ನೀರಾವರಿ ನಿಗಮಗಳಿಗೆ 38,607 ಕೋಟಿ ರು.ಬಾಕಿ; 677.06 ಕೋಟಿ ಬಿಡುಗಡೆ, ಭೌತಿಕ ಪ್ರಗತಿಗೆ ಅಡ್ಡಿ

Photo Credit;DKShivakumar offiical

ಬೆಂಗಳೂರು; ಕೃಷ್ಣಾ ಭಾಗ್ಯ ಜಲನಿಗಮ, ಕಾವೇರಿ ಮತ್ತು ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ ಭೂ ಸ್ವಾಧೀನ, ನಬಾರ್ಡ್‌, ಎಸ್‌ಸಿಪಿ, ಟಿಎಸ್‌ಪಿ, ವಿದ್ಯುತ್‌ ವೆಚ್ಚ, ದುರಸ್ತಿ ಮತ್ತು ನಿರ್ವಹಣೆ ಅಡಿಯಲ್ಲಿ 2023ರ ಏಪ್ರಿಲ್‌ 1ರ ಅಂತ್ಯಕ್ಕೆ 15,088 ಕಾಮಗಾರಿಗಳು ಪ್ರಗತಿಯಲ್ಲಿದ್ದು ಇದೇ ಅವಧಿಯಲ್ಲಿ ಬಿಡುಗಡೆಗೆ 38,607.01 ಕೋಟಿ ರು. ಬಾಕಿ ಇರುವುದು ಇದೀಗ ಬಹಿರಂಗವಾಗಿದೆ.

 

ಅದೇ ರೀತಿ ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ನಿಗಮದಲ್ಲಿ ಬಾಕಿ ಬಿಲ್‌ಗಳು ಇರುವ ಕಾರಣ ನಿರೀಕ್ಷಿತ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಮತ್ತು ಏಪ್ರಿಲ್‌ ತಿಂಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ 66 ಕೋಟಿ ರು.ಗಳು ಕಾವೇರಿ ನೀರಾವರಿ ನಿಗಮದ ಖಾತೆಗೆ ಜಮೆ ಆಗಿಲ್ಲ ಎಂಬ ಸಂಗತಿಯನ್ನು ನಿಗಮದ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿದ್ದಾರೆ.

 

ಒಟ್ಟು 38,607.01 ಕೋಟಿ ರು ಪೈಕಿ 677.06 ಕೋಟಿ ರು.ಗಳನ್ನು ಬಿಡುಗಡೆ ಮಾಡಲು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಅವರು ಅನುಮೋದನೆ ನೀಡಿದ್ದಾರೆ. ಈ ಸಂಬಂಧ 2023ರ ಜುಲೈ 24 ಮತ್ತು ಆಗಸ್ಟ್‌ 7ರಂದು ಅನುದಾನ ಬಿಡುಗಡೆ ಮಾಡಿರುವ ಜಲಸಂಪನ್ಮೂಲ ಇಲಾಖೆಯು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಜಲಸಂಪನ್ಮೂಲ ಇಲಾಖೆಯು ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು ಎಂದು ಗುತ್ತಿಗೆದಾರರ ಸಂಘವು ಸರ್ಕಾರದ ಮೇಲೆ ಒತ್ತಡ ಹೇರಿರುವ ಬೆನ್ನಲ್ಲೇ ಜಲ ಸಂಪನ್ಮೂಲ ಇಲಾಖೆಯೊಂದರಲ್ಲೇ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ 38,607.01 ಕೋಟಿ ರು. ಬಾಕಿ ಇರುವುದು ಮುನ್ನೆಲೆಗೆ ಬಂದಿದೆ.

 

ಕೃಷ್ಣಾ ಭಾಗ್ಯ ಜಲನಿಗಮ, ಕಾವೇರಿ ನೀರಾವರಿ, ಕರ್ನಾಟಕ ನೀರಾವರಿ ನಿಗಮವು ಅನುದಾನ ಬಿಡುಗಡೆಗೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು ಎಂದು ತಿಳಿದು ಬಂದಿದೆ.

 

‘ಕಾಮಗಾರಿಗಳ ಪ್ರಗತಿಗೆ ಅನುಗುಣವಾಗಿ ನಿಗಮದಲ್ಲಿ ಬಾಕಿ ಬಿಲ್‌ಗಳು ಇದ್ದು, ನಿರೀಕ್ಷಿತ ಭೌತಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. 2023ರ ಜೂನ್‌ ಮತ್ತು ಜುಲೈ ತಿಂಗಳಿಗೆ 161.83 ಕೋಟಿ ರು. ಅನುದಾನ ಬಿಡುಗಡೆ ಮಾಡಬೇಕು,’ ಎಂದು ಕೃಷ್ಣಭಾಗ್ಯ ಜಲನಿಗಮವು ಪ್ರಸ್ತಾವನೆ ಸಲ್ಲಿಸಿತ್ತು.

 

2023ರ ಏಪ್ರಿಲ್‌ 1ರ ಅಂತ್ಯಕ್ಕೆ ಒಟ್ಟು 3,662 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಇದೇ ಅವಧಿ ಅಂತ್ಯಕ್ಕೆ ಒಟ್ಟಾರೆ 18,877.34 ಕೋಟಿ ಮೊತ್ತ ಬಾಕಿ ಇದೆ. ಇದರಲ್ಲಿ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆಯಲ್ಲಿ 9,405.20 ಕೋಟಿ ರು., ಪುನರ್‍‌ ವಸತಿ ಮತ್ತು ಪುನರ್‍‌ ನಿರ್ಮಾಣ ಹಾಗೂ ಬಿಟಿಡಿಎನಲ್ಲಿ 4,103.37 ಕೋಟಿ ರು., 2023-24ರ ಭೂ ಸ್ವಾಧೀನಕ್ಕಾಗಿ ಸಕ್ಷಮ ಪ್ರಾಧಿಕಾರ ಸಲ್ಲಿಸಿರುವ ಬೇಡಿಕೆ ಅನುದಾನಕ್ಕೆ 5,100.00 ಕೋಟಿ ರು., ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅಡಿಯಲ್ಲಿ 270 ಕೋಟಿ ರು. ಬಾಕಿ ಇತ್ತು. ಆದರೆ ಸರ್ಕಾರವು ಒಟ್ಟಾರೆ 161.83 ಕೋಟಿ ರು. ಬಿಡುಗಡೆ ಮಾಡಿ 2023ರ ಜುಲೈ 24ರಂದು ಆದೇಶ ಹೊರಡಿಸಿದೆ.

 

ಅದೇ ರೀತಿ ಕರ್ನಾಟಕ ನೀರಾವರಿ ನಿಗಮದಲ್ಲಿಯೂ 2023ರ ಏಪ್ರಿಲ್‌ 1ರ ಅಂತ್ಯಕ್ಕೆ 6,564 ಕಾಮಗಾರಿಗಳಿದ್ದವು. ಈ ಸಂಬಂಧ 14,770.48 ಕೋಟಿ ರು. ಬಾಕಿ ಇದೆ. 2023-24ನೇ ಸಾಲಿನಲ್ಲಿ ನಿಗಮದ ಕಾಮಗಾರಿಗಳಿಗೆ ವಿವಿಧ ವಿಭಾಗಗಳಲ್ಲಿ ಬಾಕಿ ಇರುವ ಬಿಲ್‌ಗಳ ಪಾವತಿಗಾಗಿ ನಿಗಮಕ್ಕೆ ಹಂಚಿಕೆಯಾಗಿರುವ ಅನುದಾನದಲ್ಲಿ 2023ರ ಜುಲೈ ನಲ್ಲಿ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ ಒಟ್ಟು 598.38 ಲಕ್ಷ ರು. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ನಿಗಮವು 2023ರ ಜೂನ್‌ನಲ್ಲಿ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿತ್ತು ಎಂಬುದು ತಿಳಿದು ಬಂದಿದೆ.

 

ಕರ್ನಾಟಕ ನೀರಾವರಿ ನಿಗಮಕ್ಕೆ ಒಟ್ಟಾರೆ 292.61 ಕೋಟಿ ರು.ಗಳನ್ನು ಬಿಡುಗಡೆ ಮಾಡಿ 2023ರ ಆಗಸ್ಟ್‌ 7ರಂದು ಆದೇಶ ಹೊರಡಿಸಲಾಗಿದೆ. ಕರ್ನಾಟಕ ನೀರಾವರಿ ನಿಗಮಕ್ಕೆ ಏಪ್ರಿಲ್‌ನಲ್ಲಿ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಗಿದ್ದ 92.60 ಕೋಟಿ ರು., ಎಸ್‌ಸಿಪಿ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾಗಿದ್ದ 36.34 ಕೋಟಿ ಹಾಗೂ ನಬಾರ್ಡ್‌ ಅಡಯಲ್ಲಿ ಬಿಡುಗಡೆಯಾಗಿದ್ದ 130.00 ಕೋಟಿ ರು.ಗಳ ಅನುದಾನವನ್ನು ವಿನಿಯೋಗಿಸಬೇಕು ಎಂದು ಆದೇಶದಲ್ಲಿ ಸೂಚಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ಕಾವೇರಿ ನೀರಾವರಿ ನಿಗಮದಲ್ಲಿ 2023ರ 2023ರ ಏಪ್ರಿಲ್‌ 1ರ ಅಂತ್ಯಕ್ಕೆ ಒಟ್ಟು 4,862 ಕಾಮಗಾರಿಗಳು ಪ್ರಗತಿಯಲ್ಲಿದ್ದವು. ಜೂನ್‌ 30ರ ಅಂತ್ಯಕ್ಕೆ ಬಂಡವಾಳ ವೆಚ್ಚ ಬಾಕಿ ಬಿಲ್‌ಗಳ ಪಾವತಿ, ವೇತನ ಪಾವತಿಗೆ ಮತ್ತು ನಿರ್ವಹಣಾ ವಿದ್ಯುತ್‌ ಬಾಕಿ ಬಿಲ್‌ ಪಾವತಿಗೆ 4,959.19 ಕೋಟಿ ರು. ಅನುದಾನ ಅಗತ್ಯವಿದೆ ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಜುಲೈ ತಿಂಗಳಿಗೆ ವಿವಿಧ ಲೆಕ್ಕ ಶೀರ್ಷಿಕೆಗಳಡಿಯಲ್ಲಿ 217.59 ಕೋಟಿ ರು., ಅನುದಾನವನ್ನು  ಹಾಗೂ ಡ್ರಿಪ್‌ ಯೋಜನೆ ಅಡಿಯಲ್ಲಿ 10.27 ಕೋಟಿ ರು., ಅರಂಭಿಕ ಮೊತ್ತವಿದ್ದು ಬಾಕಿ ಬಿಲ್‌ ಗಳು 12.16ಕೋಟಿ ರು.ಗಳಿರುತ್ತವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.

 

ಜುಲೈ ತಿಂಗಳಿಗೆ 5.04 ಕೋಟಿ ರು. ಸೇರಿ ಒಟ್ಟಾರೆ 222.63 ಕೋಟಿ ರು. ಅನುದಾನ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಅಲ್ಲದೇ ಏಪ್ರಿಲ್‌ ತಿಂಗಳಿಗೆ ಬಂಡವಾಳ ಲೆಕ್ಕ ಶೀರ್ಷಿಕೆಯಡಿಯಲ್ಲಿ ಬಿಡುಗಡೆ ಮಾಡಲಾಗಿದ್ದ 66 ಕೋಟಿ ರು.ಗಳು ನಿಗಮದ ಖಾತೆಗೆ ಜಮೆ ಆಗಿರುವುದಿಲ್ಲ ಎಂಬುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts