ಬೆಂಗಳೂರು: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆ ಆರಂಭವಾದ ದಿನದಿಂದ ಜುಲೈ 30ರವರೆಗೆ 687,49,57,753 ಕೋಟಿ ರು. ಆರ್ಥಿಕ ವೆಚ್ಚವಾಗಿದ್ದರೂ ಯೋಜನೆಯ ಸಹಾಯಾನುದಾನದ ಪೈಕಿ ಮೊದಲ ಕಂತಿನ ಮೊತ್ತವಾದ 250.96 ಕೋಟಿ ರು.ಗಳನ್ನು ಸಾರಿಗೆ ನಿಗಮಗಳಿಗೆ ಮರು ಪಾವತಿಸಲು ಆರ್ಥಿಕ ಇಲಾಖೆಯು ಇನ್ನೂ ಅನುಮತಿ ನೀಡಿಲ್ಲ.
ರಾಜ್ಯ ಬಜೆಟ್‌ನಲ್ಲಿ ಶಕ್ತಿ ಯೋಜನೆಗೆ 2,800 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ ಎಂದು ಸರ್ಕಾರವು ಹೇಳಿದೆಯಾದರೂ ಶಕ್ತಿ ಯೋಜನೆ ಆರಂಭವಾಗಿ 2 ತಿಂಗಳಾದರೂ ಮೊದಲ ಕಂತಿನ ಸಹಾಯಾನುದಾನ ಮರುಪಾವತಿಸಲು ಆರ್ಥಿಕ ಇಲಾಖೆಯು ಮೀನಮೇಷ ಎಣಿಸುತ್ತಿದೆ. ಹೀಗಾಗಿ ಸಾರಿಗೆ ನಿಗಮಗಳ ನೌಕರರು ಅದರಲ್ಲೂ ತುಂಬಾ ಮುಖ್ಯವಾಗಿ ಚಾಲಕರು, ನಿರ್ವಾಹಕರಿಗೆ ನಿಗದಿತ ದಿನದಂದು ವೇತನ ಸಿಗುವುದು ಅನುಮಾನ ಎನ್ನಲಾಗಿದೆ.
ಕರ್ನಾಟಕ ರಾಜ್ಯ ಸಾರಿಗೆ, ವಾಯುವ್ಯ ಕರ್ನಾಟಕ, ಬಿಎಂಟಿಸಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಿಗೆ ಮೊದಲ ಕಂತಿನ ರೂಪದಲ್ಲಿ 250.96 ಕೋಟಿ ರು. ಬಿಡುಗಡೆ ಮಾಡಬೇಕು ಎಂದು ಸಾರಿಗೆ ಇಲಾಖೆಯು ವಾರದ ಹಿಂದೆಯೇ ಆರ್ಥಿಕ ಇಲಾಖೆಗೆ ಕಳಿಸಿದೆ. ಸದ್ಯ ಈ ಕಡತವು ಸರ್ಕಾರದ ಕಾರ್ಯದರ್ಶಿ ಡಾ ಏಕರೂಪ್ ಕೌರ್ ಅವರ ಬಳಿ ಇದೆ ಎಂದು ಗೊತ್ತಾಗಿದೆ.
ಸಾರಿಗೆ ಇಲಾಖೆಯು ಕೋರಿರುವ 250.96 ಕೋಟಿ ರು.ನಲ್ಲಿ ಎಷ್ಟು ಮೊತ್ತವನ್ನು ಮರು ಪಾವತಿಸಬೇಕು ಎಂದು ಆರ್ಥಿಕ ಇಲಾಖೆಯು ಇನ್ನೂ ಅಂತಿಮ ನಿರ್ಧಾರವನ್ನು ಪ್ರಕಟಿಸಿಲ್ಲ.
ಜೂನ್ 11ರಿಂದ ಜುಲೈ 30ರವರೆಗೆ ಮಹಿಳೆಯರು ಪ್ರಯಾಣಿಸಿರುವ ಸಂಬಂಧ ಟಿಕೆಟ್ ಮೌಲ್ಯದ ಮೊತ್ತ ಒಟ್ಟಾರೆ 687,49,57,753 ರು.ಗಳಾಗಿದೆ. ಇದರಲ್ಲಿ ಕೆಎಸ್‌ಆರ್‍ಟಿಸಿಯಲ್ಲಿ 260,26,75,205 ರು.ಗಳಾಗಿದ್ದು, ಒಟ್ಟಾರೆ ಟಿಕೆಟ್ ಮೌಲ್ಯದಲ್ಲಿ ಕೆಎಸ್‌ಆರ್‍ಟಿಸಿಯದ್ದೇ ಸಿಂಹಪಾಲಿದೆ.
ಉಳಿದಂತೆ ಬಿಎಂಟಿಸಿಯಲ್ಲಿ 122,85,47,461 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ 172,98,75,910 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 131,38,59,177 ಕೋಟಿ ರು. ಒಳಗೊಂಡಿದೆ.
ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ ಅನುಷ್ಠಾನಗೊಂಡ ಒಂದು ವಾರದಲ್ಲಿ ರಾಜ್ಯದ ವಿವಿಧ ಸಾರಿಗೆ ನಿಗಮಗಳ ಮೂಲಕ 3,12,21,241 ಮಹಿಳೆಯರು ಪ್ರಯಾಣಿಸಿದ್ದಾರೆ. 3.12 ಕೋಟಿ ಮಹಿಳೆಯರು ಪ್ರಯಾಣಿಸಿರುವ ಪ್ರಯಾಣ ಮೌಲ್ಯ ಒಟ್ಟಾರೆ 70.28 ಕೋಟಿ ರು. ನಷ್ಟು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿದ್ದವು.
ಯೋಜನೆ ಆರಂಭಗೊಂಡ ದಿನದಂದೇ (ಜೂನ್ 11) 5,71,023 ಮಹಿಳಾ ಪ್ರಯಾಣಿಕರು ಉಚಿತ ಯೋಜನೆಯಡಿಯಲ್ಲಿ ಪ್ರಯಾಣಿಸಿದ್ದರು. ಪ್ರಯಾಣ ಮೌಲ್ಯವು 1,40,22,878 ರು. ನಷ್ಟಾಗಿತ್ತು. ಕ್ರಮೇಣ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ಹೆಚ್ಚಳಗೊಳ್ಳುತ್ತಿದೆ. ಜೂನ್ 12ರಂದು 41,34,726 ಪ್ರಯಾಣಿಕರ ಪ್ರಯಾಣದ ಮೌಲ್ಯ 8,83,53,434 ರು., ಜೂನ್ 13ರಂದು 511,52,769 ಪ್ರಯಾಣಿಕರ ಪ್ರಯಾಣ ಮೌಲ್ಯ 10,82,02,191 ರು., ಜೂನ್ 14ರಂದು 50,17,174 ಪ್ರಯಾಣಿಕರ ಪ್ರಯಾಣ ಮೌಲ್ಯ 11,51,08,324 ರು., ಜೂನ್ 15ರಂದು 54,05,629 ಪ್ರಯಾಣಿಕರ ಪ್ರಯಾಣ ಮೌಲ್ಯ 12,37,89,585 ರು., ಜೂನ್ 16ರಂದು 55,09,770 ಪ್ರಯಾಣಿಕರ ಪ್ರಯಾಣ ಮೌಲ್ಯ 12,45,19,262 ರು., ಜೂನ್ 17ರಂದು 54,30,150 ಪ್ರಯಾಣಿಕರ ಪ್ರಯಾಣ ಮೌಲ್ಯ 12,88,81,618 ರು ಎಂದು ಸಾರಿಗೆ ನಿಗಮಗಳು ಲೆಕ್ಕ ಹಾಕಿತ್ತು.
ಶಕ್ತಿ ಯೋಜನೆ; ವಾರದಲ್ಲಿ 3.12 ಕೋಟಿ ಮಹಿಳೆಯರ ಪ್ರಯಾಣ, ಟಿಕೆಟ್ ಮೌಲ್ಯ 70.28 ಕೋಟಿ ರು.
ಶಕ್ತಿ ಯೋಜನೆ ಜಾರಿಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸಾರಿಗೆ ಬಸ್‌ಗಳಿಗೆ ಆದ್ಯತೆ ನೀಡಲಿದ್ದಾರೆ. ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಹೆಚ್ಚುವರಿ ಸೇವೆಗಳಲ್ಲಿ ಕಾರ್ಯಾಚರಿಸಬೇಕು. ಅಲ್ಲದೇ ನೆರೆ ರಾಜ್ಯದ ಗಡಿಭಾಗಗಳಲ್ಲಿ ವಾಸವಿದ್ದು ಕರ್ನಾಟಕದಲ್ಲಿ ಹೆಚ್ಚಿನ ಸಮಯ ಪ್ರಯಾಣಿಸುವ ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ವಿಸ್ತರಿಸುವ ಬೇಡಿಕೆ ಇಡುವ ಸಾಧ್ಯತೆಗಳೂ ಇವೆ ಎಂದೂ ಪ್ರಸ್ತಾವನೆಯಲ್ಲಿ ತಿಳಿಸಿತ್ತು. ಅಲ್ಲದೇ ಸಾರಿಗೆ ವರ್ಗ, ಪ್ರಯಾಣ ದೂರ ಮಿತಿಯನ್ನು ಆರ್ಥಿಕ ಇಲಾಖೆಯು ವಿಧಿಸಿತ್ತಾದರೂ ಅನುಷ್ಠಾನದ ಹಂತದಲ್ಲಿ ಈ ನಿರ್ಬಂಧವನ್ನು ತೆಗೆದು ಹಾಕಿತ್ತು. ಹೀಗಾಗಿ 53.82 ಕೋಟಿ ರು.ನಷ್ಟು ಅಧಿಕ ವೆಚ್ಚವಾಗಿತ್ತು.
ಸಾರಿಗೆ ವರ್ಗ, ಪ್ರಯಾಣ ದೂರ ಮಿತಿ; ಇಲಾಖೆ ಎಚ್ಚರಿಕೆ ಗಂಭೀರವಾಗಿ ಪರಿಗಣಿಸಿಲ್ಲ, 53.82 ಕೋಟಿ ಅಧಿಕ ವೆಚ್ಚ
ಇದರಿಂದಾಗಿ ನಗದು ಹರಿವಿನಲ್ಲಿ ಕೋಟ್ಯಂತರ ರುಪಾಯಿ ಕೊರತೆ, ಸಾರಿಗೆ ನಿಗಮಗಳಿಗೆ ಚಾಲ್ತಿಯಲ್ಲಿರುವ ಆದಾಯ ಖೋತಾದಂತಹ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಸಾರಿಗೆ ನಿಗಮಗಳ ಸಿಬ್ಬಂದಿಯ ವೇತನ ಪಾವತಿಗೂ ಅಡಚಣೆಯಾಗಲಿದೆ. ಅದೇ ರೀತಿ ಡೀಸೆಲ್ ದರ, ಸಿಬ್ಬಂದಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ, ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಏರಿಕೆಯಾಗುವುದಲ್ಲದೇ ಪ್ರಯಾಣ ದರವನ್ನು ಪರಿಷ್ಕರಣೆ ಮಾಡುವ ಅನಿವಾರ್ಯತೆಗೂ ಸರ್ಕಾರವು ಸಿಲುಕಲಿದೆ ಎಂದು ಸರ್ಕಾರಕ್ಕೆ ವಿವರಿಸಿತ್ತು.
ಇದಕ್ಕಾಗಿ 4,028 ಹೊಸ ವಾಹನಗಳು ಮತ್ತು 13,793 ಸಿಬ್ಬಂದಿಯನ್ನು ಹೊಸದಾಗಿ ನೇಮಕ ಮಾಡಿಕೊಳ್ಳಬೇಕಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ಸೇವಾ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸ್ತಕ ಆದಾಯದ ಶೇ.50ರಂತೆ ಅಂದಾಜಿಸಿರುವ (ಏಪ್ರಿಲ್ 2023ರಲ್ಲಿದ್ದಂತೆ) ನಿಗಮವು ವಾರ್ಷಿಕವಾಗಿ ಒಟ್ಟಾರೆ 4,220.88 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ಎಂದು ಸಾರಿಗೆ ಇಲಾಖೆಯು ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ.
ಪ್ರಸ್ತಾವನೆ ಪ್ರಕಾರ ಕೆಎಸ್‌ಆರ್‍ಟಿಸಿಗೆ ವಾರ್ಷಿಕವಾಗಿ 1,608.24 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 954.12 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 888.36 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ. ಈ ಕುರಿತು ‘ದಿ ಫೈಲ್’ 2023ರ ಮೇ 31ರಂದೇ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಉಚಿತ ಪ್ರಯಾಣದ ‘ಶಕ್ತಿ’; ಆದಾಯ ಖೋತಾ, ಸಿಬ್ಬಂದಿ ವೇತನಕ್ಕೆ ಅಡಚಣೆ, ಪ್ರಯಾಣ ದರ ಪರಿಷ್ಕರಣೆ?
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ 1,823, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 1,445, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 760 ಸೇರಿದಂತೆ ಒಟ್ಟು 4,028 ಹೊಸ ವಾಹನಗಳನ್ನು ಖರೀದಿಸಬೇಕು. ಅದೇ ರೀತಿ ಕರ್ನಾಟಕ ಸಾರಿಗೆ ನಿಗಮಕ್ಕೆ 5,178, ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 2,415, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ 2,425, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ 3,775 ಸೇರಿ ಒಟ್ಟಾರೆ 13,793 ಸಿಬ್ಬಂದಿ ನೇಮಕಕ್ಕೆ ಸರ್ಕಾರವು ಸಹಾಯ ಹಸ್ತ ಚಾಚಬೇಕಿದೆ ಎಂಬ ಮಾಹಿತಿಯು ಪ್ರಸ್ತಾವನೆಯಿಂದ ತಿಳಿದು ಬಂದಿದೆ.
ಅದೇ ರೀತಿ ವಾಹನಗಳ ಕಾರ್ಯಾಚರಣೆಗೆ ಅಗತ್ಯವಿರುವ ಚಾಲನಾ ಸಿಬ್ಬಂದಿಗಳ ನೇಮಕಾತಿಗೆ ಅನುಮೋದನೆ ಮತ್ತು ಮುಂಬರುವ ದಿನಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ವಿತರಿಸಲಿರುವ ಸ್ಮಾರ್ಟ್ ಕಾರ್ಡ್‌ಗಳಿಗೆ ತಗಲುವ ವೆಚ್ಚವನ್ನು ಸರ್ಕಾರವೇ ಒದಗಿಸಬೇಕು ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿರುವುದು ಗೊತ್ತಾಗಿದೆ.
ದರ ಪರಿಷ್ಕರಣೆಯಾಗುವುದೇ?
‘ಹಿಂದಿನ ಪ್ರಯಾಣ ದರ ಪರಿಷ್ಕರಣೆಗೊಂಡಾಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಡೀಸೆಲ್ ದರ 46.24 ರು. ಇದ್ದು ಇತರೆ ಸಾರಿಗೆ ಸಂಸ್ಥೆಗಳಲ್ಲಿ 60.98 ರು. ಇದೆ. ಪ್ರಸ್ತುತ ಅದು 84.84 ರು.ಗೇರಿದೆ. ಹಾಗೂ ಸಿಬ್ಬಂದಿಗಳಿಗೆ ಪಾವತಿಸುವ ತುಟ್ಟಿಭತ್ಯೆ ಹೆಚ್ಚಳ ಹಾಗೂ ವೇತನ ಪರಿಷ್ಕರಣೆಯಿಂದಾಗಿ ವೆಚ್ಚದಲ್ಲಿ ತೀವ್ರ ಹೆಚ್ಚಳವಾಗುವುದರಿಂದ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಬೇಕಿದೆ,’ ಎಂದು ನಿಗಮಗಳು ಪ್ರಸ್ತಾವನೆಯಲ್ಲಿ ವಿವರಿಸಿತ್ತು.
ನಗದು ಹರಿವು ಕೊರತೆ, ವೇತನ ಪಾವತಿಗೆ ಅಡಚಣೆ
ಶಕ್ತಿ ಯೋಜನೆ ಅಳವಡಿಸಿದ್ದಲ್ಲಿ ಸಾಮಾನ್ಯ, ನಗರ, ವೇಗದೂತ ಸೇವೆಗಳಲ್ಲಿ ಮತ್ತು ವಿವಿಧ ರಿಯಾಯಿತಿ ಪಾಸುಗಳ ಬಾಬ್ತು ನಿಗಮಗಳಿಗೆ ಸಂದಾಯವಾಗುವ ಆದಾಯಗಳಲ್ಲಿ 351.74 ಕೋಟಿ ರು. ಕಡಿಮೆಯಾಗಲಿದೆ. ನಿಗಮಗಳು ಪ್ರತಿ ಮಾಹೆ ಒಂದನೇ ದಿನಾಂಕದಂದು ಸಿಬ್ಬಂದಿಗಳಿಗೆ ವೇತನ ಪಾವತಿ ಮಾಡುತ್ತಿದೆ. ಶಕ್ತಿ ಯೋಜನೆ ಅನುಷ್ಠಾನವಾದಲ್ಲಿ ನಗದು ಹರಿವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊರತೆಯುಂಟಾಗಿ ವೇತನ ಪಾವತಿಗೆ ಅಡಚಣೆಯುಂಟಾಗಲಿದೆ ಎಂಬುದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ.
ಕರ್ನಾಟಕ ಸಾರಿಗೆ ನಿಗಮ, ಬಿಎಂಟಿಸಿ, ವಾಯುವ್ಯ ಕರ್ನಾಠಕ ಸಾರಿಗೆ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ ಸದ್ಯ 1,079.82 ಕೋಟಿ ರು. ಪಾವತಿಯಾಗುತ್ತಿದೆ. ಶಕ್ತಿ ಯೋಜನೆ ಅನುಷ್ಠಾನದಿಂದಾಗಿ ಈ ಮೊತ್ತದಲ್ಲಿ 702.88 ಕೋಟಿ ರು. ಕೊರತೆಯಾಗಲಿದೆ.
ಕೆಎಸ್‌ಆರ್‍ಟಿಸಿಯಲ್ಲಿ ಪಾವತಿಯಾಗುತ್ತಿರುವ 386.77 ಕೋಟಿ ರು.ನಲ್ಲಿ 221.79 ಕೋಟಿ ರು. ಕೊರತೆಯಾಗಲಿದೆ. ಬಿಎಂಟಿಸಿಯಲ್ಲಿ 287.81 ಕೋಟಿ ರು.ನಲ್ಲಿ 206.31 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ 213.04 ಕೋಟಿ ರು.ನಲ್ಲಿ 146.55 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 192.2 ಕೋಟಿ ರು.ನಲ್ಲಿ 128.23 ಕೋಟಿ ರು ಸೇರಿ ಒಟ್ಟಾರೆ 702.88 ಕೋಟಿ ರು. ಕೊರತೆಯಾಗಲಿದೆ ಎಂದು ಪ್ರಸ್ತಾವನೆಯಿಂದ ಗೊತ್ತಾಗಿದೆ.
ಮಾಸಿಕ- ವಾರ್ಷಿಕ ವೆಚ್ಚವೆಷ್ಟು?
ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಸಾರಿಗೆ ವರ್ಗವಾರು, ನಿಗಮವಾರು ಉಂಟಾಗುವ ಆರ್ಥಿಕ ವೆಚ್ಚವನ್ನು ಪ್ರಸಕ್ತ ಆದಾಯದ ಶೇ. 50ರಂತೆ ಅಂದಾಜಿಸಿದೆ. ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳಲ್ಲಿ ನಗರ ಸೇವಾ ವರ್ಗದಲ್ಲಿ 4.83 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ.
ಬಿಎಂಟಿಸಿಯಲ್ಲಿ 55.50 ಕೋಟಿ, ವಾಯುವ್ಯ ಕರ್ನಾಟಕ ಸಾರಿಗೆ ನಿಗಮದಲ್ಲಿ 5.77 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 0.93 ಕೋಟಿ ರು. ಸೇರಿ ಮಾಸಿಕ ಒಟ್ಟಾರೆ 67.03 ಕೋಟಿ ರು. ವೆಚ್ಚವಾಗಲಿದೆ. ಸಾಮಾನ್ಯ ವರ್ಗದಲ್ಲಿ ಕೆಎಸ್‌ಆರ್‍ಟಿಸಿಗೆ 31.45 ಕೋಟಿ, ಬಿಎಂಟಿಸಿಗೆ 0.00, ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 22.69 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗ ನಿಗಮದಲ್ಲಿ 17.17 ಕೋಟಿ ರು., ಸೇರಿ ಒಟ್ಟು 71.31 ಕೋಟಿ ರು. ವೆಚ್ಚವಾಗಲಿದೆ.
ರಿಯಾಯಿತಿ ಪಾಸ್‌ಗಳ ವರ್ಗದಲ್ಲಿ ಕೆಎಸ್‌ಆರ್‍ಟಿಸಿಗೆ 19.35 ಕೋಟಿ ರು., ಬಿಎಂಟಿಸಿಯಲ್ಲಿ 8.68 ಕೋಟಿ, ವಾಯುವ್ಯ ಕರ್ನಾಟಕದಲ್ಲಿ 15.32 ಕೋಟಿ ರು., ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದಲ್ಲಿ 10.94 ಕೋಟಿ ರು. ಸೇರಿ ಒಟ್ಟು 54.29 ಕೋಟಿ ರು. ಆಗಲಿದೆ. ಈ ಮೂರೂ ವರ್ಗಗಳಲ್ಲಿ ಕೆಎಸ್‌ಆರ್‍ಟಿಸಿಗೆ ಮಾಸಿಕ 55.63 ಕೋಟಿ ರು., ಬಿಎಂಟಿಸಿಗೆ 64.18 ಕೋಟಿ, ವಾಯುವ್ಯ ಕರ್ನಾಟಕಕ್ಕೆ 43.78 ಕೋಟಿ, ಕಲ್ಯಾಣ ಕರ್ನಾಟಕಕ್ಕೆ 29.04 ಕೋಟಿ ಸೇರಿ ಒಟ್ಟಾರೆ 192.63 ಕೋಟಿ ರು. ವೆಚ್ಚವಾಗಲಿದೆ.
ಇದೇ ವಾರ್ಷಿಕವಾಗಿ ಈ ಮೂರು ವರ್ಗಗಳಿಗೆ ಲೆಕ್ಕ ಹಾಕಿದರೆ ಕೆಎಸ್‌ಆರ್‍ಟಿಸಿಗೆ 667.56 ಕೋಟಿ ರು., ಬಿಎಂಟಿಸಿಗೆ 770.16 ಕೋಟಿ ರು., ವಾಯುವ್ಯ ಕರ್ನಾಟಕಕ್ಕೆ 525.36 ಕೋಟಿ ರು., ಕಲ್ಯಾಣ ಕರ್ನಾಟಕಕ್ಕೆ 348.48 ಕೋಟಿ ರು. ಸೇರಿ ಒಟ್ಟಾರೆ ವಾರ್ಷಿಕವಾಗಿ 2,311.56 ಕೋಟಿ ರು. ವೆಚ್ಚವಾಗಲಿದೆ ಎಂದು ಪ್ರಸ್ತಾವನೆಯಲ್ಲಿರುವ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಒಂದೊಮ್ಮೆ ವೇಗದೂತ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಿದಲ್ಲಿ ಕೆಎಸ್‌ಆರ್‍ಟಿಸಿಗೆ ಮಾಸಿಕ 78.39 ಕೋಟಿ ರು., ವಾಯುವ್ಯ ಕರ್ನಾಟಕ ಸಾರಿಗೆ ನಿಗಮಕ್ಕೆ 35.73 ಕೋಟಿ ರು., ಕಲ್ಯಾಣ ಕರ್ನಾಟಕ ನಿಗಮಕ್ಕೆ 44.99 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ. ನಗರ, ಸಾಮಾನ್ಯ, ವೇಗದೂತ, ರಿಯಾಯಿತಿ ಪಾಸ್‌ಗಳಿಗೆ ಲೆಕ್ಕ ಹಾಕಿರುವ ನಿಗಮಗಳು ಕೆಎಸ್‌ಆರ್‍ಟಿಸಿಗೆ 134.02 ಕೋಟಿ ರು., ಬಿಎಂಟಿಸಿಗೆ 64.18 ಕೋಟಿ ರು., ವಾಯುವ್ಯ ಕರ್ನಾಟಕ ನಿಗಮಕ್ಕೆ 79.51 ಕೋಟಿ ರು., ಕಲ್ಯಾಣ ಕರ್ನಾಟಕ ನಿಗಮಕ್ಕೆ 74.03 ಕೋಟಿ ರು. ಆರ್ಥಿಕ ವೆಚ್ಚವಾಗಲಿದೆ ಎಂದು ವಿವರಿಸಿದೆ.