ನು ಪರಿಗಣಿಸಬಾರದು. ವಿದೇಶಿ ನೆರವಿನ ಒಡಂಬಡಿಕೆಗೆ ಸಂಬಂಧಿಸಿದ ಪ್ರಕರಣಗಳ ಹೊರತಾಗಿ ಯಾವುದೇ ವಿದೇಶ ಪ್ರವಾಸವನ್ನು ಕರ್ನಾಟಕ ಸರ್ಕಾರ ಕೈಗೊಳ್ಳಬಾರದು. ತಾರಾ (ಸ್ಟಾರ್) ಹೋಟೆಲ್‌ಗಳಲ್ಲಿ ಅಧಿಕೃತ ಸಭೆಗಳನ್ನು ಕಾರ್ಯಾಗಾರಗಳನ್ನು ನಡೆಸಬಾರದು.
ಸಚಿವರು ಮತ್ತು ಸಚಿವ ಸ್ಥಾನಮಾನದ ಹೊಂದಿದ ಅಧಿಕಾರೇತರ ಸದಸ್ಯರು, ಸರ್ಕಾರದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ದರ್ಜೆ ಅಧಿಕಾರಿಗಳು, ಸಾರ್ವಜನಿಕ ಉದ್ದಿಮೆಗಳ ಎಲ್ಲಾ ಅಧ್ಯಕ್ಷರುಗಳು ಮತ್ತು ಅಧಿಕಾರಿಗಳು ಮಿತವ್ಯಯ ದರ್ಜೆಯಲ್ಲಿ ವಿಮಾನ ಪ್ರಯಾಣ ಮಾಡಬೇಕು ಎಂದು ಸುತ್ತೋಲೆ ಹೊರಡಿಸಲಾಗಿತ್ತು.
ಆದರೆ ಸಚಿವರ ಒತ್ತಡ ಮತ್ತು ಬೇಡಿಕೆಗೆ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 30.00 ಲಕ್ಷ ರು. ವೆಚ್ಚದಲ್ಲಿ ಹೊಸ ಕಾರುಗಳನ್ನು ಖರೀದಿಸಲು ಅನುಮೋದನೆ ನೀಡಿ ಸುತ್ತೋಲೆಯನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಹೊಸ ಕಾರು ಖರೀದಿಗೆ ಹೆಚ್ಚುವರಿ ಅನುದಾನ
33 ನೂತನ ಸಚಿವರುಗಳಿಗೆ ಹೊಸ ಇನ್ನೋವಾ ಹೈಕ್ರಾಸ್ ಹೈಬ್ರಿಡ್ ವಾಹನಗಳನ್ನು ಪ್ರತಿ ವಾಹನಕ್ಕೆ 30.00 ಲಕ್ಷ ರು.ನಂತೆ 9.90 ಕೋಟಿ ರು. ವೆಚ್ಚದಲ್ಲಿ ಖರೀದಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 4(ಜಿ) ವಿನಾಯಿತಿ ಕೋರಿ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ 2023-24ನೇ ಸಾಲಿನಲ್ಲಿ ಸಚಿವಾಲಯ ಮತ್ತು ಇತರೆ ಸರ್ಕಾರಿ ಅಧಿಕಾರಿಗಳಿಗೆ ( ಲೆಕ್ಕ ಶೀರ್ಷಿಕೆ; 4070-00-800-0-10) ಕಾರು ಖರೀದಿಗೆ ಅನುದಾನ ಲಭ್ಯವಿರಲಿಲ್ಲ.
ಈ ಲೆಕ್ಕ ಶೀರ್ಷಿಕೆ ( 4070-00-800-0-10ಯಲ್ಲಿ )ಯಲ್ಲಿ 500.00 ಲಕ್ಷ ರು. ಮಾತ್ರ ಅನುದಾನವಿತ್ತು. ಆದರೆ 2023ರ ಆಗಸ್ಟ್ 13ರವರೆಗೆ 64.94 ಲಕ್ಷ ರು. ವೆಚ್ಚವಾಗಿ 435.06 ಲಕ್ಷ ರು. ಮಾತ್ರ ಲಭ್ಯವಿತ್ತು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ಶಾಸಕರೂ ಆಗಿರುವ ಎ ಎಸ್ ಪೊನ್ನಣ್ಣ ಅವರಿಗೆ ಹೊಸ ವಾಹನ ಒದಗಿಸಲು ಆರ್ಥಿಕ ಇಲಾಖೆಯು ಸಹಮತಿ ವ್ಯಕ್ತಪಡಿಸಿತ್ತು. ಇದಕ್ಕಾಗಿ 30.00 ಲಕ್ಷ ರು.ಗಳನ್ನು ಕಾಯ್ದಿರಿಸಿದ್ದಲ್ಲಿ ಈ ಲೆಕ್ಕ ಶೀರ್ಷಿಕೆಯಲ್ಲಿ 405.06 ಲಕ್ಷ ರು. ಮಾತ್ರ ಲಭ್ಯವಿತ್ತು. ಹೀಗಾಗಿ ಸಚಿವರಿಗೆ ಹೊಸ ಕಾರುಗಳನ್ನು ಖರೀದಿಸಲು ಅನುದಾನವೇ ಇರಲಿಲ್ಲ ಎಂಬುದು ದಾಖಲೆಯಿಂದ ಗೊತ್ತಾಗಿದೆ.
‘ಆದ್ದರಿಂದ 33 ನೂತನ ಸಚಿವರುಗಳಿಗೆ ಹೊಸ ಇನ್ನೋವಾ ಹೈಕ್ರಾಸ್-ಹೈಬ್ರಿಡ್ ವಾಹನಗಳನ್ನು ಪ್ರತಿ ವಾಹನಕ್ಕೆ 30.00 ಲಕ್ಷ ರು.ನಂತೆ ಒಟ್ಟಾರೆ 9.90 ಕೋಟಿ ರು. ಹೆಚ್ಚುವರಿ ಅನುದಾನಕ್ಕೆ ಸಂಬಂಧಿಸಿದಂತೆ ( ಲೆಕ್ಕ ಶೀರ್ಷಿಕೆ; 4070-00-800-0-10) ಯಲ್ಲಿ ವಾಹನಗಳ ಖರೀದಿಗೆ ಲಭ್ಯವಿದ್ದ 405.06 ಲಕ್ಷ ರುಗಳಲ್ಲಿ ಸಾಂಕೇತಿವಾಗಿ 1 ಲಕ್ಷ ಹೊರತುಪಡಿಸಿದಲ್ಲಿ ಬಾಕಿ 585.94 ಲಕ್ಷ ರು. ಹೆಚ್ಚುವರಿಯಾಗಿ ಒದಗಿಸಿ ಬಿಡುಗಡೆ ಮಾಡಬೇಕಾಗಿದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಟಿಪ್ಪಣಿ ಹಾಳೆಯಲ್ಲಿ ವಿವರಿಸಿತ್ತು.
ಇದಷ್ಟೇ ಅಲ್ಲ ಹಿಂದಿನ ಸರ್ಕಾರವು ಹೊಸ ಕಾರುಗಳ ಖರೀದಿಗೆ 23.00ಲಕ್ಷ ರು.ನಿಂದ 26.00 ಲಕ್ಷ ರು.ಕ್ಕೆ ನಿಗದಿಪಡಿಸಿ ಮಿತಿಯನ್ನು ಹೇರಿತ್ತು.
ಕಾಂಗ್ರೆಸ್ ಸರ್ಕಾರದ ಸಚಿವರಿಗಾಗಿಯೇ ಹೊಸ ಕಾರುಗಳನ್ನು ಖರೀದಿಸಲು ಈ ಮಿತಿಯನ್ನು 26.00 ಲಕ್ಷ ರು.ಗಳಿಂದ 30.00 ಲಕ್ಷ ರು.ಗಳಿಗೆ ಹೆಚ್ಚಿಸಲು ಆರ್ಥಿಕ ಇಲಾಖೆಯು ಪ್ರಸ್ತಾವಿಸಿತ್ತು.
ಆದರೆ ಈ ಮಿತಿ ಹೆಚ್ಚಳ ಮಾಡುವ ಸಂಬಂಧ ಆರ್ಥಿಕ ಇಲಾಖೆಯು ಹೊಸ ಅಧಿಸೂಚನೆ ಹೊರಡಿಸಿರುವುದು ಕಡತದಲ್ಲಿ ಕಂಡು ಬಂದಿಲ್ಲ.
ಸಚಿವ ಹೆಚ್ ಕೆ ಪಾಟೀಲ್ ಅವರು ಹೊಸ ಕಾರು ಖರೀದಿಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು.
ಅಲ್ಲದೇ ಸಚಿವರಾದ ಸತೀಶ್ ಜಾರಕಿಹೊಳಿ, ರಹೀಂ ಖಾನ್, ಡಾ ಶರಣ ಪ್ರಕಾಶ್ ಪಾಟೀಲ್, ದಿನೇಶ್ ಗುಂಡೂರಾವ್, ಮಂಕಾಳ ವೈದ್ಯ, ಕೆ ಜೆ ಜಾರ್ಜ್, ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಡಾ ಹೆಚ್ ಸಿ ಮಹದೇವಪ್ಪ ಅವರು ಇನ್ನೋವಾ ಹೈಕ್ರಾಸ್ ಹೈಬ್ರಿಡ್ ಕಾರುಗಳನ್ನೇ ಒದಗಿಸಬೇಕು ಎಂದು ಸರ್ಕಾರದ ಕಾರ್ಯದರ್ಶಿ ಮತ್ತು ಮುಖ್ಯಮಂತ್ರಿಗೆ ಟಿಪ್ಪಣಿ ಹಾಕಿದ್ದರು ಎಂಬುದು ತಿಳಿದು ಬಂದಿದೆ.