ಬೆಂಗಳೂರು; ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆಗೆ ಶಾಸಕರು ಸೇರಿದಂತೆ ಮತ್ತಿತರರ ಚುನಾಯಿತ ಪ್ರತಿನಿಧಿಗಳು, ಸಂವಿಧಾನೇತರ ವ್ಯಕ್ತಿಗಳ ಶಿಫಾರಸ್ಸು ಪತ್ರವೇ ಕಾನೂನುಬಾಹಿರ ಎಂದು ಹೈಕೋರ್ಟ್ ಪದೇ ಪದೇ ಪುನರುಚ್ಛರಿಸುತ್ತಿದ್ದರೂ ಈಗಿನ ಕಾಂಗ್ರೆಸ್ ಸರ್ಕಾರದ ಹಲವು ಸಚಿವರು, ಶಾಸಕರು ತಹಶೀಲ್ದಾರ್‍ಗಳ ವರ್ಗಾವಣೆಗೆ ಶಿಫಾರಸ್ಸು ಪತ್ರಗಳನ್ನು ನೀಡಿರುವುದು ಇದೀಗ ಬಹಿರಂಗವಾಗಿದೆ.
ಬೆಂಗಳೂರು ನಗರ ಮತ್ತು ಇದಕ್ಕೆ ಹೊಂದಿಕೊಂಡಿರುವ ತಾಲೂಕುಗಳಿಗೆ ತಹಶೀಲ್ದಾರ್‌ಗಳ (ಗ್ರೇಡ್-1) ವರ್ಗಾವಣೆಗೆ 1 ರಿಂದ 1.50 ಕೋಟಿ ರು, ಗ್ರೇಡ್ -2 ತಹಶೀಲ್ದಾರ್‌ಗಳಿಗೆ 25ರಿಂದ 50 ಲಕ್ಷ ರು., ತಾಲೂಕಿನಿಂದ ತಾಲೂಕಿಗೆ 5 ಲಕ್ಷ, ಜಿಲ್ಲಾ ಕೇಂದ್ರಕ್ಕೆ 10 ಲಕ್ಷ ರು. ನಿಗದಿಪಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಗ್ರೇಡ್ 1 ಮತ್ತು 2 ವೃಂದದ ಒಟ್ಟು 40 ಮಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಹಲವು ಸಚಿವರು, ಶಾಸಕರು ಶಿಫಾರಸ್ಸು ಪತ್ರಗಳನ್ನು ನೀಡಿರುವುದು ತಿಳಿದು ಬಂದಿದೆ. ಶಿಫಾರಸ್ಸು ಪತ್ರಗಳ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಶಿಫಾರಸ್ಸು ಪತ್ರಕ್ಕೆ ಸಹಿ ಮಾಡಿಸಲು ಶಾಸಕರಿಗೆ, ಮುಖ್ಯಮಂತ್ರಿ ಸೇರಿದಂತೆ ಸಚಿವರ ಕಚೇರಿ ಸಿಬ್ಬಂದಿಗೆ ಮೊದಲೇ ಹಣ ಸಂದಾಯ ಮಾಡಿದರಷ್ಟೇ ಶಿಫಾರಸ್ಸು ಪತ್ರಗಳಿಗೆ ಅಂಕಿತ ಹಾಕಲಾಗುತ್ತದೆ ಎಂದು ಗೊತ್ತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬೃಹತ್ ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್, ರಾಮಲಿಂಗಾರೆಡ್ಡಿ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಂತೋಷ್ ಲಾಡ್, ಈಶ್ವರ ಖಂಡ್ರೆ ಸೇರಿದಂತೆ ಹಲವು ಶಾಸಕರು ಮತ್ತು ಮಾಜಿ ಶಾಸಕರು ತಹಶೀಲ್ದಾರ್‍ಗಳ ವರ್ಗಾವಣೆಗೆ ಕಂದಾಯ ಇಲಾಖೆಗೆ ಶಿಫಾರಸ್ಸು ಪತ್ರ ನೀಡಿರುವುದು ತಿಳಿದು ಬಂದಿದೆ.
2023-24ನೇ ಸಾಲಿನ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ಮತ್ತು ಗ್ರೂಪ್ ಡಿ ವರ್ಗದ ಅಧಿಕಾರಿ, ನೌಕರರಿಗೆ ಅನ್ವಯವಾಗುವಂತೆ ಕಾರ್ಯನಿರತ ವೃಂದ ಬಲದ ಶೇ.6ರಷ್ಟನ್ನು ಮೀರದಂತೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ಪ್ರತ್ಯಾಯೋಜಿಸಿ ಸಾರ್ವತ್ರಿಕ ವರ್ಗಾವಣಾ ಅವಧಿಯನ್ನು ಜೂನ್ 30ರವರೆಗೂ ವಿಸ್ತರಿಸಿ ಹೊರಡಿಸಿರುವ ಆದೇಶದ ಬೆನ್ನಲ್ಲೇ ಕಂದಾಯ ಇಲಾಖೆಯ ತಹಶೀಲ್ದಾರ್‍ಗಳ ವರ್ಗಾವಣೆಗೆ ಮುಖ್ಯಮಂತ್ರಿ ಆದಿಯಾಗಿ ಹಲವು ಸಚಿವರು, ಶಾಸಕರು ನೀಡಿರುವ ಶಿಫಾರಸ್ಸು ಪತ್ರಗಳು ಮುನ್ನೆಲೆಗೆ ಬಂದಿವೆ.
ವರ್ಗಾವಣೆ ಬಯಸಿರುವ ಹಲವು ತಹಶೀಲ್ದಾರ್ (ಗ್ರೇಡ್ 2)ಗಳು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆಯಲ್ಲಿಯೇ ಮುಂದುವರೆಯುವುದು, ವರ್ಗಾವಣೆಯಿಂದ ತೆರವಾದ ಹುದ್ದೆಗೆ, ಸ್ಥಳ ನಿರೀಕ್ಷಣೆಯಲ್ಲಿರುವರು, ಅನ್ಯ ಸ್ಥಳಗಳಿಗೆ ವರ್ಗಾವಣೆ ಬಯಸಿದವರು ಅತೀ ಹೆಚ್ಚಿನ ಸಂಖ್ಯೆಯಲ್ಲಿರುವುದು ಪಟ್ಟಿಯಿಂದ ಗೊತ್ತಾಗಿದೆ.
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಸುರೇಶ್ ಎಂಬವರನ್ನು ರಾಯಚೂರು ತಾಲೂಕಿಗೆ ವರ್ಗಾವಣೆ ಮಾಡಲು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಫಾರಸ್ಸು ಪತ್ರ ನೀಡಿದ್ದಾರೆ. ವರ್ಗಾವಣೆ ಸಂಬಂಧ ಶಾಸಕರ ಟಿಪ್ಪಣಿ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಯನ್ನು ವರ್ಗಾಯಿಸುವುದು ಎಂದು ಷರಾ ಬರೆದಿರುವುದು ತಿಳಿದು ಬಂದಿದೆ.
ಶಿಫಾರಸ್ಸು ಪಟ್ಟಿ ಇಲ್ಲಿದೆ
ಪುರಂದರ ( ಬಿ ರಮಾನಾಥ ರೈ), ಜಿ ವಿ ಪಾಟೀಲ್ (ಕುಸುಮಾವತಿ ಸಿ ಶಿವಳ್ಳಿ ಮಾಜಿ ಶಾಸಕರು), ಮಂಜುನಾಥ ( ರಾಮಲಿಂಗಾರೆಡ್ಡಿ ಸಚಿವರು,) ಕವಿತಾ ಆರ್ (ಎಂ ಬಿ ಪಾಟೀಲ್, ವಿಠಲ ಕಟಕದೋಂಡ ಶಾಸಕರು), ಆರ್ ಎನ್ ಕೊರವರ (ಶ್ರೀನಿವಾಸ ಮಾನೆ, ಶಾಸಕರು), ಎಂ ಎಲ್ ನರಸನಪ್ಪವರ (ಪ್ರಸಾದ್ ಅಬ್ಬಯ್ಯ, ಶಾಸಕರು), ಪ್ರಕಾಶ್ ಎಂ ಕೆ ಕಲ್ಲೊಳಿ (ಸತೀಶ್ ಜಾರಕಿಹೊಳಿ, ಸಚಿವರು), ಹೆಚ್ ವಿಶ್ವನಾಥ್ (ಬಿ ಎಂ ನಾಗರಾಜ, ಶಾಸಕರು), ಎಸ್ ಶಾರದ (ಟಿ ಬಿ ಜಯಚಂದ್ರ, ಶಾಸಕರು), ವಿವೇಕ ವಿ ಶೆಣ್ವಿ( ಟಿ ಬಿ ಜಯಚಂದ್ರ, ಶಾಸಕರು), ಸೈಯದ್ ನಿಸಾರ್ ಅಹ್ಮದ್ (ಕನೀಜ್ ಫಾತಿಮಾ ಶಾಸಕರು), ಸಂಜೀವ್‌ಕುಮಾರ್ (ಎಂ ವೈ ಪಾಟೀಲ್, ಶಾಸಕರು), ಶರಣಬಸವ ರಾಣಪ್ಪ (ಎಂ ವೈ ಪಾಟೀಲ್, ಶಾಸಕರು), ಶಂಕರಪ್ಪ ಜಿ ಎ (ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕರು), ಯಲ್ಲಪ್ಪ ಗೋಣೆಣ್ಣನವರ್ (ಸಂತೋಷ್ ಲಾಡ್, ಸಚಿವರು), ಸದಾಶಿವ ಸಾಂಬಾಜಿ ಮುಕ್ಕೋಜಿ (ಆನಂದ ಸಿದ್ದು ನ್ಯಾಮಗೌಡ, ಮಾಜಿ ಶಾಸಕರು), ಹನುಮಂತ ಶಿರಹಟ್ಟಿ (ಪ್ರಕಾಶ್ ಕೆ ಕೋಳಿವಾಡ), ಅಣ್ಣಾರಾವ್ ಪಾಟೀಲ್ (ಈಶ್ವರ ಖಂಡ್ರೆ ಸಚಿವರು), ವಿಠಲ (ರಾಘವೇಂದ್ರ ಹಿಟ್ನಾಳ್, ಶಾಸಕರು) ಪ್ರಕಾಶ ಬಸವಂತಪ್ಪಾ (ಶರಣಪ್ಪ ತಿ ಸುಣಗಾರ, ಮಾಜಿ ಶಾಸಕರು), ಕಲುಗೌಡ ಪಾಟೀಲ್ (ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ, ಹಾಲಿ ವಿಧಾನಪರಿಷತ್ ಸದಸ್ಯ), ಎಸ್ ಎಚ್ ರಾಠೋಡ್ (ಪ್ರಕಾಶ್ ಕೆ ರಾಠೋಡ್, ವಿಧಾನಪರಿಷತ್‌ನ ಮಾಜಿ ಸಚೇತಕರು), ಮಲ್ಲಿಕಾರ್ಜುನ ಹೆಗ್ಗನ್ನವರ (ವಿಶ್ವಾಸ್ ವಿ ಸಂತ ವೈದ್ಯ, ಶಾಸಕರು), ಹೆಚ್ ಪಿ ಪೀರಜಾದೆ (ಆಸೀಫ್ ಸೇಠ್, ಶಾಸಕರು), ಮಲ್ಲಿಕಾರ್ಜುನ ಎಸ್ ( ಈಶ್ವರ ಖಂಡ್ರೆ, ಸಚಿವರು), ಮಂಜುಳ ನಾಯಕ (ಸತೀಶ್ ಜಾರಕಿಹೊಳಿ, ಸಚಿವರು), ರಾಜೇಶ್ ರುದ್ರಪ್ಪ ಬುರ್ಲಿ ( ಭರಮಗೌಡ ರಾಜು ಕಾಗೆ, ಶಾಸಕರು), ಮಧುರಾಜ (ಎಂ ವೈ ಪಾಟೀಲ್, ಶಾಸಕರು), ಎನ್ ಕೆ ಮಂಜುನಾಥ (ಶಾಮನೂರು ಶಿವಶಂಕರಪ್ಪ, ಶಾಸಕರು)
ಈ ಹಿಂದಿನ ಸರ್ಕಾರದಲ್ಲಿಯೂ ಅರಣ್ಯ ಇಲಾಖೆ ಅಧಿಕಾರಿಗಳ ಶಿಫಾರಸ್ಸಿಗೆ ಹಲವು ಸಚಿವರು, ಶಾಸಕರು ಶಿಫಾರಸ್ಸು ಪತ್ರ ನೀಡಿದ್ದನ್ನು ‘ದಿ ಫೈಲ್’ ವರದಿ ಪ್ರಕಟಿಸಿತ್ತು.
ಅರಣ್ಯಾಧಿಕಾರಿಗಳ ವರ್ಗಾವಣೆಗೆ ಸ್ಪೀಕರ್, ಸಚಿವರ ಶಿಫಾರಸ್ಸು ಪತ್ರ; ಹೈಕೋರ್ಟ್‌ಗೂ ಕಿಮ್ಮತ್ತಿಲ್ಲವೇ?
ಶಿಫಾರಸ್ಸು ಪತ್ರಗಳಿಗೆ ಹೈಕೋರ್ಟ್ ಹೇಳಿದ್ದೇನು?
‘ಮುಖ್ಯಮಂತ್ರಿ, ಸಚಿವರ ಶಿಫಾರಸ್ಸು ಪತ್ರ ಪಡೆದು ಇಂದು ವರ್ಗಾವಣೆ ಬಯಸುವ ಸರ್ಕಾರಿ ನೌಕರರು ಅನೇಕರಿದ್ದಾರೆ. ಈಗಾಗಲೇ ಅನೇಕರು ಇಂತಹ ಶಿಫಾರಸ್ತು ಪತ್ರದ ಮೂಲಕವೂ ವರ್ಗಾವಣೆ ಪಡೆದಿದ್ದಾರೆ. ಆದ್ರೇ ಮುಂದಿನ ದಿನಗಳಲ್ಲಿ ಇದು ಸಾಧ್ಯವಾಗುವುದಿಲ್ಲ. ಕಾರಣ, ಅಧಿಕಾರಿಗಳ ವರ್ಗಾವಣೆಗೆ ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರು ನೀಡುವ ಶಿಫಾರಸ್ಸು ಪತ್ರವೇ ಕಾನೂನು ಬಾಹಿರ’ ಎಂದು 2019 ಡಿಸೆಂಬರ್ 18ರಂದು ಹೈಕೋರ್ಟ್ ಹೇಳಿತ್ತು.
ಈ ಕುರಿತಂತೆ ಎಂಜಿನಿಯರ್ ಕೆ ಎಂ ವಾಸು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಆಯುಕ್ತರ ವಿವೇಚನಾಧಿಕಾರವಾಗಿದೆ. ಇಂತಹ ವರ್ಗಾವಣೆಯಲ್ಲಿ ಶಿಫಾರಸ್ಸು ಪತ್ರ ನೀಡಲು ಕೇಂದ್ರ ಸಚಿವರಿಗೂ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ. ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆಯಲ್ಲೂ ಇವರಿಗೆ ಅಧಿಕಾರ ಇಲ್ಲ ಎಂದು ಅಭಿಪ್ರಾಯ ಪಟ್ಟಿತ್ತು.
ಅದೇ ರೀತಿ ಸಂವಿಧಾನೇತರ ಅಧಿಕಾರಿಗಳ ಶಿಫಾರಸಿನ ಮೇರೆಗೆ ರಾಜ್ಯ ಸರ್ಕಾರವು ನೌಕರರ ವರ್ಗಾವಣೆ ಮಾಡುತ್ತಿರುವುದಕ್ಕೆ ಹಿಮಾಚಲ ಪ್ರದೇಶದ ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ವರ್ಗಾವಣೆ ಮಾಡುವ ಶಿಫಾರಸುಗಳನ್ನು ಸಂವಿಧಾನೇತರ ಪ್ರಾಧಿಕಾರದಿಂದ ಮಾಡಲಾಗಿದ್ದು, ಆಡಳಿತದ ಕಾರ್ಯಚಟುವಟಿಕೆ ಮತ್ತು ವ್ಯವಹಾರದಲ್ಲಿ ಯಾವುದೇ ಪಾತ್ರವನ್ನು ಹೊಂದಿಲ್ಲ, ಆದ್ದರಿಂದ ಅರ್ಜಿದಾರರ ಆಕ್ಷೇಪಾರ್ಹ ವರ್ಗಾವಣೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಗಮನಿಸಿತ್ತು.
ವರ್ಗಾವಣೆ ನೀತಿಯನ್ನು ಲಘುವಾಗಿ ಪರಿಗಣಿಸಬಾರದು ಅಥವಾ ರಾಜಕಾರಣಿಗಳ ಹುಚ್ಚಾಟಿಕೆಗೆ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡುವ ಅಣಕ ಅಥವಾ ಸಾಧನವಾಗಬಾರದು ಎಂದು ನೆನಪಿಸುವ ಸಮಯ ಬಂದಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಆದರ್ಶ ಉದ್ಯೋಗದಾತರಾಗಿರುವ ಸರ್ಕಾರವು ರಾಜಕಾರಣಿಗಳ ಕುತಂತ್ರದ ವಿರುದ್ಧ ತನ್ನ ಉದ್ಯೋಗಿಗಳ ಹಿತಾಸಕ್ತಿಗಳನ್ನು ಕಟ್ಟುನಿಟ್ಟಾಗಿ ಕಾಪಾಡುವ ನಿರ್ಬಂಧಿತ ಕರ್ತವ್ಯವನ್ನು ಹೊಂದಿದೆ ಎಂದು ನ್ಯಾಯಾಲಯವು ಗಮನಿಸಿದೆ. ಸಾರ್ವಜನಿಕ ಸೇವಕರು ತಮ್ಮ ಕಾರ್ಯಗಳನ್ನು ನಿರ್ಭಯ ಅಥವಾ ಒಲವು ಇಲ್ಲದೆ ನಿರ್ವಹಿಸಬೇಕು ಮತ್ತು ಅವರು ರಾಜಕಾರಣಿಗಳು ಎಳೆದ ಗೆರೆಯನ್ನು ಹಾಕುವ ಅಗತ್ಯವಿಲ್ಲ.ಇಲಾಖೆಗಳು, ಮಂಡಳಿಗಳು, ನಿಗಮಗಳಲ್ಲಿ ಆನ್‌ಲೈನ್ ವರ್ಗಾವಣೆಯನ್ನು ಆನ್‌ಲೈನ್ ವರ್ಗಾವಣೆ ನೀತಿ ಮತ್ತು ನಿರ್ದೇಶನಗಳನ್ನು ರೂಪಿಸುವ ಮೂಲಕ ಜಾರಿಗೊಳಿಸಬೇಕು ಎಂದೂ ಹೇಳಿತ್ತು.





