ಕರ್ತವ್ಯ ಲೋಪವೆಸಗಿ ಆರ್ಥಿಕ ನಷ್ಟಕ್ಕೆ ಕಾರಣರಾಗಿದ್ದ ಕೆಎಎಸ್‌ ಅಧಿಕಾರಿ, ಈಗ ಸಿಎಂ ಜಂಟಿ ಕಾರ್ಯದರ್ಶಿ

ಬೆಂಗಳೂರು; ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಟ್ಟಿದ್ದ ನಿವೇಶನವನ್ನು ಖಾಸಗಿ ವ್ಯಕ್ತಿಯೊಬ್ಬರಿಗೆ ಹಂಚಿಕೆ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ ಎಂಬ ಪ್ರಕರಣದಲ್ಲಿ ಶಿಸ್ತುಕ್ರಮಕ್ಕೆ ಗುರಿಯಾಗಿರುವ ಬಿ ಶಿವಸ್ವಾಮಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಜಂಟಿ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದು ಅಧಿಕಾರಿಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿದೆ.

 

 

ಹಾಲಿ ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಖಾರದಪುಡಿ ಮಹೇಶ್‌ ಎಂಬಾತನಿಂದ ಅಕ್ರಮವಾಗಿ ಸಂಭಾವನೆ ಪಡೆದ ಆರೋಪಕ್ಕೆ ಗುರಿಯಾಗಿರುವ ಕೆಎಎಸ್‌ ಅಧಿಕಾರಿ ಮಂಜುನಾಥ ಆರ್‌ ಬಳ್ಳಾರಿ ಅವರು ಸಲ್ಲಿಸಿರುವ ಮೇಲ್ಮನವಿಯು ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳದಿದ್ದರೂ ಅವರನ್ನು ಗಣಿ, ಭೂ ವಿಜ್ಞಾನ ಇಲಾಖೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗೆ  ಸರ್ಕಾರವು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ಬಿ ಶಿವಸ್ವಾಮಿ ಅವರು ಸಿಎಂಗೆ ಜಂಟಿ ಕಾರ್ಯದರ್ಶಿಯಾಗಿದ್ದ ಪ್ರಕರಣವು ಇದೀಗ ಮುನ್ನೆಲೆಗೆ ಬಂದಿದೆ.

 

 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಉಪ ಕಾರ್ಯದರ್ಶಿ-1 ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಬಿ ಶಿವಸ್ವಾಮಿ ಅವರ ವಿರುದ್ಧ ಕರ್ತವ್ಯ ಲೋಪ ಎಸಗಿದ್ದರು. ಈ ಕುರಿತು ಸರ್ಕಾರದ ಮಟ್ಟದಲ್ಲಿ ಶಿಸ್ತುಕ್ರಮ ಜರುಗಿಸಬೇಕು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು 2020ರ ಜನವರಿ 1ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಪತ್ರವನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

ಆಯುಕ್ತರು ಬರೆದಿದ್ದ ಪತ್ರದಲ್ಲೇನಿದೆ?

 

ಬಿಡಿಎ ಎಂಪ್ಲಾಯೀಸ್‌ ವೆಲ್‌ಫೇರ್‍‌ ಅಸೋಸಿಯೇಷನ್‌ ಲಿಂಗಧೀರನಹಳ್ಳಿ ಗ್ರಾಮದಲ್ಲಿ ರಚಿಸಿದ್ದ ಬಡಾವಣೆಯಲ್ಲಿ ಸಾರ್ವಜನಿಕ ಉದ್ದೇಶಕ್ಕೆಂದು ಸಿ ಎ ನಿವೇಶನಗಳನ್ನು ಕಾಯ್ದಿರಿಸಿತ್ತು. ಸಾರ್ವಜನಿಕ ಉದ್ದೇಶಕ್ಕೆಂದು ಮೀಸಲಿಟ್ಟ ನಿವೇಶನ ಎಂದು ತಿಳಿದಿದ್ದರೂ ಸಹ ಲಿಂಗಧೀರನಹಳ್ಳಿ ಬಡಾವಣೆಯಲ್ಲಿ ರಚಿಸಿರುವ ಸಿ ಎ ನಿವೇಶನ ಸಂಖ್ಯೆ 1/ಎ ಹಂಚಿಕೆ ಬಗ್ಗೆ ಮೇಲಾಧಿಕಾರಿಗಳಿಗೆ ಕಡತ ಸಲ್ಲಿಸಿರುತ್ತಾರೆ.

 

ಹಕ್ಕು ಬಾಧ್ಯತಾ ಸಮಿತಿಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗಿದ್ದು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದಾಖಲಿಸಲು ಸೂಚಿಸಲಾಗಿರುತ್ತದೆ. ಈ ಕುರಿತು 2019ರ ಡಿಸೆಂಬರ್‍‌ 31ರಂದು ಶೇಷಾದ್ರಿಪುರಂ ಆರಕ್ಷಕ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿರುತ್ತದೆ.

 

 

ಈ ಹಿನ್ನೆಲೆಯಲ್ಲಿ ಬಿ ಶಿವಸ್ವಾಮಿ, ಕೆಎಎಸ್‌ (ಕಿರಿಯ ಶ್ರೇಣಿ) ಅವರು ಕರ್ತವ್ಯಲೋಪದಲ್ಲಿ ಭಾಗಿದಾರರಾಗಿದ್ದು ಅಧಿಕಾರಿಯವರ ಕೃತ್ಯದಿಂದ ಪ್ರಾಧಿಕಾರಕ್ಕೆ ಆರ್ಥಿಕ ನಷ್ಟ ಉಂಟಾಗಿರುತ್ತದೆ. ಈ ಅಧಿಕಾರಿಯವರ ವಿರುದ್ಧ ಸರ್ಕಾರದ ಮಟ್ಟದಲ್ಲಿ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಬಿಡಿಎ ಆಯುಕ್ತರು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಬರೆದಿದ್ದ ಪತ್ರದಲ್ಲಿ ಕೋರಿದ್ದರು.

 

ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಅರೋಪದಡಿಯಲ್ಲಿ ಎಸಿಬಿ ದಾಳಿಗೆ ಒಳಗಾಗಿರುವ  ಅಧಿಕಾರಿಗಳನ್ನೇ  ಉಪ ಮುಖ್ಯಮಂತ್ರಿ  ಡಿ ಕೆ ಶಿವಕುಮಾರ್‌ ಅವರಿಗೆ ತಾಂತ್ರಿಕ ಸಲಹೆಗಾರರನ್ನಾಗಿ ನೇಮಿಸಲಾಗಿತ್ತು.

ಆದಾಯಕ್ಕಿಂತ ಶೇ. 207.11ರಷ್ಟು ಹೆಚ್ಚು ಆಸ್ತಿ ಹೊಂದಿರುವ ಆರೋಪಿತ ಅಧಿಕಾರಿ, ಡಿಕೆಶಿಗೆ ತಾಂತ್ರಿಕ ಸಲಹೆಗಾರ

 

 

ಅದೇ ರೀತಿ ಮತ್ತೊಬ್ಬ ಕಳಂಕಿತ ಅಧಿಕಾರಿ   ಬಿ ಎಸ್‌ ಪ್ರಹ್ಲಾದ್‌ ಎಂಬುವರನ್ನು ಬಿಬಿಎಂಪಿಯ ಮಹತ್ತರ ಹುದ್ದೆಗೆ ನೇಮಿಸಲಾಗಿತ್ತು.

 

ಕಾಸಿಗಾಗಿ ಪೋಸ್ಟಿಂಗ್‌ ಆರೋಪ ಬೆನ್ನಲ್ಲೇ ಎಸಿಬಿ ದಾಳಿಗೊಳಗಾಗಿದ್ದ ಮುಖ್ಯಇಂಜಿನಿಯರ್‍‌ಗೆ ಹೊಸ ಹುದ್ದೆ

ಅಲ್ಲದೇ  ಗಣಿ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ ಅವರಿಗೆ ಉಪ ಕಾರ್ಯದರ್ಶಿ ಹುದ್ದೆಯಲ್ಲಿರುವ  ಮಂಜುನಾಥ ಆರ್‌ ಬಳ್ಳಾರಿ ಅವರನ್ನು ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.

 

ಅಕ್ರಮ ಗಣಿಗಾರಿಕೆಯಲ್ಲಿ ಅಕ್ರಮ ಸಂಭಾವನೆ ಪಡೆದ ಆರೋಪಿ ಅಧಿಕಾರಿ, ಈಗ ಗಣಿ ಸಚಿವರ ಆಪ್ತ ಕಾರ್ಯದರ್ಶಿ

 

ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ  ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದರು. ಲೋಕಾಯುಕ್ತ ವರದಿಯನ್ನೇ ಪ್ರಬಲ ಅಸ್ತ್ರವನ್ನಾಗಿಸಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿಯೇ ಅಕ್ರಮ ಗಣಿಗಾರಿಕೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಪ್ರತ್ಯೇಕವಾಗಿ ವಿಶೇಷ ತನಿಖಾ ತಂಡವನ್ನೂ ರಚಿಸಲಾಗಿತ್ತು.

 

ಆದರೀಗ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದ ಖಾರದಪುಡಿ ಮಹೇಶ್‌ ಎಂಬಾತನಿಂದ ಅಕ್ರಮ ಸಂಭಾವನೆ ಪಡೆದ ಗುರುತರ ಆರೋಪಕ್ಕೆ ಗುರಿಯಾಗಿ ವಿಚಾರಣೆ ಎದುರಿಸುತ್ತಿರುವ ಮಂಜುನಾಥ್‌ ಆರ್‍‌ ಬಳ್ಳಾರಿ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್‌ ಎಸ್‌ ಮಲ್ಲಿಕಾರ್ಜುನ್‌ ಅವರಿಗೆ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿರುವುದು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗಲಿದೆ ಎಂಬ ಮಾತುಗಳೂ ಕೇಳಿ ಬಂದಿವೆ.

the fil favicon

SUPPORT THE FILE

Latest News

Related Posts