ಕಂಪ್ಯೂಟರ್‍‌ ಖರೀದಿ ಹಗರಣ; ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ ಬಹಿರಂಗ, ಬಹುತೇಕರು ನಿವೃತ್ತಿ

ಬೆಂಗಳೂರು; ಕಳಪೆ ಕಂಪ್ಯೂಟರ್‌, ಝೆರಾಕ್ಸ್‌, ಸಿ ಸಿ ಕ್ಯಾಮರಾ ಸೇರಿದಂತೆ ವಿದ್ಯುನ್ಮಾನಕ್ಕೆ ಸಂಬಂಧಿಸಿದ ಹಲವು ಉಪಕರಣಗಳ ಖರೀದಿಯಲ್ಲಿ ಹಲವು ಗಂಭೀರ ಲೋಪಗಳಾಗಿವೆ ಎಂಬ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿದ್ದಾರೆ  ಎನ್ನಲಾದ 15 ಮಂದಿ ಅಧಿಕಾರಿ, ನೌಕರರು 10-12 ವರ್ಷಗಳ ಹಿಂದೆಯೇ   ನಿವೃತ್ತಿಯಾಗಿದ್ದಾರೆ. ಈ ಪಟ್ಟಿಯನ್ನು ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರು ಸರ್ಕಾರಕ್ಕೆ ಅಧಿಕಾರಿ, ನೌಕರರ ಪಟ್ಟಿಯನ್ನು ಒದಗಿಸಿದ್ದಾರಾದರೂ ಈ ಬಗ್ಗೆ ತಮ್ಮ ಸ್ಪಷ್ಟ ವರದಿಯನ್ನು ಸಲ್ಲಿಸಿರಲಿಲ್ಲ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ ನಿವೃತ್ತಿ ಅಧಿಕಾರಿ, ನೌಕರರ ಪಟ್ಟಿಯನ್ನಷ್ಟೇ ಒದಗಿಸಿದ್ದರು  ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

 

ಕಂಪ್ಯೂಟರ್‍‌ ಖರೀದಿ ಹಗರಣವನ್ನು ‘ದಿ ಫೈಲ್‌’ ಹೊರಗೆಡವುತ್ತಿದ್ದಂತೆ ನಿರ್ದೇಶಕರು ಸರ್ಕಾರಕ್ಕೆ  2022ರ ಜೂನ್‌ 13ರವರೆಗೂ ವರದಿಯನ್ನು ಸಲ್ಲಿಸಿರಲಿಲ್ಲ ಎಂಬ ಅಂಶವು ಮುನ್ನೆಲೆಗೆ ಬಂದಿದೆ.  ಇದಕ್ಕೆ ಸಂಬಂಧಿಸಿದಂತೆ ಕೆಲ ದಾಖಲೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

‘ಸದರಿ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳು, ನೌಕರರ ಹೆಸರುಗಳ ಪಟ್ಟಿಯನ್ನು ತಯಾರಿಸಿ ಈ ಬಗ್ಗೆ ನಿರ್ದೇಶಕರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಬೇಕು ಎಂದು ಸರ್ಕಾರದ ಪತ್ರದಲ್ಲಿ ನಿರ್ದೇಶಿಸಿತ್ತು. ಆದರೆ ನಿರ್ದೇಶಕರು ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸದೇ ಇರುವುದು ಸೂಕ್ತ/ಸಮಂಜಸವಾಗಿರುವುದಿಲ್ಲ,’ ಎಂದು ಅಧಿಕಾರಿಗಳು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿದ್ದರು ಎಂಬುದು ಗೊತ್ತಾಗಿದೆ.

 

ಕಂಪ್ಯೂಟರ್‍‌ ಖರೀದಿ ಹಗರಣದಲ್ಲಿ ಕರ್ತವ್ಯಲೋಪವೆಸಗಿದ ಅಧಿಕಾರಿಗಳ ಪಟ್ಟಿ

 

ಉಪ ನಿರ್ದೇಶಕ ಆರ್‍‌ ಕೆ ರಾಮೇಗೌಡ (2012 ಫೆ.28ರಂದು ನಿವೃತ್ತಿ), ವೆಂಕಟೇಶ್‌ (2014ರ ಮಾರ್ಚ್‌ 31ರಂದು ನಿವೃತ್ತಿ), ಎಸ್‌ ಎಂ ಜೋಗಿ (2015 ಏಪ್ರಿಲ್‌ 30ರಂದು ನಿವೃತ್ತಿ), ಪುಷ್ಪಲತಾ ರಟ್ಟಿಹಳ್ಳಿ ( 2017ರ ಡಿಸೆಂಬರ್‍‌ 31ರಂದು ನಿವೃತ್ತಿ), ಸಣ್ಣ ತಾಯಣ್ಣ (2015ರ ಮೇ 31ರಂದು ನಿವೃತ್ತಿ), ಎಂ ಎಂ ಗರಡೆ (2016ರ ಜೂನ್‌ 30ರಂದು ನಿವೃತ್ತಿ), ಹೆಚ್‌ ರುದ್ರಪ್ಪ (2013ರ ಜೂನ್‌ 30ರಂದು ನಿವೃತ್ತಿ), ವಿ ಪರಶುರಾಮಪ್ಪ ( 2014ರ ಡಿಸೆಂಬರ್‍‌ 31ರಂದು ನಿವೃತ್ತಿ), ಹೆಚ್‌ ಎಸ್‌ ಗಡ್ಡಿ (2014ರ ಮೇ 31ರಂದು ನಿವೃತ್ತಿ), ಎಸ್ಸ್ ಬಿ ಕಡ್ಲಾಸ್ಕರ್‍‌ ( 2016ರ ಸೆ.31ರಂದು ನಿವೃತ್ತಿ), ಎಸ್‌ ಜಿ (2011ರ ಆಗಸ್ಟ್‌ 31ರಂದು ನಿವೃತ್ತಿ), ವೆಂಕೋಬಚಾರ್‍‌ (2011ರ ಜೂನ್‌ 30ರಂದು ನಿವೃತ್ತಿ), ಶ್ರೀಧರಮೂರ್ತಿ (2021ರ ಜುಲೈ 31ರಂದು ನಿವೃತ್ತಿ), ಆರ್‍‌ ಕೆ ಬಡಿಗಣನವರ (2012ರ ಅಕ್ಟೋಬರ್ 30ರಂದು ನಿವೃತ್ತಿ), ಕೆಂಪಣ್ಣ (2011ರ ನವೆಂಬರ್ 30ರಂದು ನಿವೃತ್ತಿ)

 

ನಿರ್ದೇಶಕರ ಮಾಹಿತಿಯೂ ಅಪೂರ್ಣ

 

ಈ ಪ್ರಕರಣದಲ್ಲಿ  ಕರ್ತವ್ಯಲೋಪದಲ್ಲಿ ಭಾಗಿ ಆಗಿದ್ದಾರೆ ಎಂದು ಒದಗಿಸಿದ್ದ ಪಟ್ಟಯೂ ಅಪೂರ್ಣವಾಗಿತ್ತು ಎಂಬುದು ತಿಳಿದು ಬಂದಿದೆ. ‘ನಿರ್ದೇಶಕರ ಪತ್ರದಲ್ಲಿ ನಮೂದಿಸಿರುವ ಅಧಿಕಾರಿ, ನೌಕರರು ಎಲ್ಲಾ ನಿವೃತ್ತಿ ಹೊಂದಿರುವುದು ಕಂಡು ಬಂದಿದ್ದು ಯಾವ ಅವಧಿಯಿಂದ ಯಾವ ಅವಧಿಯವರೆಗೆ ಸದರಿ ಅಧಿಕಾರಿ, ನೌಕರರರು ಕಾರ್ಯನಿರ್ವಹಿಸುತ್ತಿರುತ್ತಾರೆ ಎಂಬ ಅಂಶವನ್ನು ನಮೂದಿಸಿರುವುದಿಲ್ಲ,’ ಎಂದು ಅಧಿಕಾರಿಗಳು ನಮೂದಿಸಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

 

ಅಲ್ಲದೇ ತನಿಖಾ ತಂಡವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2019-20ನೇ ಸಾಲಿನವರೆಗಿನ ಕಡತ ಹಾಗೂ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿತ್ತು. ಈ ಕಾಲಾವಧಿಯಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಅಧಿಕಾರ, ನೌಕರರ ಪಟ್ಟಿಯನ್ನು ಒದಗಿಸುವಂತೆ ಕೋರಿತ್ತು. ನಿವೃತ್ತಿ ಅಧಿಕಾರಿ, ನೌಕರರ ಹೆಸರನ್ನು ಮಾತ್ರ ಪಟ್ಟಿ ಮಾಡಿದ್ದು 2019-20ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿ ಸೇವೆಯಲ್ಲಿರುವ ಅಧಿಕಾರಿ, ನೌಕರರಗಳ ಪಟ್ಟಿ ಮಾಡಿ ಅಧೀನ ಕಚೇರಿಗಳು ಸಲ್ಲಿಸಿರುವುದಿಲ್ಲವೇ ಎಂಬ ಅಂಶವನ್ನು ಗಮನಿಸಬೇಕು ಎಂದು ಅಧಿಕಾರಿಗಳು ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದರು ಎಂಬುದು ಗೊತ್ತಾಗಿದೆ.

 

ತನಿಖಾ ವರದಿಯಲ್ಲಿ ಪ್ರಸ್ತಾಪಿತವಾಗಿರುವ ಅಧಿಕಾರಿ, ನೌಕರರ ಪಟ್ಟಿಯನ್ನು ತಯಾರಿಸಿ ದೋಷಾರೋಪಣೆ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಸರ್ಕಾರ ಹೇಳಿತ್ತು. ಅಲ್ಲದೇ ಅಧಿಕಾರಿ, ನೌಕರರು ಸೇವೆಯಿಂದ ವಯೋನಿವೃತ್ತಿ ಹೊಂದಿದ್ದಲ್ಲಿ ಅಂತಹ ನಿವೃತ್ತಿ ಅಧಿಕಾರಿ, ನೌಕರರ ವಿರುದ್ಧ 1958ರ ಕರ್ನಾಟಕ ನಾಗರಿಕ ಸೇವಾ ನಿಯಮಗಳ 214ರ ಅನ್ವಯ ಸೇವಾ ವಿವರಗಳೊಂದಿಗೆ ಸರ್ಕಾರದ ಅನುಮತಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದ್ದರು ಎಂಬುದು ತಿಳಿದುಬಂದಿದೆ.

 

‘ಅಕ್ನಾ ಟೆಕ್ನಾಲಜಿ ಸಂಸ್ಥೆಯು ನಿರ್ದೇಶಕರ ಕಚೇರಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಝೆರಾಕ್ಸ್‌ ಯಂತ್ರ, ಕಂಪ್ಯೂಟರ್‍‌, ಸಿಸಿ ಕ್ಯಾಮರಾ ಸೇರಿದಂತೆ ಹಲವಾರು ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ಈ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಬೇಕು,’ ಎಂದು ನಿರ್ದೇಶಿಸಿರುವುದು ಗೊತ್ತಾಗಿದೆ.

 

 

ಕಳಪೆ ಕಂಪ್ಯೂಟರ್‌ಗಳನ್ನು ಖರೀದಿಸಿರುವ ಸಂಬಂಧ ಇಡೀ ರಾಜ್ಯಾದ್ಯಂತ ಸಮಗ್ರ ತನಿಖೆ ನಡೆಸಿ ವರದಿ ಪಡೆಯಬೇಕು ಎಂದು ಕರ್ನಾಟಕ ಸಮಗ್ರ ಶಿಕ್ಷಣದ ರಾಜ್ಯ ಯೋಜನಾ ನಿರ್ದೇಶಕರು ಸಲ್ಲಿಸಿದ್ದ ವರದಿಯನ್ನೇ ಗ್ರಂಥಾಲಯ ಇಲಾಖೆಯ ಹಾಲಿ ನಿರ್ದೇಶಕ ಸತೀಶ್‌ ಕುಮಾರ್‌ ಹೊಸಮನಿ ಅವರು ಬದಿಗೆ ಸರಿಸಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

 

ಈ ಪತ್ರವನ್ನಾಧರಿಸಿ ಪ್ರಾಥಮಿಕ ತನಿಖೆ ನಡೆಸಲು ಸಮಗ್ರ ಶಿಕ್ಷಣ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕ ಹೆಚ್‌ ಎನ್‌ ಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ತನಿಖಾ ತಂಡ ರಚಿಸಿತ್ತು. ಈ ತಂಡವು 2020ರ ನವೆಂಬರ್‌ 20 ಮತ್ತು 21, 2021ರ ಫೆ.9ರಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ 2010-11ರಿಂದ 2019-20ರವರೆಗೂ ಕಡತಗಳ ತಪಾಸಣೆ ನಡೆಸಿತ್ತು ಎಂಬುದು ತನಿಖಾ ವರದಿಯಿಂದ ಗೊತ್ತಾಗಿದೆ.

 

 

ಗ್ರಂಥಾಲಯ ಇಲಾಖೆಯಲ್ಲಿ ಕಂಪ್ಯೂಟರ್‌, ಯುಪಿಎಸ್‌, ಝೆರಾಕ್ಸ್‌ ಉಪಕರಣ ಖರೀದಿ ಹಗರಣ; ತನಿಖಾ ವರದಿ

 

ಕಂಪ್ಯೂಟರ್‌, ಯುಪಿಎಸ್‌, ಸರ್ವರ್‌, ಸ್ಕ್ಯಾನರ್‌, ಪ್ರಿಂಟರ್‌, ಬಯೋ ಮೆಟ್ರಿಕ್‌, ಸಿಸಿಟಿವಿ ಕ್ಯಾಮರಾ, ಜೆರಾಕ್ಸ್‌ ಯಂತ್ರ ಸೇರಿದಂತೆ ಇನ್ನಿತರೆ ಎಲೆಕ್ಟ್ರಾನಿಕ್‌ ಸಾಮಗ್ರಿಗಳು, ಸಂಬಂಧಪಟ್ಟ ಉಪಕರಣಗಳ ಪರಿಕರಗಳ ಖರೀದಿ ವಿವರ, ಖರೀದಿ ವಿಧಾನ, ಖರೀದಿ ಮೊಬಲು, ಖರೀದಿ ದಿನಾಂಕ, ಕಡತಗಳ ನಿರ್ವಹಣೆ, ದಾಸ್ತಾನು ವಹಿ ಇತ್ಯಾದಿಗಳ ಕುರಿತು ಪ್ರಾಥಮಿಕ ತನಿಖೆ ನಡೆಸಿತ್ತು. ಈ ಸಂಬಂಧ 2021ರ ಅಕ್ಟೋಬರ್‌ 24ರಂದು ತನಿಖಾ ವರದಿ ಸಲ್ಲಿಸಿತ್ತು ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts