ಬೆಂಗಳೂರು; ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ವೀರ ಸಾವರ್ಕರ್ ಅವರ ಸಂಸ್ಮರಣೆ ಕಾರ್ಯಕ್ರಮದ ಸಮೂಹ ಗಾನದ ಪೂರ್ವಭಾವಿ ತರಬೇತಿಗೆ ಕರೆದೊಯ್ದಿದ್ದ ಕಾಲೇಜು ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರ್ಕಾರ ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ಅಳವಡಿಸಿರುವ ವೀರ ಸಾವರ್ಕರ್ ಅವರ ಪ್ರತಿಮೆಯನ್ನು ತೆರವುಗೊಳಿಸುವ ಸಂಬಂಧ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ನಾಯಕರು ಕೆಂಡಾಮಂಡಲವಾಗಿದ್ದರು.
ಈ ಕುರಿತು ಬಿರುಸಿನ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮಕ್ಕೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯ್ದಿದ್ದ ಪಿಯು ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕ್ರಮವು ಬಿಜೆಪಿಗೆ ಮತ್ತೊಂದು ಪ್ರತ್ಯಾಸ್ತ್ರವನ್ನು ನೀಡಿದಂತಾಗಿದೆ.
ಪ್ರಿಯಾಂಕ್ ಖರ್ಗೆ ಅವರು ನೀಡಿದ್ದ ಹೇಳಿಕೆ ಮತ್ತು ಸಚಿವ ಮಧು ಬಂಗಾರಪ್ಪ ಅವರು ಸಚಿವರಾಗಿರುವ ಇಲಾಖೆಯು ಕೈಗೊಂಡಿರುವ ಕ್ರಮವು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.
ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಕೆಲ ದಾಖಲೆಗಳು (ಇಪಿ 21 ಡಿಜಿಡಿ 2023) ಲಭ್ಯವಾಗಿವೆ.
ಪ್ರಕರಣದ ಹಿನ್ನೆಲೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಹಾವೇರಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು 2023ರ ಡಿಸೆಂಬರ್ 12ರಂದು ಹಾವೇರಿ ತಾಲೂಕಿನ ಇಜಾರಿ ಲಕ್ಮಾಪುರದ ಸರ್ಕಾರಿ ಪಿಯು ಕಾಲೇಜಿಗೆ ಪರಿಶೀಲನೆಗೆ ತೆರಳಿದಾಗ ಈ ಪ್ರಕರಣವು ಪತ್ತೆಯಾಗಿತ್ತು.
ಸಿಇಒ ಮತ್ತು ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪರಿಶೀಲನೆಗೆ ತೆರಳಿದಾಗ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಥಮ ಪಿಯುಸಿ ಎ ಮತ್ತು ಬಿ ವಿಭಾಗದ ವಿದ್ಯಾರ್ಥಿನಿಯರ ಹಾಜರಾತಿ ಅತೀ ಕಡಿಮೆ ಇರುವುದನ್ನು ಗಮನಿಸಿದ್ದರು. ಈ ಬಗ್ಗೆ ಅತಿಥಿ ಉಪನ್ಯಾಸಕರನ್ನು ತಂಡವು ಪ್ರಶ್ನಿಸಿತ್ತು.
‘ಅತಿಥಿ ಉಪನ್ಯಾಸಕ ನಾಗರಾಜ ಬಣಕಾರ ಅವರನ್ನು ವಿಚಾರಿಸಲಾಗಿ ಸುಮಾರು 95 ವಿದ್ಯಾರ್ಥಿಗಳು ರಾಷ್ಟ್ರಭಕ್ತ ಬಳಗ ಹಾವೇರಿ ಘಟಕವು 2023ರ ಡಿಸೆಂಬರ್ 17ರಂದು ಹಮ್ಮಿಕೊಂಡಿರುವ ವೀರ ಸಾವರ್ಕರ್ ಸಂಸ್ಕರಣೆ ಕಾರ್ಯಕ್ರಮದ ಸಮೂಹ ಗಾನದ ಪೂರ್ವಭಾವಿ ತರಬೇತಿಗೆ ಹೋಗಿರುವುದಾಗಿ ತಿಳಿಸಿರುತ್ತಾರೆ,’ ಎಂಬ ಅಂಶವನ್ನು ಟಿಪ್ಪಣಿ ಹಾಳೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಲ್ಲದೇ ಇದೇ ವಿದ್ಯಾರ್ಥಿನಿಯರು ಕಾಲೇಜಿನ ಅವಧಿಯಲ್ಲಿ ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಎರಡೂ ಕಾರ್ಯಕ್ರಮಗಳಿಗೆ ಪ್ರಾಂಶುಪಾಲ ಕೆ ಕೃಷ್ಣಪ್ಪ ಅವರು ಅನುಮತಿ ನೀಡಿದ್ದರು ಎಂದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
‘ಪ್ರಾಂಶುಪಾಲ ಕೆ ಕೃಷ್ಣಪ್ಪ ಅವರು ಇಲಾಖೆಯಿಂದ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ಖಾಸಗಿ ಕಾರ್ಯಕ್ರಮಕ್ಕೆ ಭಾಗವಹಿಸಲು ಅನುಮತಿ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ,’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಸಿಇಒಗೆ ವರದಿ ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.
ಶೈಕ್ಷಣಿಕ ಚಟುವಟಿಕೆಗಳನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳಿಗೆ ಇಲಾಖೆಯ ಅನುಮತಿ ಇಲ್ಲದೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವಂತಿಲ್ಲ. ಅಲ್ಲದೇ ಶೈಕ್ಷಣಿಕ ಚಟುವಟಿಕೆಗಳ ಹೊರತುಪಡಿಸಿದ ಇತರೆ ರಾಜಕೀಯ ಮತ್ತು ಖಾಸಗಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅನುಮತಿಸಲು ಅವಕಾಶವನ್ನೂ ನೀಡಬಾರದು ಎಂದು ಎಂದು ಸರ್ಕಾರದ ಸೂಚನೆ ಮತ್ತು ನಿರ್ದೇಶನಗಳಿವೆ. ಆದರೂ ಇವುಗಳನ್ನು ಪ್ರಾಂಶಪಾಲ ಕೃಷ್ಣಪ್ಪ ಅವರು ಉಲ್ಲಂಘಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅದೇ ರೀತಿ ‘ ಸರ್ಕಾರದ ನಿರ್ದೇಶನಗಳನ್ನು ಉಲ್ಲಂಘಿಸಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಇಲಾಖೆಯಿಂದ ಆಯೋಜಿಸುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿ ರಾಜಕೀಯ, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುಮತಿ ನೀಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿನ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸದೇ ತೀವ್ರ ಸ್ವರೂಪದ ಕರ್ತವ್ಯಲೋಪ ಎಸಗಿದ್ದಾರೆ. ಈ ಹಿನ್ನೆಲೆಯಲ್ಲಿ ಇವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಅನ್ವಯ ಶಿಸ್ತು ಕ್ರಮ ಕೈಗೊಳ್ಳಬೇಕು,’ ಎಂದು ಜಿಲ್ಲಾ ಪಂಚಾಯತ್ ಸಿಇಒ ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ಗೊತ್ತಾಗಿದೆ.
ಹಾಗೆಯೇ ಇದೇ ಕಾಲೇಜಿನ ಪ್ರಾಂಶುಪಾಲ ಕೆ ಕೃಷ್ಣಪ್ಪ ಅವರ ವಿರುದ್ಧ ತಾವರೆಕೆರೆಯ ಸೀಗೇಹಳ್ಳಿಯ ಪಿಯು ಕಾಲೇಜಿನಲ್ಲಿಯೂ ಇಲಾಖೆ ವಿಚಾರಣೆ ಬಾಕಿ ಇತ್ತು. ಆದರೂ ತಮ್ಮ ವಿರುದ್ಧ ಯಾವುದೇ ವಿಚಾರಣೆ ಬಾಕಿ ಇಲ್ಲವೆಂದು ತಪ್ಪು ಮಾಹಿತಿ ನೀಡಿ ಪ್ರಾಂಶುಪಾಲರ ಹುದ್ದೆಗೆ ಬಡ್ತಿ ಹೊಂದಿದ್ದರು. ಹೀಗಾಗಿ ಇವರ ಬಡ್ತಿಯನ್ನು ಹಿಂಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ.
ಇದೇ ಪ್ರಕರಣದಲ್ಲಿ ಕೃಷ್ಣಪ್ಪ ಅವರನ್ನು ಪ್ರಾಂಶುಪಾಲರ ಹುದ್ದೆಗೆ ನೀಡಿದ್ದ ಬಡ್ತಿಯನ್ನು ಹಿಂಪಡೆದು ಆದೇಶಿಸಲಾಗಿತ್ತು. ಪಿಯು ನಿರ್ದೇಶಕರ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿತ್ತು. ಆದರೆ ಇದುವರೆಗೂ ನಿರ್ದೇಶನಾಲಯದ ಹಂತದಲ್ಲಿ ಕಾರ್ಯವರದಿ ಮಾಡಿಕೊಂಡಿರಲಿಲ್ಲ ಎಂದು ವರದಿ ನೀಡಲಾಗಿತ್ತು.