ಕಾಲಹರಣ, ಕರ್ತವ್ಯ ಅವಧಿಯಲ್ಲಿ ಸಂತೆ ಬೀದಿಯಲ್ಲಿ ಸುತ್ತಾಟ; ಅಶಿಸ್ತನ್ನು ತೆರೆದಿಟ್ಟ ಕಟಾರಿಯಾ

ಬೆಂಗಳೂರು; ಕಂದಾಯ ಇಲಾಖೆಯ ಅಧಿಕಾರಿ, ನೌಕರರು ಕರ್ತವ್ಯದ ಅವಧಿಯಲ್ಲಿ ಸಂತೆ ಬೀದಿಗಳಲ್ಲಿ ಓಡಾಡುತ್ತಿದ್ದಾರೆ. ಕಚೇರಿಗಳಲ್ಲಿ ವಿನಾ ಕಾರಣ ಹಲವರೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಗಂಟೆಗಟ್ಟಲೇ ಕಾಫಿ, ಟೀ, ಉಪಹಾರಕ್ಕೆಂದು ಹೋಗುತ್ತಿದ್ದಾರೆ. ಕಚೇರಿ ಕೆಲಸಕ್ಕೆ ಅಡಚಣೆಯಾಗುತ್ತಿದೆ. ಒಟ್ಟಾರೆಯಾಗಿ ಕಂದಾಯ ಇಲಾಖೆಯಲ್ಲಿ ಶಿಸ್ತೇ ಇಲ್ಲ.

 

ಇಂತಹದೊಂದು ಆರೋಪ ಕೇಳಿ ಬಂದಿರುವುದು ಸಾರ್ವಜನಿಕರ ವಲಯದಿಂದಲ್ಲ. ಬದಲಿಗೆ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರೇ ತಪಾಸಣೆ ನಡೆಸಿ ಇಲಾಖೆಯಲ್ಲಿನ ಅಶಿಸ್ತಿನ ವಿವಿಧ ಮುಖಗಳನ್ನು ತೆರೆದಿಟ್ಟಿದ್ದಾರೆ.

 

ಈ ಸಂಬಂಧ ಅಸಮಾಧಾನ ವ್ಯಕ್ತಪಡಿಸಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ನೌಕರರಿಗೆ ಶಿಸ್ತಿನ ಪಾಠ ಹೇಳಿದ್ದಾರೆ. ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿ, ನೌಕರರಿಗೆ ಬಿಸಿ ಮುಟ್ಟಿಸುವ ಸಲುವಾಗಿ ಪ್ರಾಥಮಿಕ ಹಂತದಲ್ಲಿ ಟಿಪ್ಪಣಿ  ಹೊರಡಿಸಿದ್ದಾರೆ. 2023ರ ಸೆ.16ರಂದು ಹೊರಡಿಸಿರುವ ಈ ಟಿಪ್ಪಣಿಯು  ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆಯ ಮೂಲಕವೇ ಆಗಬೇಕು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆಯ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ. ಅಂಥವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಈಚೆಗಷ್ಟೇ ಎಚ್ಚರಿಕೆ ಮಾತು ಹೇಳಿದ್ದರು.

 

ಇದರ ಬೆನ್ನಲ್ಲೇ ರಾಜೇಂದರ್ ಕುಮಾರ್ ಕಟಾರಿಯಾ ಅವರು ಕಂದಾಯ ಇಲಾಖೆಯ ಸಚಿವಾಲಯದಲ್ಲಿಯೇ ಅಧಿಕಾರಿ, ನೌಕರರಲ್ಲಿ ಆಡಳಿತಾತ್ಮಕ ಶಿಸ್ತಿಲ್ಲ ಎಂಬುದನ್ನು ಹೊರಗೆಡವಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಸುತ್ತೋಲೆಯಲ್ಲೇನಿದೆ?

 

ಕಂದಾಯ ಇಲಾಖೆಯಲ್ಲಿ ಹಲವಾರು ಬಾರಿ ಕಂದಾಯ ಇಲಾಖೆ ಅಧೀನ ಶಾಖೆಗಳಿಗೆ ನಾನು ಖುದ್ದಾಗಿ ಪೂರ್ವಾಹ್ನ 10.45ಕ್ಕೆ ತಪಾಸಣೆಗೆ ಭೇಟಿ ನೀಡಿದಾಗಲೆಲ್ಲ ಶಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕರ್ತವ್ಯಕ್ಕೆ ಇನ್ನೂ ಹಾಜರಾಗದೇ ಇರುವುದು, ಅಲ್ಲದೇ ಸಾಯಂಕಾಲ ಕಚೇರಿ ತುರ್ತು ಕೆಲಸ ನಿರ್ವಹಣೆಗಾಗಿ ಸಿಬ್ಬಂದಿಗಳನ್ನು ಕರೆದಾಗಲೂ ಕಚೇರಿಯಿಂದ ಅತೀ ಬೇಗ ನಿರ್ಗಮಿಸಿರುವುದು ಕಂಡು ಬಂದಿರುತ್ತದೆ. ಇದರಿಂದಾಗಿ ಕಚೇರಿ ಕೆಲಸಕ್ಕೆ ಅಡಚಣೆಯುಂಟಾಗುತ್ತಿರುತ್ತದೆ.

 

ಅಲ್ಲದೇ ‘ಕಚೇರಿ ವೇಳೆಯಲ್ಲಿ ಸಾರ್ವಜನಿಕರು ಟಪಾಲು/ಕಡತ ಚಲನವಲನ ವಿಚಾರಣೆಗಾಗಿ ಬಂದಾಗ ವಿನಾ ಕಾರಣ ಅವರೊಂದಿಗೆ ಕಾಲಹರಣ ಮಾಡುತ್ತಿರುವುದು, ಗಂಟೆಗಟ್ಟಲೇ ಟೀ ಕಾಫಿ, ಉಪಹಾರಕ್ಕೆಂದು ಕಚೇರಿ ಬಿಟ್ಟು ಹೋಗುವುದು, ಸಂತೆ ಬೀದಿಗಳಲ್ಲಿ ಓಡಾಡುತ್ತಿರುವುದು ಮುಂತಾದವುಗಳು ನನ್ನ ಗಮನಕ್ಕೆ ಬಂದಿವೆ. ಇನ್ನು ಮುಂದೆ ಈ ರೀತಿ ಪುನರಾವರ್ತನೆಯಾದಲ್ಲಿ ಅಂತಹ ನೌಕರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,’ ಎಂದು ಎಚ್ಚರಿಕೆ ನೀಡಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.

 

ಮುಂದುವರೆದು ಕಂದಾಯ ಇಲಾಖೆಯ ಎಲ್ಲಾನೌಕರರು ಪ್ರತಿ ದಿನ ಕಚೇರಿಗೆ ಪೂರ್ವಾಹ್ನ 10.30ರೊಳಗಾಗಿ ಕಡ್ಡಾಯವಾಗಿ ಹಾಜರಿರುವುವುದು ಹಾಗೂ ಸಾಯಂಕಾಲ ಕಚೇರಿಯಿಂದ ತೆರಳುವಾಗ ತಮ್ಮ ಶಾಖೆಯ ಸಂಬಂಧಪಟ್ಟ ಜಂಟಿ ಉಪ ಕಾರ್ಯದರ್ಶಿಯವರಿಂದ ಅನುಮತಿ ಪಡೆದೇ ಕಚೇರಿಯಿಂದ ತೆರಳಬೇಕು ಎಂದು ಸೂಚಿಸಿದ್ದಾರೆ.

 

ಈ ಎಲ್ಲಾ ಸೂಚನೆಗಳನ್ನು ಕಂದಾಯ ಇಲಾಖೆಯ ಎಲ್ಲಾ ನೌಕರರು ಕಟ್ಟುನಿಟ್ಟಾಗಿ ಪಾಲಿಸುವುದು, ಇಲ್ಲವಾದಲ್ಲಿ ಅವರ ಮೇಲೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದರ್‍‌ ಕುಮಾರ್‍‌ ಕಟಾರಿಯಾ ಅವರು ಆದೇಶಿಸಿದ್ದಾರೆ.

 

ಒಳ್ಳೆಯ ಕೆಲಸ ಮಾಡಿದ್ರೆ ಪ್ರಶಸ್ತಿ, ತಪ್ಪು ಮಾಡಿದರೆ ಕ್ರಿಮಿನಲ್ ಕೇಸ್‌ ಹಾಕಲಾಗುವುದು ಎಂದು ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಅವರು ಈಚೆಗಷ್ಟೇ ಎಚ್ಚರಿಸಿದ್ದರು. ಸರ್ಕಾರದ ಆಡಳಿತ ಸುಧಾರಣೆ ಕಂದಾಯ ಇಲಾಖೆಯ ಮೂಲಕವೇ ಆಗಬೇಕು. ಹೀಗಾಗಿ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಬೇಕು. ಒಳ್ಳೆ ಕೆಲಸ ಮಾಡಿದವರಿಗೆ ಸರ್ವೋತ್ತಮ ಅಧಿಕಾರಿ ಪ್ರಶಸ್ತಿ ಕೊಡುತ್ತೇವೆ. ಒಳ್ಳೆಯ ಮಾತಿಗೆ ಬಗ್ಗದೇ ತಪ್ಪು ಮಾಡುವವರೂ ಇದ್ದಾರೆ. ಅಂಥವರಿಗೆ ಅವರದೇ ಮಾತಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದನ್ನು ಸ್ಮರಿಸಬಹುದು.

 

‘ಅಧಿಕಾರಕ್ಕೆ ಬಂದ ಎರಡೇ ತಿಂಗಳಿನಲ್ಲಿ ಕಳೆದ ಐದು ವರ್ಷಗಳಿಂದ ಧೂಳು ಹಿಡಿದಿದ್ದ 67 ಭ್ರಷ್ಟ ಕಂದಾಯ ಇಲಾಖೆ ಅಧಿಕಾರಿ/ನೌಕರರ ಕಡತಗಳನ್ನು ಕೊಡವಿ ಶಿಕ್ಷೆಯನ್ನೂ ನೀಡಲಾಗಿದೆ. ಆದರೆ, ಇಷ್ಟು ಮಾತ್ರದ ಕ್ರಮದಿಂದ ದೊಡ್ಡ ಇಲಾಖೆಯೊಂದರಲ್ಲಿ ಸುಧಾರಣೆ ಸಾಧಿಸಿಬಿಡಬಹುದು, ಇಲಾಖೆಯನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಿ ಜನರಿಗೆ ಉತ್ತಮ ಸೇವೆ ನೀಡಬಹುದು ಎಂಬ ಭ್ರಮೆ ನಮಗಿಲ್ಲ. ಹೀಗಾಗಿ ಭ್ರಷ್ಟರ ಭೇಟೆಗೆ ನಮ್ಮ ಸರ್ಕಾರ ಮತ್ತೂ ಒಂದು ಹೆಜ್ಜೆ ಮುಂದಿಟ್ಟಿದೆ,’ ಎಂದಿದ್ದರು.

the fil favicon

SUPPORT THE FILE

Latest News

Related Posts