ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ

ಬೆಂಗಳೂರು; ಎಲ್ಲಾ ಮಹಿಳೆಯರಿಗೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸಾರಿಗೆ ವರ್ಗ ಹಾಗೂ ಪ್ರಯಾಣ ದೂರ ಮಿತಿಯಿಲ್ಲದೆಯೇ ‘ಶಕ್ತಿ’ ಯೋಜನೆಯನ್ನು  ಅನುಷ್ಠಾನಗೊಳಿಸಿದ್ದಲ್ಲಿ ಆರ್ಥಿಕ ಪರಿಣಾಮಗಳಾಗಲಿವೆ  ಎಂದು ಸಾರಿಗೆ ಇಲಾಖೆ ನೀಡಿದ್ದ ಗಂಭೀರ  ಎಚ್ಚರಿಕೆಯನ್ನು  ಕಾಂಗ್ರೆಸ್‌ ಸರ್ಕಾರವು ಪರಿಗಣಿಸಿರಲಿಲ್ಲ ಎಂಬುದು ಇದೀಗ ಬಹಿರಂಗವಾಗಿದೆ.

 

ಸಾರಿಗೆ ವರ್ಗ ಮತ್ತು ಪ್ರಯಾಣ ದೂರ ಮಿತಿಯಿಲ್ಲದೆಯೇ ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಿದರೆ  ಮಾಸಿಕ 348.12 ಕೋಟಿ ಹಾಗೂ ವಾರ್ಷಿಕ 4,177.44 ಕೋಟಿ ರು. ಅಂದಾಜು ವೆಚ್ಚವಾಗಲಿದೆ  ಎಂದು ಸಾರಿಗೆ ಇಲಾಖೆಯು ಸರ್ಕಾರಕ್ಕೆ ತಿಳಿಸಿತ್ತು ಎಂಬ ಅಂಶವು ಆರ್‌ಟಿಐ ದಾಖಲೆಗಳಿಂದ ಬಹಿರಂಗಗೊಂಡಿದೆ.

 

ಒಂದು ತಿಂಗಳ ಅವಧಿಯನ್ನು ಪೂರ್ಣಗೊಳಿಸಿರುವ ಶಕ್ತಿ ಯೋಜನೆಗೆ  ಒಟ್ಟು  401.94 ಕೋಟಿ ರು. ಆರ್ಥಿಕ ವೆಚ್ಚವಾಗಿದೆ ಎಂದು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿರುವ  ಸಾರಿಗೆ ಇಲಾಖೆಯು, ಸಾರಿಗೆ ವರ್ಗ ಮತ್ತು ಪ್ರಯಾಣ ದೂರ ಮಿತಿಯಿಲ್ಲದೆಯೇ ಅನುಷ್ಠಾನಗೊಳಿಸಿದರೆ ಸಂಭವಿಸುವ ಆರ್ಥಿಕ ಪರಿಣಾಮಗಳ ಕುರಿತು ಸರ್ಕಾರಕ್ಕೆ ವಿವರಿಸಿತ್ತು.

 

ಸಾರಿಗೆ ಇಲಾಖೆಯು ಯೋಜನೆಗೂ ಮುನ್ನ ಅಂದಾಜಿಸಿದ್ದ ಆರ್ಥಿಕ ವೆಚ್ಚಕ್ಕೂ ಮತ್ತು ಈಗ ಒಂದು ತಿಂಗಳ ನಂತರ ಬಿಡುಗಡೆ ಮಾಡಿರುವ ಆರ್ಥಿಕ ವೆಚ್ಚಕ್ಕೆ ಹೋಲಿಸಿದರೆ 53.82 ಕೋಟಿ ರು. ಅಧಿಕವಾಗಿರುವುದು ದಾಖಲೆಗಳಿಂದ  ತಿಳಿದು ಬಂದಿದೆ.

 

 

ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಂಬಂಧಿಸಿದಂತೆ ‘ದಿ ಫೈಲ್‌’ 117 ಪುಟಗಳ ಸಮಗ್ರ ದಾಖಲಾತಿಗಳನ್ನು ಆರ್‌ಟಿಐ ಮೂಲಕ ಪಡೆದುಕೊಂಡಿದೆ.

 

ಅಲ್ಲದೇ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ 2022-23ನೇ ಸಾಲಿನ ಆರ್ಥಿಕ ವರ್ಷದ ವಾರ್ಷಿಕ ಸಾರಿಗೆ ಆದಾಯವು 8,354.88 ಕೋಟಿ ರು., ಕಾರ್ಯಾಚರಣೆ ವೆಚ್ಚ 12,750.49 ಕೋಟಿ ರು.,ಗಳಾಗಿದ್ದು ಸಾರಿಗೆ ಆದಾಯಕ್ಕೆ ಸಂಬಂಧಿಸಿದಂತೆ 4,395.61 ಕೋಟಿ ರು. ನಷ್ಟವುಂಟಾಗುತ್ತದೆ ಎಂದೂ ಸಾರಿಗೆ ಇಲಾಖೆಯು ಸರ್ಕಾರದ ಗಮನಕ್ಕೆ ತಂದಿತ್ತು ಎಂಬುದು ಗೊತ್ತಾಗಿದೆ.

 

 

ಉಚಿತ ಪ್ರಯಾಣ ಯೋಜನೆಗೆ  ಅರ್ಥಿಕ ಇಲಾಖೆಯು ಈ ಪ್ರಸ್ತಾವನೆಗೆ ಪ್ರಾಥಮಿಕ ಒಪ್ಪಿಗೆ ನೀಡಿದೆ. ತಮಿಳನಾಡು ಮತ್ತು ಪಂಜಾಬ್‌ನಲ್ಲಿ ಜಾರಿಗೊಳಿಸಿರುವ ಯೋಜನೆ ಮಾದರಿಯಲ್ಲಿಯೇ ರಾಜ್ಯದ್ಲಲಿಯೂ ನಗರ ಮತ್ತು ಸಾಮಾನ್ಯ ಬಸ್‌ಗಳಲ್ಲಿ ವಿದ್ಯಾರ್ಥಿನಿಯರ ಬಸ್‌ ಪಾಸ್‌ ಒಳಗೊಂಡಂತೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬಹುದು. ಎಲ್ಲಾ ಬಸ್‌ಗಳಲ್ಲಿ ಶೇ.50ರಷ್ಟು ಆಸನಗಳನ್ನು ಪುರಷರಿಗೆ ಮೀಸಲಿಡುವ ಷರತ್ತು ವಿಧಿಸಬೇಕು ಎಂದು ತನ್ನ ಅಭಿಪ್ರಾಯದಲ್ಲಿ ತಿಳಿಸಿತ್ತು.

 

ಆದರೆ ಸಾರಿಗೆ ಇಲಾಖೆಯು ಇದರಿಂದ ವಿನಾಯಿತಿ ಕೋರಿತ್ತು. ‘ ಎಲ್ಲಾ ಪ್ರಯಾಣಿಕರಿಗೂ ಬಸ್‌ ಸೇವೆ ಲಭ್ಯವಾಗುವಂತೆ ಖಚಿತಪಡಿಸಿಕೊಳ್ಳಲು ಶೇ.50ರಷ್ಟು ಆಸನಗಳನ್ನು ಪುರುಷಕರಿಗೆ ಕಾಯ್ದರಿಸಲು ಷರತ್ತು ವಿಧಿಸಿದ್ದು ಆದರೆ ಸಾರಿಗೆ ಸೇವೆಗಳನ್ನು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದ್ದು ಆಸನಗಳನ್ನು ಪುರುಷರಿಗೆ ಕಾಯ್ದಿರಿಸುವುದನ್ನು ಕಷ್ಟಸಾಧ್ಯವಾಗಿರುತ್ತದೆ. ಹೀಗಾಗಿ ಈ ಷರತ್ತಿಗೆ ವಿನಾಯಿತಿ ನೀಡಬೇಕು,’ ಎಂದು ಸಾರಿಗೆ ಇಲಾಖೆಯು ಸಚಿವ ಸಂಪುಟವನ್ನು ಕೋರಿತ್ತು ಎಂಬುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಆಡಳಿತ ಇಲಾಖೆಯು ಕೋರಿದ್ದ ವಿನಾಯಿತಿಯನ್ನು ಸರ್ಕಾರವು ಒಪ್ಪಿಕೊಂಡಿರಲಿಲ್ಲ. ಬದಲಿಗೆ ಶೇ.50ರಷ್ಟು ಆಸನಗಳನ್ನು ಪುರಷರಿಗೆ ಮೀಸಲಿಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

 

ಅದೇ ರೀತಿ ‘ಶಕ್ತಿ ಯೋಜನೆ ಅನುಷ್ಠಾನಗೊಳಿಸಿದಲ್ಲಿ ನಗದು ಹರಿವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರತೆ ಉಂಟಾಗಿ ವೇತನ ಪಾವತಿಗೆ ಅಡಚಣೆಯುಂಟಾಗುತ್ತದೆ. ನಿಗಮಗಳು ಪ್ರತಿ ಮಾಹೆ ಒಂದನೇ ತಾರೀಖಿನಂದು ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡಬೇಕಾಗಿರುವುದರಿಂದ ಅನುದಾನವನ್ನು ಮುಂಗಡವಾಗಿ ಪಾವತಿಸಿ ತದನಂತರ ಬಳಕೆ ಹೊಂದಾಣಿಕೆ ಮಾಡಲು ಸಚಿವ ಸಂಪುಟದ ಅನುಮೋನೆಯನ್ನೂ ಕೋರಿತ್ತು,’ ಎಂಬುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಸಾರಿಗೆ ನಿಗಮಗಳಿಗೆ ಮುಂಗಡವಾಗಿ ಅನುದಾನ ನೀಡುವ ಪ್ರಸ್ತಾವನೆಗೆ ಸರ್ಕಾರವು ಒಪ್ಪಿಲ್ಲ. ಹೀಗಾಗಿ ಸಾರಿಗೆ ಸಿಬ್ಬಂದಿಗೆ ಜೂನ್‌ ತಿಂಗಳ ವೇತನ ಪಾವತಿಯಲ್ಲಿ ಅಡಚಣೆಯಾಗುವ ಸಾಧ್ಯತೆಗಳಿವೆ. ಜುಲೈನಲ್ಲಿ ಮಂಡನೆಯಾಗುವ ಬಜೆಟ್‌ನಲ್ಲಿ ಈ ಯೋಜನೆಗೆ ಹಂಚಿಕೆಯಾಗುವ ಅನುದಾನದ ಮೇಲೆ ಉಳಿದ ಪರಿಣಾಮಗಳನ್ನು ಅಂದಾಜಿಸಬಹುದು ಎಂದು ಸಾರಿಗೆ ಇಲಾಖೆ ಮೂಲಗಳು ‘ದಿ ಫೈಲ್‌’ಗೆ ತಿಳಿಸಿವೆ.

 

ಸಚಿವ ಸಂಪುಟಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಯಲ್ಲೇನಿತ್ತು?

 

ಹಿಂದಿನ ಪ್ರಯಾಣ ದರ ಪರಿಷ್ಕರಣೆಗೊಂಡಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (2015) ಡೀಸಡೆಲ್‌ ದರ 46.24 ರು. ಇದ್ದು, ಇತರೆ ಸಾರಿಗೆ ಸಂಸ್ಥೆಗಳಲ್ಲಿ (2020) 60.98 ರು. ಇದ್ದು ಪ್ರಸ್ತುತ 84.84 ರು.ಗೆ ಏರಿಕೆಯಾಗಿದೆ. ಹಾಗೂ ಸಿಬ್ಬಂದಿಗಳಿಗೆ ತುಟ್ಟಿಭತ್ಯೆ ಹೆಚ್ಚಳ ಮತ್ತು ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಹೆಚ್ಚಳವಾಗಿರುವುದರಿಂದ ಪ್ರಯಾಣ ದರ ಪರಿಷ್ಕರಣೆ ಮಾಡಬೇಕಾಗಿದೆ ಎಂದು ಪ್ರಸ್ತಾವನೆಯಲ್ಲಿ ವಿವರಿಸಿದೆ.

 

ಪ್ರಸ್ತುತ ನಾಲ್ಕು ಸಾರಿಗೆ ಸಂಸ್ಥೆಗಳ ನಗದು ಹರಿವಿನ ವಿವರಗಳನ್ನು ಪ್ರಸ್ತಾವನೆಯಲ್ಲಿ ವಿವರಿಸಿರುವ ಸಾರಿಗೆ ಇಲಾಖೆಯು ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ 87.77 ಕೋಟಿ ರು., ಬಿಎಂಟಿಸಿಗೆ 142.13 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 67.04 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 54.20 ಕೋಟಿ ರು. ಸೇರಿ ಮಾಸಿಕ 351.14 ಕೋಟಿಯಂತೆ ವಾರ್ಷಿಕ 4,213.68 ಕೋಟಿ ರು. ನಗದು ಕೊರತೆಯಾಗುತ್ತಿದೆ ಎಂದು ಹೇಳಿದೆ.

 

ಶಕ್ತಿ ಯೋಜನೆ ಅನುಷ್ಠಾನಗೊಳಿಸಿದ್ದಲ್ಲಿ ಒಟ್ಟಾರೆ ನಗದು ಹರಿವಿನಲ್ಲಿ ಕೊರತೆ ಉಂಟಾಗಲಿದೆ ಎಂದು ಸಾರಿಗೆ ಇಲಾಖೆಯು ಲೆಕ್ಕಚಾರ ಮಾಡಿದೆ.

 

ಮೊದಲ ಆಯ್ಕೆಯನ್ನು ನಗರ ಮತ್ತು ಸಾಮಾನ್ಯ(ವಿದ್ಯಾರ್ಥಿನಿಯರ ಬಸ್‌ ಪಾಸ್‌ ಹೊರತುಪಡಿಸಿ) ಬಸ್‌ಗಳಿಗಷ್ಟೇ ಅನುಷ್ಠಾನಗೊಳಿಸಿದರೆ 489.48 ಕೋಟಿ ರು., ಎರಡನೇ ಆಯ್ಕೆಯಂತೆ ನಗರ, ಸಾಮಾನ್ಯ ಸಾರಿಗೆಗಳು ಮತ್ತು ವಿದ್ಯಾರ್ಥಿನಿಯರ ಬಸ್‌ ಪಾಸ್‌ಗಳಿಗೆ ಅವಕಾಶ ಮಾಡಿಕೊಟ್ಟರೆ 543.77 ಕೋಟಿ ರು., ನಗರ, ಸಾಮಾನ್ಯ, ವಿದ್ಯಾರ್ಥಿನಿಯರ ಬಸ್‌ ಪಾಸ್‌ ಮತ್ತು ವೇಗದೂತ ಸಾರಿಗೆಗಳ ಮೂರನೇ ಆಯ್ಕೆ ಪ್ರಕಾರ 688.77 ಕೋಟಿ ರು., ಐಷಾರಾಮಿ ಹಾಗೂ ಅಂತರರಾಜ್ಯ ಸಾರಿಗೆಗಳನ್ನೂ ಒಳಗೊಂಡಂತೆ ಅವಕಾಶ ನೀಡುವ ನಾಲ್ಕನೆ ಆಯ್ಕೆ ಮಾಡಿಕೊಂಡರೆ 753.54 ಕೋಟಿ ರು. ಪ್ರತಿ ತಿಂಗಳೂ ನಗದು ಹರಿವಿನಲ್ಲಿ ಕೊರತೆಯಾಗಲಿದೆ ಎಂದು ಅಂದಾಜಿಸಿತ್ತು ಎಂದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

 

ಜುಲೈ 10ರ ಅಂತ್ಯಕ್ಕೆ ಒಟ್ಟಾರೆ 401.94 ಕೋಟಿ ರು. ಆರ್ಥಿಕ ವೆಚ್ಚವಾಗಿದೆ.

 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 151.25 ಕೋಟಿ ರು., ಬಿಎಂಟಿಸಿಯು 69.56 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು 103.51 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮವು 77.62 ಕೋಟಿ ರು. ಆರ್ಥಿಕ ವೆಚ್ಚವಾಗಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts