ಮರಣ ಪರಿಹಾರ, ನಿವೃತ್ತಿ ಸಹಾಯಧನ; ಕಾನೂನು ಇಲಾಖೆ ಪ್ರಸ್ತಾವ ತಿರಸ್ಕೃತ, ವಕೀಲರುಗಳಿಗೆ ಕೈಕೊಟ್ಟ ಸರ್ಕಾರ

ಬೆಂಗಳೂರು; ವಕೀಲರುಗಳಿಗೆ ಮರಣ ಪರಿಹಾರ, ನಿವೃತ್ತಿ ಸಹಾಯ ಧನ ಪಾವತಿ, ವಕೀಲರ ಭವನಗಳ  ಮೂಲಭೂತ ಸೌಕರ್ಯಗಳಿಗೆ ಸಹಾಯಾನುದಾನ ಒದಗಿಸಲು ಆರ್ಥಿಕ ಇಲಾಖೆಯು ಅಸಮ್ಮತಿ ತೋರಿರುವುದು ಇದೀಗ ಬಹಿರಂಗವಾಗಿದೆ.

 

‘ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲು ನಾವು ಬದ್ದವಾಗಿದ್ದೇವೆ,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದ ಕೆಲ ದಿನಗಳಲ್ಲೇ ಆರ್ಥಿಕ ಇಲಾಖೆಯು ವಕೀಲರುಗಳಿಗೆ ವಿವಿಧ ಸಹಾಯಾನುದಾನ ನೀಡಲು ಅಸಮ್ಮತಿ ತೋರಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಅಲ್ಲದೇ ಇದೇ ಜುಲೈನಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದ ಹೊತ್ತಿನಲ್ಲಿಯೇ ಆರ್ಥಿಕ ಇಲಾಖೆಯು ಅಸಮ್ಮತಿ ವ್ಯಕ್ತಪಡಿಸಿರುವುದು ವಕೀಲರಲ್ಲಿ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ. ಹಾಗೆಯೇ ಕಾನೂನು, ಸಂಸದೀಯ ವ್ಯವಹಾರಗಳ ಸಚಿವ ಹೆಚ್‌ ಕೆ ಪಾಟೀಲ್ ಅವರಿಗೂ ಆರ್ಥಿಕ ಇಲಾಖೆಯು ನೀಡಿರುವ ಅಭಿಪ್ರಾಯವು ಮತ್ತಷ್ಟು ಮುಜುಗರಕ್ಕೀಡು ಮಾಡುವ ಸಾಧ್ಯತೆಗಳಿವೆ.

 

ವಕೀಲರುಗಳಿಗೆ ಮರಣ ಪರಿಹಾರ, ನಿವೃತ್ತಿ ಸಹಾಯಧನ ಪಾವತಿ ಹಾಗೂ ವಕೀಲರುಗಳ ಭವನಗಳಿಗೆ ಮೂಲಭೂತ ಸೌಕರ್ಯಗಳಿಗೆ ಸಹಾಯಾನುದಾನ ಒದಗಿಸಬೇಕು ಎಂದು ಕಾನೂನು ಇಲಾಖೆಯು ಆರ್ಥಿಕ ಇಲಾಖೆಗೆ (No LAW 125 LAD 2022, LAW 114 LAD 2023, LAW 116 2023) ಪ್ರಸ್ತಾವನೆ ಸಲ್ಲಿಸಿತ್ತು.

 

ಕಾನೂನು ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಿಲ್ಲವೆಂದು ಆರ್ಥಿಕ ಇಲಾಖೆಯು 2023ರ ಜೂನ್‌ 22ರಂದು ತನ್ನ ನಿರ್ಧಾರವನ್ನು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ (ಆರ್ಥಿಕ ಇಲಾಖೆ (ವೆಚ್ಚ-2 ಮತ್ತು 10) (FD 44/EX10/2023) ತಿಳಿಸಿದೆ ಎಂದು ಗೊತ್ತಾಗಿದೆ.

 

‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಗಣಿಸಲು ಅವಕಾಶವಿಲ್ಲವೆಂದು ಆಡಳಿತ ಇಲಾಖೆಗೆ ತಿಳಿಸಿದೆ,’ ಎಂದು ಒಂದು ಸಾಲಿನಲ್ಲಿ ತನ್ನ ನಿರ್ಧಾರವನ್ನು ಪ್ರಕಟಿಸಿರುವುದು ತಿಳಿದು ಬಂದಿದೆ.

 

ವಕೀಲರಿಗೆ ಪಂಚಣಿ, ವಿಮಾ ಸೌಲಭ್ಯ, ಕುಟುಂಬ ಪಿಂಚಣಿ, ನೂತನ ವಕೀಲರಿಗೆ ಮಾಸಿಕ ಪ್ರೋತ್ಸಾಹ ಧನ, ಅಕಾಲಿಕ ಮರಣ ಹೊಂದುವ ವಕೀಲರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಒದಗಿಸುವುದು, ಸರಕಾರದಿಂದ ವಕೀಲರಿಗೆ ನಿವೇಶನ ಒದಗಿಸಬೇಕು ಎಂದು ಸೇರಿದಂತೆ ಹಲವು ಬೇಡಿಕೆಗಳನ್ನು ವಕೀಲರ ಸಂಘಟನೆಗಳು ಇಟ್ಟಿವೆ.

 

ಇದೇ ಬೇಡಿಕೆಗಳನ್ನು ಪ್ರಸ್ತಾಪಿಸಿದ್ದ ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಅವರು ವಕೀಲರ ಹಿತದೃಷ್ಟಿಯಿಂದ ಅವುಗಳನ್ನು ಈಡೇರಿಸುವಂತೆ ಕೋರಿ ಕಳೆದ ವರ್ಷವೇ ಪ್ರಧಾನಿಗೆ ಪತ್ರ ಬರೆದಿದ್ದರು. ಆಗ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಪ್ರಧಾನಿ, ವರ್ಷ ಕಳೆದರೂ, ಈ ನಿಟ್ಟಿನಲ್ಲಿ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

 

ನ್ಯಾಯಮೂರ್ತಿ ಬಿ.ವೀರಪ್ಪ‌ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ವಕೀಲ ಸಮೂಹ ಈ ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಈ ಪ್ರತಿಭಟನೆಗೆ ನಾನೂ ಬೆಂಬಲ ಸೂಚಿಸಿ ವಿಧಾನಸಭೆಯಲ್ಲಿ ವಕೀಲ ಸಮೂಹದ ಪರವಾಗಿ ಧ್ವನಿ ಎತ್ತಿದ್ದೆ. ಈಗ ನಾವೇ ಅಧಿಕಾರಕ್ಕೆ ಬಂದಿದ್ದೇವೆ. ಈಗ ಈ ಕಾಯ್ದೆಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬದ್ದವಾಗಿದ್ದೇವೆ ಎಂದು ಆಶ್ವಾಸನೆ ನೀಡಿದ್ದರು.

 

45 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೃತ ವಕೀಲರ ಕುಟುಂಬಗಳಿಗೆ ಈ ಹಿಂದೆ ನೀಡಲಾಗಿದ್ದ 2.5 ಲಕ್ಷ ರೂಪಾಯಿಗಳ ಬದಲಾಗಿ 8 ಲಕ್ಷ ರೂಪಾಯಿ ಪರಿಹಾರ ಸಿಗಲಿದೆ. ರಾಜಸ್ಥಾನದ ಬಾರ್ ಕೌನ್ಸಿಲ್ ಶಿಫಾರಸ್ಸು ಮಾಡಿತ್ತು.

 

45 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರು ಸಾವನ್ನಪ್ಪಿದರೆ, ಅವರ ಕುಟುಂಬಕ್ಕೆ ಈ ಹಿಂದೆ ನೀಡಲಾಗಿದ್ದ 2.5 ಲಕ್ಷ ರೂ.ಗಿಂತ ಎಂಟು ಲಕ್ಷ ರೂ.ಗಳನ್ನು ನೀಡಲಾಗುವುದು ಎಂದು ಅಲ್ಲಿನ ಬಾರ್‍‌ ಕೌನ್ಸಿಲ್‌ ಪ್ರಸ್ತಾಪಿಸಿತ್ತು. ಗಂಭೀರ ಕಾಯಿಲೆಯ ಸಂದರ್ಭದಲ್ಲಿ ಈಗಿರುವ ಒಂದು ಲಕ್ಷ ರೂಪಾಯಿಗಿಂತ ಮೂರು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲು ನಿರ್ಧರಿಸಿತ್ತು.

 

45 ವರ್ಷ ಮೇಲ್ಪಟ್ಟ ವಕೀಲರಿಗೆ ಸಣ್ಣಪುಟ್ಟ ಕಾಯಿಲೆಗಳಿಗೆ 40 ಸಾವಿರ, ದೊಡ್ಡ ಕಾಯಿಲೆಗೆ 50 ಸಾವಿರ ಹಾಗೂ ಮರಣ ಹೊಂದಿದಲ್ಲಿ 1.5 ಲಕ್ಷ ರೂಪಾಯಿ ಧನಸಹಾಯ ನೀಡಲು ತೀರ್ಮಾನಿಸಿದ್ದನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts