ಬೆಂಗಳೂರು; ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯೂ ಸೇರಿದಂತೆ ಇಲಾಖೆಗಳು, ಸಚಿವಾಲಯಗಳಿಗೆ ಮಾಹಿತಿ ಹಕ್ಕಿನ ಅಡಿಯಲ್ಲಿ ಹೆಚ್ಚು ಬಾರಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ಸರ್ಕಾರವು ನೀಡಿರುವ ನಿರ್ದೇಶನವು ವಿವಾದಕ್ಕೆ ದಾರಿಮಾಡಿಕೊಟ್ಟಿದೆ.
ಕೇಂದ್ರ ಸರ್ಕಾರವು ಆರ್‌ಟಿಐ ಕಾಯ್ದೆಗೆ ತಂದಿರುವ ತಿದ್ದುಪಡಿ ಕುರಿತು ಬಲವಾದ ವಿರೋಧ ಮತ್ತು ಆಕ್ಷೇಪಗಳು ವ್ಯಕ್ತವಾಗಿರುವ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರ್ಕಾರವೂ ಆರ್‌ಟಿಐ ಅಡಿಯಲ್ಲಿ ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಒದಗಿಸಲು ನಿರ್ದೇಶನ ನೀಡಿರುವುದು ಮುನ್ನೆಲೆಗೆ ಬಂದಿದೆ.
ಮಾಹಿತಿ ಹಕ್ಕು ಕಾರ್ಯಕರ್ತರ ಜೀವ ಆಪತ್ತಿನಲ್ಲಿದೆ. ಹಲವರು ಕೊಲೆಯಾಗಿದ್ದಾರೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ಉಳಿದವರು ನಿರಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ ಎಂಬ ಆತಂಕದ ಮಾತುಗಳು ಕೇಳಿ ಬಂದಿರುವ ನಡುವೆಯೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಕಲೆ ಹಾಕಲು ಮುಂದಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ವಿಶೇಷವೆಂದರೆ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರು 2023ರ ಏಪ್ರಿಲ್‌ನಲ್ಲೇ ಪತ್ರ ಬರೆದಿತ್ತಾದರೂ ಹಿಂದಿನ ಬಿಜೆಪಿ ಸರ್ಕಾರವು ಯಾವುದೇ ಕ್ರಮವಹಿಸಿರಲಿಲ್ಲ. ಆದರೀಗ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನೂರೇ ನೂರು ದಿನದಲ್ಲಿ ಅರ್ಜಿದಾರರ ಪಟ್ಟಿಯನ್ನು ಕ್ರೋಢಿಕರಿಸಲು ಆದೇಶಿಸಿದೆ.
ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರ ನಿರ್ದೇಶನವನ್ನು ಉಲ್ಲೇಖಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ನಿಗಮ, ಮಂಡಳಿಗಳಿಗೆ ಪತ್ರ ಬರೆದು ಅರ್ಜಿದಾರರ ಪಟ್ಟಿಯನ್ನು ಜರೂರಾಗಿ ಸಲ್ಲಿಸಬೇಕು ಎಂದು 2023ರ ಸೆ.6ರಂದು ನಿರ್ದೇಶನ ನೀಡಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿ ಒಗಿಸಲು ಕರ್ನಾಟಕ ಮಾಹಿತಿ ಆಯೋಗದ ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರು 2023ರ ಏಪ್ರಿಲ್ 10ರಂದು ಆದೇಶ ಹೊರಡಿಸಿದ್ದರು. ರಾಜ್ಯದ ಎಲ್ಲಾ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮವನಿ ಪ್ರಾಧಿಕಾರಿಗಳು ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವಂತಹ ಅರ್ಜಿದಾರರ ಪಟ್ಟಿಯನ್ನು ಒದಗಿಸಬೇಕು ಎಂದು ನಿರ್ದೇಶನ ನೀಡಿತ್ತು.
ಅದರಂತೆ ಎಲ್ಲಾ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವ ಇಲಾಖೆ, ನಿಗಮ, ಮಂಡಳಿಗಳಿಂದ ಮಾಹಿತಿ ಪಡೆದು ಕ್ರೋಢೀಕೃತ ಮಾಹಿತಿಯನ್ನು2023ರ ಸೆ.20ರೊಳಗೆ ಸಲ್ಲಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವೈ ಆರ್ ಜಾನಕಿ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಗಳಿಗೆ 2023ರ ಸೆ.6ರಂದು ನಿರ್ದೇಶನ ನೀಡಿದ್ದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯನ್ನು ನಿಭಾಯಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿರ್ದೇಶನಕ್ಕೆ ಅನುಮತಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಆಡಳಿತ ಸುಧಾರಣೆ-ತರಬೇತಿ, ಮಾಹಿತಿ ಹಕ್ಕಕು ಶಾಖೆ) 2023ರ ಸೆ.6ರಂದು ಬರೆದಿದ್ದ ಪತ್ರವನ್ನಾಧರಿಸಿ ಅರ್ಜಿದಾರರರ ಮಾಹಿತಿಯನ್ನು ಆರ್ಥಿಕ ಇಲಾಖೆಯ ಸಮನ್ವಯ ಶಾಖೆಗೆ ಜರೂರಾಗಿ ಕಳಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಸೇರಿದಂತೆ ಇತರೆ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ನಿರ್ದೇಶಕರು, ಇಲಾಖಾ ಮುಖ್ಯಸ್ಥರಿಗೆ ಸರ್ಕಾರವು ನಿರ್ದೇಶಿಸಿದ್ದಾರೆ.
ವಾಣಿಜ್ಯ ತೆರಿಗೆ ಆಯುಕ್ತರು, ಅಬಕಾರಿ ಆಯುಕ್ತರು, ಖಜಾನೆ ಆಯುಕ್ತರು, ಪಿಂಚಣಿ, ಸಣ್ಣ ಉಳಿತಾಯ, ವಿಮಾ ಇಲಾಖೆ, ಲೆಕ್ಕಪತ್ರ ಇಲಾಖೆ, ಕೆಎಸ್‌ಎಫ್‌ಸಿ, ಪಾನೀಯ ನಿಗಮ, ಬಿಎಂಟಿಸಿ, ವಿತ್ತೀಯ ಕಾರ್ಯನೀತಿ ಸಂಸ್ಥೆಗೆ ನಿರ್ದೇಶಿಸಿರುವುದು ಗೊತ್ತಾಗಿದೆ.
ಆರ್‌ಟಿಐ ಅರ್ಜಿದಾರರ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆ
ಸಾಮಾಜಿಕ ಕಾರ್ಯಕರ್ತ ಹಾಗೂ ರಾಜ್ಯಸಭೆ ಹಾಲಿ ಸದಸ್ಯ ಸಾಕೇತ್ ಎಸ್. ಗೋಖಲೆ ಅವರ ಪ್ರಕರಣದಲ್ಲಿ ಆರ್‌ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ನ್ಯಾಯಾಧೀಶರು ವಿವರಿಸಿದ್ದಾರೆ. ಆರ್‌ಟಿಐ ಅರ್ಜಿದಾರರ ವೈಯಕ್ತಿಕ ವಿವರಗಳನ್ನು ಅಪ್‌ಲೋಡ್ ಮಾಡುವುದು “ಅನಗತ್ಯ” ಮಾತ್ರವಲ್ಲದೆ “ಕೆಲವು ಅರ್ಜಿದಾರರನ್ನು ನಿರ್ಲಜ್ಜ ಅಂಶಗಳಿಗೆ ಗುರಿಯಾಗುವಂತೆ ಮಾಡುತ್ತದೆ ಎಂದೂ ಅಭಿಪ್ರಾಯಿಸಿದೆ.
ಅಲ್ಲದೇ ಅರ್ಜಿದಾರರ ಗೌಪ್ಯತೆಯ ವೈಯಕ್ತಿಕ ಉಲ್ಲಂಘನೆ ಮಾತ್ರವಲ್ಲದೆ ಅದು ಅಪಾಯದ ಸಂಭಾವ್ಯ ಸಾಧ್ಯತೆ” ಗಿಂತ ಹೆಚ್ಚಿನದು. ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾದ ಸ್ಥಿತಿ ಬಂದಲ್ಲಿ ಭಯದಿಂದ ಅರ್ಜಿಗಳನ್ನು ಸಲ್ಲಿಸುವುದನ್ನು ತಡೆದಂತಾಗುತ್ತದೆ. ಅಲ್ಲದೇ ಅದು ಕಾಯಿದೆಯ ಉದ್ದೇಶವು ವಿಫಲಗೊಳ್ಳಲು ಕಾರಣವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿತ್ತು.
ಅರ್ಜಿದಾರರ ವಿವರವಾದ ಮಾಹಿತಿಗಳು ಕೋರುವುದು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಲು ಕಾರಣವಾಗಲಿದೆ. ಮಾಹಿತಿ ಹಕ್ಕು ಕಾರ್ಯಕರ್ತರ ಜೀವ ಆಪತ್ತಿನಲ್ಲಿದೆ. ಹಲವರು ಕೊಲೆಯಾಗಿದ್ದಾರೆ. ಹಲವರ ಮೇಲೆ ಹಲ್ಲೆಗಳು ನಡೆದಿವೆ. ಉಳಿದವರು ನಿರಂತರ ಜೀವ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಆರ್‌ಟಿಐ ಅರ್ಜಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಲ್ಲಿಸುತ್ತಿರುವ ಅರ್ಜಿದಾರರ ಪಟ್ಟಿಯನ್ನು ಕಲೆ ಹಾಕಲು ಮುಂದಾಗಿರುವುದು ಅಕ್ಷ್ಮಮ್ಯ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ.
ಮಾಹಿತಿ ಹಕ್ಕು ಅಧಿನಿಯದ ದುರುಪಯೋಗದ ಬಗ್ಗೆ ಅಲ್ಲಲ್ಲಿ ಮಾತು ಕೇಳಿಬರುತ್ತಿದೆ. ವಿಶೇಷವಾಗಿ ಸರ್ಕಾರಿ ಸಿಬ್ಬಂದಿಗೆ ನೀಡುವ ತರಬೇತಿ ಕಾರ್ಯಾಗಾರದಲ್ಲಿ ಇದು ಸಾಮಾನ್ಯ ಸಂಗತಿ. ಕೆಲವೇ ನಾಗರಿಕರು ಪದೇ ಪದೇ ಅರ್ಜಿ ಸಲ್ಲಿಸುವುದು, ಬಹತ್ ಪ್ರಮಾಣದಲ್ಲಿ ಮಾಹಿತಿ ಕೇಳುವುದು, ಅರ್ಜಿದಾರರಿಗೆ ಸಂಬಂಧವಿಲ್ಲದ ಮಾಹಿತಿ ಕೇಳುವುದು ಇತ್ಯಾದಿ ರೀತಿಯಲ್ಲಿ ಮಾಹಿತಿ ಹಕ್ಕು ಕಾನೂನು ದುರ್ಬಳಕೆಯಾಗುತ್ತಿದೆ ಎಂಬುದು ಅಧಿಕಾರಿಗಳ ಅಭಿಪ್ರಾಯ.
ಅಧಿಕಾರಿಗಳು ಮಾಹಿತಿ ನೀಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಅವರಿಂದ ಹಣ ವಸೂಲು ಮಾಡುವ ಪ್ರಕರಣಗಳೂ ಕಂಡುಬಂದಿದೆ. ಕೆಲವರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವುದು ಒಂದು ದಿನನಿತ್ಯದ ಕೆಲಸವಾಗಿದೆ.
ಒಬ್ಬ ವ್ಯಕ್ತಿ ಇಂತಿಷ್ಟೇ ಅರ್ಜಿಯನ್ನು ಸಲ್ಲಿಸಬೇಕು ಎಂಬ ನಿರ್ಬಂಧವಿಲ್ಲ. ಕೆಲವೊಂದು ಮಾಹಿತಿ ಹೊರತುಪಡಿಸಿದರೆ ಇಂತಹದೇ ಮಾಹಿತಿ ಕೇಳಬೇಕು ಅಥವಾ ಕೇಳಬಾರದು ಎಂಬ ನಿಯಮವೂ ಇಲ್ಲ.
ಅಥವಾ ಮಾಹಿತಿ ಒದಗಿಸಲು ಪುಟಗಳ ಮಿತಿಯೂ ಇಲ್ಲ. ಯಾವ ಕಾರಣಕ್ಕಾಗಿ ಮಾಹಿತಿ ಅಗತ್ಯವಿದೆ ಎಂಬುದನ್ನು ಸಹ ಬಹಿರಂಗಪಡಿ–ಸುವಂತಿಲ್ಲ. ನಾಗರಿಕರಿಗೆ ಸುಲಭವಾಗಿ ಮಾಹಿತಿ ದೊರೆಯಲಿ ಎಂಬ ಘನ ಉದ್ದೇಶದಿಂದ ಅಧಿನಿಯಮದಲ್ಲಿ ಇದಾವುದೇ ರೀತಿಯ ಮಿತಿಯನ್ನು ಸೇರಿಸಿಲ್ಲ ಎನ್ನುತ್ತಾರೆ ಮಾಹಿತಿ ಹಕ್ಕು ಕಾರ್ಯಕರ್ತರು.