ಬೆಂಗಳೂರು; ಕೆಎಎಸ್ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿ ನೌಕರರ ವರ್ಗಾವಣೆ ಪ್ರಕ್ರಿಯೆಗಳಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಬಲವಾಗಿ ಆರೋಪಿಸುತ್ತಿರುವ ಬೆನ್ನಲ್ಲೇ ಇದೀಗ ಅರಣ್ಯ, ಜೀವಿಶಾಸ್ತ್ರ ಇಲಾಖೆಯ ಹಿರಿಯ ಅಧಿಕಾರಿಗಳು ಕಮಿಷನ್‌ಗಾಗಿ ಆಯಕಟ್ಟಿನ ಹುದ್ದೆಗಳನ್ನೇ ಬ್ಲಾಕ್ ಮಾಡಿದ್ದಾರೆ. ಇದಕ್ಕಾಗಿ ತಂತ್ರಾಂಶವನ್ನೇ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆಪಾದನೆಯು ಇಲಾಖೆಯೊಳಗಿನಿಂದಲೇ ಕೇಳಿ ಬಂದಿದೆ.
ತಮಗೆ ಬೇಕಾದ ಅಧಿಕಾರಿ, ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹುದ್ದೆಗಳನ್ನು ಬ್ಲಾಕ್ ಮಾಡುವ ಮೂಲಕ ಬೇರೆ ಯಾವ ಅಧಿಕಾರಿ, ನೌಕರರೂ ಆ ಹುದ್ದೆಗಳಿಗೆ ಅರ್ಜಿಯನ್ನೇ ಸಲ್ಲಿಸದಂತೆ ಜಾಲ ಹೆಣೆಯಲಾಗಿದೆ ಎಂದು ತಿಳಿದು ಬಂದಿದೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ತಮಗೆ ಬೇಕಾದ ಸಿಬ್ಬಂದಿಗಳ ಪೋಸ್ಟ್‌ಗಳಿಗೆ ಯಾರೂ ಅರ್ಜಿ ಸಲ್ಲಿಸದಿರುವ ಹಾಗೇ ಬ್ಲಾಕ್ ಮಾಡುವ ಹಾಗೂ ಸೂಕ್ಷ್ಮ ಹುದ್ದೆಗಳಾಗಿ ಬದಲಾಯಿಸುವ ತಂತ್ರಕ್ಕೆ ಕೈ ಹಾಕಿರುವುದು ಗಮನಕ್ಕೆ ಬಂದಿದೆ ಎಂದು ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕ ಮತ್ತು ಅರಣ್ಯ ವೀಕ್ಷಕರ ಸಂಘದ ಅಧ್ಯಕ್ಷರಾದ ವಿಠಲ ಜೋನಿ ಅವರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಅರಣ್ಯ ವೀಕ್ಷಕರು, ಗಸ್ತು ಅರಣ್ಯ ಪಾಲಕ, ಉಪ ವಲಯ ಅರಣ್ಯಾಧಿಕಾರಿ ಹುದ್ದೆಗಳನ್ನು ಬ್ಲಾಕ್ ಮಾಡಿದ್ದಾರೆ. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ವಿಭಾಗವು ವರ್ಗಾವಣೆ, ಕೌನ್ಸಲಿಂಗ್ ತಂತ್ರಾಂಶದ ಮೇಲ್ವಿಚಾರಣೆ ನಡೆಸುತ್ತದೆ. ಆದರೆ ಈ ತಂತ್ರಾಂಶವನ್ನು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಪಾರದರ್ಶಕ ವ್ಯವಸ್ಥೆಗೆ ಧಕ್ಕೆ ತರಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬಂದಿವೆ.
ಅರಣ್ಯ ವೀಕ್ಷಕರಿಗೆ 50 ಸಾವಿರ, ಗಸ್ತು ಅರಣ್ಯ ಪಾಲಕರಿಗೆ 50 ಸಾವಿರದಿಂದ 1 ಲಕ್ಷ ರು., ಉಪ ವಲಯ ಅರಣ್ಯಾಧಿಕಾರಿಗಳಿಗೆ 1ರಿಂದ 2 ಲಕ್ಷ ರು. ಲಂಚ ನೀಡಬೇಕು. ಲಂಚ ನೀಡಿದ ಸಿಬ್ಬಂದಿಗಳಿಗೆ ಅನುಕೂಲವಾಗುವ ಹಾಗೇ ಹುದ್ದೆಗಳನ್ನು ಬ್ಲಾಕ್ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಶಿವಮೊಗ್ಗ, ಕೆನರಾ ವೃತ್ತವೂ ಸೇರಿದಂತೆ ಬಹುತೇಕ ಅರಣ್ಯ ವೃತ್ತಗಳಲ್ಲಿ ಹುದ್ದೆಗಳನ್ನು ಬ್ಲಾಕ್ ಮಾಡಲಾಗಿದೆ.
ಹಿರಿಯ ಐಎಫ್‌ಎಸ್ ಅಧಿಕಾರಿಗಳು ಇಂತಹದ್ದೊಂದು ಜಾಲ ಹೆಣೆದಿರುವುದು ಸಚಿವ ಈಶ್ವರ ಖಂಡ್ರೆ ಅವರಿಗೆ ಗೊತ್ತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಅಧಿನಿಯಮ 2016 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ನಿಯಮ 2019 ರ ನಿಯಮದಡಿಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಮಾಡುತ್ತಿದೆ. ಈ ಕಾಯಿದೆಯಲ್ಲಿ ಸುಮಾರು ಲೋಪದೋಷಗಳಿವೆ. ಅಲ್ಲದೇ ಅತೀ ಹೆಚ್ಚು ಸಿಬ್ಬಂದಿಗಳ ವಿರೋಧದ ನಡುವೆಯೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾರಿಗೊಳಿಸುತ್ತಿರುವುದು ಅನುಮಾನಕ್ಕೆ ದಾರಿಮಾಡಿಕೊಟ್ಟಂತಾಗಿದೆ.
ಲೋಪ ದೋಷಗಳ ಪಟ್ಟಿ
ಕೆ ಸಿ ಎಸ್ ಆರ್ ನಿಯಮ 32 ರಡಿ ಮುಂಬಡ್ತಿ ಹೊಂದಿರುವ ಸಿಬ್ಬಂದಿಗಳಿಗೆ ವರ್ಗಾವಣೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
ಅಂತರ್ ವೃತ್ತ ವರ್ಗಾವಣೆಯನ್ನು ನೇರ ನೇಮಕಾತಿ ಹೊಂದಿದ ಸಿಬ್ಬಂದಿಗಳಿಗೆ ಮಾತ್ರವೇ ಅನುಮತಿಸಲಾಗಿದ್ದು ಬಡ್ತಿ ಹೊಂದಿದ ಸಿಬ್ಬಂದಿಗಳಿಗೆ ಅಂತರ ವೃತ್ತ ವರ್ಗಾವಣೆ ಅವಕಾಶ ನೀಡಿಲ್ಲ.
ಸರ್ಕಾರಿ ನೌಕರರ ಪತಿ ಪತ್ನಿ ಪ್ರಕರಣದಡಿ ಸೂಕ್ತ ಆದ್ಯತೆ ನೀಡಿಲ್ಲ.
ಈ ಕಾಯ್ದೆಯಲ್ಲಿ ಸಿಬ್ಬಂದಿಗಳಿಗೆ 58 ವರ್ಷಗಳವರೆಗೆ ಅವರ ಮಾತೃ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿಲ್ಲ.
ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ವರ್ಗಾವಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ.
ಈ ಕಾಯ್ದೆ ಕೇವಲ ಮುಂಚೂಣಿ ಸಿಬ್ಬಂದಿಗಳಿಗೆ ಮಾತ್ರ ಅನ್ವಯ( ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಮತ್ತು ಅರಣ್ಯ ವೀಕ್ಷಕರು )
ಈ ಕಾಯ್ದೆಯಲ್ಲಿ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ ಮತ್ತು ನಿಯೋಜನೆಗೆ ಅವಕಾಶ ಕಲ್ಪಿಸಿಲ್ಲ.
ಸದರಿ ಕಾಯ್ದೆಯಲ್ಲಿ ವರ್ಗಾವಣೆಗೆ ಅಂಕಗಳನ್ನು ನಿಗದಿಪಡಿಸಿರುವುದು ಅವೈಜ್ಞಾನಿ.
ಅನಿಯಮಿತ ವರ್ಗಾವಣೆಗೆ ಅವಕಾಶ ನೀಡಿದ್ದು ವರ್ಗಾವಣೆ ತಿರಿಸ್ಕರಿಸಲು ಅವಕಾಶ ನೀಡಿಲ್ಲ.
ಒಂದೇ ಕೇಂದ್ರ ಸ್ಥಾನದಲ್ಲಿ ಬೇರೆ ಬೇರೆ ಪ್ರವರ್ಗ ಹುದ್ದೆಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿಲ್ಲ.
ವರ್ಗಾವಣೆಯನ್ನು ರೋಟೇಶನ್ ಆಧಾರದಲ್ಲಿ ಜಾರಿಗೊಳಿಸಲು ಅಧಿಸೂಚಿಸಿದ್ದು ವರ್ಗಾವಣೆ ಜಾರಿಗೊಳಿಸಲು ಅಸಾಧ್ಯವಾಗಿದೆ ( ಎಲ್ಲಾ ವೃತ್ತಗಳಲ್ಲಿ ಎಬಿಸಿ ಹುದ್ದೆಗಳ ಸಂಖ್ಯೆಗಳು ಏಕ ಪ್ರಕಾರವಾಗಿ ಹಂಚಿಕೆಯಾಗಿರುವುದಿಲ್ಲ)
ಈ ಕಾಯ್ದೆಯಲ್ಲಿ ಅರಣ್ಯ ಸಂಚಾರಿದಳ, ಸಿಟಿ ಚೆಕ್ಕಿಂಗ್, ಸಾ ಮಿಲ್ ಶಾಖೆಗಳಲ್ಲಿ ಮೂಲ ಜಿಲ್ಲೆಯವರು ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶವಿಲ್ಲ.
ಈ ಕಾಯ್ದೆಯ ಪ್ರಕಾರ ಹೊಸದಾಗಿ ನೇಮಕಗೊಂಡ ಹಾಗೂ ಮುಂಬಡ್ತಿ ಹೊಂದಿದ ಸಿಬ್ಬಂದಿಗಳನ್ನು ಪ್ರವರ್ಗ A ಗೆ ನೇಮಿಸಲು ಅಧಿಸೂಚಿಸಿದ್ದು ತಪ್ಪಾದ ಕ್ರಮವಾಗಿದೆ.
ಜೇಷ್ಠತೆ ನಿರ್ದೇಶನದಲ್ಲಿ ನಿರ್ದಿಷ್ಟವಾದ ಮಾನದಂಡವಿಲ್ಲ.
ವಿಶೇಷ ನೇಮಕಾತಿಗಳಾಡಿ ಆಯ್ಕೆಯಾದ ಸಿಬ್ಬಂದಿಗಳಿಗೆ ಕೌನ್ಸಿಲಿಂಗ್ ದಿಂದ ವಿನಾಯತಿ ನೀಡಿಲ್ಲ.
ನೇರ ನೇಮಕಗೊಂಡ ಸಿಬ್ಬಂದಿಗಳಿಗೆ ಮಾತ್ರ ಅಂತರ್ ವೃತ್ತ ವರ್ಗಾವಣೆ ಗಳಿಗೆ ಅವಕಾಶ ಮಾಡಿಕೊಟ್ಟಿದ್ದು ರಾಜ್ಯದಲ್ಲಿ ಚಾಲ್ತಿ ಇರುವ ಕರ್ನಾಟಕ ನಾಗರೀಕ ಸೇವಾ 1977ರ ನಿಯಮಗಳಿಗೆ ವಿರುದ್ಧ. ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ವರ್ಗಾವಣೆ ವಿನಾಯಿತಿ ನೀಡಿಲ್ಲ.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ಅಧಿನಿಯಮ 2016 ಮತ್ತು ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ ( ಅರಣ್ಯಾಧಿಕಾರಿಗಳು ಮತ್ತು ವರ್ಗಾವಣೆ ಹಾಗೂ ಸ್ಥಳ ನಿಯುಕ್ತಿಗಳ ನಿಯಂತ್ರಣ) ನಿಯಮ 2019 ರ ನಿಯಮ ದಡಿ ಮುಖಾಂತರ ಅರಣ್ಯ ಇಲಾಖೆಯ ಸಿಬ್ಬಂದಿಗಳ ವರ್ಗಾವಣೆ ಮಾಡಲಾಗುತ್ತಿದೆ. ಈ ಕಾಯಿದೆಯಲ್ಲಿ ಸುಮಾರು ಲೋಪ ದೋಷಗಳು ಇದ್ದರೂ ಮತ್ತು ಅತೀ ಹೆಚ್ಚು ಸಿಬ್ಬಂದಿಗಳ ವಿರೋಧದ ನಡುವೆ ಶತಾಯಗತಾಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಜಾರಿಗೊಳಿಸುತ್ತಿರುವುದು ಅನುಮಾನಕ್ಕೆ ಮುಂಚೂಣಿ ಸಿಬ್ಬಂದಿಗಳಿಗೆ ವಂಚನೆ ಮಾಡಿದಂತೆ ಎಂದು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿದರು.