ಅರಣ್ಯ ಪ್ರದೇಶದಿಂದ ರಸ್ತೆ ಮೂಲಕ ಅದಿರು ಸಾಗಾಣಿಕೆಗೆ ಅನುಮತಿ; ಎ ಜಿ ಅಭಿಪ್ರಾಯಕ್ಕೆ ಪ್ರಸ್ತಾವನೆ

ಬೆಂಗಳೂರು;  ಗ್ಯಾರಂಟಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ಬೇರೆ ಬೇರೆ ಮೂಲಗಳನ್ನು ಹುಡುಕುತ್ತಿರುವ ರಾಜ್ಯ ಸರ್ಕಾರವು ಇದೀಗ ಸಿ ಕೆಟಗರಿ ಗಣಿ ಗುತ್ತಿಗೆ, ರದ್ದಾದ ಗಣಿ ಗುತ್ತಿಗೆಗಳು, ಸ್ಟಾಕ್‌ ಯಾರ್ಡ್‌ ಮತ್ತು ವಿವಿಧೆಡೆ ಜಫ್ತಿ ಮಾಡಿರುವ ಕಬ್ಬಿಣದ ಅದಿರನ್ನು ಅರಣ್ಯ ಪ್ರದೇಶದಿಂದ ರಸ್ತೆ ಮೂಲಕ ಸಾಗಿಸಲು ಅನುಮತಿ ನೀಡಲು ಗಂಭೀರವಾಗಿ ಚಿಂತಿಸಿದೆ.

 

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅವಧಿ ಮುಗಿದ ಎ ಮತ್ತು ಬಿ ಕೆಟಗರಿ ಹಾಗೂ ರದ್ದುಪಡಿಸಿರುವ ಸಿ ಕೆಟಗರಿ ಗಣಿ ಗುತ್ತಿಗೆ ಪ್ರದೇಶಗಳಲ್ಲಿ ಇಲಾಖೆಯು ವಶಪಡಿಸಿಕೊಂಡು ದಾಸ್ತಾನಿರಿಸಿರುವ (ಹಳೆಯ ದಾಸ್ತಾನು) ಕಬ್ಬಿಣ ಅದಿರು ಹರಾಜು, ಚಾಲ್ತಿಯಲ್ಲಿರುವ ಉಪ ಖನಿಜ ಗಣಿಗುತ್ತಿಗೆಗಳಿಂದ ಒಟ್ಟಾರೆ 9,115.55 ಕೋಟಿ ರು. ಮೊತ್ತದಲ್ಲಿ ರಾಜಸ್ವ ಸಂಗ್ರಹಿಸಬಹುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅಂದಾಜಿಸಿದ್ದರ ಬೆನ್ನಲ್ಲೇ ಇದೀಗ ಅದಿರನ್ನು ಅರಣ್ಯ ಪ್ರದೇಶದಿಂದ ರಸ್ತೆ ಮೂಲಕ ಸಾಗಿಸಲು ಅನುಮತಿ ನೀಡುವ ಪ್ರಸ್ತಾವನೆಯೂ ಮುನ್ನೆಲೆಗೆ ಬಂದಿದೆ.

 

ಇದಕ್ಕೆ ಸಂಬಂಧಿಸಿದಂತೆ ಮಹತ್ವದ ಟಿಪ್ಪಣಿ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ. (C I /96/MMM/2023-MINES 1-C AND I SEC-PART (1) COMPUTER NUMBER 1182812)

 

 

ಸಿ ವರ್ಗದ ಗಣಿ ಗುತ್ತಿಗೆ ಪ್ರದೇಶದಲ್ಲಿ  ಒfಟು 1,00,6,253 ಟನ್‌ ಕಬ್ಬಿಣ ಅದಿರನ್ನು ಮಾನಿಟಿರಿಂಗ್‌ ಕಮಿಟಿಯು ಇ-ಹರಾಜು ಮೂಲಕ ಈಗಾಗಲೇ ವಿಲೇ ಮಾಡಿದೆ. ಈ ಪ್ರಕರಣಗಳಲ್ಲಿ ಸಂದಾಯವಾಗಿರುವ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡು ಎಸ್‌ಪಿವಿಗೆ ಜಮಾ ಕೂಡ ಮಾಡಿದೆ. ಸಿ ವರ್ಗದ ಗಣಿ ಗುತ್ತಿಗೆಗಳ ಪ್ರಕರಣಗಳಲ್ಲಿ ಯಾವುದೇ ಶಾಸನಬದ್ಧ ಅನುಮತಿಗಳು ಚಾಲ್ತಿಯಲ್ಲಿಲ್ಲ. ರದ್ದುಪಡಿಸಿದ ಗಣಿ ಗುತ್ತಿಗೆ ಪ್ರಕರಣಗಳಲ್ಲಿ ದಾಸ್ತಾನು ಇರುವ ಕಬ್ಬಿಣದ ಅದಿರನ್ನು ಹರಾಜು ಮೂಲಕ ವಿಲೇ ಮಾಡಿ ಸಾಗಾಣಿಕೆ ಮಾಡಿದೆ. ಹಾಗೂ ಗಣಿ ಪ್ರದೇಶದಿಂದ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ರಸ್ತೆಯನ್ನ ಬಳಸಿ ಸಾಗಾಣಿಕೆ ಮಾಡಲು ಅರಣ್ಯ ಕಾಯ್ದೆ ಅಡಿ ಅನ್ವಯವಾಗುವ ಶುಲ್ಕವನ್ನೂ ಪಾವತಿಸಿಕೊಂಡು ಅನುಮತಿ ನೀಡುತ್ತಿದೆ.

 

 

ದಾಸ್ತಾನಿನಲ್ಲಿರುವ ಅದಿರನ್ನು ಹರಾಜು ಮೂಲಕ ವಿಲೇ ಮಾಡಿದ ನಂತರ ಯಶಸ್ವಿ ಬಿಡ್‌ದಾರರಿಗೆ ಅದಿರನ್ನು ಸಾಗಾಣಿಕೆ ಅನುಮತಿ ನೀಡುವ ಕುರಿತು ಅಡ್ವೋಕೇಟ್‌ ಜನರಲ್‌ ಅವರ ಆಭಿಪ್ರಾಯ ಕೇಳಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ಮುಂದಾಗಿರುವುದು ಗೊತ್ತಾಗಿದೆ.

 

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ನಿಗದಿಪಡಿಸಿದ್ದ ರಾಜಸ್ವ ಸಂಗ್ರಹಣೆ ಗುರಿಯನ್ನು ಸಾಧಿಸಲು ಅರಣ್ಯ ಮತ್ತು ಇತರೆ ಇಲಾಖೆಯ ಸಹಕಾರದ ಅವಶ್ಯಕತೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ 2023ರ ಜುಲೈ 27ರಂದು ಸಭೆ ನಡೆದಿತ್ತು. ಈ ಸಭೆಯಲ್ಲಿ ಸಿದ್ದರಾಮಯ್ಯ ಅವರು ‘ ಸಿ ವರ್ಗದ ಗಣಿ ಗುತ್ತಿಗೆ ರದ್ದಾದ ಗಣಿ ಗುತ್ತಿಗೆಗಳ ಸ್ಟಾಕ್‌ ಯಾರ್ಡ್‌ ಮತ್ತು ವಿವಿಧೆಡೆ ಜಫ್ತಿ ಮಾಡಲಾದ ಕಬ್ಬಿಣದ ಅದಿರು ಸರ್ಕಾರದ ಸ್ವತ್ತಾಗಿದ್ದು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆ ಇದೆ.

 

ಹರಾಜು ನಂತರ ಕಬ್ಬಿಣದ ಅದಿರನ್ನು ಅರಣ್ಯ ಪ್ರದೇಶದಿಂದ ರಸ್ತೆ ಮೂಲಕ ಸಾಗಿಸಲು ಅನುಮತಿ ನೀಡುವ ಕೂಡಲೇ ಅಡ್ವೋಕೇಟ್‌ ಜನರಲ್‌ ಅವರ ಅಭಿಪ್ರಾಯಕ್ಕಾಗಿ ಪ್ರಸ್ತಾವನೆ ಸಲ್ಲಿಸಿ,’ ಎಂದು ಸೂಚಿಸಿದ್ದರು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

2022-23ರಲ್ಲಿ  3162226 ಮೆಟ್ರಿಕ್‌ ಟನ್‌ ಅದಿರನ್ನು ಮಾರಾಟ ಮಾಡಲಾಗಿತ್ತು. ಇದರಿಂದ 123.70 ಕೋಟಿ ರು. ಸಂಗ್ರಹವಾಗಿತ್ತು. 2011-12ರಿಂದ 2022-23ನೇ ಸಾಲಿನವರೆಗೆ ಅದಿರು ಹರಾಜಿನಿಂದ ಒಟ್ಟಾರೆ 7,210 ಕೋಟಿ ಸಂಗ್ರಹವಾಗಿದೆ ಎಂಬುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಅರಣ್ಯ ಇಲಾಖೆಗೆ ಮಾಹಿತಿ ಒದಗಿಸಿದೆ. ಅದೇ ರೀತಿ ಬಳ್ಳಾರಿಯಲ್ಲಿ ಸಿ ಕೆಟಗರಿಯಲ್ಲಿದ್ದ 41 ಗಣಿ ಪ್ರದೇಶಗಳಲ್ಲಿ 1327214 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು, 2 ಗಣಿ ಗುತ್ತಿಗೆಯಲ್ಲಿ 903 ಮೆಟ್ರಿಕ್‌ ಟನ್‌ ಮ್ಯಾಂಗನೀಸ್‌ ಅದಿರು ದಾಸ್ತಾನು ಇದೆ. ವಿಜಯನಗರ ಜಿಲ್ಲೆಯಲ್ಲಿ 6 ಗಣಿ ಗುತ್ತಿಗೆ ಪ್ರದೇಶಗಳಲ್ಲಿ 97009 ಟನ್‌ , ತುಮಕೂರಿನಲ್ಲಿ 455461.3 ಟನ್‌ ಟನ್‌ ಕಬ್ಬಿಣ ಅದಿರು ಇದೆ ಎಂದು ಗಣಿ ಇಲಾಖೆಯ ಉಪ ನಿರ್ದೇಶಕರುಗಳು ಮಾಹಿತಿ ಒದಗಿಸಿದ್ದಾರೆ ಎಂಬುದು ತಿಳಿದು ಬಂದಿದೆ.

 

ಅದೇ ರೀತಿ ಉಪ ಖನಿಜಗಳಮೇಲಿನ ರಾಜಧನವನ್ನು ಶೇ.15ರಷ್ಟು ಹೆಚ್ಚಿಸಲು ಇಲಾಖೆ ಚಿಂತಿಸಿದೆ. ಸರ್ಕಾರಿ ಸಂಸ್ಥೆಗಳ ಗಣಿಗಾರಿಕೆಗೆ ಹೆಚ್ಚುವರಿ ರಾಜಧನ ನಿಗದಿಪಡಿಸಿದ್ದು ಅದರಂತೆಯೇ ಹರಾಜೇತರ ಗುತ್ತಿಗೆಗಳಿಗೂ ಕನಿಷ್ಠ ಶೇ.22ರಷ್ಟು ಹೆಚ್ಚುವರಿ ಮೊತ್ತವನ್ನು ವಿಧಿಸಿದಲ್ಲಿ ಪ್ರತಿ ವರ್ಷ ಸರ್ಕಾರಕ್ಕೆ 1,000 ಕೋಟಿಗೂ ಅಧಿಕ ರಾಜಸ್ವ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು  ಅಂದಾಜಿಸಿತ್ತು.

 

 

ಹಾಗೆಯೇ ವಿವಿಧ ಪರವಾನಿಗೆ ಉಲ್ಲಂಘನೆಗಳಿಗಾಗಿ ರಾಜ್ಯದಲ್ಲಿ ಒಟ್ಟಾರೆ 6,105 ಕೋಟಿ ರು. ದಂಡ ವಿಧಿಸಲಾಗಿದ್ದು ಇದನ್ನ ಒಟಿಎಸ್‌ ಮೂಲಕ ಜಾರಿಗೊಳಿಸಲು ಚಿಂತಿಸಿದೆ. ರಾಜ್ಯದ ಒಟ್ಟು 12 ಜಿಲ್ಲೆಗಳಲ್ಲಿ ಕಲ್ಲು ಗಣಿ ಗುತ್ತಿಗೆದಾರರು ಕಟ್ಟಡ ಕಲ್ಲನ್ನು ಖನಿಜ ರವಾನೆ ಪರವಾನಿಗೆ ಪಡೆಯದೇ ಸಾಗಾಣಿಕೆ ಮಾಡಿರುವ ಸಂಬಂಧ 520.0 ಕೋಟಿ ರು. ನಷ್ಟವಾಗಿದೆ. ಈ ಪೈಕಿ ಕೇವಲ 60.39 ಕೋಟಿ ಸಂಗ್ರಹಿಸಿತ್ತು.

 

ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅವಧಿ ಮುಗಿದ ಎ ಮತ್ತು ಬಿ ಕೆಟಗರಿ ಹಾಗೂ ರದ್ದುಪಡಿಸಿರುವ ಸಿ ಕೆಟಗರಿ ಗಣಿ ಗುತ್ತಿಗೆ ಪ್ರದೇಶಗಳಲ್ಲಿ 5.89 ಎಂಎಂಟಿ ಪ್ರಮಾಣದಲ್ಲಿ ಕಬ್ಬಿಣ ಅದಿರನ್ನು ವಶಪಡಿಸಿಕೊಂಡು ಇಲಾಖೆಯು ದಾಸ್ತಾನಿನಲ್ಲಿರಿಸಿದೆ. ಇದನ್ನು ಹರಾಜು ಮಾಡಿದಲ್ಲಿ ಅಂದಾಜು 1,200.00 ಕೋಟಿ ರು ರಾಜಸ್ವ ಸಂಗ್ರಹಿಸಬಹುದು ಎಂದು ಇಲಾಖೆಯು ಅಂದಾಜಿಸಿರುವುದು ಗೊತ್ತಾಗಿದೆ.

 

ರದ್ದುಪಡಿಸಿರುವ ದಾಸ್ತಾನು ಕೇಂದ್ರಗಳಲ್ಲಿ ಪೊಲೀಸ್‌ ಠಾಣೆ ಮತ್ತು ರೈಲ್ವೆ ಯಾರ್ಡ್‌ಗಳಲ್ಲಿ 0.9 ಎಂಎಂಟಿ ಪ್ರಮಾಣದಲ್ಲಿರುವ ಕಬ್ಬಿಣ ಅದಿರನ್ನು ಇಲಾಖೆಯು ವಶಪಡಿಸಿಕೊಂಡಿದೆ.

 

ಇದನ್ನು ಹರಾಜು ಹಾಕಿದಲ್ಲಿ 50.00 ಕೋಟಿ ರು., ಚಾಲ್ತಿಯಲ್ಲಿರುವ ಕಬ್ಬಿಣ ಅದಿರು ಗಣಿಗುತ್ತಿಗೆಗಳಿಂದ (ಹರಾಜು ಮತ್ತು ಹರಾಜು ರಹಿತ ಗಣಿ ಗುತ್ತಿಗೆಗಳು 42.19 ಎಂಎಟಿ) 3,664.00 ಕೋಟಿ ರು., ಹರಾಜು ಪ್ರಕ್ರಿಯೆ ಮುಗಿದಿರುವ 27 ಗಣೀ ಗುತ್ತಿಗೆ ಬ್ಲಾಕ್‌ಗಳಿಗೆ ಶಾಶನ ಬದ್ಧ ದಾಖಲೆಗಳು ಸಲ್ಲಿಕೆಯಾಗಿ ಗಣಿ ಕಾರ್ಯ ನಿರ್ವಹಿಸಿದ್ದಲ್ಲಿ (27 ಗಣಿ ಗುತ್ತಿಗೆ ಬ್ಲಾಕ್‌ಗಳ ಪೈಕಿ ಪ್ರಸ್ತುತ ಸಾಲಿನಲ್ಲಿ 12 ಬ್ಲಾಕ್‌ಗಳಲ್ಲಿ 9 ಕಬ್ಬಿಣ ಅದಿರು, 3 ಸುಣ್ಣದ ಕಲ್ಲು- 4.607 ಎಂಎಂಟಿ) 589.55 ಕೋಟಿ ರು., ಇತರೆ ಮುಖ್ಯ ಖನಿಜಗಳಿಂದ (ಸುಣ್ಣದ ಕಲ್ಲು ಮತ್ತು ಚಿನ್ನದ ಅದಿರು- 33.46 ಎಂಎಂಟಿ) 342.00 ಕೋಟಿ ರು.ಗಳ ರಾಜಸ್ವ ಸಂಗ್ರಹಿಸಬಹುದು ಎಂದು ಅಂಕಿ ಅಂಶಗಳ ವಿವರಗಳನ್ನು ಮಂಡಿಸಿತ್ತು.

ಅದಿರು ಹರಾಜಿನಿಂದ 9,115 ಕೋಟಿ, ಹರಾಜೇತರ ಗುತ್ತಿಗೆಗಳಿಂದ 1,000 ಕೋಟಿ ಸಂಗ್ರಹ; ರಾಜಸ್ವ ಲೆಕ್ಕಾಚಾರ

 

ಚಾಲ್ತಿ ಉಪ ಖನಿಜ ಗಣಿ ಗುತ್ತಿಗೆಗಳಿಂದ 2,600 ಕೋಟಿ ರು., ಉಪ ಖನಿಜಗಳಮೇಲಿನ ರಾಜಧನವನ್ನು ಶೇ.15ರಷ್ಟು ಹೆಚ್ಚಿಸಿದಲ್ಲಿ 390.00 ಕೋಟಿ ರು., ಹೊಸ ಕಲ್ಲು ಗಣಿ ಗುತ್ತಿಗೆ ಮಂಜೂರಾತಿ ಮತ್ತು ಬಾಕಿ ವಸೂಲಾತಿಯಿಂದ 300.00 ಕೋಟಿ ರು.ಗಳ ರಾಜಸ್ವ ಸಂಗ್ರಹಿಸಬಹುದು ಎಂದು ಅಂದಾಜಿಸಿದೆ.

the fil favicon

SUPPORT THE FILE

Latest News

Related Posts