ಕನ್ನಡ ಮಾಧ್ಯಮ ಖಾಸಗಿ ಶಾಲೆಗಳಿಗಿಲ್ಲ ವೇತನಾನುದಾನ; 179 ಕೋಟಿ ವೆಚ್ಚ ಭರಿಸಲು ಮುಂದಾಗದ ಸರ್ಕಾರ

ಬೆಂಗಳೂರು; 1995ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಸಿಬ್ಬಂದಿಗಳಿಗೆ ವೇತನಾನುದಾನ ಮತ್ತು ಸೇವಾ ಭದ್ರತೆಯೇ ಇಲ್ಲ. ಅಷ್ಟೇ ಅಲ್ಲ ಈ ಶಾಲೆಗಳನ್ನ ವೇತನ ಅನುದಾನಕ್ಕೆ ಒಳಪಡಿಸಲು ಸರ್ಕಾರದ ಮುಂದೆ ಯಾವುದೇ ಪ್ರಸ್ತಾಪವೂ ಇಲ್ಲ.

 

ಹೀಗೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್‌ ಮಧು ಬಂಗಾರಪ್ಪ ಅವರು ವಿಧಾನಪರಿಷತ್‌ನಲ್ಲಿ ಉತ್ತರ ನೀಡಿದ್ದಾರೆ.

 

ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಮಧು ಬಂಗಾರಪ್ಪ ಅವರು ಖಾಸಗಿ ವಲಯದ ಕನ್ನಡ ಮಾಧ್ಯಮ ಶಾಲೆಗಳ ಸಿಬ್ಬಂದಿಗೆ ವೇತನ ಅನುದಾನ ಒದಗಿಸುವ ಸಂಬಂಧ ಯಾವುದೇ ಪ್ರಸ್ತಾವನೆಯೂ ಇಲ್ಲ ಎಂದು ಉತ್ತರಿಸಿದ್ದಾರೆ. ಸರ್ಕಾರದ ಈ ಉತ್ತರವು ಕನ್ನಡ ಮಾಧ್ಯಮ ಶಾಲೆಗಳ ಸಿಬ್ಬಂದಿಯನ್ನು ಮತ್ತಷ್ಟು ಕತ್ತಲೆಗೆ ದೂಡಿದಂತಾಗಿದೆ.

 

ಹಾಗೆಯೇ ಕನ್ನಡ ಮಾಧ್ಯಮವಿರುವ ಖಾಸಗಿ ಕಿರಿಯ ಮತ್ತು ಹಿರಿಯಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಿಬ್ಬಂದಿಯನ್ನು ವೇತನ ಅನುದಾನಕ್ಕೆ ಒಳಪಡಿಸಿದರೆ ವಾರ್ಷಿಕವಾಗಿ 179 ಕೋಟಿ ರು. ವೆಚ್ಚವಾಗುತ್ತದೆ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.

 

1995ರ ನಂತರ ಪ್ರಾರಂಭವಾಗಿರುವ ಕನ್ನಡ ಮಾಧ್ಯಮ ಖಾಸಗಿ ಶಾಲೆಗಳ ಸಿಬ್ಬಂದಿಗಳಿಗೆ ವೇತನಾನುದಾನ ಮತ್ತು ಸೇವಾ ಭದ್ರತೆ ನೀಡಿಲ್ಲ. ಇದು ಸರ್ಕಾರದ ಗಮನಕ್ಕೂ ಬಂದಿದೆ ಎಂದು ಮಧು ಬಂಗಾರಪ್ಪ ಮಾಹಿತಿ ಒದಗಿಸಿದ್ದಾರೆ.

 

1995-2000ನೇ ಸಾಲಿನವರೆಗೆ ಖಾಸಗಿ ವಲಯದಲ್ಲಿ 133 ಪ್ರಾಥಮಿಕ ಶಾಲೆಗಳು ಆರಂಭವಾಗಿವೆ. ಇದರಲ್ಲಿ 487 ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು, 206 ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿ ಒಟ್ಟಾರೆ 693 ಶಿಕ್ಷಕರಿದ್ದಾರೆ.

 

 

ಒಬ್ಬ ಶಿಕ್ಷಕರಿಗೆ ವಾರ್ಷಿಕವಾಗಿ 4,75,000 ರು. ವೆಚಚವಾಗುತ್ತದೆ. ಅದರಂತೆ 693 ಶಿಕ್ಷಕರಿಗೆ ಒಟ್ಟಾರೆ 32,91,75,000 ರು ವೆಚ್ಚವಾಗುತ್ತದೆ. 324 ಪ್ರೌಢಶಾಲೆಗಳಲ್ಲಿ ಅಂದಾಜು 2,592 ಶಿಕ್ಷಕರಿಗೆ ವೇತನ ನೀಡಬೇಕಿದೆ. ಒಬ್ಬರಿಗೆ 47,431 ರು. ನಂತೆ ಒಟ್ಟಾರೆ 2,592 ಶಿಕ್ಷಕರಿಗೆ 147,52,93,824 ರು. ವೆಚ್ಚವಾಗುತ್ತದೆ ಎಂದು ಉತ್ತರದಲ್ಲಿ ವಿವರಿಸಿದ್ದಾರೆ.

 

1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಅನುದಾನರಹಿತ ಶಾಲಾ ಕಾಲೇಜಗಳಿಗೆ ಅನುದಾನ ನೀಡಿ ಕನ್ನಡ ಶಾಲೆಗಳನ್ನು ಉಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಸಮನ್ವಯ ಹೋರಾಟ ಸಮಿತಿಯು ನಿರಂತರವಾಗಿ ಹೋರಾಟ ನಡೆಸುತ್ತಲೇ ಬಂದಿದೆ.

 

ಸ್ವಾತಂತ್ರ್ಯಾನಂತರ ಅವಧಿಯಲ್ಲಿ ಸರಕಾರವು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುತ್ತಿತ್ತು. ಅದು 1986ರಲ್ಲಿ ನಿಂತು ಹೋಗಿದೆ. 2006 ರಲ್ಲಿಅಧಿಕಾರಕ್ಕೆ ಬಂದಿದ್ದ ಸಮ್ಮಿಶ್ರ ಸರಕಾರ ಮತ್ತು 2008 ರಲ್ಲಿಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಸರಕಾರಗಳು 1986 ರಿಂದ 1995 ರವರೆಗೆ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಿಗೆ ಅನುದಾನ ನೀಡಿವೆ.

 

ನಂತರ ಬಂದ ಸರಕಾರಗಳು 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸದೇ ಕನ್ನಡ ಶಾಲೆಗಳಿಗೆ ಅನ್ಯಾಯ ಮಾಡಿವೆ. ಇದರಿಂದ ಈ ಶಾಲೆಗಳಲ್ಲಿ ಕಲಿಯುವ ಲಕ್ಷಾಂತರ ಬಡ ಮಕ್ಕಳು ಸರಕಾರದ ಸೌಲಭ್ಯಗಳಿಂದ ವಂಚಿತವಾಗಿವೆ. ಈ ಶಾಲೆ ಶಿಕ್ಷಕರು 23 ವರ್ಷಗಳಿಂದ ಕನಿಷ್ಠ ಸಂಬಳಕ್ಕೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅವರ ಜೀವನ ಶೋಚನೀಯವಾಗಿದೆ.

the fil favicon

SUPPORT THE FILE

Latest News

Related Posts