ಎಂ2ಎಂ ಕಂಪನಿಯ ಕೋಟಿ ರು. ಸಮೀಕ್ಷೆ; ‘ದಿ ಫೈಲ್‌’ ತನ್ನ ವರದಿಗೆ ಬದ್ಧ

ಬೆಂಗಳೂರು; ಶಕ್ತಿ ಯೋಜನೆ ಸೇರಿದಂತೆ ಇತರೆ ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಸರ್ಕಾರವು ಒಂದು ಕೋಟಿ ರು.ಗಳನ್ನು ನೀಡಿದೆ ಎಂದು ‘ದಿ ಫೈಲ್‌’ ದಾಖಲೆ ಸಹಿತ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯ ಅಂಗವಾಗಿರುವ ಈದಿನ.ಕಾಮ್‌ ತಂಡದ ಹೆಸರಿನಲ್ಲಿ ಸಾರ್ವಜನಿಕವಾಗಿ  ಸ್ಪಷ್ಟೀಕರಣ ನೀಡಿದೆ.

 

ಈದಿನ.ಕಾಮ್‌ ನೀಡಿರುವ ಸಾರ್ವಜನಿಕ ಪ್ರಕಟಣೆಯಂತೆ  2023ರ ನವೆಂಬರ್‍‌ 6ರಂದು ಪ್ರಕಟವಾಗಿರುವ ದಿ ಫೈಲ್‌  ವರದಿಯು ಯಾವುದೇ ಅಪಾರ್ಥಗಳಿಂದ ಕೂಡಿಲ್ಲ ಮತ್ತು ಅದಕ್ಕೆ ಎಡೆಮಾಡಿಕೊಟ್ಟಿಲ್ಲ. ಮತ್ತು ಅದು ಅಪೂರ್ಣವೂ ಅಲ್ಲ. ಈ ವರದಿಗೆ ನಾವು ಬದ್ಧವಾಗಿದ್ದೇವೆ.

 

ಕಳೆದ ನಾಲ್ಕು ವರ್ಷಗಳಿಂದ ‘ದಿ ಫೈಲ್‌’ ಸ್ವತಂತ್ರವಾಗಿ ತನಿಖಾ ವರದಿಗಳನ್ನು ಪ್ರತಿನಿತ್ಯ ಪ್ರಕಟಿಸುತ್ತಲೇ ಬಂದಿದೆ. ಮುಂದೆಯೂ ಇದನ್ನೇ ಮುಂದುವರೆಸುತ್ತದೆ. ಸಾರ್ವಜನಿಕ ಹಿತಾಸಕ್ತಿ, ಸರ್ಕಾರದ ಬೊಕ್ಕಸಕ್ಕೆ ಹಾನಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಕರ್ತವ್ಯಲೋಪ, ಕಾಯ್ದೆಗಳ ದುರ್ಬಳಕೆ ಬಗ್ಗೆ ವರದಿ ಪ್ರಕಟಿಸುತ್ತಲೇ ಇರುತ್ತದೆ.

 

ಈ ಹಿಂದಿನ ಬಿಜೆಪಿ ಸರ್ಕಾರದ ಕಾರ್ಯವೈಖರಿ, ಕೋವಿಡ್‌ ಸಂದರ್ಭದಲ್ಲಿ ನಡೆದ ಅಕ್ರಮಗಳು, ಸರ್ಕಾರದ ದುರಾಡಳಿತ, ನೂರಾರು ಭ್ರಷ್ಟಾಚಾರ ಪ್ರಕರಣ, ಅಧಿಕಾರಿಶಾಹಿಯ ಕರ್ತವ್ಯಲೋಪದ ಪ್ರಕರಣಗಳ ಕುರಿತಾಗಿಯೂ ದಾಖಲೆ ಸಹಿತ ವರದಿಗಳನ್ನು ಪ್ರಕಟಿಸುತ್ತಲೇ ಬಂದಿದೆ. ಈಗಿನ ಕಾಂಗ್ರೆಸ್‌ ಸರ್ಕಾರದ ಆರಂಭದಲ್ಲೇ ಶುರುವಾಗಿದ್ದ  ವರ್ಗಾವಣೆ ಭ್ರಷ್ಟಾಚಾರ ಸೇರಿದಂತೆ ಇನ್ನಿತರೆ  ಹಲವು ಪ್ರಕರಣಗಳನ್ನು ‘ದಿ ಫೈಲ್‌’ ದಾಖಲೆಗಳ ಸಹಿತ  ವರದಿ ಮಾಡಿದೆ.

 

‘ದಿ ಫೈಲ್‌’ ವರದಿಗಳ ಸರ್ಕಾರದ ಆಡಳಿತ ಮೇಲೆ ಪರಿಣಾಮ ಬೀರಿದೆ.  ಹೀಗಾಗಿಯೇ ‘ದಿ ಫೈಲ್‌’ ಸಾರ್ವಜನಿಕವಾಗಿ ವಿಶ್ವಾಸರ್ಹತೆಯನ್ನು ಗಳಿಸಿದೆ.

 

ವರದಿಗೆ ಸಂಬಂಧಿಸಿದಂತೆ ಈದಿನ.ಕಾಮ್‌ ನೀಡಿರುವ  ಈ ಸ್ಪಷ್ಟೀಕರಣವು ಸಾರ್ವಜನಿಕ ಪ್ರಕಟಣೆ ಎಂಬ ಶಿರೋನಾಮೆ ಹೊಂದಿದೆ. ಇದರ ಪ್ರತಿಯು ‘ದಿ ಫೈಲ್‌’ನ ಅಧಿಕೃತ ಇ-ಮೇಲ್‌ಗೆ ತಲುಪಿಲ್ಲ. ಈದಿನ.ಕಾಮ್‌ ತಂಡದ ಯಾರೊಬ್ಬರ ಸಹಿ ಇಲ್ಲದಿದ್ದರೂ ಸಹ  ಸಾರ್ವಜನಿಕ ಪ್ರಕಟಣೆಯನ್ನು ‘ದಿ ಫೈಲ್‌’  ಪರಿಶೀಲಿಸಿದೆ.

 

‘ದಿ ಫೈಲ್‌ನಲ್ಲಿ ಈ ಕುರಿತು ಹಲವು ತಪ್ಪು ಮಾಹಿತಿಗಳು, ತಪ್ಪು ಗ್ರಹಿಕೆಗಳು ಮತ್ತು ನಿಯಮಗಳ ತಪ್ಪು ವ್ಯಾಖ್ಯಾನ ಇದೆ. ಈ ಬಗ್ಗೆ ‘ದಿ ಫೈಲ್’ನಲ್ಲಿನ ಉಲ್ಲೇಖ ಅಪೂರ್ಣ ಮತ್ತು ಅಪಾರ್ಥ ಉಂಟುಮಾಡುವಂಥದ್ದು ಎಂದು ಈದಿನ.ಕಾಮ್‌ ತಂಡದ ಸಾರ್ವಜನಿಕ ಪ್ರಕಟಣೆ ಹೇಳಿದೆ. ವರದಿಯು ಅಪೂರ್ಣವಾಗಿಲ್ಲ ಮತ್ತು ಅದು ಎಲ್ಲಿಯೂ ಅಪಾರ್ಥ ಉಂಟು ಮಾಡಿಲ್ಲ.

 

 

ಸಮೀಕ್ಷೆ ನಡೆಸಲು ಒಂದು ಕೋಟಿ ರು.ಗಳನ್ನು ನೀಡಿರುವ ಬಗ್ಗೆ ಮತ್ತು ಇದುವರೆಗೂ ಕಂಪನಿಯು ಇಲಾಖೆಗಳಿಂದ  ಸ್ವೀಕರಿಸಿರುವ ಹಣದ  ಬಗ್ಗೆ ಈ ದಿನ. ಕಾಮ್‌ ತಂಡವು ನಾಲ್ಕು ಪುಟಗಳ ಸಾರ್ವಜನಿಕ ಪ್ರಕಟಣೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ.

 

ಆರ್ಥಿಕ ಇಲಾಖೆಯು ಸೂಚಿಸುವ ಮುನ್ನವೇ ಸಮೀಕ್ಷೆ ನಡೆದಿತ್ತು ಎಂದು ‘ದಿ ಫೈಲ್‌’ ವರದಿ ಹೇಳಿತ್ತು. ಇದಕ್ಕೆ ತಕರಾರು ಎತ್ತಿರುವ ಈದಿನ.ಕಾಮ್‌ ಇದು ಆರೋಪವೆಂದು ಭಾವಿಸಿದೆ. ದಿ ಫೈಲ್‌ ಈ ವರದಿಯು ಆರೋಪಿಸಿಲ್ಲ. ಬದಲಿಗೆ ಅಧಿಸೂಚನೆಗೂ ಮುನ್ನ ಸಮೀಕ್ಷೆ ವರದಿಯನ್ನು ಬಿಡುಗಡೆಗೊಳಿಸಿತ್ತು ಎಂದು ದಿನಾಂಕ ಸಮೇತ ಉಲ್ಲೇಖಿಸಿದೆಯಷ್ಟೆ. ಮೇಲಾಗಿ ಇದು ನೇರವಾಗಿ ಸರ್ಕಾರವನ್ನು ಉದ್ದೇಶಿಸಿ ಹೇಳಲಾಗಿದೆ.

 

ಇನ್ನು, ಈ ದಿನ ಕಾಮ್‌ ತಂಡದ ಸಾರ್ವಜನಿಕ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿರುವಂತೆ ಸಮೀಕ್ಷೆ ಪ್ರಕ್ರಿಯೆ ಆರಂಭವಾಗಿದ್ದೇ ಆಗಸ್ಟ್‌ ತಿಂಗಳಲ್ಲಿ ಹಾಗೂ ಸೆಪ್ಟಂಬರ್‍‌ನಿಂದ ಎಂದು ಹೇಳಿದೆ. ಆದರೆ  ಈದಿನ.ಕಾಮ್‌ ಮಾಸಿಕ ಸಮೀಕ್ಷೆ- ಜುಲೈ  2023 ಎಂಬ ಶಿರೋನಾಮೆಯಡಿಯಲ್ಲಿ   ಮಾಧ್ಯಮಗಳಿಗೆ ಜುಲೈ 2023ರಲ್ಲಿಯೇ   ಬಿಡುಗಡೆ ಮಾಡಿತ್ತು. ಅದರ ಮುಖಪುಟ ಇಲ್ಲಿದೆ.

 

 

ಅಲ್ಲದೇ ಎಂ2ಎಂ ಮೀಡಿಯಾ ನೆಟ್‌ವರ್ಕ್‌ ಕಂಪನಿಯು ತನ್ನ ಅಂಗಸಂಸ್ಥೆಯಾಗಿರುವ ಈದಿನ.ಕಾಮ್‌ನಲ್ಲಿ ಪ್ರಕಟಿಸಿದ್ದ ವರದಿಯಲ್ಲಿಯೂ ಮಾಸಿಕ  ಸಮೀಕ್ಷೆ ಎಂದೇ ಪ್ರಕಟಿಸಿರುವುದನ್ನು ಗಮನಿಸಬಹುದು.

 

 

‘ಗ್ಯಾರಂಟಿ ಜಾರಿಗೆ ಜನರ ಮೆಚ್ಚುಗೆ; ಈದಿನ ವೆಬ್‌ಸೈಟ್‌ನಿಂದ ಸಮೀಕ್ಷೆ’ ಎಂಬ ಶಿರೋನಾಮೆಯಡಿ ಪ್ರಜಾವಾಣಿ ದಿನಪತ್ರಿಕೆಯು 2023ರ ಜುಲೈ 25ರಂದೇ ವರದಿ ಪ್ರಕಟಿಸಿತ್ತು. ಪತ್ರಿಕೆಯಲ್ಲಿ ಪ್ರಕಟವಾಗಿದ್ದ ತುಣುಕು ಇಲ್ಲಿದೆ.

 

ಸಮೀಕ್ಷೆ ನಡೆಸಲು ಇಲಾಖೆಗಳಿಗೆ 4(ಜಿ) ವಿನಾಯಿತಿ ನೀಡಿದ್ದ ಆರ್ಥಿಕ ಇಲಾಖೆಯು 2023 ರ ಸೆ.13ರಂದು ಅಧಿಸೂಚನೆ ಹೊರಡಿಸಿದ್ದನ್ನು ಸ್ಮರಿಸಬಹುದು. ಸೆ.13ರಂದು ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ದಾಖಲೆಯಿಂದ ರುಜುವಾತಾಗಿದ್ದರೂ ‘ಗ್ಯಾರಂಟಿ ಜಾರಿಗೆ ಜನರ ಮೆಚ್ಚುಗೆ; ಈ ದಿನ ಮಾಸಿಕ ಸಮೀಕ್ಷೆ-2023 ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು. ಹಾಗಾದರೇ ಆರ್ಥಿಕ ಇಲಾಖೆ ಅಧಿಸೂಚನೆಗೂ ಮೊದಲೇ ಮಾಸಿಕ  ಸಮೀಕ್ಷೆ ನಡೆಸಲಾಗಿತ್ತು ಎಂಬತಲ್ಲವೇ?

 

ಅಷ್ಟೇ ಅಲ್ಲ, ಸಾರ್ವಜನಿಕ ಸ್ಪಷ್ಟೀಕರಣದಲ್ಲಿರುವಂತೆ ಸರ್ಕಾರದ ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಇವರೊಂದಿಗೆ ಚರ್ಚೆ ನಡೆಸುವ ಮುನ್ನವೇ ಈದಿನ.ಕಾಮ್‌ ಗ್ಯಾರಂಟಿಗಳ ಕುರಿತಾಗಿ ಜನಾಭಿಪ್ರಾಯ ಸಂಗ್ರಹಿಸಲು ಸಮೀಕ್ಷೆ ನಡೆಸಿತ್ತು. ಇದಕ್ಕೂ ಮತ್ತು ಸರ್ಕಾರಕ್ಕಾಗಿ ಈಗ ನಡೆಸಲಿರುವ ಸಮೀಕ್ಷೆಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಸ್ತಾವಿಸಿದೆ.

 

ಆದರೆ ಸರ್ಕಾರದ ಪರವಾಗಿ ಸಮೀಕ್ಷೆ ಮಾಡುವ ಮುನ್ನವೇ  ಸಮೀಕ್ಷೆಯು  ಸರ್ಕಾರದ ಪರವಾಗಿತ್ತು. ಗ್ಯಾರಂಟಿಗಳು ಸರ್ಕಾರದ ಪರವಾಗಿ ಇದೆ ಎಂಬ ಸಂದೇಶವನ್ನೂ ಸರ್ಕಾರಕ್ಕೆ ರವಾನಿಸಿದಂತಲ್ಲವೇ?  ಆದ್ದರಿಂದಲೇ ಸರ್ಕಾರವು ಸಹ ಅತ್ಯುತ್ಸಾಹದಿಂದಲೇ ಎಂ2ಎಂ ಮೀಡಿಯಾ ಕಂಪನಿಗೇ ಸರ್ಕಾರವೇ ಸ್ವಯಂ ಪ್ರೇರಿತವಾಗಿ  1 ಕೋಟಿ ರು. ವೆಚ್ಚದಲ್ಲಿ ಸಮೀಕ್ಷೆ ನಡೆಸಲು 4(ಜಿ) ವಿನಾಯಿತಿ ನೀಡಿದಂತಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ಸಹಜವಾಗಿಯೇ ಮೂಡಿದಂತಾಗಿದೆ.

 

ಗ್ಯಾರಂಟಿಗಳ ಸಮೀಕ್ಷೆ; ಮಾಧ್ಯಮ ಸಂಸ್ಥೆಗೆ ಕೋಟಿ ರು ಕೊಟ್ಟ ಸರ್ಕಾರ

 

ಇನ್ನು ‘ದಿ ಫೈಲ್‌’ ಕರ್ನಾಟಕ ಪಾರದರ್ಶಕತೆ ಕಾಯ್ದೆ 4(ಜಿ) ವಿನಾಯಿತಿ ಬಗ್ಗೆ ದಾಖಲೆ ಸಹಿತ ಉಲ್ಲೇಖಿಸಿದೆ. ಇದಕ್ಕೂ ಈದಿನ.ಕಾಮ್‌ ತಂಡವು ಆಕ್ಷೇಪ ಎತ್ತಿದೆ. ಅದು ತನ್ನ ಸಾರ್ವಜನಿಕ ಪ್ರಕಟಣೆಯಲ್ಲಿ ಹೀಗೆ ಹೇಳಿದೆ.
ಕೆಟಿಪಿಪಿ ಕಾಯ್ದೆಯ ಸೆಕ್ಷನ್ 4ಜಿ ಹೀಗೆ ಹೇಳುತ್ತದೆ.

 

(g) in respect of specific procurements as may be notified by the Government from time to time. ಈ ಕುರಿತಂತೆ ಸರ್ಕಾರವು ನಿಯಮಕ್ಕೆ ತಕ್ಕಂತೆ ನೋಟಿಫೀಕೇಷನ್ ಹೊರಡಿಸಿದ್ದು, ಅದರಂತೆಯೇ ಈ ನಿರ್ದಿಷ್ಟ ಕೆಲಸಕ್ಕೆ ವಿನಾಯಿತಿಯನ್ನು ಕಾಯ್ದೆ ಬದ್ಧವಾಗಿ ನೀಡಲಾಗಿದೆ ಎಂದು ಉಲ್ಲೇಖಿಸಿದೆ.

 

ಆದರೆ, ಸೆಕ್ಷನ್ 4 ಎ ನಲ್ಲಿ ನೈಸರ್ಗಿಕ ಪ್ರಕೋಪ ಮತ್ತು ತುರ್ತು ಸ್ಥಿತಿಗಳಲ್ಲೂ ವಿನಾಯಿತಿ ನೀಡಲಾಗುವುದು ಎಂದು ಹೇಳಲಾಗುತ್ತದೆ. ಅದೇ ರೀತಿ ಸೆಕ್ಷನ್ ಎ ಯಿಂದ ಎಚ್ ವರೆಗೆ ವಿನಾಯಿತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ‘ದಿ ಫೈಲ್’ನಲ್ಲಿನ ಉಲ್ಲೇಖ ಅಪೂರ್ಣ ಮತ್ತು ಅಪಾರ್ಥ ಉಂಟುಮಾಡುವಂಥದ್ದು ಎಂದಿದೆ.

 

‘ದಿ ಫೈಲ್‌’ 4(ಜಿ)ಯನ್ನು ಸ್ಪಷ್ಟವಾಗಿ ಉಲ್ಲೇಖಿಸಿದೆ. ‘ಸರ್ಕಾರದ ಕಾಮಗಾರಿಗಳ ಗುತ್ತಿಗೆ ನೀಡುವ ಪ್ರಕ್ರಿಯೆ ಪೈಪೋಟಿಯಿಂದ ಕೂಡಿರಬೇಕು ಮತ್ತು ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇರಬೇಕೆಂಬ ನಿಟ್ಟಿನಲ್ಲಿ ಕೆಟಿಟಿಪಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ. ಇದರ ಪ್ರಕಾರ ಟೆಂಡರ್ ಕರೆಯದೆ ಯಾವುದೇ ಕಾಮಗಾರಿ ನಡೆಸುವಂತಿಲ್ಲ.

 

ಆದರೆ, ತುರ್ತು ಹಾಗೂ ವಿಪತ್ತಿನ ಸಂದರ್ಭದಲ್ಲಿ ಮಾತ್ರ ಈ ಕಾಯ್ದೆಯ 4ರ ಅಡಿ ಕೆಲ ವಿನಾಯಿತಿ ನೀಡಲಾಗಿದೆ. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಅಥವಾ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿದಾಗ ಟೆಂಡರ್ ಕರೆಯದೇ ಕಾಮಗಾರಿ ನಡೆಸಲು ಈ ಕಾಯ್ದೆಯ ಸೆಕ್ಷನ್ 4(ಎ) ಅನ್ವಯ ಅವಕಾಶವಿದೆ. ಅಲ್ಲದೆ, ಸರ್ಕಾರವು ಕಾಲಕಾಲಕ್ಕೆ ಪ್ರಕಟಿಸುವ ಅಧಿಸೂಚನೆಗೆ ಅನುಸಾರವಾಗಿ ನಿರ್ದಿಷ್ಟ ಕಾಮಗಾರಿಗೆ ಅಥವಾ ಖರೀದಿಗೆ ಟೆಂಡರ್ ಕರೆಯುವ ಪ್ರಕ್ರಿಯೆಯಿಂದ ವಿನಾಯಿತಿ ಪಡೆಯಲು ಈ ಕಾಯ್ದೆಯ ಸೆಕ್ಷನ್ 4 (ಜಿ) ಅಡಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದೆ. ಹೀಗಾಗಿ ಈದಿನ.ಕಾಮ್‌ ಹೇಳಿದಂತೆ ಇದು ಅಪೂರ್ಣ ಮತ್ತು ಅಪಾರ್ಥ ಉಂಟು ಮಾಡುವಂಥದ್ದೇನಿಲ್ಲ.

 

ಈದಿನ.ಕಾಮ್‌ ಸಾರ್ವಜನಿಕ ಪ್ರಕಟಣೆಯಲ್ಲಿ ಹೇಳಿದಂತೆ ‘ದಿ ಫೈಲ್‌’ ನ ವರದಿಯು ಅತೀ ಉತ್ಸಾಹದ ಕಾರಣವೂ ಅಲ್ಲ, ಪೂರ್ವಗ್ರಹ ಕಾರಣವೂ ಅಲ್ಲ. ಅಥವಾ ತಮ್ಮ ಬಗ್ಗೆ ಯಾರೂ ತಪ್ಪು ಮಾಹಿತಿಗಳನ್ನು ಒದಗಿಸಿಲ್ಲ. ಇದರ ಹಿಂದೆ ಯಾರೊಬ್ಬರ ಚಿತಾವಣೆಯೂ ಇಲ್ಲ.

SUPPORT THE FILE

Latest News

Related Posts