ಅರ್ಜಿದಾರರ ಪಟ್ಟಿ ಸಂಗ್ರಹ; ಸರ್ಕಾರದ ಅನುಮತಿಯೂ ಇರಲಿಲ್ಲ, ಗಮನಕ್ಕೂ ಬಂದಿರಲಿಲ್ಲ, ಸುತ್ತೋಲೆ ಹಿಂತೆಗೆತ

ಬೆಂಗಳೂರು; ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯೂ ಸೇರಿದಂತೆ ಇಲಾಖೆಗಳು, ಸಚಿವಾಲಯಗಳಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸರ್ಕಾರವು ನೀಡಿರುವ ನಿರ್ದೇಶನದ ಕುರಿತಾಗಿ ‘ದಿ ಫೈಲ್‌’ ವರದಿ ಪ್ರಕಟಿಸಿದ್ದ ಬೆನ್ನಲ್ಲೇ ಸರ್ಕಾರವು ಇದೀಗ 2023ರ ಜೂನ್‌ 6ರಂದು ಹೊರಡಿಸಿದ್ದ ನಿರ್ದೇಶನವನ್ನು ಹಿಂಪಡೆದುಕೊಂಡಿದೆ.

 

ವಿಶೇಷವೆಂದರೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು) ಅಧೀನ ಕಾರ್ಯದರ್ಶಿಯು ಸರ್ಕಾರದ ಅನುಮತಿಯನ್ನೂ ಪಡೆದಿರಲಿಲ್ಲ ಮತ್ತು ಸರ್ಕಾರದ ಗಮನಕ್ಕೂ ತಂದಿರಲಿಲ್ಲ ಎಂದು ಆಡಳಿತ ಸುಧಾರಣೆಯ ಪ್ರಧಾನ ಕಾರ್ಯದರ್ಶಿ ಮುನೀಶ್‌ ಮೌದ್ಗಿಲ್‌ ಅವರು ಒಪ್ಪಿಕೊಂಡಿದ್ದಾರೆ. ಈ ಕುರಿತು 2023ರ ಅಕ್ಟೋಬರ್‍‌ 6ರಂದು ಸರ್ಕಾರದ ಎಲ್ಲಾ ಇಲಾಖೆಗಳ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳು ಸೇರಿದಂತೆ ಇಲಾಖೆ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

 

ಪತ್ರದಲ್ಲೇನಿದೆ?

 

ಕರ್ನಾಟಕ ಸರ್ಕಾರವು ತಮ್ಮ ಹೃದಯ ಹಾಗೂ ಅಂತಃಕರಣದಿಂದ ಮಾಹಿತಿ ಹಕ್ಕು ಅಧಿನಿಯಮವನ್ನು ಜನಪರವಾಗಿ ಹಾಗೂ ಶಾಸನಬದ್ಧವಾಗಿ ಚಾಲನೆ ತರಲು ಹಾಗೂ ಅನುಪಾಲಿಸಲು ಬದ್ಧವಾಗಿರುತ್ತದೆ. ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಹಿತಿ ಹಕ್ಕು ಅಧಿನಿಯಮ 2005ನ್ನು ಶಾಸನಬದ್ಧವಾಗಿ ಅನುಪಾಲಿಸಬೇಕು. ಮಾಹಿತಿ ಹಕ್ಕು ಅಧಿನಿಯಮದಲ್ಲಿ ಮಾಹಿತಿ ಹಕ್ಕು ಕೇಳಿರುವ ಅರ್ಜಿದಾರರ ಬಗ್ಗೆ ಬೇರೆ ಯಾರು ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ. ಎಲ್ಲಾ ನಾಗರೀಕರಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮುಕ್ತವಾಗಿ ಮಾಹಿತಿ ಪಡೆಯಲು ಶಾಸನಬದ್ಧ ಅಧಿಕಾರವಿರುತ್ತದೆ.

 

ಸರ್ಕಾರದ ಗಮನಕ್ಕೆ ಬಂದಿರುವುದು ಏನೆಂದರೆ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಉಲ್ಲೇಖ 2ರಲ್ಲಿ ಕೊಟ್ಟಿರುವ ಆದೇಶದ ಪ್ರಕಾರ ಉಲ್ಲೇಖ 1ರಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‍‌ಟಿಐ ಅರ್ಜಿಗಳನ್ನು ಸಲ್ಲಿಸುವ ಅರ್ಜಿದಾರರ ಮಾಹಿತಿಯನ್ನು ಒದಗಿಸುವ ಕುರಿತು ಸರ್ಕಾರದಿಂದ ಯಾವುದೇ ಅನುತಿ ಅಥವಾ ಗಮನಕ್ಕೆ ತರದೇ ಜಾರಿಯಾಗಿರುವ ಕಾರಣಕ್ಕೆ ಹೊರಡಿಸಿದ್ದ ಸುತ್ತೋಲೆಯನ್ನು ಹಿಂಪಡೆದಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

ಕೇಂದ್ರ ಸರ್ಕಾರವು ಆರ್‌ಟಿಐ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ಬಲವಾದ ವಿರೋಧ ಮತ್ತು ಆಕ್ಷೇಪಗಳು ವ್ಯಕ್ತವಾಗಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ಸರ್ಕಾರವೂ ಆರ್‌ಟಿಐ ಅಡಿಯಲ್ಲಿ ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ನಿರ್ದೇಶನ ನೀಡಿದ್ದು ವಿವಾದಕ್ಕೆ ದಾರಿಮಾಡಿಕೊಟ್ಟಿತ್ತು. ಸರ್ಕಾರ ಕೈಗೊಂಡಿದ್ದ ನಿರ್ಧಾರಕ್ಕೆ ಮಾಹಿತಿ ಹಕ್ಕು ಸಂಘಟನೆಗಳು ಬಲವಾಗಿ ಪ್ರತಿರೋಧಿಸಿದ್ದವು.

 

ಮಾಹಿತಿ ಹಕ್ಕು ಕಾರ್ಯಕರ್ತರ ಜೀವ ಆಪತ್ತಿನಲ್ಲಿದೆ. ಹಲವರು ಕೊಲೆಯಾಗಿದ್ದಾರೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ಉಳಿದವರು ನಿರಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂಬ ಆತಂಕದ ಮಾತುಗಳು ಕೇಳಿ ಬಂದಿರುವ ನಡುವೆಯೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಕಲೆ ಹಾಕಲು ಮುಂದಾಗಿದ್ದು  ಚರ್ಚೆಗೆ ಗ್ರಾಸವಾಗಿತ್ತು.

 

ವಿಶೇಷವೆಂದರೆ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರು 2023ರ ಏಪ್ರಿಲ್‌ನಲ್ಲೇ ಪತ್ರ ಬರೆದಿತ್ತಾದರೂ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಆದರೀಗ ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ಅರ್ಜಿದಾರರ ಪಟ್ಟಿಯನ್ನು ಕ್ರೋಢಿಕರಿಸಲು ಆದೇಶಿಸಿತ್ತು.

 

ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರ ನಿರ್ದೇಶನವನ್ನು ಉಲ್ಲೇಖಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ನಿಗಮ, ಮಂಡಳಿಗಳಿಗೆ ಪತ್ರ ಬರೆದು ಅರ್ಜಿದಾರರ ಪಟ್ಟಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು 2023ರ ಸೆ.6ರಂದು ನಿರ್ದೇಶನ ನೀಡಿತ್ತು.

 

 

ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿ ಒಗಿಸಲು ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರು 2023ರ ಏಪ್ರಿಲ್‌ 10ರಂದು ಆದೇಶ ಹೊರಡಿಸಿದ್ದರು. ರಾಜ್ಯದ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮವನಿ ಪ್ರಾಧಿಕಾರಿಗಳು ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವಂತಹ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ನಿರ್ದೇಶನ ನೀಡಿತ್ತು.

 

ಅದರಂತೆ ಎಲ್ಲಾ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆ, ನಿಗಮ, ಮಂಡಳಿಗಳಿಂದ ಮಾಹಿತಿ ಪಡೆದು ಕ್ರೋಢೀಕೃತ ಮಾಹಿತಿಯನ್ನು2023ರ ಸೆ.20ರೊಳಗೆ ಸಲ್ಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೈ ಆರ್‌ ಜಾನಕಿ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ 2023ರ ಸೆ.6ರಂದು ನಿರ್ದೇಶನ ನೀಡಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ದೇಶನಕ್ಕೆ ಅನುಮತಿ ನೀಡಿದ್ದರು.

 

ಅರ್ಜಿದಾರರ ಪಟ್ಟಿ ಕಲೆ ಹಾಕಲು ನಿರ್ದೇಶನ; ಆರ್‌ಟಿಐ ಕಾಯ್ದೆ ಮೇಲೆಯೇ ನೇರ ದಾಳಿ

 

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ-ತರಬೇತಿ, ಮಾಹಿತಿ ಹಕ್ಕಕು ಶಾಖೆ) 2023ರ ಸೆ.6ರಂದು ಬರೆದಿದ್ದ ಪತ್ರವನ್ನಾಧರಿಸಿ ಅರ್ಜಿದಾರರರ ಮಾಹಿತಿಯನ್ನು ಆರ್ಥಿಕ ಇಲಾಖೆಯ ಸಮನ್ವಯ ಶಾಖೆಗೆ ಜರೂರಾಗಿ ಕಳಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ಇತರೆ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ನಿರ್ದೇಶಕರು, ಇಲಾಖಾ ಮುಖ್ಯಸ್ಥರಿಗೆ ಸರ್ಕಾರವು ನಿರ್ದೇಶಿಸಿದ್ದಾರೆ.

 

 

ವಾಣಿಜ್ಯ ತೆರಿಗೆ ಆಯುಕ್ತರು, ಅಬಕಾರಿ ಆಯುಕ್ತರು, ಖಜಾನೆ ಆಯುಕ್ತರು, ಪಿಂಚಣಿ, ಸಣ್ಣ ಉಳಿತಾಯ, ವಿಮಾ ಇಲಾಖೆ, ಲೆಕ್ಕಪತ್ರ ಇಲಾಖೆ, ಕೆಎಸ್‌ಎಫ್‌ಸಿ, ಪಾನೀಯ ನಿಗಮ, ಬಿಎಂಟಿಸಿ, ವಿತ್ತೀಯ ಕಾರ್ಯನೀತಿ ಸಂಸ್ಥೆಗೆ ನಿರ್ದೇಶಿಸಿರುವುದು ಗೊತ್ತಾಗಿದೆ.

 

 

ಆರ್‌ಟಿಐ ಅರ್ಜಿದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ

 

ಸಾಮಾಜಿಕ ಕಾರ್ಯಕರ್ತ ಹಾಗೂ ರಾಜ್ಯಸಭೆ ಹಾಲಿ ಸದಸ್ಯ ಸಾಕೇತ್ ಎಸ್. ಗೋಖಲೆ ಅವರ ಪ್ರಕರಣದಲ್ಲಿ ಆರ್‌ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ನ್ಯಾಯಾಧೀಶರು ವಿವರಿಸಿದ್ದಾರೆ. ಆರ್‌ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಅಪ್‌ಲೋಡ್ ಮಾಡುವುದು “ಅನಗತ್ಯ” ಮಾತ್ರವಲ್ಲದೆ “ಕೆಲವು ಅರ್ಜಿದಾರರನ್ನು ನಿರ್ಲಜ್ಜ ಅಂಶಗಳಿಗೆ ಗುರಿಯಾಗುವಂತೆ ಮಾಡುತ್ತದೆ ಎಂದೂ ಅಭಿಪ್ರಾಯಿಸಿದೆ.

 

ಅಲ್ಲದೇ ಅರ್ಜಿದಾರರ ಗೌಪ್ಯತೆಯ ವೈಯಕ್ತಿಕ ಉಲ್ಲಂಘನೆ ಮಾತ್ರವಲ್ಲದೆ ಅದು ಅಪಾಯದ ಸಂಭಾವ್ಯ ಸಾಧ್ಯತೆ” ಗಿಂತ ಹೆಚ್ಚಿನದು. ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾದ ಸ್ಥಿತಿ ಬಂದಲ್ಲಿ ಭಯದಿಂದ ಅರ್ಜಿಗಳನ್ನು ಸಲ್ಲಿಸುವುದನ್ನು ತಡೆದಂತಾಗುತ್ತದೆ. ಅಲ್ಲದೇ ಅದು ಕಾಯಿದೆಯ ಉದ್ದೇಶವು ವಿಫಲಗೊಳ್ಳಲು ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.

 

ಅರ್ಜಿದಾರರ ವಿವರವಾದ ಮಾಹಿತಿಗಳು ಕೋರುವುದು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಕಾರಣವಾಗಲಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಜೀವ ಆಪತ್ತಿನಲ್ಲಿದೆ. ಹಲವರು ಕೊಲೆಯಾಗಿದ್ದಾರೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ಉಳಿದವರು ನಿರಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆರ್‌ಟಿಐ ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಕಲೆ ಹಾಕಲು ಮುಂದಾಗಿರುವುದು ಅಕ್ಷ್ಮಮ್ಯ ಎಂಬ ಅಭಿಪ್ರಾಯವೂ ಕೇಳಿ ಬಂದಿದ್ದವು.

the fil favicon

SUPPORT THE FILE

Latest News

Related Posts