ಗ್ರೂಪ್‌ ಎ ವೃಂದ ಸೇರಿ ನಾಲ್ಕು ವೃಂದಗಳಲ್ಲಿ ನೇಮಕ; ಒಂದೇ ವರ್ಷದಲ್ಲಿ 333 ಹುದ್ದೆ ಕಡಿಮೆ

ಬೆಂಗಳೂರು; ಕರ್ನಾಟಕ ರಾಜ್ಯ ಸರ್ಕಾರಿ ಸೇವೆಯಲ್ಲಿ ಕಳೆದ ವರ್ಷಕ್ಕಿಂತಲೂ ಈ ವರ್ಷದಲ್ಲಿ ಸರ್ಕಾರಿ ಸೇವೆಯ ನಾಲ್ಕು ವೃಂದಗಳಲ್ಲಿ ಒಟ್ಟಾರೆಯಾಗಿ 333 ಹುದ್ದೆಗಳು ಕಡಿಮೆಯಾಗಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯ ಸರ್ಕಾರಿ ಸೇವೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆತಿರುವ ಪ್ರಾತಿನಿಧ್ಯದ ಮಾಹಿತಿ ಕುರಿತು ಆರ್ಥಿಕ, ಸಾಂಖ್ಯಿಕ ನಿರ್ದೇಶನಾಲಯದ ನಾಲ್ಕು ವೃಂದಗಳಲ್ಲಿ ಮಂಜೂರಾಗಿರುವ ಹುದ್ದೆಗಳ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ನಿರ್ದೇಶಕರು ಅಂಕಿ ಅಂಶಗಳ ಮಾಹಿತಿ ಒದಗಿಸಿದ್ದಾರೆ. ಈ ಮಾಹಿತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಿರ್ದೇಶಕರು ಒದಗಿಸಿರುವ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಪರಿಶೀಲಿಸಿದೆ. ಇದರಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆಯು ವ್ಯತ್ಯಾಸವಾಗಿದೆ ಎಂಬ ಸಂಗತಿಯು ಗೊತ್ತಾಗಿದೆ.

 

 

ಹುದ್ದೆಗಳ ಕಡಿತಗೊಳಿಸುವ ಬಗ್ಗೆ ಆಡಳಿತ ಸುಧಾರಣೆ ಆಯೋಗವು ಈಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈಚೆಗಷ್ಟೇ ಭೇಟಿ ಮಾಡಿತ್ತು. ಇದರ ಬೆನ್ನಲ್ಲೇ 333 ಹುದ್ದೆಗಳು ಕಡಿತಗೊಂಡಿರುವ ಅಂಕಿ ಸಂಖ್ಯೆಗಳು ಮುನ್ನೆಲೆಗೆ ಬಂದಿವೆ.

 

2022ರ ಮಾರ್ಚ್‌ 31ರಲ್ಲಿದ್ದ ಹಾಗೂ 2023ರ ಮಾರ್ಚ್‌ 31ರ ಅಂತ್ಯದಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ವ್ಯತ್ಯಾಸದ ಬಗ್ಗೆ ಸೂಕ್ತ ವಿವರಣೆಯನ್ನು ಅತ್ಯಂತ ಜರೂರಾಗಿ ಒದಗಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2023ರ ನವೆಂಬರ್‌ 8ರಂದು ಅನಧಿಕೃತ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಗ್ರೂಪ್‌ ಎ ವೃಂದದಲ್ಲಿ ಒಂದೇ ವರ್ಷದಲ್ಲಿ 69, ಗ್ರೂಪ್‌ ಬಿ ವೃಂದದಲ್ಲಿ 76, ಗ್ರೂಪ್‌ ಸಿ ವೃಂದದಲ್ಲಿ 414, ಗ್ರೂಪ್‌ ಡಿ ನಲ್ಲಿ 226 ಹುದ್ದೆಗಳು ಕಡಿಮೆಯಾಗಿರುವುದು ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಪತ್ರದಿಂದ ಗೊತ್ತಾಗಿದೆ.

 

2022ರ ಮಾರ್ಚ್‌ 31ರ ಅಂತ್ಯಕ್ಕೆ ಗ್ರೂಪ್‌ ಎ, ಬಿ, ಸಿ ಮತ್ತು ಡಿ ವೃಂದದಲ್ಲಿ ಒಟ್ಟಾರೆ 7,220 ಹುದ್ದೆಗಳು ಮಂಜೂರಾಗಿದ್ದವು. 2023ರ ಮಾರ್ಚ್‌31ರ ಅಂತ್ಯಕ್ಕೆ 6,887 ಹುದ್ದೆಗಳು ಮಂಜೂರಾಗಿದ್ದವು.

 

‘ಕಾಲಂ 3 ಮತ್ತು 4 ಅಂಕಿ ಅಂಶಗಳನ್ನು ಪರಿಶೀಲಿಸಿದಾಗ 2022ಕ್ಕಿಂತ 2023ರಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆಯಲ್ಲಿ 333 ಹುದ್ದೆಗಳು ಕಡಿಮೆಯಾಗಿರುತ್ತವೆ.

 

ಆದ್ದರಿಂದ ಈ ಅಂಕಿ ಅಂಶಗಳನ್ನು ಇನ್ನೊಮ್ಮೆ ಪರಿಶೀಲಿಸಿ ವ್ಯತ್ಯಾಸಕ್ಕೆ ಸೂಕ್ತ ವಿವರಣೆ ನೀಡಬೇಕು,’ ಎಂದು ಕೋರಿರುವುದು 2023ರ ಅಕ್ಟೋಬರ್‌ 26ರಂದು ಬರೆದಿರುವ ಪತ್ರದಿಂದ ತಿಳಿದು ಬಂದಿದೆ.

 

ರಾಜ್ಯ ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆತಿರುವ ಮಾಹಿತಿಯ ಕುರಿತು ಸರ್ಕಾರವು ವಾರ್ಷಿಕವಾಗಿ ಪ್ರಕಟಿಸುತ್ತದೆ. ರಾಜ್ಯದ ಸುಮಾರು 86 ಇಲಾಖೆಗಳಿಂದ ಮಾಹಿತಿ ಸಂಗ್ರಹಿಸಿ ಕ್ರೋಢೀಕೃತ ವರದಿಯನ್ನು ತಯಾರಿಸಿ ಜುಲೈ  2023ರೊಳಗೆ ಪ್ರಕಟಿಸಬೇಕಿತ್ತು.

 

ಹೀಗಾಗಿ 2023ರ ಮಾರ್ಚ್‌ 31ರಲ್ಲಿ ಇದ್ದಂತೆ ಇಲಾಖೆಯ ಕೇಂದ್ರ ಕಚೇರಿ, ಇಲಾಖೆಯ ಅಧೀನದಲ್ಲಿ ಬರುವ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಿಬ್ಬಂದಿಗಳ ವಿವರಗಳನ್ನೊಳಗೊಂಡ ಪೂರ್ಣ ಮಾಹಿತಿಯನ್ನು ಒದಗಿಸಲು ಸರ್ಕಾರವು ಸೂಚಿಸಿತ್ತು.

 

ಇಲಾಖೆಯಿಂದ ಇತರೆ ಇಲಾಖೆಗಳಿಗೆ ನಿಯೋಜನೆ ಮೇರೆಗೆ ತೆರಳಿವವರ ವಿವರಗಳನ್ನು ಸೇರಿಸಿಕೊಳ್ಳುವುದು ಮತ್ತು ತಮ್ಮ ಇಲಾಖೆಯಲ್ಲಿ ಇತರೆ ಇಲಾಖೆಯಿಂದ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿಗಳ ವಿವರಗಳನ್ನು ಸೇರಿಸಬಾರದು ಎಂದು ಸೂಚಿಸಲಾಗಿತ್ತು.

 

ಅಲ್ಲದೇ 2023ರ ಮಾರ್ಚ್‌ 31ರಲ್ಲಿದ್ದಂತೆ ಅಧಿಕಾರಿ, ಸಿಬ್ಬಂದಿ, ವರ್ಗ ಸಂಖ್ಯಾ ಸ್ಥಿತಿಯನ್ನು ಬಿಂಬಿಸಬೇಕು. ವರದಿ ನೀಡುವ ಹಂತದಲ್ಲಿ 2023ರ ಮಾರ್ಚ್ 31ರ ಅಂತ್ಯದ ನಂತರ ಘಟಿಸಿರಬಹುದಾದ ನೇಮಕಾತಿ, ಬಡ್ತಿ, ವರ್ಗಾವಣೆ, ನಿವೃತ್ತಿ, ಮರಣಗಳನ್ನು ಪರಿಗಣಿಸಬಾರದು. ಯಾವುದೇ ಕಾರಣಕ್ಕೂ ಇಲಾಖೆಗೆ ಮಂಜೂರಾದ ಹುದ್ದೆಗಳ ಸಂಖ್ಯೆಯನ್ನು ಕಡಿಮೆ ಮಾಡಬಾರದು ಎಂದು ನಿರ್ದೇಶಿಸಿತ್ತು.

 

ಅದೇ ರೀತಿ ಸರ್ಕಾರವು ಹುದ್ದೆಗಳನ್ನು ರದ್ದುಪಡಿಸಿದ್ದಲ್ಲಿ ಮಾತ್ರ ಮಂಜೂರಾದ ಹುದ್ದೆಗಳ ಸಂಖ್ಯೆಯು ಕಡಿಮೆಯಾಗುತ್ತದೆ.
ಇಲಾಖೆಗಳ ವಿಲೀನ ಹಾಗೂ ಅನಗತ್ಯ ಹುದ್ದೆಗಳನ್ನು ರದ್ದು ಮಾಡುವ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಚಾಲನೆ ನೀಡಿತ್ತು. ಆಡಳಿತ ಸುಧಾರಣೆ ಭಾಗವಾಗಿ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ನೇತೃತ್ವದ ಆಯೋಗವು ಶಿಫಾರಸು ಮಾಡಿತ್ತು.

 

ಹಾಗೆಯೇ ಹಿಂದಿನ ವೇತನ ಆಯೋಗ ತನ್ನ ಎರಡನೇ ವರದಿಯಲ್ಲಿ ಕಾರ್ಯಾಚರಣೆ ವೃಂದವನ್ನು ಬಲಪಡಿಸಬೇಕು ಹಾಗೂ ಸಹಾಯಕ ಸಿಬ್ಬಂದಿ ವೃಂದವನ್ನು ಕಡಿಮೆ ಮಾಡಬೇಕೆಂಬ ವರದಿ ಜಾರಿಗೆ ಸರ್ಕಾರ ಮುಂದಾಗಿತ್ತು.

 

ಸಹಕಾರ ಇಲಾಖೆಯ 32 ಶೀಘ್ರ ಲಿಪಿಗಾರರು, 30 ಡಾಟಾ ಎಂಟ್ರಿ ಆಪರೇಟರ್‌ಗಳು, 50 ದ್ವಿತೀಯ ದರ್ಜೆ ಸಹಾಯಕರು ಹಾಗೂ 200 ಗ್ರೂಪ್‌ ಡಿ ಹುದ್ದೆಗಳು ಸೇರಿ ಒಟ್ಟು 312 ಹುದ್ದೆಗಳ ರದ್ದಿಗೆ ಸರ್ಕಾರ ಅನುಮತಿ ನೀಡಿದೆ. ಅಲ್ಲದೇ ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳ ರದ್ದತಿಗೂ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು.

 

ಸರ್ಕಾರಕ್ಕೆ ಹೊರೆ ಮತ್ತು ಆರ್ಥಿಕ ನಷ್ಟವನ್ನು ತಗ್ಗಿಸುವ ಉದ್ದೇಶದಿಂದ ಅನಗತ್ಯ ಹುದ್ದೆಗಳನ್ನು ಕೈಬಿಡಲು ನಿರ್ಧರಿಸಿತ್ತು. ಇ-ಆಫೀಸ್ ತಂತ್ರಾಂಶದ ಹಿನ್ನೆಲೆ ಅಧಿಕಾರಿಗಳೇ ಟೈಪಿಂಗ್ ಮಾಡಬೇಕು. ಡಿಕ್ಟೇಷನ್ ನೀಡಬೇಕಿಲ್ಲ. ಆದ್ದರಿಂದ ಕೆಲ ಹುದ್ದೆಗಳು ಅಗತ್ಯವಿಲ್ಲ. 7ನೇ ವೇತನ ಆಯೋಗ ಬಂದರೆ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು.

 

ಪ್ರತಿ ಇಲಾಖೆಗೆ ಮಂಜೂರಾದ ಹುದ್ದೆಗಳನ್ನು ಪರಿಗಣಿಸುವುದಾದರೆ, ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಿಂತ ಖಾಲಿ ಇರುವ ಹುದ್ದೆಗಳೇ ಹಲವು ಇಲಾಖೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇವೆ ಎಂಬುದು ತಿಳಿದು ಬಂದಿದೆ.

 

ಕಾರ್ಮಿಕ ಇಲಾಖೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ, ಗಣಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಯೋಜನೆ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಠ ಪಂಗಡ ಇಲಾಖೆ, ರೇಷ್ಮೆ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಸಣ್ಣ ಕೈಗಾರಿಕೆ ಇಲಾಖೆ, ಸಾರಿಗೆ ಇಲಾಖೆ, ಯುವ ಸಬಲೀಕರಣ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಕೃಷಿ ಇಲಾಖೆ, ಪಶು ಸಂಗೋಪನೆ ಇಲಾಖೆ, ಸಹಕಾರ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಇ-ಆಡಳಿತ ಇಲಾಖೆ, ಇಂಧನ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ವಾರ್ತಾ ಇಲಾಖೆಗಳಲ್ಲಿ ಖಾಲಿ ಹುದ್ದೆಗಳು ಹೆಚ್ಚಾಗಿವೆ ಎಂದು ಗೊತ್ತಾಗಿದೆ.

 

ರಾಜ್ಯ ಸರ್ಕಾರದ ಹಲವು ಇಲಾಖೆಗಳಿಂದ ಒಟ್ಟು ಶೇಕಡ.34 ರಷ್ಟು ಖಾಲಿ ಹುದ್ದೆಗಳಿವೆ. ಎಲ್ಲ ಇಲಾಖೆಗಳಿಂದ ಸೇರಿ ಒಟ್ಟು 2,58,709 ಹುದ್ದೆಗಳು ಖಾಲಿ ಇವೆ ಎಂದು ಸರ್ಕಾರವೇ ಇತ್ತೀಚೆಗೆ ಮಾಹಿತಿ ನೀಡಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts