ಬೆಂಗಳೂರು; ಕಲಿಕೆಯಲ್ಲಿ ಹಿಂದುಳಿಯುತ್ತಿರುವ ಶಾಲಾ ಮಕ್ಕಳಿಗೆ ಗುಣಮಟ್ಟದ ಬೋಧನೆ, ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಉನ್ನತೀಕರಿಸಬೇಕು ಎಂಬ ನಿಟ್ಟಿನಲ್ಲಿ ಶೈಕ್ಷಣಿಕ ವಲಯದಲ್ಲಿ ಹೆಚ್ಚು ಚರ್ಚೆಗಳು ನಡೆಯುತ್ತಿರುವ ಹೊತ್ತಿನಲ್ಲಿಯೇ ಜಮಖಂಡಿ ತಾಲೂಕಿನ ಕುಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹೆಬ್ಬುಲಿ ಕಟಿಂಗ್ ಕಲಿಕೆಯಲ್ಲಿ ಹಿಂದುಳಿಯುವಿಕೆಗೆ ಕಾರಣವಾಗಿದೆ ಎಂಬ ಅಂಶವು ಚರ್ಚೆಗೆ ಗ್ರಾಸವಾಗಿದೆ.
ಹೆಬ್ಬುಲಿ ಚಿತ್ರದಲ್ಲಿ ನಟ ಸುದೀಪ್ ಅವರ ಕೇಶ ವಿನ್ಯಾಸವು ಅವರ ಅಭಿಮಾನಿಗಳ ಮನಸೂರೆಗೊಂಡಿತ್ತು. ಇದೀಗ ಶಾಲಾ ಮಕ್ಕಳೂ ಸಹ ಅದೇ ಕೇಶ ವಿನ್ಯಾಸಕ್ಕೆ ಮೊರೆ ಹೋಗಿರುವ ಕಾರಣ ಕಲಿಕೆ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ ಎಂದು ಕುಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಾಜಿ ನಾಯಕ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕುಲಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶಿವಾಜಿ ನಾಯಕ್ ಅವರು ವ್ಯವಸ್ಥಿತ ಮತ್ತು ಶಿಸ್ತಿನಿಂದ ಕಾಣುವಂತಹ ಹೇರ್ ಕಟಿಂಗ್ ಮಾಡಬೇಕು ಎಂದು ಕುಲಹಳ್ಳಿಯ ಹೇರ್ ಕಟಿಂಗ್ ಅಂಗಡಿ ಮಾಲೀಕರಿಗೆ 2023ರ ಜುಲೈ 20ರಂದು ಬರೆದಿರುವ ಪತ್ರದಲ್ಲಿ ಹೆಬ್ಬುಲಿ ಕಟಿಂಗ್ ಕುರಿತು ಪ್ರಸ್ತಾಪಿಸಿದ್ದಾರೆ.
ಪತ್ರದಲ್ಲೇನಿದೆ?
ನಮ್ಮ ಶಾಲೆಯ ಗಂಡು ಮಕ್ಕಳು ಹೆಬ್ಬುಲಿಯಂತಹ ಇತರೆ ತರಹದ ಹೇರ್ ಕಟಿಂಗ್ (ತಲೆಯ ಒಂದು ಬದಿಗೆ ಕೂದಲು ಬಿಟ್ಟು ಇನ್ನೊಂದು ಬದಿಗೆ ಕೂದಲು ಉಳಿಸಿಕೊಳ್ಳುವುದು) ಮಾಡಿಸಿಕೊಂಡು ಶಾಲೆಗೆ ಬರುತ್ತಿದ್ದು ಇದರಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಗೆ ಆಸಕ್ತಿ ತೋರಿಸದೇ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚು ಮಹತ್ವ ನೀಡದೇ ಕಲಿಕೆಯಲ್ಲಿ ಹಿಂದೆ ಉಳಿಯುತ್ತಿದ್ದಾರೆ.

ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಒಪ್ಪುವಂತಹ ಹೇರ್ ಕಟಿಂಗ್ ಮಾಡಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಒಂದು ವೇಳೆ ವಿದ್ಯಾರ್ಥಿಗಳು ಹೆಬ್ಬುಲಿ ಹೇರ್ ಕಟಿಂಗ್ ಮಾಡಲು ನಿಮಗೆ ಒತ್ತಾಯಿಸಿದರೆ ಅಂತಹ ವಿದ್ಯಾರ್ಥಿಗಳ ಹೆಸರನ್ನು ನನಗೆ ಅಥವಾ ಅವರ ಪಾಲಕರ ಗಮನಕ್ಕೆ ತರಬೇಕು ಎಂದು ಮುಖ್ಯೋಪಾಧ್ಯಾಯ ಶಿವಾಜಿ ನಾಯಕ್ ಅವರು ಹೇರ್ ಕಟಿಂಗ್ ಅಂಗಡಿ ಮಾಲೀಕರಿಗೆ ಬರೆದ ಪತ್ರದಲ್ಲಿ ಕೋರಿದ್ದಾರೆ.





