ಬಿಜೆಪಿ ಸರ್ಕಾರದ ಅವಧಿಯ ಬೊಕ್ಕಸದಲ್ಲಿ 24,714.77 ಕೋಟಿ ರು ನಗದು ಬಾಕಿ; ಕಾಂಗ್ರೆಸ್‌ ಸರ್ಕಾರದಲ್ಲಿ ಎಷ್ಟಿದೆ?

ಬೆಂಗಳೂರು; ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರವು ಅಧಿಕಾರದಿಂದ ಕೆಳಗಿಳಿಯುವ ಎರಡು ತಿಂಗಳ ಮೊದಲು ರಾಜ್ಯದ ಬೊಕ್ಕಸದಲ್ಲಿ  ಕೇವಲ 24,714.77 ಕೋಟಿ ರು ನಗದು ಬಾಕಿಯಿತ್ತು.

 

ಸರ್ಕಾರವು ದಿವಾಳಿಯಾಗಿದೆ, ಶ್ವೇತ ಪತ್ರ ಹೊರಡಿಸಿ ಎಂದು ಪ್ರತಿಪಕ್ಷ ನಾಯಕ ಆರ್‍‌ ಅಶೋಕ್‌ ಅವರು ಬೆಳಗಾವಿಯ ಅಧಿವೇಶನದಲ್ಲಿ ಆಗ್ರಹಿಸಿದ್ದರ ಬೆನ್ನಲ್ಲೇ 2023ರ ಮಾರ್ಚ್‌ 31ರ ಅಂತ್ಯದಲ್ಲಿ ಬೊಕ್ಕಸದಲ್ಲಿದ್ದ ಹಣಕಾಸಿನ ವಿವರಗಳನ್ನು ‘ದಿ ಫೈಲ್‌’ ಇದೀಗ ಬಹಿರಂಗಗೊಳಿಸುತ್ತಿದೆ.

 

2023ರ ಮಾರ್ಚ್‌ 31ರ ಅಂತ್ಯದವರೆಗಿನ ರಾಜ್ಯ ಹಣಕಾಸು ಲೆಕ್ಕ ಪರಿಶೋಧನೆ ಕುರಿತು ಪ್ರಧಾನ ಮಹಾಲೇಖಪಾಲರಾದ ಶಾಂತಿ ಪ್ರಿಯ ಮತ್ತು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ ಕೆ ಅತೀಕ್‌, ಖಜಾನೆ ಇಲಾಖೆಯ ಆಯುಕ್ತರಾದ ಡಾ ಅರುಂಧತಿ ಚಂದ್ರಶೇಖರ್‍‌ ಮತ್ತಿತರರ ಅಧಿಕಾರಿಗಳೊಂದಿಗೆ 2023ರ ನವೆಂಬರ್‍‌ 23ರಂದು ಸಭೆ ನಡೆದಿತ್ತು. ಈ  ಸಭೆಯಲ್ಲಿ ಹಿಂದಿನ ಸರ್ಕಾರದ ಅವಧಿಯ  ಬೊಕ್ಕಸದಲ್ಲಿದ್ದ ನಗದು ಬಾಕಿ ವಿವರಗಳ ಕುರಿತು ಚರ್ಚೆಯಾಗಿದೆ.

 

ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸಿಎಜಿ ಕಂಡಿಕೆಯಲ್ಲಿ ನಗದು ಬಾಕಿ (Cash Balance And Their Investment) ಮತ್ತು ಅದರ ಹೂಡಿಕೆ ಕುರಿತು ವಿವರಣೆ ಕೋರಿತ್ತು. ಇದಕ್ಕೆ ಆರ್ಥಿಕ ಇಲಾಖೆಯು ನೀಡಿರುವ ಉತ್ತರದಲ್ಲಿ ನಗದು ಬಾಕಿ ಎಂದು ಉಲ್ಲೇಖಿಸಿಲ್ಲ. ಬದಲಿಗೆ ರಾಜ್ಯ ಸರ್ಕಾರದ ವಾಸ್ತವಿಕ ಮುಕ್ತಾಯ (Closing Balacne) ಬಾಕಿ 24,714.77 ಕೋಟಿ  ಎಂದಷ್ಟೇ ಹೇಳಿರುವುದು (Finance Department stated that the State Government’s actual closing balance stand at 24,714.77 crore) ನಡವಳಿಯಿಂದ ತಿಳಿದು ಬಂದಿದೆ.

 

ಬಿಜೆಪಿ ಸರ್ಕಾರದ ಅಂತ್ಯದಲ್ಲಿ ಬೊಕ್ಕಸದಲ್ಲಿ 24, 714.77 ಕೋಟಿ ರುಪಾಯಿಗಳಿತ್ತು. ಆ ನಂತರ ಅದಕ್ಕೆ 2023 ಮೇ ನಂತರದ ಸರ್ಕಾರದ ಆದಾಯ (ಕೇಂದ್ರ ಅನುದಾನ, ರಾಜ್ಯ ಆದಾಯ ಮತ್ತು ಸಾಲ) ಸೇರಿಕೊಂಡು ಮತ್ತಿತರ ಮೂಲಗಳಿಂದ ಬಂದ ಮೊತ್ತ ಸರ್ಕಾರದ ಬೊಕ್ಕಸದಲ್ಲಿ ಇತ್ತು. ಆ ಮೊತ್ತದಿಂದ ಅಕ್ಟೋಬರ್ ಅಂತ್ಯದವರೆಗೆ ರೂ.1.54 ಲಕ್ಷ ಕೋಟಿ ರು.ಗಳನ್ನು  ವಿವಿಧ ಇಲಾಖೆಗಳಿಗೆ ಬಿಡುಗಡೆ ಮಾಡಲಾಗಿದೆ.  ಬಿಡುಗಡೆ ನಂತರ ಬೊಕ್ಕಸದಲ್ಲಿ ಎಷ್ಟು ಹಣ ಉಳಿದಿದೆ ಎಂದು ತಿಳಿದು ಬಂದಿಲ್ಲ.

 

ಇದಲ್ಲದೇ 2024ರ ಮಾರ್ಚ್‌ 31ರೊಳಗೆ ಸರ್ಕಾರ ಇನ್ನೂ ರೂ.1.24 ಲಕ್ಷ ಕೋಟಿ ಬಿಡುಗಡೆ ಮಾಡಬೇಕಿದೆ.

 

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ 2023-24ರ ಬಜೆಟ್‌ನಲ್ಲೇ ಘೋಷಿಸಿದಂತೆ ಹಿಂದಿನ ಸಾಲಿನ ಅನುದಾನದಲ್ಲಿ ಬಳಕೆಯಾಗದೇ ಉಳಿದ ಆರಂಭಿಕ ಶಿಲ್ಕು 19, 804.8 (2023ರ ಅಕ್ಟೋಬರ್‍‌ ಅಂತ್ಯಕ್ಕೆ) ಕೋಟಿಯಷ್ಟು ವಿವಿಧ ಇಲಾಖೆಗಳಲ್ಲಿತ್ತು. ಆ ನಂತರದಲ್ಲಿ ಈ ವರ್ಷ ಇಲಾಖೆಗಳಿಗೆ 2.78 ಲಕ್ಷ ಕೋಟಿ ಬಿಡುಗಡೆ ಮಾಡಬೇಕಿತ್ತು. ಪ್ರಾಥಮಿಕ ಶಿಲ್ಕು ಸೇರಿ ಒಟ್ಟಾರೆ 2,98,230.46 ಕೋಟಿ ರು. ಇದೆ. ಈ ಪೈಕಿ ರೂ.1.54 ಲಕ್ಷ ಕೋಟಿ ಬಿಡುಗಡೆ ಮಾಡಲಾಗಿದೆ ಮತ್ತು 1.24 ಲಕ್ಷ ಕೋಟಿ ಬಿಡುಗಡೆಗೆ ಬಾಕಿ ಇದೆ.

 

ಇಲಾಖೆಗಳ ವೆಚ್ಚಕ್ಕೆ ಬಿಡುಗಡೆಗೆ ಬಾಕಿ ಇರುವ ರೂ.1.24 ಲಕ್ಷ ಕೋಟಿಗಳ ಆಕರದ ಬಗ್ಗೆ ಮಾಹಿತಿಯನ್ನು ಆರ್ಥಿಕ ಇಲಾಖೆ ಒದಗಿಸಿಲ್ಲ. ಆರಂಭಿಕ ಶಿಲ್ಕು ಸಹ ಸೇರಿದಂತೆ ಈ ವರ್ಷ ಇಲಾಖೆಗಳ ಬಳಿ ವೆಚ್ಚಕ್ಕೆ ರೂ.1.74 ಲಕ್ಷ ಕೋಟಿ ಲಭ್ಯವಿದೆ. ಈ ಪೈಕಿ 1.24 ಲಕ್ಷ ಕೋಟಿ ಈಗಾಗಲೇ ಬಳಸಿಕೊಳ್ಳಲಾಗಿದೆ ಮತ್ತು ಇನ್ನೂ ರೂ.50, 199.78 ಕೋಟಿ ಬಳಕೆ ಆಗಬೇಕಿದೆ ಎಂಬುದು ತಿಳಿದು ಬಂದಿದೆ.

 

ಇಲ್ಲಿಯವರೆಗಿನ ತನ್ನ ವೆಚ್ಚ ಸರಿದೂಗಿಸಲು ಸರ್ಕಾರ ರೂ.7,399 ಕೋಟಿ ಸಾಲ ಎತ್ತಿದೆ. ಅಂದರೆ ಇಲ್ಲಿಯವರೆಗೆ ಈ ಸರಕಾರದ ಅಂದಾಜು ಆದಾಯ ಆಕರದಲ್ಲಿ ಕನಿಷ್ಟ 7,399 ಕೋಟಿ ವಿತ್ತೀಯ ಕೊರತೆ ಆಗಿರುವುದು ಆರ್ಥಿಕ ಇಲಾಖೆಯ ಅಂಕಿ ಅಂಶದಿಂದ ಮೇಲ್ನೋಟಕ್ಕೆ ಕಂಡು ಬರುತ್ತದೆ.

 

7 ತಿಂಗಳಲ್ಲಿ 7,399.60 ಕೋಟಿ ರು ಸಾಲ; ಬಿಜೆಪಿ ಅವಧಿಗೆ ಹೋಲಿಸಿದರೆ 2,576.82 ಕೋಟಿ ರು. ಅಧಿಕ

ಅಲ್ಲದೇ ಈವರೆಗೆ ಕೇವಲ 71.38% ಪ್ರಗತಿ ಸಾಧಿಸಿರುವ ಇಲಾಖೆಗಳು ಈ ಸಾಲಿನ ವಿತ್ತೀಯ ಗುರಿಗಳಿಗೆ ತಕ್ಕ ಅನುಷ್ಠಾನ ಕೈಗೊಳ್ಳಲು ವಿಫಲವಾಗುವುದನ್ನು ಮತ್ತು ಆ ಮೂಲಕ ಆದಾಯ ಆಕರಕ್ಕೆ ಈ ಸಾಲಿನಲ್ಲಿ ತುರ್ತು ಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇಲ್ಲದಿರುವುದನ್ನು ಸರ್ಕಾರ ಊಹಿಸಿದಂತಿದೆ.

 

ಕೇಂದ್ರ ಪುರಸ್ಕೃತ ಯೋಜನೆಗಳಡಿ 20,775.56 ಕೋಟಿ ರು. ಮತ್ತು ರಾಜ್ಯದ ಅನುದಾನ 21,071.57 ಕೋಟಿ ರು., ಪ್ರಾಥಮಿಕ ಶಿಲ್ಕು 10,151.75 ಕೋಟಿ ರು. ಸೇರಿ ಒಟ್ಟಾರೆ 51,998.89 ಕೋಟಿ ರು ಇದೆ. ಇದರಲ್ಲಿ ಅಕ್ಟೋಬರ್‍‌ 2023ರ ಅಂತ್ಯಕ್ಕೆ 9,398.78 ಕೋಟಿ ರು. (ಶೇ.45.2) ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರವು, ಬಿಡುಗಡೆಗೆ 11,376.78 ಕೋಟಿ ರು. ಬಾಕಿ ಉಳಿಸಿಕೊಂಡಿದೆ.

 

ರಾಜ್ಯ ಸರ್ಕಾರವು 21,071.57 ಕೋಟಿ ರು.ನಲ್ಲಿ 12,303.89 ಕೋಟಿ ರು ಬಿಡುಗಡೆ ಮಾಡಿದೆ. ರಾಜ್ಯದ ಪಾಲಿನಲ್ಲಿ ಬಿಡುಗಡೆಗೆ 8,767.68 ಕೋಟಿ ರು. ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಒಟ್ಟಾರೆ 20,144.46 ಕೋಟಿ ರು. ಬಾಕಿ ಇದೆ. ಬಿಡುಗಡೆಯಾಗಿರುವ ಕೇಂದ್ರ ಮತ್ತು ರಾಜ್ಯದ ಅನುದಾನದಲ್ಲಿ ಅಕ್ಟೋಬರ್‍‌ 2023ರ ಅಂತ್ಯಕ್ಕೆ ಈಗಾಗಲೇ 19,741.62 ಕೋಟಿ ರು. ವೆಚ್ಚವಾಗಿದೆ.

 

2023-24ನೇ ಸಾಲಿನಲ್ಲಿ ಇಂಧನ, ಕೃಷಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳ ಬಾಹ್ಯ ಅನುದಾನಿತ ಕಾರ್ಯಕ್ರಮಗಳಡಿ ಆರಂಭಿಕ ಶಿಲ್ಕು ಸೇರಿ ಒಟ್ಟಾರೆ 3,233.0 ಕೋಟಿ ರು ಅಕ್ಟೋಬರ್‍‌ ಅಂತ್ಯದವರೆಗಿತ್ತು. ಇದರಲ್ಲಿ 949.00 ಕೋಟಿ ರು. ಬಿಡುಗಡೆಯಾಗಿದೆ. 1,132.0 ಕೋಟಿ ರು. ಅನುದಾನ ಲಭ್ಯವಿದೆ. ಅಕ್ಟೋಬರ್‍‌ ಅಂತ್ಯದವರೆಗೆ ಒಟ್ಟಾರೆ 1,080.72 ಕೋಟಿ ರು. ಖರ್ಚಾಗಿದೆ ಎಂದು ತಿಳಿದು ಬಂದಿದೆ.

 

ಅದೇ ರೀತಿ ನಬಾರ್ಡ್‌ ಕಾರ್ಯಕ್ರಮಗಳಡಿ ಆಯವ್ಯಯದಲ್ಲಿ ಒಟ್ಟಾರೆ 1,833.71 ಕೋಟಿ ರು. ಅನುದಾನ ಒದಗಿಸಿದೆ. 2023ರ ನವೆಂಬರ್‍‌ 15ರ ಅಂತ್ಯಕ್ಕೆ 531.28 ಕೋಟಿ ರು. ಖರ್ಚಾಗಿದೆ. ಇದೇ ಅವಧಿಗೆ 445.86 ಕೋಟಿ ರು. ಕ್ಲೈಮ್‌ ಮಾಡಲಾಗಿದೆ. 445.86 ಕೋಟಿ ರು. ಸಾಲ ಪಡೆಯಲಾಗಿದೆ ಎಂದು ಗೊತ್ತಾಗಿದೆ.

 

ಆರ್ಥಿಕ ವರ್ಷಕ್ಕೆ ಒಟ್ಟು   ವೆಚ್ಚ 327746.62 ಕೋ.ರೂ. ಅಂದಾಜಿಸಿದೆ.  ಈ ಪೈಕಿ  ಅಕ್ಟೋಬರ್  ಅಂತ್ಯಕ್ಕೆ  135559.99 ಕೋಟಿ ರು.  ವೆಚ್ಚ ಆಗಿದೆ. ಇದೇ ಅವಧಿಯಲ್ಲಿ ಸಾಲ ಸೇರಿ 130403.78 ಕೋಟಿ ರು.. ಮಾತ್ರ ಜಮೆಯಾಗಿತ್ತು.  ಈ  ಹಿನ್ನೆಲೆಯಲ್ಲಿ ಅಕ್ಟೋಬರ್ ಅಂತ್ಯಕ್ಕೆ 4984.14 ಕೋಟಿ ರು.  ವಿತ್ತೀಯ ಕೊರತೆ ಇದೆ.  ಅಂದರೆ ಕಳೆದ ವರ್ಷದ ಇದೇ ಅವಧಿಗೆ ಸುಮಾರು ಎರಡೂವರೆ ಪಟ್ಟು ವಿತ್ತೀಯ ಕೊರತೆ ಇರುವುದು ಗೊತ್ತಾಗಿದೆ.

 

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಾಗ ಈ ಹಿಂದಿನ ಸರ್ಕಾರ ಎಲ್ಲ ವಿಭಾಗಗಳಲ್ಲಿ ಜಮೆಯನ್ನು ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚಿಗೆ ಸಂಗ್ರಹಿಸಿತ್ತು.  ಮುದ್ರಾಂಕ ಮತ್ತು ನೋಂದಣಿ ದರ ಹೆಚ್ಚಿಸಿದ್ದರೂ ಉದ್ದೇಶಿತ 25000 ಕೋ.ರೂ. ಪೈಕಿ ಶೇಕಡ 43.76 ಮಾತ್ರ ಆಕರಗೊಂಡಿದೆ.  ಇದೇ ಅವಧಿಯಲ್ಲಿ ಹಿಂದಿನ ಸರ್ಕಾರವು ಶೇ.  63.72ರಷ್ಟು ಬೊಕ್ಕಸಕ್ಕೆ ಜಮೆ ಮಾಡಿತ್ತು.

 

ಬಿಜೆಪಿ ಸರ್ಕಾರದ 2 ವರ್ಷದ ಅವಧಿಯಲ್ಲಿ 30 ಇಲಾಖೆಗಳಿಗೆ ಸಂಬಂಧಿಸಿದಂತೆ 1.42 ಲಕ್ಷ ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ಟೆಂಡರ್‍‌ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಈ ಟೆಂಡರ್‍‌ನಲ್ಲಿ ಸಿಂಹಪಾಲು ಪಡೆದಿದೆ.

 

2 ವರ್ಷದಲ್ಲಿ 1.42 ಲಕ್ಷ ಕೋಟಿ ರು. ಟೆಂಡರ್‍‌ ಅಂತಿಮ; ಜಲಸಂಪನ್ಮೂಲ, ಗ್ರಾಮೀಣ, ನಗರಾಭಿವೃದ್ಧಿ ಸಿಂಹಪಾಲು

 

ಹೀಗಾಗಿ ಈ ಯೋಜನೆಗಳನ್ನು ಮುಂದುವರೆಸಲೇಬೇಕಾದ ಅನಿವಾರ್ಯತೆಯೂ ಈಗಿನ ಸರ್ಕಾರಕ್ಕಿದೆ. ರಾಜ್ಯ ಹಣಕಾಸು ಲೆಕ್ಕಪರಿಶೋಧನಾ ವರದಿಯನ್ನು ಖಾತೆಗಳ ಪ್ರಮಾಣೀಕರಣವನ್ನು ಪೂರ್ಣಗೊಳಿಸಿದ ನಂತರ ತಯಾರಿಸಲಾಗುತ್ತದೆ. ರಾಜ್ಯ ಹಣಕಾಸು ಲೆಕ್ಕ ಪರಿಶೋಧನಾ ವರದಿಯನ್ನು ಸಿಎಜಿಯ ಅನುಮೋದನೆಯ ನಂತರ ರಾಜ್ಯ ಶಾಸಕಾಂಗಕ್ಕೆ ಸಲ್ಲಿಕೆಯಾಗಲಿದೆ.

SUPPORT THE FILE

Latest News

Related Posts