ಬೆಂಗಳೂರು; ಶಾಲಾ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶೂ, ಸಾಕ್ಸ್‌ಗಳನ್ನು ಖರೀದಿಸಲು ಶಿಕ್ಷಕರನ್ನು ದಾನಿ ಬಳಿ ನಿಲ್ಲಿಸಿ, ಶಾಲಾ ಕಾಲೇಜುಗಳ ಉನ್ನತೀಕರಣ ಪ್ರಸ್ತಾವನೆಗಳನ್ನು ಮುಂದಿನ ಎರಡು ವರ್ಷ ತನಕ ವಿಸ್ತರಿಸಿರುವ ಕಾಂಗ್ರೆಸ್ ಸರ್ಕಾರವು ಗೃಹ ಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ಬಳಸಲು ಮುಂದಾಗಿದೆ.
ಗೃಹ ಲಕ್ಷ್ಮಿ ಯೋಜನೆ ಜಾರಿ ಕುರಿತು ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಂದಣಿ ಸಂಬಂಧಿತ ವಿವರಗಳನ್ನು ನೀಡಿರುವ ಬೆನ್ನಲ್ಲೇ ಇದೇ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗಾಗಿ 50 ಲಕ್ಷ ರು.ಗಳನ್ನು ವಿನಿಯೋಗಿಸಲು ಅನುಮತಿ ನೀಡಿರುವುದು ಮುನ್ನೆಲೆಗೆ ಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮಗಳಿಗೆ ಒಟ್ಟಾರೆ 50 ಲಕ್ಷ ರು. ಪೈಕಿ 25 ಲಕ್ಷ ರು.ಗಳನ್ನು ಬಿಡುಗಡೆಗೊಳಿಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು 2023ರ ಜುಲೈ 10ರಂದು ಆದೇಶವನ್ನು (ಮಮಿ 70 ಮಮಾ 2023 (ಭಾಗ-16) ಹೊರಡಿಸಿದೆ.
ಮಹಿಳಾ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಉದ್ಯೋಗಿನಿ ಲೆಕ್ಕ ಶೀರ್ಷಿಕೆಯಡಿ (ಲೆಕ್ಕ ಶೀರ್ಷಿಕೆ; 2235-02-103-0-38-059) ನಿಗದಿಪಡಿಸಿರುವ 1100.00 ಲಲಕ್ಷ ರು. ಅನುದಾನದಲ್ಲಿ ಗೃಹ ಲಕ್ಷ್ಮಿ ಯೋಜನೆ ಸಂಬಂಧಿತ ಕಾರ್ಯಕ್ರಮಗಳಿಗಾಗಿ ಐಇಸಿ ಪರಿಕರಗಳೀಗೆ 840.90 ಲಕ್ಷ ರು.ಗ ಅನುದಾನವನ್ನು ಒಂದು ಬಾರಿಗೆ ಮಾತ್ರ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದರು. ಈ ಅನುದಾನದಲ್ಲಿ ಒಟ್ಟು 50 ಲಕ್ಷ ರು.ಗಳನ್ನು ನಿಗದಿಪಡಿಸಿದೆ ಎಂದು ಗೊತ್ತಾಗಿದೆ.
‘ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2023ರ ಜೂನ್ 12ರ ಆದೇಶದಲ್ಲಿ ಸೋಷಿಯಲ್ ಮೀಡಿಯಾಗಾಗಿ 50.00 ಲಕ್ಷ ಬಿಡುಗಡೆ ಮಾಡಿದ್ದು ಈ ಸಂಬಂಧ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಅಂಡ್ ಅಡ್ವರ್‌ಟೈಸಿಂಗ್ ಲಿಮಿಟೆಡ್ ನಿಂದ 24,96,585 ರು.ಗಳ ದರಪಟ್ಟಿ ಪಡೆದು ಸೇವೆ ಪಡೆಯಲು ಅನುಮತಿ ನೀಡಬೇಕು,’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ , ಮಹಿಳಾ ಮಕ್ಕಳ ಅಭಿವೃದ್ಧಿ ಕಲ್ಯಾಣ ಸಚಿವರ ಫೋಟೋ ಶೂಟ್, ಕ್ರಿಯೇಟಿವ್ ವಿಡಿಯೋ, ಮುದ್ರಣ ಮಾಧ್ಯಮಕ್ಕೆ ಜಾಹೀರಾತು ವಿನ್ಯಾಸ, ಫೇಸ್‌ಬುಕ್‌ನಲ್ಲಿ ಪ್ರಮೋಷನ್, ಮೂರನೇ ವ್ಯಕ್ತಿಯ ಅಭಿಯಾನ, ಸರ್ಕಾರಿ ಕಾರ್ಯಕ್ರಮಗಳು, ಸಮಾರಂಭಗಳು, ಮುದ್ರಣ, ಸಾಮಾಜಿಕ ಮಾಧ್ಯಮ, ಇತರೆ ಚಟುವಟಿಕೆಗಳಿಗೆ ಒಂದು ವರ್ಷದ ಅವಧಿಗೆ ಎಂಸಿಎ ಸೇವೆ ಪಡೆಯಲು ಪಾರದರ್ಶಕತೆ ಕಾಯ್ದೆಯಿಂದ 4 ಜಿ ವಿನಾಯಿತಿ ಪಡೆದಿದೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಫೋಟೋ ಶೂಟ್, ಮುದ್ರಣ ಜಾಹೀರಾತು, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಕ್ಕೆ ಘಟಕವೊಂದಕ್ಕೆ 1,65,000 ರು., ವಿಡಿಯೋ ಪರಿಕಲ್ಪನೆ, 30ರಿಂದ 50 ಸೆಕೆಂಡ್‌ನ ವಿಡಿಯೋಗಳು, ಫಲಾನುಭವಿಗಳ ಯಶಸ್ಸು ಆಧರಿತ ವಿಡಿಯೋ ವರದಿ, ನೋಂದಾವಣೆ ಪ್ರಕ್ರಿಯೆಗಳು, ಚಿತ್ರಕತೆ, ದತ್ತಾಂಶ ಸಂಗ್ರಹಣೆ, ಕ್ಯಾಮೆರಾ, ಬೆಳಕು, ವಿಡಿಯೋ ಗ್ರಾಫರ್, ಕಲಾವಿದರು, ಫೋಟೋ ಗ್ರಾಫರ್ಸ್ , ಸಾರಿಗೆ, ಆಹಾರ, ಸ್ಟುಡಿಯೋ ಇತ್ಯಾದಿಗಳಿಗಾಗಿ 11,00,000 ರು., 10 ಪೋಸ್ಟರ್, 20 ವಿಡಿಯೋ, ಫೇಸ್‌ಬುಕ್, ಇನ್ಸ್ಟಾಗ್ರಾಂನಲ್ಲಿ ಪ್ರತಿ ದಿನ ಪುಟವನ್ನು ಬೂಸ್ಟ್ ಮಾಡಲು 500 ರು ಸೇರಿದಂತೆ ಘಟಕವೊಂದಕ್ಕೆ 25,000 ರು.ನಂತೆ 750000 ರು.ಗಳನ್ನು ನಿಗದಿಪಡಿಸಿದೆ ಎಂದು ಗೊತ್ತಾಗಿದೆ.