ಅಬಕಾರಿ ಭದ್ರತಾ ಚೀಟಿ ಮುದ್ರಣ ಟೆಂಡರ್‌ನಲ್ಲಿ ಅಕ್ರಮ; ಹೆಚ್ಚಿನ ದರ ನಮೂದು, 51.26 ಕೋಟಿ ನಷ್ಟ

ಬೆಂಗಳೂರು; ಅಬಕಾರಿ ಭದ್ರತಾ ಚೀಟಿಗಳ ಮುದ್ರಣ ವೆಚ್ಚವು ಅಂದಾಜು ವೆಚ್ಚಕ್ಕಿಂತ ಹೆಚ್ಚಿನ ದರವನ್ನು ನಮೂದಿಸಿದ್ದ ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ಗೆ ಟೆಂಡರ್‌ ನೀಡಿ ಸರ್ಕಾರದ ಬೊಕ್ಕಸಕ್ಕೆ 51.26 ಕೋಟಿ ರು. ನಷ್ಟವಾಗಿರುವುದನ್ನು  ‘ದಿ ಫೈಲ್‌’ ಇದೀಗ ಹೊರಗೆಡವುತ್ತಿದೆ.

 

ಕಪ್ಪುಪಟ್ಟಿ ಮತ್ತು ಕ್ರಿಮಿನಲ್‌ ಹಿನ್ನೆಲೆ ಹೊಂದಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ಗೆ ಸಾರಿಗೆ ಇಲಾಖೆಯಲ್ಲಿಯೂ ಗುತ್ತಿಗೆ ನೀಡಿರುವ ಪ್ರಕರಣದ ಕುರಿತಂತೆ ತನಿಖೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಅಬಕಾರಿ ಭದ್ರತಾ ಚೀಟಿಗಳ ಮುದ್ರಣದ ಟೆಂಡರ್‌ನ್ನು ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ಗೆ ನೀಡಿರುವುದರ ಹಿಂದೆಯೂ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪವನ್ನು ಪುಷ್ಠೀಕರಿಸಲು ಪೂರಕ ಸಾಕ್ಷ್ಯಗಳು ‘ದಿ ಫೈಲ್‌’ಗೆ (ಕಡತ ಸಂಖ್ಯೆ ಇಸಿಡಿ 71 ಲೇಬಲ್‌/2001-02 (ಭಾಗ) ಲಭ್ಯವಾಗಿವೆ.

 

ವಿಧಾನಸಭೆ ಚುನಾವಣೆ ಅಧಿಸೂಚನೆ ಹೊರಬಿದ್ದ ದಿನವೇ ತರಾತುರಿಯಲ್ಲಿಯೇ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿತ್ತಲ್ಲದೇ ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರದ ಅಧಿಕಾರವಿಲ್ಲದ ಜಂಟಿ ಆಯುಕ್ತರೊಬ್ಬರು ಅದೇ ದಿನದಂದು ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ನೊಂದಿಗಿನ ಒಡಂಬಡಿಕೆಗೆ ಸಹಿ ಮಾಡಿದ್ದರು ಎಂದು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಅಬಕಾರಿ ಭದ್ರತಾ ಚೀಟಿಗಳ ವೆಚ್ಚವನ್ನು ಮದ್ಯ, ವೈನ್‌ ತಯಾರಕರ ಬದಲಿಗೆ ಗ್ರಾಹಕರಿಗೆ ವರ್ಗಾಯಿಸಲು ಹೊರಡಿಸಿದ್ದ ಆದೇಶದ ಕುರಿತು ‘ದಿ ಫೈಲ್‌’ ವರದಿ ಪ್ರಕಟಿಸುತ್ತಿದ್ದಂತೆ ಆ ಆದೇಶವನ್ನೇ ಹಿಂಪಡೆದುಕೊಂಡಿರುವ ಕಾಂಗ್ರೆಸ್‌ ಸರ್ಕಾರವು ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ಗೆ ನೀಡಿರುವ ಟೆಂಡರ್‌ನಲ್ಲಿಯೂ ಸಾಕಷ್ಟು ಅಕ್ರಮಗಳು, ಉಲ್ಲಂಘನೆಗಳು ನಡೆದಿದ್ದರೂ ಇದುವರೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪುರ ಅವರು ಟೆಂಡರ್‌  ರದ್ದುಗೊಳಿಸಲು ಆದೇಶಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

‘ದಿ ಫೈಲ್‌’ ವರದಿ ಪರಿಣಾಮ; 1,000 ಕೋಟಿ ಅಕ್ರಮಕ್ಕೆ ನಾಂದಿ ಹಾಡಿದ್ದ ಆದೇಶ ಹಿಂಪಡೆದ ಸರ್ಕಾರ

 

ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ಗೆ ಭದ್ರತಾ ಚೀಟಿಗಳ ಮುದ್ರಣಕ್ಕೆ ನೀಡಿರುವ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾಗಿರುವ ಲೋಪ, ಉಲ್ಲಂಘನೆಗಳನ್ನು ‘ದಿ ಫೈಲ್‌’ ಈಗ ಎಳೆಎಳೆಯಾಗಿ ಬಿಚ್ಚಿಡುತ್ತಿದೆ.

 

ಅವಶ್ಯವಿರುವ ಭದ್ರತಾ ಚೀಟಿಗಳನ್ನು ಸರಬರಾಜು ಮಾಡಲು ಅಬಕಾರಿ ಇಲಾಖೆಯು ಟೆಂಡರ್‌ ಆಹ್ವಾನಿಸಿತ್ತು. ಈ ಟೆಂಡರ್‌ನ ಮೌಲ್ಯವು 50.00 ಕೋಟಿಗಳನ್ನು ಮೀರಿದ್ದರಿಂದಾಗಿ ರಾಜ್ಯ ಸರ್ಕಾರದ ನಿಯಮದಂತೆ ಟೆಂಡರ್‌ ಆಹ್ವಾನಿಸುವ ಪೂರ್ವದಲ್ಲಿ ರಾಜ್ಯ ಪೂರ್ವ ಟೆಂಡರ್‌ ಪರಿಶೀಲನಾ ಸಮಿತಿ ಮುಂದೆ ಮಂಡಿಸಲಾಗಿತ್ತು. ಸಾಕಷ್ಟು ಅಕ್ರಮಗಳು ನಡೆದಿರುವ ಹಿನ್ನೆಲೆಯಲ್ಲಿ ಈ ಟೆಂಡರ್‍‌ನ್ನು ರದ್ದುಗೊಳಿಸಿ ಮರು ಟೆಂಡರ್‍‌ ಕರೆಯಬೇಕು ಎಂದು ಸಚಿವ ಆರ್‍‌ ಬಿ ತಿಮ್ಮಾಪೂರ್ ಅವರು ಮುಖ್ಯಮಂತ್ರಿಗೆ ಕಡತ ಸಲ್ಲಿಸಿದ್ದಾರೆ ಎಂದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

ಅದರಂತೆ ಅಬಕಾರಿ ಇಲಾಖೆಯು ಸಲ್ಲಿಸಿದ್ದ ಟೆಂಡರ್‌ ದಾಖಲೆಗಳನ್ನು ಈ ಸಮಿತಿಯು ಪರಿಶೀಲಿಸಿತ್ತು. ಅಬಕಾರಿ ಇಲಾಖೆಯು ಈ ಹಿಂದೆ ಎಂಸಿ ಅಂಡ್‌ ಎ ನಿಂದ ಪ್ರತಿ ಅಬಕಾರಿ ಚೀಟಿಗೆ 30.24 ಪೈಸೆಯಂತೆ ಮೂರು ವರ್ಷಗಳ ಅವಧಿಗೆ ಪ್ರತಿ ವರ್ಷ 40.00 ಕೋಟಿ ಸಂಖ್ಯೆ ಅಬಕಾರಿ ಭದ್ರತಾ ಚೀಟಿಗಳ ಸಂಗ್ರಹಣೆಗಾಗಿ ಒಟ್ಟು 450.00 ಕೋಟಿಗಳ ಅಂದಾಜು ವೆಚ್ಚವನ್ನು ಟೆಂಡರ್‌ ದಾಖಲೆಯಲ್ಲಿ ನಮೂದಿಸಲಾಗಿತ್ತು. ಆದರೆ ಈ ದರವನ್ನು ಪರಿಗಣಿಸಿದಲ್ಲಿ 435.00 ಕೋಟಿಗಳಷ್ಟು ಆಗುತ್ತದೆ. ಅಬಕಾರಿ ಇಲಾಖೆಯು ನಿಗದಿಪಡಿಸಿರುವ 30.24 ಪೈಸೆ ದರವು ಎಂಸಿಅಂಡ್‌ಎಯು ವಿಧಿಸುವ ಸೇವಾ ಶುಲ್ಕವಾದ 2.55 ಪೈಸೆಯನ್ನು ಒಳಗೊಂಡಿತ್ತು.

 

ಅಬಕಾರಿ ಇಲಾಖೆಯು ಇ ಟೆಂಡರ್‌ ಮುಖಾಂತರ ನೇರವಾಗಿ ಸರಬರಾಜುದಾರರಿಂದ ಭದ್ರತಾ ಚೀಟಿಗಳನ್ನು ಖರೀದಿಸಲು ಉದ್ಧೇಶಿಸಿತ್ತು. ಸೇವಾ ಶುಲ್ಕವನ್ನು ಹೊರತುಪಡಿಸಿ ಮೂಲ ಬೆಲೆಯಾದ 27.69 ಪೈಸೆಯನ್ನು ಅಂದಾಜು ವೆಚ್ಚವಾಗಿ ಪರಿಗಣಿಸಬೇಕಿತ್ತು. ಈ ರೀತಿ ಪರಿಗಣಿಸಿದಲ್ಲಿ ಮೂರು ವರ್ಷಗಳ ಅವಧಿಗೆ ಅಂದಾಜು ವೆಚ್ಚವು 398.24 ಕೋಟಿಗಳಷ್ಟಾಗುತ್ತದೆ ಎಂದು ತಿಳಿದು ಬಂದಿದೆ.

 

ಟೆಂಡರ್‌ ದಾಖಲೆಯಲ್ಲಿ ನಮೂದಿಸಲಾಗಿರುವ 450 ಕೋಟಿಗಳು ಪರಿಗಣಿಸಬೇಕಾದ ಅಂದಾಜು ವೆಚ್ಚಕ್ಕಿಂತ ಒಟ್ಟು ಸುಮಾರು 51.26 ಕೋಟಿಗಳಷ್ಟು ಹೆಚ್ಚಾಗಿತ್ತು. ಆದ್ದರಿಂದ 398.74 ಕೋಟಿಯನ್ನು ಅಂದಾಜು ವೆಚ್ಚವಾಗಿ ಪರಿಗಣಿಸಿ ಟೆಂಡರ್‌ ಕರೆಯುವಂತೆ ಟೆಂಡರ್‌ ಪರಿಶೀಲನಾ ಸಮಿತಿಯು ಸೂಚಿಸಿತ್ತು. ಹಾಗೂ ಸಮಿತಿಯು ಸೂಚಿಸಿದ್ದ ನ್ಯೂನತೆಗಳನ್ನು ಸರಿಪಡಿಸಿ ಸಮಿತಿಯ ಗಮನಕ್ಕೆ ತಂದು ಟೆಂಡರ್‌ ಪ್ರಚುರಪಡಿಸಬೇಕು ಎಂದು 2022ರ ಅಕ್ಟೋಬರ್‌ 6ರಂದೇ ಪತ್ರದಲ್ಲಿ ಅಬಕಾರಿ ಆಯುಕ್ತರಿಗೆ ಸೂಚಿಸಿತ್ತು ಎಂದು ಗೊತ್ತಾಗಿದೆ.

 

ಆದರೆ ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರವು ಟೆಂಡರ್ ಪರಿಶೀಲನಾ ಸಮಿತಿಯು ಸೂಚಿಸಿದ್ದ ನ್ಯೂನತೆಗಳನ್ನು ಸರಿಪಡಿಸಿ ಸಮಿತಿಯ ಗಮನಕ್ಕೆ ತಂದು ಟೆಂಡರ್ ಪ್ರಚುರಪಡಿಸಿರಲಿಲ್ಲ. ಬದಲಿಗೆ 450 ಕೋಟಿ.ಗಳನ್ನು ಅಂದಾಜು ವೆಚ್ಚವಾಗಿ ಪರಿಗಣಿಸಿ ಟೆಂಡರ್‌ ಪ್ರಚುರಪಡಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದ ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರವು ಮಣಿಪಾಲ್‌ ಟೆಕ್ನಾಲಜೀಸ್‌ ಲಿಮಿಟೆಡ್‌ ಸಂಸ್ಥೆಗೆ ಅಬಕಾರಿ ಭದ್ರತಾ ಚೀಟಿ ಸರಬರಾಜು ಮಾಡಲು 450 ಕೋಟಿ ರು. ಗಳಿಗೇ ಕಾರ್ಯಾದೇಶ ನೀಡಿತ್ತು. ಇದರಿಂದ ರಾಜ್ಯ ಸರ್ಕಾರಕ್ಕೆ 51.26 ಕೋಟಿಗಳಷ್ಟು ನಷ್ಟ ಉಂಟಾಗಿದೆ ಎಂದು ಲಭ್ಯವಿರುವ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಸರ್ಕಾರದ ಸುತ್ತೋಲೆ (ಸಂಖ್ಯೆ ಆಇ 576 ವೆಚ್ಚ 12-2018 ದಿನಾಂಕ 22-05-2018ರ) ಅನ್ವಯ ‘ಯಾವುದೇ ಟೆಂಡರ್‌ನಲ್ಲಿ ಏಕ ಮಾತ್ರ ಬಿಡ್‌ದಾರರು ಭಾಗವಹಿಸಿದಲ್ಲಿ ಅನಿವಾರ್ಯ ಕಾರಣಗಳಿಂದ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಏಕ ಮಾತ್ರ ಬಿಡ್‌ದಾರ ಸೂಚಿಸಿರುವ ದರವು ಪ್ರತಿ ಯುನಿಟ್‌ನ ನಿಗದಿತ ಅಂದಾಜು ವೆಚ್ಚಕ್ಕಿಂತ ಹೆಚ್ಚಿದ್ದಲ್ಲಿ ಸದರಿ ಬಿಡ್‌ದಾರರನೊಂದಿಗೆ ಇ-ಪೋರ್ಟಲ್‌ ಮುಖಾಂತರವೇ ದರ ಸಂಧಾನಕ್ಕೆ ಆಹ್ವಾನಿಸಿ ಸದರಿ ದರ ಸಂಧಾನದಲ್ಲಿ ಬಿಡ್‌ದಾರರು ನಮೂದಿಸುವ ದರವನ್ನು ಒಪ್ಪಬೇಕಾದರೆ ಸದರಿ ದರವು ಅಂದಾಜು ವೆಚ್ಚಕ್ಕಿಂತ ಪ್ರತಿ ಯುನಿಟ್‌ನ ಬೆಲೆಯ ಗರಿಷ್ಠ ಶೇ.5ರಷ್ಟು ಹೆಚ್ಚು ಇದ್ದಲ್ಲಿ ಮಾತ್ರ ಬಿಡ್‌ದಾರರ ದರವನ್ನು ಒಪ್ಪಿ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ.

 

ಆದರೆ ಈ ಟೆಂಡರ್‌ ಪ್ರಕ್ರಿಯೆಯಲ್ಲಿ ಏಕ ಮಾತ್ರ ಬಿಡ್‌ದಾರರನ್ನೇ ಅಂತಿಮಗೊಳಿಸಲಾಗಿತ್ತು. ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ ಸಂಸ್ಥೆಯೊಂದಿಗೆ ನಡೆಸಿದ್ದ ಅಂತಿಮ ದರ ಸಂಧಾನದ ನಂತರವೂ ಪ್ರತಿ ಅಬಕಾರಿ ಭದ್ರತಾ ಚೀಟಿಗೆ 31.74 ಪೈಸೆಯ ದರವನ್ನು ನಮೂದಿಸಲಾಗಿತ್ತು. ಈ ದರವು ರಾಜ್ಯ ಪೂರ್ವ ಟೆಂಡರ್‌ ಪರಿಶೀಲನಾ ಸಮಿತಿಯು ಸೂಚಿಸಿದ್ದ ದರವಾದ 27.69 ಪೈಸೆಗೆ ಹೋಲಿಸಿದಲ್ಲಿ ಶೇ.14ರಷ್ಟು ಹೆಚ್ಚಾಗಿತ್ತು. ಹೀಗಾಗಿ ಇದು ಸರ್ಕಾರದ ಸುತ್ತೋಲೆ (ಸಂಖ್ಯೆಆಇ 576 ವೆಚ್ಚ -12-2018 ದಿನಾಂಕ 22-05-2018) ಉಲ್ಲಂಘನೆಯಾಗಿದೆ ಎಂದು ಟಿಪ್ಪಣಿಯಲ್ಲಿ ವಿವರಿಸಲಾಗಿತ್ತು ಎಂದು ತಿಳಿದು ಬಂದಿದೆ.

 

ಮತ್ತೊಂದು ವಿಶೇಷವೆಂದರೆ 2011-12ನೇ ಸಾಲಲಿನಿಂದ ಈವರೆಗೂ ಸಹ ಎಂಸಿಅಂಡ್‌ ಎ ಸಂಸ್ಥೆ ಮೂಲಕವೇ ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ ಸಂಸ್ಥೆಯು ಯಾವುದೇ ಟೆಂಡರ್‌ ಪ್ರಕ್ರಿಯೆ ಮೂಲಕ ಆದೇಶ ಪಡೆಯದೇ ಅಬಕಾರಿ ಇಲಾಖೆಗೆ ಅಬಕಾರಿ ಭದ್ರತಾ ಚೀಟಿಗಳನ್ನು ಸರಬರಾಜು ಮಾಡುತ್ತಿದೆ.

ಅಬಕಾರಿ ಲೇಬಲ್‌ ಮುದ್ರಣ; ಕಪ್ಪುಪಟ್ಟಿ, ಕ್ರಿಮಿನಲ್ ಆರೋಪಿತ ಕಂಪನಿಗೆ ಆದೇಶ, ಕಮಿಷನ್‌ ವ್ಯವಹಾರ?

ಈ ಟೆಂಡರ್‌ಗೆ ಸಂಬಂಧಿಸಿದಂತೆ 2023 ಮಾರ್ಚ್‌ 28ರಂದು ಲೆಟರ್‌ ಆಫ್ ಇಂಟೆಂಟ್‌ನ್ನು ಅಬಕಾರಿ ಇಲಾಖೆಯಿಂದ ಮಣಿಪಾಲ್ ಟೆಕ್ನಾಲಜಿ ಲಿಮಿಟೆಡ್‌ಗೆ ನೀಡಲಾಗಿತ್ತು. ಮಾರನೇ ದಿನ ಅಂದರೆ 2023ರ ಮಾರ್ಚ್‌ 29ರಂದು ಮಣಿಪಾಲ್‌ ಟೆಕ್ನಾಲಜಿ ಲಿಮಿಟೆಡ್‌ ಬ್ಯಾಂಕ್‌ ಗ್ಯಾರಂಟಿಯನ್ನು ಸಲ್ಲಿಸಿತ್ತು. ಇದೇ ದಿನದಂದು ಅಂದರೆ 29-03-2023ರಂದೇ ಮಣಿಪಾಲ್‌ ಟೆಕ್ನಾಲಜಿ ಮತ್ತು ಅಬಕಾರಿ ಇಲಾಖೆ ನಡುವೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. ಈ ಒಡಂಬಡಿಕೆಗೆ ಜಂಟಿ ಆಯುಕ್ತರಾದ ಎನ್‌ ನಿರ್ಮಲ ಅವರು ಸಹಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಆದರೆ ಮಾರ್ಚ್‌ 29, 2023ರ ಬೆಳಗ್ಗೆ 11 ಗಂಟೆಗೆ ಭಾರತ ಚುನಾವಣಾ ಆಯೋಗವು ಚುನಾವಣಾ ನೀತಿ ಸಂಹಿತೆ ಜಾರಿ ಮಾಡಿತ್ತು. ಆದರೂ ಅದೇ ದಿನ ಅಪರ ಆಯುಕ್ತರನ್ನು (ಹೆಚ್‌ ಅಂಡ್‌ ಐ) ವರ್ಗಾವಣೆ ಮಾಡಲಾಗಿತ್ತು.

 

‘ಇದರಿಂದ ಕಂಡು ಬರುವ ಅಂಶವೇನಂದರೆ ದಿನಾಂಕ 29-03-2023ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರೂ ಟೆಂಡರ್ ಪ್ರಕ್ರಿಯೆಯನ್ನು ಮುಂದುವರೆಸಿ ಬ್ಯಾಂಕ್‌ ಗ್ಯಾರಂಟಿಯನ್ನು ಸ್ವೀಕರಿಸಿ ಒಡಂಬಡಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಆಪರ ಆಯುಕ್ತರು ಕರ್ತವ್ಯದಲ್ಲಿದ್ದರೂ ಸಹ ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರದ ಅಧಿಕಾರವಿಲ್ಲದ ಜಂಟಿ ಆಯುಕ್ತರು ನಿರ್ಮಲ ಅವರು ಸಹಿ ಮಾಡಿರುವುದು ಸರಿಯಾದ ಕ್ರಮವಲ್ಲ. ಮುಂದುವರೆದು ನಿರ್ಮಲಾ ಅವರಿಗೆ 2023ರ ಏಪ್ರಿಲ್‌ 14ರಂದು ಅಬಕಾರಿ ಆಯುಕ್ತರು ಟೆಂಡರ್‌ ಆಹ್ವಾನಿಸುವ ಪ್ರಾಧಿಕಾರಿಯ ಅಧಿಕಾರವನ್ನು ಪ್ರತ್ಯಾಯೋಜನೆಯನ್ನು ಮಾಡಿರುತ್ತಾರೆ,’ ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts