‘ಸ್ಥಳ ನಿಯುಕ್ತಿಗೊಳಿಸಿ, ದಯವಿಟ್ಟು ಸಹಾಯ ಮಾಡಿ’; ಸರ್ಕಾರಕ್ಕೆ ಮೊರೆಯಿಟ್ಟ ಅಧಿಕಾರಿಯ ಪತ್ರ ಬಹಿರಂಗ

ಬೆಂಗಳೂರು; ಪ್ರಭಾವಿ ಸಚಿವರೊಬ್ಬರ ಒತ್ತಡಕ್ಕೆ ಮಣಿದು ಸಕಾರಣಗಳಿಲ್ಲದಿದ್ದರೂ  ಎತ್ತಂಗಡಿ ಶಿಕ್ಷೆಗೆ ಒಳಗಾಗಿರುವ ಕೆಎಎಸ್‌ ಅಧಿಕಾರಿ ಶ್ರೀನಿವಾಸ್‌ ಅವರಿಗಿನ್ನೂ ಸರ್ಕಾರವು  ಹುದ್ದೆ ತೋರಿಸಿಲ್ಲ. ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ಸ್ಥಳ ನಿಯುಕ್ತಿಗೊಳಿಸಿ  ಹುದ್ದೆ ನೀಡಿ ಎಂದು ಬಾಧಿತ  ಅಧಿಕಾರಿಯೇ  ಪತ್ರ ಬರೆದು ಕೋರಿಕೊಂಡಿದ್ದರೂ ಸಹ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ಆ ಪತ್ರದತ್ತ ತಿರುಗಿಯೂ ನೋಡಿಲ್ಲ.

 

ಕಾರ್ಯನಿರ್ವಹಿಸಿದ ಕಡೆಯೆಲ್ಲೆಲ್ಲಾ ಆಡಳಿತಾತ್ಮಕ ಸುಧಾರಣೆಗಳನ್ನು ಜಾರಿಗೊಳಿಸಿರುವ ಕೆಎಎಸ್‌ ಅಧಿಕಾರಿ ಕೆ ಆರ್‍‌ ಶ್ರೀನಿವಾಸ್‌ ಅವರಿಗೆ  ರಾಜ್ಯ ಕಾಂಗ್ರೆಸ್‌ ಸರ್ಕಾರವು ಅತ್ತ ಹುದ್ದೆಯೂ ನೀಡದೇ ಇತ್ತ ಆದೇಶವನ್ನು ಮಾರ್ಪಡಿಸದೇ ಇರುವುದು ದಕ್ಷ ಅಧಿಕಾರಿಶಾಹಿಯೊಳಗೆ  ಅಸಮಾಧಾನಕ್ಕೆ ಕಾರಣವಾಗಿದೆ.

 

 

ದಾವಣಗೆರೆ ಮಹಾನಗರಪಾಲಿಕೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ ಆರ್‍‌ ಶ್ರೀನಿವಾಸ ಅವರನ್ನು ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಅವಧಿಪೂರ್ವವಾಗಿ ಎತ್ತಂಗಡಿ ಮಾಡಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು  ಕೆಯುಡಿಎಫ್‌ಸಿನಲ್ಲಿ  ಹುದ್ದೆಯೇ ಇಲ್ಲದಿದ್ದರೂ  ವರ್ಗಾವಣೆ ಮಾಡಿತ್ತು.

 

ಹೀಗಾಗಿ ಅಲ್ಲಿಯೂ ಅವರಿಗೆ ಕಾರ್ಯಭಾರವಿಲ್ಲದಂತಾಗಿತ್ತು. ಹೀಗಾಗಿ ಕೆ ಆರ್‍‌ ಶ್ರೀನಿವಾಸ್‌ ಅವರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2023ರ ಆಗಸ್ಟ್‌ 19ರಂದು ಪತ್ರವನ್ನು ಬರೆದು ವರ್ಗಾವಣೆ ಆದೇಶ ಮಾರ್ಪಡಿಸಿ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಕೋರಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪತ್ರದಲ್ಲೇನಿದೆ?

 

‘ಸರ್ಕಾರದ ಆದೇಶದಂತೆ (ಆದೇಶ ಸಂಖ್ಯೆ; ಸಿಆಸುಇ 256 ಆಸೇವೆ 2023) ಮುಖ್ಯಮಂತ್ರಿಗಳ ಅಧೀನ ಕಾರ್ಯದರ್ಶಿ ಹುದ್ದೆಯಿಂದ ಕೆಯುಐಡಿಎಫ್‌ಸಿಗೆ ವರ್ಗಾಯಿಸಿದ್ದು ಸದರಿ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಹೋದಾಗ ಹುದ್ದೆ ಖಾಲಿ ಇಲ್ಲ ಎಂದು ಪತ್ರ ಬರೆದಿರುತ್ತಾರೆ. ಆದ್ದರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಮುಖ್ಯ ಜಾಗೃತಾಧಿಕಾರಿ ಹುದ್ದೆಗೆ ಸ್ಥಳ ನಿಯುಕ್ತಿ ಮಾಡಿಕೊಡಲು ತಮ್ಮಲ್ಲಿ ಕೋರುತ್ತೇನೆ. I Kindly Request you to post as Chief Vigilance Offiecer, Helath and Family Welfare. Please help me sir,’ ಎಂದು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

 

ಕೆಎಎಸ್‌ ಅಧಿಕಾರಿ ಕೆ ಆರ್‍‌ ಶ್ರೀನಿವಾಸ್‌ ಅವರು ಡಿಪಿಎಆರ್‍‌ಗೆ ಬರೆದಿರುವ ಕೋರಿಕೆ ಪತ್ರದ ಪ್ರತಿ

 

ಈ ಪತ್ರ ಬರೆದು 10 ದಿನಗಳಾದರೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕೆ ಆರ್‍‌ ಶ್ರೀನಿವಾಸ್‌ ಅವರಿಗೆ ಆದೇಶ ಮಾರ್ಪಡಿಸಿಲ್ಲ ಮತ್ತು ಸ್ಥಳ ನಿಯುಕ್ತಿಗೊಳಿಸಿ ಆದೇಶವನ್ನು ಹೊರಡಿಸಿಲ್ಲ ಎಂದು ತಿಳಿದು ಬಂದಿದೆ.

 

ದಾವಣಗೆರೆ ಮಹಾನಗರಪಾಲಿಕೆಯಲ್ಲಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ  ಕೆ ಆರ್‍‌ ಶ್ರೀನಿವಾಸ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು  ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಗೆ 2023ರ ಜುಲೈ 15ರಂದು ನೇಮಿಸಿ ಅಧಿಸೂಚನೆ ಹೊರಡಿಸಿತ್ತು.

 

ಕಾರ್ಯಭಾರ ವಹಿಸಿಕೊಂಡು ತಿಂಗಳು ಕಳೆಯುವುದರೊಳಗೇ ಕೆ ಆರ್‍‌ ಶ್ರೀನಿವಾಸ ಅವರನ್ನು ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯಿಂದ 2023ರ ಆಗಸ್ಟ್‌ 10ರಂದು ಎತ್ತಂಗಡಿ ಮಾಡಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿತ್ತು.

 

ಮುಖ್ಯಮಂತ್ರಿ ಸಚಿವಾಲಯದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಹರಿದಾಸನ್‌ ಅವರನ್ನೇ ಪುನಃ ಅಧೀನ ಕಾರ್ಯದರ್ಶಿಯನ್ನಾಗಿ ನೇಮಿಸಿ 2023ರ ಆಗಸ್ಟ್‌ 28ರಂದು ಅಧಿಸೂಚನೆ ಹೊರಡಿಸಲಾಗಿತ್ತು.

 

ಸಿಎಂ ಸಚಿವಾಲಯದ ಅಧೀನ ಕಾರ್ಯದರ್ಶಿ ಎತ್ತಂಗಡಿ; ಸಚಿವರ ಒತ್ತಡ, ಹುದ್ದೆಯೇ ಇಲ್ಲದ ಜಾಗಕ್ಕೆ ವರ್ಗಾ

 

 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಹರಿದಾಸನ್‌ ಅವರನ್ನು ನೇಮಿಸಲಾಗಿತ್ತು.

 

ಇಲ್ಲದ ಹುದ್ದೆಗೆ ವರ್ಗಾ

 

ಒಂದೇ ತಿಂಗಳಲ್ಲೇ ಎತ್ತಂಗಡಿಯಾಗಿದ್ದ ಶ್ರೀನಿವಾಸ ಅವರನ್ನು ಕೆಯುಐಡಿಎಫ್‌ಸಿಯಲ್ಲಿನ ಉಪ ಪ್ರಧಾನ ವ್ಯವಸ್ಥಾಪಕರನ್ನಾಗಿ ನೇಮಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಅಲ್ಲಿಯೂ ಅವರನ್ನು ಕಾರ್ಯಭಾರ ವಹಿಸಿಕೊಳ್ಳಲು ಐಎಎಸ್‌ ಅಧಿಕಾರಿಯೊಬ್ಬರು ಅವಕಾಶ ಮಾಡಿಕೊಟ್ಟಿಲ್ಲ ಎಂಬ ಮಾತು ಕೇಳಿ ಬಂದಿತ್ತು.

 

ಕೆಯುಡಿಎಫ್‌ಸಿಯಲ್ಲಿ ಉಪ ಪ್ರಧಾನ ವ್ಯವಸ್ಥಾಪಕ ಹುದ್ದೆಯೇ ಇಲ್ಲದಿದ್ದರೂ ಅವರನ್ನು ವರ್ಗಾವಣೆ ಮಾಡಿದ್ದರಿಂದಾಗಿ ಐಎಎಸ್‌ ಅಧಿಕಾರಿಯೊಬ್ಬರು ಅಧಿಕಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿಲ್ಲ . ಈ ಬಗ್ಗೆ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದರು ಎಂದು ಗೊತ್ತಾಗಿದೆ. ಹೀಗಾಗಿ ಕೆ ಆರ್‍‌ ಶ್ರೀನಿವಾಸ್‌ ಅವರಿಗೆ ಇದುವರೆಗೂ ಯಾವುದೇ ಹುದ್ದೆಯನ್ನು ತೋರಿಸಿಲ್ಲ.

 

ಎತ್ತಂಗಡಿ ಹಿಂದೆ ಸಚಿವರ ಪ್ರಭಾವ?

 

ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿ ಹುದ್ದೆಯಿಂದ ಕೆ ಆರ್‍‌ ಶ್ರೀನಿವಾಸ ಅವರನ್ನು ಎತ್ತಂಗಡಿ ಮಾಡಿರುವುದರ ಹಿಂದೆ ಸಚಿವರೊಬ್ಬರು ಪ್ರಮುಖ ಪಾತ್ರವಹಿಸಿದ್ದರು ಎಂಬ ಮಾತು ಕೇಳಿ ಬಂದಿದೆ. ಕೆ ಆರ್‍‌ ಶ್ರೀನಿವಾಸ ಅವರು ಮುಖ್ಯಮಂತ್ರಿ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗುವ ಮುನ್ನ ದಾವಣಗೆರೆ ಮಹಾನಗರಪಾಲಿಕೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

 

ಯಾರು ಈ ಶ್ರೀನಿವಾಸ್‌

 

ಈ ವೇಳೆಯಲ್ಲಿ ಚುನಾವಣೆ ಅಕ್ರಮಗಳನ್ನು ತಡೆಗಟ್ಟಲು ಪ್ರಾಮಾಣಿಕವಾಗಿ ಶ್ರಮಿಸಿದ್ದರು. ಮತದಾರರಲ್ಲಿ ಈ ಕುರಿತು ಅರಿವು ಮೂಡಿಸಿದ್ದರು. ಒಂದೊಂದು ಮತಕ್ಕೆ 1ರಿಂದ 2 ಸಾವಿರ ರು ಹಣ ನೀಡುತ್ತಿರುವ ಬಗ್ಗೆಯೂ ದೂರುಗಳನ್ನು ಪರಿಶೀಲಿಸಿದ್ದರು. ನೂರಾರು ಕೋಟಿ ರು. ದೋಚಿದರೆ ಇದು ಮತದಾರರಿಗೆ ಮಾಡುವ ಮೋಸ ಎಂದು ಸಾಮಾಜಿಕ ಜಾಲತಾಣದಲ್ಲಿ ಮುಕ್ತವಾಗಿ ಮಾತನಾಡಿದ್ದರು. ಈ ಮೂಲಕ ಮತದಾರರಲ್ಲಿ ಹಣ ಪಡೆದು ಮತ ಚಲಾಯಿಸಬೇಡಿ ಎಂದು ಅರಿವು ಮೂಡಿಸಿದ್ದರು. ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯುವವರಿಗೆ ಮತದಾನ ಮಾಡಬೇಡಿ. ಪ್ರಜಾಪ್ರಭುತ್ವ ನಾಶ ಮಾಡುವ ಅಭ್ಯರ್ಥಿಗಳಿಗೆ ಮತದಾನ ಮಾಡಬೇಡಿ. ಕಳ್ಳರನ್ನು ಹಿಡಿದು ಕೊಡಿ ಎಂದು ಸಾಮಾಜಿಕ ಜಾಲತಾಣದಲ್ಲಿ  ಕೋರಿದ್ದರು.

 

 

ಕೊಣನೂರು ಚುನಾವಣೆ ವೇಳೆ ದೇವರ ಫೋಟೋ ನಡುವೆ ದುಡ್ಡು ಇಟ್ಟು ಜನರಿಗೆ ಹಣ ಹಂಚುತ್ತಿದ್ದಾರೆ ಎಂದು ದೂರು ಸ್ವೀಕರಿಸಿದ್ದ  ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ  ಶ್ರೀನಿವಾಸ್ ಅವರು  ಚುನಾವಣೆ ದಿನ ಮುಂಜಾನೆ ಪರಿಶೀಲನೆ ನಡೆಸಿದ್ದರು. ದಾವಣಗೆರೆ ಜಿಲ್ಲೆಯೊಂದರಲ್ಲೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ  ದೂರುಗಳನ್ನಾಧರಿಸಿ 15 ಎಫ್‌ಐಆರ್‍‌ಗಳನ್ನು ದಾಖಲಿಸಿದ್ದರು.

 

ಈ ಅವಧಿಯಲ್ಲಿ ಚುನಾವಣಾ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದರಲ್ಲದೇ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟು 15 ಎಫ್‌ಐಆರ್‍‌ಗಳನ್ನು ದಾಖಲಿಸಿದ್ದರು. ಇದಕ್ಕೂ ಮುನ್ನ ಅರಕಲಗೂಡುವಿನಲ್ಲಿ ತಹಶೀಲ್ದಾರ್‍‌ ಆಗಿ ಕಾರ್ಯನಿರ್ವಹಿಸಿದ್ದ ಶ್ರೀನಿವಾಸ್‌ ಅವರು ರೈತರ ಮನೆ ಮನೆಗೆ ತೆರಳಿ ಎರಡು ಸಾವಿರ ಪೌತಿ ಖಾತೆ ಮಾಡಿಸುವ ಮೂಲಕ ಆಂದೋಲನವನ್ನೇ ನಡೆಸಿದ್ದರು.

 

 

ಪಟ್ಟಣ ಪ್ರದೇಶಗಳಲ್ಲಿ SC, ST , ವಿಶೇಷ ಚೇತನ ಹಾಗೂ ಇತರೆ ಹಿಂದುಳಿದ ವರ್ಗಗಳ ನಾಗರೀಕರ ಬಡತನ ನಿರ್ಮೂಲನೆಗೆ ಅನೇಕ ಯೋಜನೆಗಳ ಪೈಕಿ  24.10 ಯೋಜನೆ 7.25 ಯೋಜನೆ, 5 % ಯೋಜನೆಯಂತೆ ಅನೇಕ ಕಲ್ಯಾಣ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದ್ದಲ್ಲದೇ ಅದು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಂಡಿದ್ದರು.

 

ಹೊಳೆನರಸೀಪುರ ತಾಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದ  ಸುಡುಗಾಡು ಸಿದ್ದರು ಮನೆ ಕಟ್ಟಿಕೊಳ್ಳಲು ಸರಕಾರಿ ಜಮೀನು ಮಂಜೂರಾತಿಗಾಗಿ ಸಲ್ಲಿಸಿದ್ದ ಅರ್ಜಿಗಳನ್ನು ಸಹಾನುಭೂತಿಯಿಂದ ಪರಿಶೀಲಿಸಿದ್ದರು. ಈ ಕುರಿತು ‘ದಿ ಹಿಂದೂ’ ಪ್ರಕಟಿಸಿದ ವರದಿ ಆಧರಿಸಿ  ಅಲೆಮಾರಿ ಜನರನ್ನು ಭೇಟಿ ಮಾಡಿ, ಅವರ ಕಷ್ಟ, ಸಂಕಷ್ಟಗಳಿಗೆ ತಹಶೀಲ್ದಾರ್‍‌ ಕೆ ಆರ್‍‌ ಶ್ರೀನಿವಾಸ್‌ ಅವರು  ಕಿವಿಯಾಗಿದ್ದರು.  ಇದೇ ತಾಲೂಕಿನ ಇನ್ನೊಂದು ಹಳ್ಳಿಯಲ್ಲಿದ್ದ ಶಿಳ್ಳೇಕ್ಯಾತ ಕುಟುಂಬಗಳಿಗೂ ಜಮೀನು ಕಾಯ್ದಿರಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts