ಬೆಂಗಳೂರು; ಆಧಾರ್ ಜೋಡಣೆಯಲ್ಲಿನ ಲೋಪವೂ ಸೇರಿದಂತೆ ಇನ್ನಿತರೆ ತಾಂತ್ರಿಕ ದೋಷಗಳಿಂದಾಗಿ ಕಳೆದ 3 ವರ್ಷದಿಂದಲೂ ರಾಜ್ಯದ 10,053 ರೈತರಿಗೆ 9.68 ಕೋಟಿ ರು. ಮೊತ್ತದ ಬೆಳೆ ವಿಮೆ ಪರಿಹಾರದ ಮೊತ್ತವೇ ಜಮೆಯಾಗಿಲ್ಲ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರಿಗೆ ಹಿಂದಿನ ಸಾಲುಗಳಲ್ಲಿ ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ವೈಫಲ್ಯಗಳದ್ದೇ ಮೇಲುಗೈಯಾಗಿರುವುದು ಇದೀಗ ಬಹಿರಂಗವಾಗಿದೆ.
ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿರುವ ಬೆನ್ನಲ್ಲೇ ಬೆಳೆ ವಿಮೆ ಪರಿಹಾರದ ಮೊತ್ತವು ಕಳೆದ ಮೂರು ವರ್ಷಗಳಿಂದಲೂ ಪಾವತಿಯಾಗದೇ ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.
ಬಾಕಿ ಇರುವ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಸಂಬಂಧ ಕೃಷಿ ಇಲಾಖೆಯು ಆಯುಕ್ತರು ಮತ್ತು ಕಂದಾಯ ಇಲಾಖೆ ಆಯುಕ್ತರು, ಬ್ಯಾಂಕ್, ವಿಮೆ ಕಂಪನಿಗಳ ನಡುವಿನ ಸಮನ್ವಯತೆಯಲ್ಲಿ ಕೊರತೆಯೇ ಇದಕ್ಕೆ ಕಾರಣ ಎನ್ನಲಾಗಿದೆ.
ಬೆಳೆ ವಿಮೆ ಪರಿಹಾರ ಮೊತ್ತ ಪಾವತಿ ಸಂಬಂಧ ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್ ಅವರು 2023ರ ಸೆ.22ರಂದು ಕಂದಾಯ ಇಲಾಖೆ ಆಯುಕ್ತರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಕಂದಾಯ ಇಲಾಖೆಯಡಿ ಬರುವ ಗ್ರಾಮ್ ಒನ್ ಸೆಂಟರ್, ಬಾಪೂಜಿ ಸೇವಾ ಕೇಂದ್ರಗಳು ಇತ್ಯಾದಿಗಳ ಸೇವೆಗಳನ್ನು ಬಳಸಿಕೊಂಡು ಬಾಕಿ ಇರುವ ಪ್ರತಿ ರೈತರಿಗೆ ವಿಮೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕಿದ್ದ ಕಂದಾಯ ಇಲಾಖೆಯ ಬೇಜವಾಬ್ದಾರಿ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
‘ಎಲ್ಲಾ ಜಿಲ್ಲೆಗಳ ಬ್ಯಾಂಕ್ ಹಾಗೂ ವಿಮಾ ಸಂಸ್ಥೆಗಳೊಂದಿಗೆ ಸತತವಾಗಿ ಪ್ರಯತ್ನಿಸಿ, ಬಾಕಿ ಮೊತ್ತ ಪಾವತಿಸಲು ಕ್ರಮವಹಿಸಲಾಗಿದೆ. ಆದಾಗ್ಯೂ 2019-20ರಿಂದ 2022ರ ಮುಂಗಾರು ಹಂಗಾಮಿನವರೆಗೆ 10.053 ರೈತರಿಗೆ 9.68 ಕೋಟಿ ರು. ಮೊತ್ತದ ಬೆಳೆವಿಮೆ ಪರಿಹಾರ ಪಾವತಿಸಲು ಬಾಕಿ ಇದೆ,’ ಎಂದು ಕೃಷಿ ಇಲಾಖೆ ಆಯುಕ್ತ ವೈ ಎಸ್ ಪಾಟೀಲ್ ಅವರು ಬರೆದಿರುವ ಪತ್ರದಲ್ಲಿ ವಿವರಿಸಲಾಗಿದೆ.
2019-20ನೇ ಸಾಲಿನಿಂದ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವನ್ನು ಇತ್ಯರ್ಥಪಡಿಸುವ ಪ್ರಕ್ರಿಯೆಯನ್ನು ರಾಷ್ಟ್ರದಲ್ಲೇ ಪ್ರಥಮ ಬಾರಿಗೆ ಸಂರಕ್ಷಣೆ ಪೋರ್ಟಲ್ ತಂತ್ರಾಂಶ ಅನುಷ್ಠಾನಗೊಳಿಸಲಾಗಿತ್ತು. ರೈತರ ಖಾತೆಗೆ ಆಧಾರ್ ಆಧಾರಿತ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣವೂ ಸೇರಿದಂತೆ ಇನ್ನಿತರೆ ಕಾರಣಗಳಿಂದಾಗಿ 2019-20ನೇ ಸಾಲಿನಿಂದ ರಾಜ್ಯದಲ್ಲಿ ರೈತರಿಗೆ ಬೆಳೆ ವಿಮೆ ಪರಿಹಾರ ಮೊತ್ತವು ರೈತರ ಬ್ಯಾಂಕ್ ಖಾತೆಗೆ ಜಮೆಯಾಗದೇ ಬಾಕಿ ಇದೆ ಎಂದ ಪತ್ರದಲ್ಲಿ ವಿವರಿಸಿದ್ದಾರೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು ಇಳುವರಿ ಹಾಗೂ ಕ್ಷೇತ್ರ ಆಧಾರಿತ ಯೋಜನೆಯಾಗಿದೆ. ಅರ್ಜಿ ಸಲ್ಲಿಸುವುದರಿಂದ ಬೆಳೆ ಕಟಾವು ಪ್ರಯೋಗ ಹಾಗೂ ವಿಮಾ ಪರಿಹಾರ ಮೊತ್ತವನ್ನು ಅರ್ಹ ರೈತರ ಖಾತೆಗೆ ಜಮೆಯಾಗುವವರೆಗೆ ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಸಂರಕ್ಷಣೆ ಪೋರ್ಟಲ್ ಮೂಲಕ ಮಾಡಲಾಗುತ್ತಿದೆ ಎಂದು ಸರ್ಕಾರವು ಹೆಮ್ಮೆಯಿಂದ ಬೀಗಿತ್ತು.
ಬೆಳೆ ವಿಮೆ ವಂಚನೆಗಳು ನಿರಂತರವಾಗಿ ವರದಿಯಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ರಾಜ್ಯ ಕೆಲವು ಜಿಲ್ಲೆಗಳ ರೈತರು ಇಳುವರಿ ಮೌಲ್ಯಮಾಪನವನ್ನು ನಿರ್ವಹಿಸುವ ಅಧಿಕಾರಿಗಳಿಗೆ ವಿಮೆ ಮೊತ್ತವನ್ನು ಪಾವತಿಸುತ್ತಾರೆ.
ಕೃಷಿ ವೆಚ್ಚವನ್ನು ಪೂರೈಸಲು ಮತ್ತು ದುಡಿಯುವ ಬಂಡವಾಳಕ್ಕಾಗಿ ರೈತರು ಸಾಲವನ್ನು ಪಡೆಯುತ್ತಾರೆ. ಅಲ್ಲದೇ ಬರ, ಪ್ರವಾಹ ಅಥವಾ ಇತ್ತೀಚೆಗೆ ಕಂಡುಬಂದಂತೆ ಅಕಾಲಿಕ ಮಳೆ ಬೆಳೆ ಹಾನಿಯಿಂದಾಗಿ ನಷ್ಟಕ್ಕೀಡಾಗುವ ರೈತರೂ ಸಾಲಕ್ಕೆ ಮೊರೆ ಹೋಗುತ್ತಾರೆ.
‘ರೈತ ಸಾಲ ಮರುಪಾವತಿಸಲು ಸಾಧ್ಯವಿಲ್ಲ, ಇದರ ಪರಿಣಾಮವಾಗಿ ವಿಮಾ ಕಂತುಗಳನ್ನು ಪಾವತಿಸಲಾಗುವುದಿಲ್ಲ. ಹೀಗಾಗಿ ವಿಮೆ ವ್ಯರ್ಥವಾಗುತ್ತದೆ. ರೈತ ಹಿಂದಿನ ಸಾಲವನ್ನು ತೀರಿಸಲು ಲೇವಾದೇವಿಗಾರನಿಂದ ಸಾಲವನ್ನು ತೆಗೆದುಕೊಳ್ಳುತ್ತಾನೆ. ಸಾಲಗಾರನು ಡೀಫಾಲ್ಟ್ ಸಂದರ್ಭದಲ್ಲಿ ಬೆದರಿಕೆ ತಾಳಲಾರದೇ ಅನೇಕ ಬಾರಿ ಅವಮಾನದಿಂದ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ,’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಯೊಬ್ಬರು.