ಖಾಸಗಿ ಸಂಸ್ಥೆಗೆ ಅರಣ್ಯ ಜಮೀನು ಮಂಜೂರು; ಪ್ರಸ್ತಾವನೆ ಹಿಂದಿರುಗಿಸಿದ್ದರೂ ಪುನಃ ಮಂಡಿಸಲು ಸೂಚನೆ

ಬೆಂಗಳೂರು; ಪರಿಹಾರಾತ್ಮಕ ಅರಣ್ಯೀಕರಣ ಮತ್ತು ಸರ್ಕಾರಿ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಮೀಸಲಿರಿಸಿದ್ದ ಜಮೀನನ್ನು ಮಂಜೂರು ಮಾಡಲು ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿ ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದರೂ  ಸಹ  ಕುಂಚಿಟಿಗ ಜನಾಂಗಕ್ಕೆ ಅದೇ ಜಮೀನನ್ನು ಮಂಜೂರು ಮಾಡುವ ಸಂಬಂಧ  ಸರ್ಕಾರಕ್ಕೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರದುರ್ಗ ಜಿಲ್ಲಾಧಿಕಾರಿಗೆ ಸೂಚಿಸಿರುವುದು ಇದೀಗ ಬಹಿರಂಗವಾಗಿದೆ.

 

ವಿಶೇಷವೆಂದರೇ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ  ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದನ್ನು ಹಿಂದಿನ ಕಾಂಗ್ರೆಸ್‌ ಸರ್ಕಾರವು ತಡೆಹಿಡಿದು ಆದೇಶಿಸಿದ್ದರು. ಆದರೀಗ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಪರಿಹಾರಾತ್ಮಕ ಅರಣ್ಯೀಕರಣ ಉದ್ದೇಶಕ್ಕೆ ಕಾಯ್ದಿರಿಸಿರುವ ಜಮೀನನ್ನು ಮಂಜೂರಾತಿ ಸಂಬಂಧ ಕಡತದೊಂದಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿರುವುದು

 

ಕಾಂಗ್ರೆಸ್‌ ಸರ್ಕಾರವು ತಡೆಹಿಡಿದಿದ್ದ ನೀತಿಯನ್ನು ಹಿಂದಿನ ಬಿಜೆಪಿ ಸರ್ಕಾರವು ಪುನರ್‌ ಪರಿಶೀಲಿಸಲು ಮುಂದಾಗಿತ್ತು. ಇದರ ಬೆನ್ನಲ್ಲೇ ಎರಡನೇ ಬಾರಿಗೆ ಅಧಿಕಾರದಲ್ಲಿರುವ ಕಾಂಗ್ರೆಸ್‌ ಸರ್ಕಾರವು ಮಂಜೂರು ಮಾಡಲು ಮುಂದಾಗಿರುವುದು ಅಧಿಕಾರಿಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿದೆ.

 

ನವದೆಹಲಿಯಲ್ಲಿನ ಕರ್ನಾಟಕ ರಾಜ್ಯದ ವಿಶೇಷ ಪ್ರತಿನಿಧಿ ಮತ್ತು ಶಿರಾ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಟಿ ಬಿ ಜಯಚಂದ್ರ ಅವರು ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್‌ ಗ್ರಾಮದ ರಿ ಸರ್ವೆ ನಂಬರ್‌ 44ರಲ್ಲಿ  5 ಎಕರೆ ಸರ್ಕಾರಿ ಜಮೀನನ್ನು ಕುಂಚಿಟಿಗ ಜನಾಂಗಕ್ಕೆ ಮಂಜೂರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ 2023ರ ಜೂನ್‌ 23ರಂದು ಮನವಿ ಸಲ್ಲಿಸಿದ್ದರು. ಈ ಮನವಿ ಮೇಲೆಯೇ ‘ಪರಿಶೀಲಿಸಿ ಸಂಬಂಧಪಟ್ಟ ಕಡತದೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸುವುದು,’  ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗೆ ಸೂಚಿಸಿ ಒಕ್ಕಣೆ ಹಾಕಿದ್ದಾರೆ. ಈ ಮನವಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಿ ಬಿ ಜಯಚಂದ್ರ ಅವರು ಮುಖ್ಯಮಂತ್ರಿಗೆ ಬರೆದಿರುವ ಪತ್ರದ ಪ್ರತಿ

 

‘ಪ್ರಸ್ತಾಪಿತ ಜಮೀನು ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಸಿ ಮತ್ತು ಡಿ ವರ್ಗದ ಜಮೀನಾಗಿದ್ದು ಸರ್ಕಾರಿ ಆದೇಶದ ಪ್ರಕಾರ ಸರ್ಕಾರಿ ಉದ್ದೇಶಕ್ಕೆ ಮಾತ್ರ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ಜಮೀನು ವಿಮೋಚನೆ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಕಾಯ್ದಿರಿಸಿಕೊಳ್ಳಲು ಆದೇಶಿಸಿದೆ ಎಂಬುದಾಗಿ ಇರುವುದರಿಂದ ಸದರಿ ಜಮೀನು ಮಂಜೂರು ಮಾಡಲು ಅವಕಾಶ ಇರುವುದಿಲ್ಲ,’ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದರು ಎಂಬ ಅಂಶವನ್ನು ಟಿ ಬಿ ಜಯಚಂದ್ರ ಅವರು ಮನವಿಯಲ್ಲಿ ಪ್ರಸ್ತಾಪಿಸಿರುವುದು ಗೊತ್ತಾಗಿದೆ.

 

ಮನವಿಯಲ್ಲೇನಿದೆ?

 

ಚಿತ್ರದುರ್ಗ ತಾಲೂಕು ಕಸಬಾ ಹೋಬಳಿ ಕುಂಚಿಗನಾಳ್‌ ಗ್ರಾಮದ ಸರ್ವೆ ನಂಬರ್‌ 44ರಲ್ಲಿ 5 ಎಕರೆ ಜಮೀನನ್ನು ಕುಂಚಿಟಿಗ ಜನಾಂಗದ ಸಮುದಾಯ ಭವನ ಸೇರಿದಂತೆ ಮತ್ಇತತರೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ್ಯಗಳನ್ನು ಮಾಡಲು ಜಮೀನು ಮಂಜೂರು ಮಾಡುವಂತೆ ಚಿತ್ರದುರ್ಗ ಜಿಲ್ಲಾ ಕುಂಚಿಟಿಗರ ಸಂಘದ ಮನವಿ ಮೇರೆಗೆ ಅಗತ್ಯ ದಾಖಲಾತಿಗಳೊಂದಿಗೆ ಜಿಲ್ಲಾಡಳಿತವು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಕೆಯಾಗಿತ್ತು.

 

ಪ್ರಸ್ತಾಪಿತ ಜಮೀನು ಅರಣ್ಯ ಇಲಾಖೆಗೆ ವರ್ಗಾಯಿಸಲಾದ ಸಿ ಮತ್ತು ಡಿ ವರ್ಗದ ಜಮೀನಾಗಿದ್ದು ಸರ್ಕಾರಿ ಆದೇಶದ ಪ್ರಕಾರ ಸರ್ಕಾರಿ ಉದ್ದೇಶಕ್ಕೆ ಮಾತ್ರ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ಜಮೀನು ವಿಮೋಚನೆ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಕಾಯ್ದಿರಿಸಲು ಆದೇಶಿಸಿದೆ ಎಂಬುದಾಗಿ ಇರುವುದರಿಂದ ಸದರಿ ಜಮೀನು ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂಬುದಾಗಿ ತಿಳಿಸಿ ಪ್ರಸ್ತಾವನೆ ಹಿಂದಿರುಗಿಸಲಾಗಿದೆ ಎಂಬ ಅಂಶವನ್ನು ಮನವಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ 2.5 ಲಕ್ಷದಷ್ಟು ಕುಂಚಿಟಿಗ ಜನಾಂಗದ ಮತದಾರರಿದ್ದಾರೆ. ಸಮಾಜದ ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಿಕೊಳ್ಳಲು ಯಾವುದೇ ನಿವೇಶನ ಇರುವುದಿಲ್ಲ. ಅಲ್ಲದೇ ಶೈಕ್ಷಣಿಕವಾಗಿ ಹಿಂದುಳಿದಿರುವ ಜನಾಂಗದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಗತ್ಯವಾಗಿ ಜಿಲ್ಲಾ ಕೇಂದ್ರದಲ್ಲಿ ಒಂದು ಹಾಸ್ಟೆಲ್‌ ನಿರ್ಮಾಣ ಮಾಡಬೇಕಿದೆ. ಅಲ್ಲದೇ ಬಾಲಕರ ಹಾಸ್ಟೆಲ್‌ ಕೂಡ ನಿರ್ಮಾಣ ಮಾಡಬೇಕಿದೆ. ಸಾಮಾಜಿಕ ಕಾರ್ಯಗಳಿಗಾಗಿ ಸಮುದಾಯ ಭವನ ನಿರ್ಮಾಣ, ಭವಿಷ್ಯದಲ್ಲಿ ವಿದ್ಯಾ ಸಂಸ್ಥೆ ತೆರೆಯಲು ಜಮೀನಿನ ಅಗತ್ಯವಿದೆ. ಆದ್ದರಿಂದ ಕುಂಚಿಗನಾಳ್‌ ಗ್ರಾಮದ ರಿ ಸರ್ವೆ ನಂಬರ್‌  44ರಲ್ಲಿ 5 ಎಕರೆ ಜಮೀನು ಮಂಜೂರು ಮಾಡಲು ಜಿಲ್ಲಾಧಿಕಾರಿಗಳ ಬಳಿ ಇರುವ ಕಡತವನ್ನು ಸಂಪುಟಕ್ಕೆ ತಂದು ಜಮೀನು ಮಂಜೂರು ಮಾಡಬೇಕು ಎಂದು ಟಿ ಬಿ ಜಯಚಂದ್ರ ಅವರು ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿರುವುದು ತಿಳಿದು ಬಂದಿದೆ.

 

2016ರಲ್ಲಿ ಅಂದಿನ ಸರ್ಕಾರವು ಹೊರಡಿಸಿದ್ದ ಆದೇಶವನ್ನು ಪುನರ್‌ ಪರಿಶೀಲನೆ ಮಾಡಲು ಹೊರಟಿರುವುದರ ಹಿಂದೆ ಗಣಿ ಗುತ್ತಿಗೆಗಳಿಗೆ ಜಮೀನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಅಲ್ಲದೇ ರಾಜ್ಯದಲ್ಲಿ ಒಂದು ಅಥವಾ ಇತರೆ ಕಡೆಗಳಲ್ಲಿ ಸುಮಾರು 1 ಸಾವಿರ ಎಕರೆ ಅರಣ್ಯ ಜಮೀನನ್ನು ಗುರುತಿಸಿ ಲ್ಯಾಂಡ್‌ ಬ್ಯಾಂಕ್‌ ರಚಿಸಲು ಅರಣ್ಯ ಇಲಾಖೆಯು ಕಂದಾಯ ಇಲಾಖೆಗೆ ಸೂಚಿಸಿತ್ತು.

 

ಈ ಕುರಿತು ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು 2022ರ ಡಿಸೆಂಬರ್‌ 23ರಂದು ಪತ್ರ (ಅ.ಸ. ಪತ್ರ ಸಂಖ್ಯೆ ಅಪಜೀ 12 ಎಫ್‌ಎಫ್‌ಎಂ 2021) ಬರೆದಿದ್ದರು.

 

ಈ ಕುರಿತು 2022ರ ಡಿಸೆಂಬರ್‌ 3ರಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್‌ ಜೋಷಿ ಅವರು ಭಾಗವಹಿಸಿದ್ದ ಸಭೆಯಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ್ದ ನೀತಿಯನ್ನು ಪುನರ್‌ ಪರಿಶೀಲಿಸಲು ನಿರ್ಣಯ ಕೈಗೊಂಡಿದ್ದರು.

 

ಸರ್ಕಾರಿ ಮೂಲಭೂತ ಸೌಕರ್ಯಗಳಿಗಾಗಿ ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶವನ್ನು ಪಡೆದಿದ್ದರ ಬದಲಿಗೆ ಪ್ರತಿ ಕಂದಾಯ ವಿಭಾಗಕ್ಕೆ ಒಂದೊಂದೆಡೆ 500 ಎಕರೆ ಜಮೀನನ್ನು ಕಾಯ್ದಿರಿಸಲು ಮುಂದಾಗಿತ್ತು. ರಾಜ್ಯ ಸರ್ಕಾರದ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಪಿ ರವಿಕುಮಾರ್‌ ಅವರು ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳಿಗೆ ಪತ್ರವನ್ನೂ ಬರೆದಿದ್ದರು. ಆದರೀಗ ಲ್ಯಾಂಡ್ ಬ್ಯಾಂಕ್‌ ಹೆಸರನಲ್ಲಿ 1 ಸಾವಿರ ಎಕರೆಯನ್ನು ಗುರುತಿಸಲು ಕಂದಾಯ ಇಲಾಖೆಗೆ ಅರಣ್ಯ ಇಲಾಖೆಯು ಬರೆದಿರುವ ಪತ್ರವು ಚರ್ಚೆಗೆ ಗ್ರಾಸವಾಗಿತ್ತು.

 

2016ರಲ್ಲಿ ಹೊರಡಿಸಿದ್ದ ಆದೇಶದಲ್ಲೇನಿತ್ತು?

 

ಲಭ್ಯವಿರುವ ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದನ್ನು ತಕ್ಷಣದಿಂದ ನಿಲ್ಲಿಸಲು ಸೂಚಿಸಿದೆ. ಖಾಸಗಿ ವ್ಯಕ್ತಿಗಳು ಪರಿಹಾರಾತ್ಮಕ ಅರಣ್ಯೀಕರಣಕ್ಕಾಗಿ ಅರಣ್ಯ ಪ್ರದೇಶದ ಮಧ್ಯದಲ್ಲಿರುವ ಇರತಕ್ಕಂತ ಅಥವಾ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಮಾನವ ವನ್ಯಜೀವಿ ಸಂಘರ್ಷವಿರುವ ಖಾಸಗಿ ಜಮೀನುಗಳನ್ನು ಮಾತ್ರ ಗುರುತಿಸಿ ಖರೀದಿಸಿ ಸರ್ಕಾರಕ್ಕೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಬೇಕು,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಲ್‌ ಶಾರದ ಅವರು ಆದೇಶ ಹೊರಡಿಸಿದ್ದರು.

 

 

ಖಾಸಗಿ ಸಂಸ್ಥೆಗಳು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಸರ್ಕಾರಿ ಜಮೀನುಗಳನ್ನು ಪರಿಭಾವಿಸುವುದರಿಂದ ಸರ್ಕಾರಿ ಉದ್ದೇಶಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಜಮೀನುಗಳು ಲಭ್ಯವಿಲ್ಲದಂತಾಗುವ ಸಂಭವವಿರುತ್ತೆ. ಈ ಹಿನ್ನೆಲೆಯಲ್ಲಿ ಲಭ್ಯವಿರುವ ಸಿ ಮತ್ತು ಡಿ ಜಮೀನುಗಳನ್ನು ಸರ್ಕಾರಿ ಉದ್ದೇಶಗಳಿಗೆ ಅಂದರೆ ನೀರಾವರಿ, ಕುಡಿಯುವ ನೀರು, ವಿದ್ಯುದ್ದೀಕರಣ, ರಸ್ತೆ, ಸರ್ಕಾರಿ ಕಟ್ಟಡಗಳು, ಆಸ್ಪತ್ರೆಗಳು, ಮುಂತಾದ ಯೋಜನೆಗಳಿಗೆ ಮಂಜೂರು ಮಾಡಲು ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಅರಣ್ಯ ವಿಮೋಚನೆ ಸಂದರ್ಭದಲ್ಲಿ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡಲು ಕಾಯ್ದಿರಿಸಿಕೊಳ್ಳುವುದು ಸೂಕ್ತ ಎಂದು ಹಿಂದಿನ ಕಾಂಗ್ರೆಸ್‌ ಸರ್ಕಾರವು ಹೇಳಿತ್ತು.

 

 

2022ರಲ್ಲಿ ಕಂದಾಯ ಇಲಾಖೆಗೆ ಬರೆದ ಪತ್ರದಲ್ಲೇನಿದೆ?

 

‘ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ಸಂಸ್ಥೆಗಳು ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಣಕ್ಕೆ ನೀಡುವುದನ್ನು ಅಥವಾ ಪ್ರಸ್ತಾಪಿಸುವುದನ್ನು ತಡೆಹಿಡಿರುವ ನೀತಿಯನ್ನು ಪುನರ್‌ ಪರಿಶೀಲಿಸಬೇಕಾಗಿರುತ್ತದೆ. ಈ ಸಂಬಂಧ ರಾಜ್ಯದಲ್ಲಿ ಒಂದು ಅಥವಾ ಇತರೆ ಕಡೆಗಳಲ್ಲಿ ಸುಮಾರು 1 ಸಾವಿರ ಎಕರೆ ಅರಣ್ಯ ಜಮೀನನನ್ನು  ಗುರುತಿಸಿ ಪರಿಹಾರಾತ್ಮಕ ಅರಣ್ಯ ಜಮೀನು ಮಂಜೂರಾತಿಗಾಗಿ ಒಂದು ಲ್ಯಾಂಡ್‌ ಬ್ಯಾಂಕ್‌ ರಚಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಅರಣ್ಯ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಅವರು ಪತ್ರದಲ್ಲಿ ಕೋರಿದ್ದರು.

 

ಕೋಲಾರ ಜಿಲ್ಲೆಯ ಕೋಲಾರ ತಾಲೂಕು ಕಸಬಾ ಹೋಬಳಿಯ ಅಂತರಗಂಗೆ ಹಾಗೂ ವಕ್ಕಲೇರಿ ಹೋಬಳಿಯ ಸುತ್ತಮುತ್ತಲಿನ ಜಮೀನುಗಳ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಅರಣ್ಯೇತರ ಜಮೀನನ್ನು ಪರಿಹಾರಾತ್ಮಕ ಜಮೀನನ್ನಾಗಿ (ಸಿ ಎ) ನೀಡಿದ್ದನ್ನು ಕಂದಾಯ ಇಲಾಖೆಯು ರದ್ದುಪಡಿಸಿತ್ತು.
ಹೀಗಾಗಿ 2022ರ ಜೂನ್‌ 29ರಂದು ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಚರ್ಚೆ ನಡೆದಿತ್ತು.

ಖಾಸಗಿ ಸಂಸ್ಥೆಗಳಿಗೆ 1,000 ಎಕರೆ ಪರಿಹಾರಾತ್ಮಕ ಅರಣ್ಯ ಜಮೀನು; ತಡೆಹಿಡಿದಿದ್ದ ನೀತಿ ಪುನರ್‌ ಪರಿಶೀಲನೆ

ಈ ಸಭೆಯಲ್ಲಿಯೇ ‘5 ಗಣಿ ಗುತ್ತಿಗೆಗಳಿಗೆ ಸುಮಾರು 200 ಹೆಕ್ಟೇರ್‌ ಅರಣ್ಯೇತರ ಜಮೀನನ್ನು ಗುರುತಿಸಿ ಸೂಕ್ರ ಕ್ರಮಕೈಗೊಳ್ಳಬೇಕು,’ ಎಂದು ಕೋಲಾರ ಜಿಲ್ಲಾಧಿಕಾರಿ ಮತ್ತು ಕಂದಾಯ ಇಲಾಖೆಯ ಉಪ ಕಾರ್ಯದರ್ಶಿಗೆ ಸೂಚಿಸಲಾಗಿತ್ತು.

 

ಅದೇ ರೀತಿ ಲಭ್ಯವಿರುವ ಸರ್ಕಾರಿ ಸಿ ಮತ್ತು ಡಿ ಮತ್ತಿತರ ಜಮೀನುಗಳನ್ನು ಖಾಸಗಿ ವ್ಯಕ್ತಿಗಳಿಗೆ ಅಥವಾ ವ್ಯಕ್ತಿಗಳಿಗೆ ಪರಿಹಾರಾತ್ಮಕ ಅರಣ್ಯೀಕರಕ್ಕೆ ನೀಡುವುದು ಮತ್ತು ಪ್ರಸ್ತಾಪಿಸುವುದಕ್ಕೆ ಅವಕಾಶವಿಲ್ಲ. ಆದರೆ ಕಂದಾಯ ಇಲಾಖೆಯಿಂದ ಈ ಮೊದಲು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಜಮೀನನ್ನು ನೀಡಿದ್ದರೂ ಸಹ ನಂತರ ರದ್ದುಪಡಿಸಿದ ಸಂದರ್ಭಗಳಲ್ಲಿನ ಪ್ರಕರಣಗಳಿಗೆ ಇದರಿಂದ ವಿನಾಯಿತಿ ನೀಡಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.

 

ಕಂದಾಯ ಇಲಾಖೆ ವ್ಯಾಪ್ತಿಯ ವಿವಿಧ ವರ್ಗೀಕರಣ ಪ್ರದೇಶದಲ್ಲಿ ಡೀಮ್ಡ್ ಫಾರೆಸ್ಟ್‌ (ಪರಿಭಾವಿತ ಅರಣ್ಯ) ಪ್ರದೇಶವನ್ನು ಪರಿಷ್ಕರಿಸಿ ರಾಜ್ಯ ಸರ್ಕಾರವು 2022ರ ಮೇ 5ರಂದು ಅಧಿಸೂಚನೆ ಪ್ರಕಟಿಸಿದ ಬೆನ್ನಲ್ಲೇ ಅದೇ ತಿಂಗಳಲ್ಲೇ ಅಂದಿನ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್‌ ಅವರು ಅರಣ್ಯ ಇಲಾಖೆಗೆ ಹೊಂದಾಣಿಕೆ ಮಾಡಿ ಭೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿ ಕಂದಾಯ ವಿಭಾಗಕ್ಕೆ 500 ಎಕರೆ ಜಮೀನು ಕಾಯ್ದಿರಿಸುವ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದನ್ನು ಸ್ಮರಿಸಬಹುದು.

 

ರಾಜ್ಯದಲ್ಲಿದ್ದ 9.94.881.11 ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ಪ್ರದೇಶವನ್ನು ರದ್ದುಪಡಿಸಲಾಗಿದೆ. 3.30.186.93 ಹೆಕ್ಟೆರ್‌ ಪ್ರದೇಶವನ್ನು ಮಾತ್ರ ಡೀಮ್ಡ್ ಫಾರೆಸ್ಟ್‌ ಎಂದು ನಿಗದಿಸಲಾಗಿದೆ. ಘೋಷಿತ ಡೀಮ್ಡ್ ಪ್ರದೇಶ ಅರಣ್ಯೇಯೇತರ ಉದ್ದೇಶಕ್ಕೆ ಬಳಕೆ ಆಗಬಾರದು ಎಂದು 2022 ಮೇ 5ರಂದು ಹೊರಡಿಸಿದ ಆದೇಶದಲ್ಲಿ ಸರ್ಕಾರವು ಸ್ಪಷ್ಟವಾಗಿ ಸೂಚಿಸಿತ್ತು. ಸೊಪ್ಪಿನ ಬೆಟ್ಟ, ಕಾನು, ಕುಮ್ಕಿ, ಬಾನೆ, ಸರಕಾರಿ ಖರಾಬ್‌ ಪ್ರದೇಶದಲ್ಲಿ ಭೂ ಮಂಜೂರಾತಿಗಿದ್ದ ನಿರ್ಬಂಧ ಸರಕಾರದ ಆದೇಶದಿಂದಾಗಿ ತೆರವುಗೊಳ್ಳುವ ಸಾಧ್ಯತೆ ಇದೆ. ನಿರ್ಬಂಧಿತ ಆದೇಶ ವಾಪಸ್‌ ಪಡೆಯುವ ಕುರಿತಂತೆ ಸರಕಾರ ಇನ್ನು ಅಂತಿಮ ನಿರ್ಧಾರ ಹೊರಬಿದ್ದಿಲ್ಲ ಎಂದು ಗೊತ್ತಾಗಿದೆ.

 

ಪುನರ್‌ ರಚಿತ ತಜ್ಞರ ಸಮಿತಿಯ-1ರ ವರದಿಯಲ್ಲಿದ್ದಂತೆ 9,94,881.11 ಹೆಕ್ಟೇರ್‌ ಪ್ರದೇಶಗಳನ್ನು ಆದೇಶದಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳ ಪ್ರಕಾರ ಅರಣ್ಯ ಗುಣಲಕ್ಷಣಗಳನ್ನು ಹೊಂದಿಲ್ಲದಿರುವುದು ಮತ್ತು 2 ಹೆಕ್ಟೇರ್‌ ಪ್ರದೇಶಗಳಿಗಿಂತ ಕಡಿಮೆ ಇರುವ ಪ್ರದೇಶ ಸೇರಿಸಿ ಒಟ್ಟಾರೆ 7,73,326.91 ಹೆಕ್ಟೇರ್‌ ಪ್ರದೇಶವನ್ನು ಪರಿಭಾವಿತ ಅರಣ್ಯವೆಂದು ಪರಿಗಣಿಸಿ ಗುರುತಿಸಿತ್ತು.

 

ಹಾಗೆಯೇ ಪುನರ್‌ ರಚಿತ ತಜ್ಞರ ಸಮಿತಿ-1 ಗುರುತಿಸಿದ್ದ 9,94,881.11 ಹೆಕ್ಟೇರ್‌ ಪ್ರದೇಶಗಳನ್ನು ನಿರ್ದಿಷ್ಟಪಡಿಸಿದ ಮಾನದಂಡಗಳ ಪ್ರಕಾರ ಪರಿಶೀಲಿಸಿ 2,21,554.20 ಹೆಕ್ಟೇರ್ ಪ್ರದೇಶವನ್ನು ಗುರುತಿಸಿತ್ತು. ಅದೇ ರೀತಿ ಪುನರ್‌ ರಚಿತ ತಜ್ಞರ ಸಮಿತಿ-1ರಲ್ಲಿ ಸೇರ್ಪಡೆಯಾಗದೇ ಇರುವ ಆದರೆ ಕ್ಷೇತ್ರೀಯ ಮಾದನಂಡಗಳಿಗೆ ಅನುಗುಣವಾಗಿರುವ 1,08,632.73 ಹೆಕ್ಟೇರ್‌ ಪ್ರದೇಶಗಳನ್ನು ಒಟ್ಟುಗೂಡಿಸಿ 3,30,186.93 ಹೆಕ್ಟೇರ್‌ ಪ್ರದೇಶಗಳನ್ನು ಪರಿಭಾವಿತ ಅರಣ್ಯಗಳೆಂದು ಜಿಲ್ಲಾ ಮಟ್ಟದ ಸಮಿತಿಗಳು ಗುರುತಿಸಿದ್ದವು.

 

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅರಣ್ಯ (ಸಂರಕ್ಷಣೆ) ಕಾಯ್ದೆ 1980ರ ಅಡಿ ಅರಣ್ಯೇತರ ಉದ್ದೇಶಗಳಿಗೆ (ಸಾರ್ವಜನಿಕ ಹಾಗೂ ಖಾಸಗಿ ಉದ್ದೇಶಿತ) 48 ಪ್ರಕರಣಗಳಿಗೆ ಸಂಬಂಧಿಸಿದಂತೆ 746.1368 ಹೆಕ್ಟೇರ್‌ ಅರಣ್ಯ ಪ್ರದೇಶವನ್ನು ಬಳಸಲು ಪೂರ್ವಾನುಮೋದನೆ ನೀಡಲಾಗಿತ್ತು. ಅದೇ ರೀತಿ 2016ರ ಆಗಸ್ಟ್ 31ರಂದು ಹೊರಡಿಸಿದ್ದ ಆದೇಶದಲ್ಲಿನ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 170.691 ಹೆಕ್ಟೇರ್‌ ಕಂದಾಯ ಭೂಮಿಯನ್ನು ಪರ್ಯಾಯವಾಗಿ ಅರಣ್ಯ ಇಲಾಖೆಗೆ ಪಡೆದಿದೆ.

SUPPORT THE FILE

Latest News

Related Posts