ಬೆಂಗಳೂರು; ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಮೇರೆಗೆ ಭ್ರಷ್ಟಾಚಾರ ನಿಗ್ರಹ ದಳದ ದಾಳಿಗೆ ಒಳಗಾಗಿದ್ದ ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿ ಎಸ್ ಪ್ರಹ್ಲಾದ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ನಗರಾಭಿವೃದ್ಧಿ ಇಲಾಖೆಯು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.
ಅಧಿಕಾರಿಗಳ ವರ್ಗಾವಣೆ ಮತ್ತು ಆಯಕಟ್ಟಿನ ಹುದ್ದೆಗಳಿಗೆ ನಿಯೋಜನೆ ಮಾಡುವುದರಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಾಸಿಗಾಗಿ ಪೋಸ್ಟಿಂಗ್ ನಡೆಯುತ್ತಿದೆ ಮತ್ತು ಮುಖ್ಯಮಂತ್ರಿ ಹೆಸರಿನಲ್ಲಿ ಹೊರಡುವ ಟಿಪ್ಪಣಿಗಳು ಬಿಕರಿಯಾಗುತ್ತಿವೆ ಎಂದು ಜೆಡಿಎಸ್ ಮತ್ತು ಬಿಜೆಪಿ ಪಕ್ಷವು ಮಾಡಿರುವ ಆರೋಪ ಮಾಡಿರುವ ಬೆನ್ನಲ್ಲೇ ಬಿ ಎಸ್ ಪ್ರಹ್ಲಾದ್ ಅವರನ್ನು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಅಭಿಯಂತರ ಹುದ್ದೆಗೆ ನಿಯೋಜಿಸಿರುವುದು ಮುನ್ನೆಲೆಗೆ ಬಂದಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪಕ್ಕೆ ಗುರಿಯಾಗಿರುವ ಬಿ ಎಸ್ ಪ್ರಹ್ಲಾದ್ ಅವರ ವಿರುದ್ಧದ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ದಳವು ತನಿಖೆ ನಡೆಸುತ್ತಿತ್ತು. ಈ ಪ್ರಕರಣವು ಇನ್ನೂ ವಿಚಾರಣೆಗೆ ಬಾಕಿ ಇದೆ. ಆದರೂ ಅವರನ್ನು ಬಿಬಿಎಂಪಿಯ ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಇಂಜಿನಿಯರ್ ಹುದ್ದೆಗೆ ನಿಯೋಜಿಸಿ ಆದೇಶ ಹೊರಡಿಸಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಸಿ ಎಂ ಟಿಪ್ಪಣಿ
ಬಿ ಎಸ್ ಪ್ರಹ್ಲಾದ್ ಪ್ರಧಾನ ಅಭಿಯಂತರರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರನ್ನು ತಾತ್ಕಾಲಿಕವಾಗಿ ಮತ್ತು ಮುಂದಿನ ಆದೇಶದವರೆಗೆ ಬೃಹತ್ ನೀರುಗಾಲುವೆ ಶಾಖೆಯ ನೇರ ಉಸ್ತುವಾರಿಯಲ್ಲಿ ನಿಯೋಜಿಸಿ ಆದೇಶಿಸಿಲು ಸೂಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಜೂನ್ 28ರಂದು ಟಿಪ್ಪಣಿ ಹೊರಡಿಸಿದ್ದಾರೆ.
ಟಿಪ್ಪಣಿ ಹೊರಡಿಸಿದ ದಿನದಂದೇ ಅವರನ್ನು ಬೃಹತ್ ನೀರುಗಾಲುವೆ ಶಾಖೆಯ ಮುಖ್ಯ ಇಂಜಿನಿಯರ್ ಹುದ್ದೆಗೆ ನಿಯೋಜಿಸಿರುವ ನಗರಾಭಿವೃದ್ಧಿ ಇಲಾಖೆಯು ಆದೇಶವನ್ನೂ ಹೊರಡಿಸಿದೆ.
ಬಿ ಎಸ್ ಪ್ರಹ್ಲಾದ್ ಅವರ ಮೇಲೆ ಎಸಿಬಿ ದಾಳಿ ನಡೆಸಿತ್ತು ಮತ್ತು ಈ ಪ್ರಕರಣವು ವಿಚಾರಣೆಗೆ ಬಾಕಿ ಇದೆ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022ರ ಮಾರ್ಚ್ 10ರಂದೇ ಕರ್ನಾಟಕ ವಿಧಾನಪರಿಷತ್‌ಗೆ ಲಿಖಿತ ಉತ್ತರ ಮಂಡಿಸಿದ್ದರು. ಈ ಪ್ರಶ್ನೆಯನ್ನು ವಿಧಾನಪರಿಷತ್ ಸದಸ್ಯ ಡಾಕೆ ಗೋವಿಂದರಾಜ್ ಅವರು ಕೇಳಿದ್ದರು. ವಿಶೇಷವೆಂದರೆ ಗೋವಿಂದರಾಜ್ ಅವರೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಿ.ಎಸ್.ಪ್ರಹ್ಲಾದ್ ಅವರು ಲೋಕಾಯುಕ್ತ ಸೇರಿದಂತೆ ಹಲವು ಸರಕಾರಿ ತನಿಖಾ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಹಗರಣದ ವಿಚಾರಣೆ ಎದುರಿಸುತ್ತಿದ್ದಾರೆ. ಇಂತಹ ಭ್ರಷ್ಟ ಅಧಿಕಾರಿಯನ್ನು ಆಯುಕ್ತರು ಮುಖ್ಯ ಇಂಜಿನಿಯರ್ ಹುದ್ದೆಗೆ ನೇಮಿಸಿದ್ದಾರೆ. ಅಲ್ಲದೇ ಅನಿಲ್ ಕುಮಾರ್ ಮತ್ತು ಪ್ರಹ್ಲಾದ್ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂ. ಕೊಡು-ಕೊಳ್ಳುವಿಕೆ ನಡೆದಿದೆ ಎಂದು ಸಾಮಾಜಿಕ ಹೋರಾಟಗಾರ ಗಣೇಶ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ಎಸಿಬಿಗೆ ದೂರನ್ನೂ ದಾಖಲಿಸಿದ್ದರು ಎಂದು ತಿಳಿದು ಬಂದಿದೆ.
ಅಮೇರಿಕನ್ ಟೆಕ್ನಾಲಜಿ ಮತ್ತು ಸೊಲ್ಯೂಷನ್ಸ್ ಲಿಮಿಟೆಡ್‌ನ ಎಂಡಿ ಮತ್ತು ಕಂಪನಿಯ ಇನ್ನೊಬ್ಬ ನಿರ್ದೇಶಕರ ಪತಿಯನ್ನು ಹೊಡೆದಿದ್ದ ಪ್ರಕರಣದಲ್ಲಿಯೂ ಕರ್ನಾಟಕ ಹೈಕೋರ್ಟ್ ಕೂಡ ಬಿ ಎಸ್ ಪ್ರಹ್ಲಾದ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇಲ್ಲಿಂದಲೇ ನೇರವಾಗಿ ಜೈಲಿಗೆ ಕಳಿಸಲೇ ಎಂದೂ ಎಚ್ಚರಿಕೆಯನ್ನೂ ನೀಡಿತ್ತು.
‘ದಿ ಫೈಲ್’ ವರದಿ ಉಲ್ಲೇಖ; ‘ಕಾಸಿಗಾಗಿ ಪೋಸ್ಟಿಂಗ್ʼ ದಂಧೆ, 4 ಶಿಫಾರಸುಗಳ ಹಿಂದಿರುವ ಆ ʼಅತೀಂದ್ರʼ ಶಕ್ತಿ ಯಾವುದು?
ಮುಖ್ಯ ಇಂಜಿನಿಯರ್ (ರಸ್ತೆ ಮತ್ತು ಮೂಲಸೌಕರ್ಯ) ಬಿ.ಎಸ್.ಪ್ರಹ್ಲಾದ್ ಅವರು ಬಿಬಿಎಂಪಿಯಲ್ಲಿ ನಡೆದಿದ್ದ ಸಭೆಯೊಂದರಲ್ಲಿ ನಗರದ ಮೂಲದ ಅಮೇರಿಕನ್ ಟೆಕ್ನಾಲಜಿ ಮತ್ತು ಸೊಲ್ಯೂಷನ್ಸ್ ಲಿಮಿಟೆಡ್‌ನ ಎಂಡಿ ಮತ್ತು ಕಂಪನಿಯ ಇನ್ನೊಬ್ಬ ನಿರ್ದೇಶಕರ ಪತಿಯನ್ನು ಹೊಡೆದು ತಳ್ಳಿದ್ದರು. ಪ್ರಧಾನ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್ ಅವರು ಎಆರ್‌ಟಿಎಸ್ ನಿರ್ದೇಶಕರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು ಎಂಬ ಆರೋಪದ ಕುರಿತು ಮುಖ್ಯ ಆಯುಕ್ತರಿಗೆ ನೀಡಿದ್ದ ದೂರಿನ ಮಾಹಿತಿಯನ್ನು ಎಆರ್‌ಟಿಸಿ ಪರ ವಕೀಲರು ಪೀಠಕ್ಕೆ ಸಲ್ಲಿಸಿದ್ದರು.
ಇದನ್ನು ಪರಿಶೀಲಿಸಿದ್ದ ನ್ಯಾಯಾಲಯವು ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸಬಾರದು. ಎಆರ್‌ಟಿಸಿ ನಡೆಸುವ ಕಾಮಗಾರಿಯನ್ನು ಪ್ರಹ್ಲಾದ್ ಮೇಲುಸ್ತುವಾರಿ ಮಾಡುವಂತಿಲ್ಲ. ಮುಖ್ಯ ಆಯುಕ್ತರು ಬೇರೊಬ್ಬ ಮುಖ್ಯ ಎಂಜಿನಿಯರ್‌ಗೆ ಈ ಜವಾಬ್ದಾರಿ ವಹಿಸಬೇಕು ಎಂದು ಪೀಠವು ನಿರ್ದೇಶಿಸಿತ್ತು.
ಅದರಂತೆ ಬಿಬಿಎಂಪಿ ವಕೀಲ ಶ್ರೀನಿಧಿ ಅವರು “ಈಗಾಗಲೇ ಪ್ರಹ್ಲಾದ್ ಅವರನ್ನು ಬದಲಾಯಿಸಿ ಬೇರೊಬ್ಬ ಪ್ರಧಾನ ಎಂಜಿನಿಯರ್ ನಿಯೋಜಿಸಿ ಮುಖ್ಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪ್ರಹ್ಲಾದ್ ವಿರುದ್ಧದ ದೂರಿನ ಬಗ್ಗೆ ಹಿರಿಯ ಐಎಎಸ್ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಗಿದೆ” ಎಂದು ಪೀಠಕ್ಕೆ ತಿಳಿಸಿದ್ದನ್ನು ಸ್ಮರಿಸಬಹುದು.