ನಿಯಮ ಉಲ್ಲಂಘಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳ ಬೆನ್ನಿಗೆ ನಿಂತ ಸರ್ಕಾರ; 64.96 ಕೋಟಿ ಆಕ್ಷೇಪಣೆ ಕೈಬಿಡಲು ಕೋರಿಕೆ

ಬೆಂಗಳೂರು; ಖಾಸಗಿ ಪದವಿ ಕಾಲೇಜುಗಳಿಗೆ ಸಹಾಯಾನುದಾನ, ಬಿ ದರ್ಜೆಗಿಂತ ಕಡಿಮೆ ಪ್ರಮಾಣ ಪತ್ರ ಪಡೆದಿರುವ ಕಾಲೇಜುಗಳಿಗೆ ಅನುದಾನ ಬಿಡುಗಡೆ  ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ  ನಿಯಮ ಉಲ್ಲಂಘಿಸಿರುವ ಪ್ರಭಾವಿ  ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ಕಾಂಗ್ರೆಸ್‌ ಸರ್ಕಾರವು  ನಿಂತಿರುವುದು ಇದೀಗ ಬಹಿರಂಗವಾಗಿದೆ.

 

ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಿಡುಗಡೆಯಾಗಿರುವ ಅನುದಾನ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತು ಸಿಎಜಿ 64.96 ಕೋಟಿ ರು.ಗಳನ್ನು ಆಕ್ಷೇಪಣೆಯಲ್ಲಿರಿಸಿತ್ತು. ಆದರೀಗ ಉನ್ನತ ಶಿಕ್ಷಣ ಇಲಾಖೆಯು ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ವಕಾಲತ್ತು ವಹಿಸಿ ಎಲ್ಲಾ ಆಕ್ಷೇಪಣೆಗಳನ್ನು ಕೈಬಿಡಬೇಕು ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಕೋರಿದೆ.  ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲಾತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ಸಮಗ್ರ ದಾಖಲಾತಿಗಳನ್ನು ಪರಿಶೀಲಿಸಿ ಮತ್ತು ಆ ನಂತರ ಸಂಬಂಧಿತ ಪ್ರಾಧಿಕಾರ ಅಥವಾ ಇಲಾಖೆಯ ಸಮಜಾಯಿಷಿಗಳನ್ನು ಪಡೆದ ನಂತರವೇ ಮಹಾಲೇಖಪಾಲರು ತಮ್ಮ ವರದಿಯಲ್ಲಿ ಆಕ್ಷೇಪಣೆಗಳಿಗೆ ಸಕಾರಣಗಳನ್ನು ಉಲ್ಲೇಖಿಸುತ್ತಾರೆ. ಆದರೂ ಉನ್ನತ ಶಿಕ್ಷಣ ಇಲಾಖೆಯು ಆಕ್ಷೇಪಣೆಯನ್ನು ಕೈ ಬಿಡಲು ಕೋರಿರುವುದು ಸಿಎಜಿ ಕಾರ್ಯವೈಖರಿಯನ್ನೇ ಪ್ರಶ್ನಿಸಿದಂತಾಗಿದೆ.

 

ಉನ್ನತ ಶಿಕ್ಷಣ ಇಲಾಖೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ನೀಡಿರುವ ಉತ್ತರವನ್ನು ಸಚಿವ ಡಾ ಎಂ ಸಿ ಸುಧಾಕರ್‍‌ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ.

 

ಅನರ್ಹ ಕಾಲೇಜುಗಳಿಗೆ 14.89 ಕೋಟಿ ರು. ಪಾವತಿ

 

ರಾಜ್ಯದ ಸದಾಶಿವಗಡದ ಬಿಜಿವಿಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜು, ಧಾರವಾಡದ ಹೆಚ್‌ ಎ ಎಸ್‌ ಎಸ್‌ ಶ್ರೀಮತಿ ಕೆ ಎಸ್‌ ಜಿಗಳೂರು ಮತ್ತ ಡಾ ಎಸ್‌ ಎಂ ಶೇಷಗಿರಿ ವಾಣಿಜ್ಯ ಮಹಿಳಾ ಕಾಲೇಜು, ಧಾರವಾಡದ ಅಂಜುಮನ್‌ ಕಲಾ ಮತ್ತು ವಾಣಿಜ್ಯ ಕಾಲೇಜು, ಚಿಕ್ಕೋಡಿಯ ಸಿಟಿಇ ಅಹಲ್ಯಾಬಾರಿ ಅಪ್ಪಣ್ಣಗೌಡ ಪಾಟೀಲ ಕಲಾ ವಾಣಿಜ್ಯ ಕಾಲೇಜು, ಕುಂದಗೋಳದ ಜಿಇಸಿ ಜಿ ಎಸ್‌ ಪಾಟೀಲ್‌ ಕಲಾ ಮತ್ತು ವಾಣಿಜ್ಯ ಕಾಲೇಜು, ಕಲಘಟಗಿಯ ಗುಡ್‌ ನ್ಯೂಸ್ಸ್ ವೆಲ್‌ಫೇರ್‍‌ ಸೊಸೈಟಿಯ ಕಲಾ ಮತ್ತು ವಾಣಿಜ್ಯ ಪ್ರಥಮದರ್ಜೆ ಕಾಲೇಜು, ಧಾರವಾಡದ ಎಸ್‌ ಜೆ ಎಂ ವಿ ಮಹಾಲಕ್ಷ್ಮಿ ಪ್ರಥಮ ದರ್ಜೆ ಕಾಲೇಜು, ಹೊಳೆ ಆಲೂರಿನ ಕೆವಿಎಸ್‌ ಕಲಾ ಮತ್ತು ವಾಣಿಜ್ಯ ಕಾಲೇಜು, ಬಬಲೇಶ್ವರದ ಜಿವಿವಿಟಿ ಶಾಂತವೀರ ಕಲಾ ಕಾಲೇಜು, ಮಹಾಲಿಂಗಪುರದ ಎಸ್‌ಸಿಪಿ ಮತ್ತು ಡಿಡಿ ಶಿರೋಳ ಕಾಲೇಜು, ಸಾಲಿಗ್ರಾಮದ ಚೆನ್ನಕೇಶವ ಪ್ರಥಮದರ್ಜೆ ಕಾಲೇಜು, ಹಳ್ಳಿಖೇಡದ ಡಾ ಬಿ ಆರ್‍‌ ಅಂಬೇಡ್ಕರ್‍‌ ಪ್ರಥಮ ದರ್ಜೆ ಕಾಲೇಜುಗಳು ಅರ್ಹತೆ ಹೊಂದದಿದ್ದರೂ 2003ರ ಆಗಸ್ಟ್‌ ನಿಂದ 2006ರ ಮಾರ್ಚ್‌ವರೆಗೆ ಒಟ್ಟು 14.89 ಕೋಟಿ ರು. ಅನುದಾನ ಬಿಡುಗಡೆಯಾಗಿತ್ತು. ಇದನ್ನು ಸಿಎಜಿಯು ಆಕ್ಷೇಪಣೆಯಲ್ಲಿರಿಸಿತ್ತು.

 

ಈ ಆಕ್ಷೇಪಣೆಯನ್ನು ಉನ್ನತ ಶಿಕ್ಷಣ ಇಲಾಖೆಯು ಕೈ ಬಿಡಲು ಕೋರಿದೆ. ‘2003ರ ಆಗಸ್ಟ್‌ 7ರಂದು ಹೊರಡಿಸಿದ್ದ ಆದೇಶ ( ಇಡಿ/551/ಯುಪಿಸಿ/99 ದಿನಾಂಕ 01.06.1987)ಕ್ಕಿಂತ ಪೂರ್ವದಲ್ಲಿ ಹಾಗೂ 87-88ರ ನಂತರ ಕಾರ್ಯಾರಂಭ ಮಾಡಿದಂತಹ ವಿದ್ಯಾಸಂಸ್ಥೆಗಳು ವೇತನ ಅನುದಾನಕ್ಕೆ ಒಳಪಡಿಸಲು ಅರ್ಹರಿರುವುದಿಲ್ಲ ಎಂದು ತಿಳಿಸಲಾಗಿದೆ.

 

ಆದರೆ ಈ ಆದೇಶವನ್ನು ಹೊರಡಿಸುವ ಪೂರ್ವದಲ್ಲಿಯೇ ಈ 12 ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಿರುವುದರಿಂದ ಹಾಗೂ ಈ ಕಾಲೇಜುಗಳು ಪ್ರತಿ ವರ್ಷ ಸಂಬಂಧಪಟ್ಟ ವಿಶ್ವವಿದ್ಯಾಲಯದಿಂದ ಸಂಯೋಜನೆ ಪಡೆದು ನಿರಂತರವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳ ಹಾಗೂ ನೌಕರರ ಹಿತದೃಷ್ಟಿಯಿಂದ ಈಗಾಗಲೇ ವೇತನ ಅನುದಾನಕ್ಕೆ ಒಳಪಡಿಸಿರುವ ಕಾಲೇಜುಗಳ ವೇತನ ಅನುದಾನವನ್ನು ಹಿಂಪಡೆಯುವುದು ಸಮಂಜಸವಾಗಿರುವುದಿಲ್ಲ. ಆದ್ದರಿಂದ ಈ ಕಂಡಿಕೆಯನ್ನು ಕೈಬಿಡಬೇಕು,’ ಎಂದು ಉನ್ನತ ಶಿಕ್ಷಣ ಇಲಾಖೆಯು ಕೋರಿರುವುದು ಗೊತ್ತಾಗಿದೆ.

 

ಶಿವಮೊಗ್ಗದ ಡಿವಿಎಸ್‌ ಕಾಲೇಜು, ಮೈಸೂರಿನ ಬಸುದೇವ ಸೋಮಾನಿ, ಶಾರದ ವಿಲಾಸ ಕಾನೂನು, ಬೆಂಗಳೂರಿನ ಹೆಣ್ಣೂರಿನ ಹಸನತ್‌, ಭಗವಾನ್‌ ಬುದ್ಧ, ಡಾ ಬಿ ಆರ್‍‌ ಅಂಬೇಡ್ಕರ್‍‌ ಕಾಲೇಜುಗಳು 2006ರ ಮೇ ಅಂತ್ಯದವರೆಗೆ ಪ್ರಮಾಣ ಪತ್ರವನ್ನೇ ಪಡೆದಿರಲಿಲ್ಲ. ಅಲ್ಲದೇ 2005-06 ಮತ್ತು ನಂತರದ ಅವಧಿಗೆ ಪ್ರಮಾಣ ಪತ್ರ ಪಡೆಯುವರೆಗೂ ವೇತನ ಅನುದಾನಗಳಿಗೆ ಅನರ್ಹವಾಗಿದ್ದವು. ಆದರೂ ನಿಯಮಗಳ ಉಲ್ಲಂಘನೆ ಮಾಡಿ ಈ ಕಾಲೇಜುಗಳಿಗೆ 1.87 ಕೋಟಿ ರು. ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿತ್ತು.

 

ಇದಕ್ಕೆ ಸಂಬಂಧಿಸಿದಂತೆ ಸಮಜಾಯಿಷಿ ನೀಡಿರುವ ಉನ್ನತ ಶಿಕ್ಷಣ ಇಲಾಖೆಯು ನಿಗದಿತ ಅವಧಿಯೊಳಗೆ ಷರತ್ತನ್ನು ಪೂರೈಸದೇ ಇರುವ ಕಾಲೇಜುಗಳಿಗೆ ಅನುದಾನ ಮುಂದುವರೆಸಿರುವುದನ್ನು ಒಪ್ಪಿಕೊಂಡಿದೆ. ಆದರೆ ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ದಾಖಲೆಗಳಿಂದ ತಿಳಿದು ಬಂದಿದೆ.

 

23.72 ಕೋಟಿ ಕತೆ ಇದು

 

ಹಾಗೆಯೇ ಚಿತ್ರದುರ್ಗದ ಎಸ್‌ಜೆಎಂ ಕಲಾ ಮತ್ತು ವಾಣಿಜ್ಯ ಕಾಲೇಜು, ಉಡುಪಿಯ ಪೂರ್ಣ ಪ್ರಜ್ಞ ಸಂಜೆ ಕಾಲೇಜು, ಮಂಗಳೂರಿನ ಬೆಸೆಂಟ್‌ ಸಂಜೆ ಕಾಲೇಜು, ಮಂಡ್ಯದ ಪಿಇಎಸ್‌, ಸುಳ್ಯದ ಕುಕ್ಕೆ ಸುಬ್ರಮಣ್ಯೇಶ್ವರ ಕಾಲೇಜು, ಧಾರವಾಡದ ಕಿಟಲ್‌ ಸೇರಿ ಒಟ್ಟು 33 ಕಾಲೇಜುಗಳು 2004-05 ಮತ್ತು 2005-06ರಲ್ಲಿ ಬಿ ದರ್ಜೆಗಿಂತ ಕಡಿಮೆ ಪ್ರಮಾಣ ಪತ್ರಗಳನ್ನು ಪಡೆಯುವ ಮೂಲಕ ವೇತನ ಅನುದಾನಕ್ಕೆ ಅನರ್ಹವಾಗಿದ್ದವು. ಆದರೂ ಈ ಕಾಲೇಜುಗಳಿಗೆ ಈ ಎರಡೂ ವರ್ಷಗಳಲ್ಲಿ 23.72 ಕೋಟಿ ರು. ವೇತನ ಅನುದಾನವನ್ನು ಬಿಡುಗಡೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅನುದಾನಗಳ ಬಿಡುಗಡೆಯು ನಿಯಮಗಳಿಗೆ ಅನುಗುಣವಾಗಿರಲಿಲ್ಲ ಎಂದು ಸಿಎಜಿ ತನ್ನ ವರದಿಯಲ್ಲಿ ಆಕ್ಷೇಪಿಸಿತ್ತು.

 

ಈ ಸಂಬಂಧ ಸಮಜಾಯಿಷಿ ನೀಡಿರುವ ಉನ್ನತ ಶಿಕ್ಷಣ ಇಲಾಖೆಯು ಈ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ನಿಂತಿದೆ. ‘ಒಟ್ಟು 33 ಕಾಲೇಜುಗಳು ಬಿ ಶ್ರೇಣಿಗಿಂತ ಕಡಿಮೆ ಶ್ರೇಣಿ ಹೊಂದಿದ್ದವು. ಈ ಪಟ್ಟಿಯಲ್ಲಿ ಸೂಚಿಸಿರುವ 27 ಕಾಲೇಜುಗಳು ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ನ್ಯಾಕ್‌ ಮೌಲ್ಯಮಾಪನಕ್ಕೆ ಒಳಪಟ್ಟು ತಮ್ಮ ಶ್ರೇಣಿಯನ್ನು ಉತ್ತಮ ಪಡಿಸಿಕೊಂಡಿವೆ. ಈ ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಿರುವುದು ಸಹ ಶ್ರೇಣಿಯನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ,’ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಪರ ವಕಾಲತ್ತು ವಹಿಸಿರುವುದು ಗೊತ್ತಾಗಿದೆ.

 

ಅಧಿಕ ವೇತನ ಪಾವತಿ

 

ಅನುದಾನಿತ ಕಾಲೇಜುಗಳಲ್ಲಿನ ಶಿಕ್ಷಕರು ಸೇರಿದಂತೆ ಕೆಲವು ನಿರ್ದಿಷ್ಟ ಸಿಬ್ಬಂದಿಳ ವೇತನ ಶ್ರೇಣಿಗಳನ್ನು ಯುಜಿಸಿ ಶ್ರೇಣಿಗಳಿಗೆ ಅನುಗುಣವಾಗಿ ಪರಿಷ್ಕರಿಸಲಾಗಿತ್ತು. ಆದರೆ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು ತನ್ನ ಸಿಬ್ಬಂದಿಗೆ ವೇತನ ನಿಗದಿಯಲ್ಲಿಯೇ ತಪ್ಪನ್ನು ಎಸಗಿ 1996ರ ಜನವರಿಯಿಂದ 2006ರ ಫೆಬ್ರುವರಿವರೆಗೂ 369 ಉಪನ್ಯಾಸಕರಿಗೆ 3.83 ಕೋಟಿ ರು. ಮೊತ್ತದಲ್ಲಿ ಅಧಿಕ ವೇತನ ಪಾವತಿ ಮಾಡಿದ್ದವು ಎಂದು ಸಿಎಜಿ ವರದಿಯಲ್ಲಿ ವಿವರಿಸಿತ್ತು.

 

ಆದರೆ ಇದನ್ನೂ ಸಮರ್ಥಿಸಿಕೊಂಡಿರುವ ಉನ್ನತ ಶಿಕ್ಷಣ ಇಲಾಖೆಯು ಆಯ್ಕೆ ವೇತನ ಶ್ರೇಣಿಯಲ್ಲಿನ ಕ್ರಮವು ಕ್ರಮಬದ್ಧವಾಗಿದೆ. ಆದ್ದರಿಂದ ಈ ಆಕ್ಷೇಪಣೆಯನ್ನು ಕೈಬಿಡಬೇಕು ಎಂದು ಕೋರಿರುವುದು ತಿಳಿದು ಬಂದಿದೆ.

 

21.45 ಕೋಟಿ ಬಾಕಿ ಉಳಿಸಿಕೊಂಡ ಶಿಕ್ಷಣ ಸಂಸ್ಥೆಗಳು

 

ರಾಜ್ಯದ 272 ಕಾಲೇಜುಗಳು 2003-04ರಿಂದ 2005-06ರ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಶಿಕ್ಷಣ ಮತ್ತು ಪ್ರಯೋಗ ಶಾಲೆ ಶುಲ್ಕವನ್ನು ಸರ್ಕಾರವು ನಿಗದಿಗೊಳಿಸಿದ್ದ ದರಕ್ಕಿಂತಲೂ ಹೆಚ್ಚಿನ ಮೊತ್ತವನ್ನು ವಸೂಲು ಮಾಡಿತ್ತು. ಈ ಪೈಕಿ 55 ಕಾಲೇಜುಗಳು ಸಂಗ್ರಹಿಸಿದ್ದ ಸಂಪೂರ್ಣ ಶುಲ್ಕವನ್ನು ಜಂಟಿ ಖಾತೆಗೆ ರವಾನಿಸಿದ್ದವು. ಅಲ್ಲದೇ ಅದೇ ಅವಧಿಯಲ್ಲಿ 33.58 ಕೋಟಿ ರು. ಶುಲ್ಕವನ್ನು ವಸೂಲು ಮಾಡಿದಂತಹ 217 ಕಾಲೇಜುಗಳು ಕೇವಲ 12.13 ಕೋಟಿ ಮಾತ್ರ ರವಾನಿಸಿದ್ದವು. ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ 21.45 ಕೋಟಿ ರು.ಗಳನ್ನು ಖಾಸಗಿ ಕಾಲೇಜುಗಳು ತಮ್ಮಲ್ಲೇ ಉಳಿಸಿಕೊಂಡಿದ್ದವು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿತ್ತು.

 

ಈ ಸಂಬಂಧ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಉತ್ತರಿಸಿರುವ ಉನ್ನತ ಶಿಕ್ಷಣ ಇಲಾಖೆಯು ‘ಬಾಕಿ ಶುಲ್ಕ ಮನ್ನಾ ಮಾಡುವ ಸಂಬಂಧ 2017ರ ಸೆ.15 ಮತ್ತು ಸೆ.29ರಂದು ನಡೆದ ಸಭೆಯಲ್ಲಿ ಶುಲ್ಕ ವಸೂಲಿ ಮಾಡುವ ಕ್ರಮವನ್ನು ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿದ್ದಾರೆ. ವಿದ್ಯಾರ್ಥಿಗಳಿಂದ ವಸೂಲು ಮಾಡಲಾಗುತ್ತಿರುವ ಬೋಧನಾ ಮತ್ತು ಪ್ರಯೋಗಾಲಯ ಶುಲ್ಕಗಳ ವಸೂಲಾತಿಯನ್ನು ನಿಲ್ಲಿಸುವ ಕುರಿತ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಲಾಗುತ್ತಿದೆ,’ ಎಂದು ಉತ್ತರಿಸಿ ಬಾಕಿ ವಸೂಲು ಮಾಡುವುದರಿಂದ ನುಣುಚಿಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

Your generous support will help us remain independent and work without fear.

Latest News

Related Posts