ಬೆಂಗಳೂರು; ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರಗಳ ಸೇವೆಗಳ ಶಾಖೆಯಿಂದ ದಿಢೀರ್ ಎಂದು ಎತ್ತಂಗಡಿಗೊಳಗಾಗಿದ್ದ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಅಧಿಕಾರಿ ಇದೀಗ ಸಾಮಾಜಿಕ ನ್ಯಾಯಕ್ಕಾಗಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಕದ ತಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ತಿಂಗಳೊಳಗೇ ದಲಿತ ಅಧಿಕಾರಿಯೊಬ್ಬರು ತಮ್ಮ ಮೇಲಾಧಿಕಾರಿಯ ಜಾತಿ ತಾರತಮ್ಯ ಮತ್ತು ದೌರ್ಜನ್ಯದ ವಿರುದ್ಧ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿರುವುದು ಅಧಿಕಾರಶಾಹಿಯೊಳಗೆ ಚರ್ಚೆಗೆ ಗ್ರಾಸವಾಗಿದೆ.
ಹಿಂದಿನ ಸಚಿವ ಬೈರತಿ ಬಸವರಾಜು ಅವರ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುರುಬ ಸಮುದಾಯದ ಅಧಿಕಾರಿಗಳನ್ನೇ ಹಾಲಿ ಸಚಿವ ಬೈರತಿ ಸುರೇಶ್ ಅವರು ಮುಂದುವರೆಸಿದ್ದರು. ಇದೇ ಹೊತ್ತಿನಲ್ಲಿ ಅದೇ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಪರಿಶಿಷ್ಟ ಜಾತಿ ಅಧಿಕಾರಿ ಸತೀಶ್ ಕಬಾಡೆ ಎಂಬುವರನ್ನು ಏಕಾಏಕೀ ವರ್ಗಾವಣೆ ಮಾಡಲಾಗಿತ್ತು. ಇದೇ ಪ್ರಕರಣದಲ್ಲಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ ಅವರ ವಿರುದ್ಧವೂ ಸ್ವಜನಪಕ್ಷಪಾತ, ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂಬ ಗುರುತರವಾದ ಆರೋಪವೂ ಕೇಳಿ ಬಂದಿತ್ತು.
ಇದೀಗ ಬಾಧಿತ ಅಧಿಕಾರಿ ಸತೀಶ್ ಕಬಾಡೆ ಎಂಬುವರು ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಅಧ್ಯಕ್ಷರಿಗೆ 2023ರ ಜೂನ್ 14ರಂದು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಮನವಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಇದೇ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಾಖಾಧಿಕಾರಿ ಬಸವರಾಜು ಎಂಬುವರಿಗೂ ದೌರ್ಜನ್ಯ, ಮಾನಸಿಕ ಕಿರುಕುಳ ನೀಡಿದ್ದರು ಎಂಬ ಆರೋಪಕ್ಕೆ ಒಳಗಾಗಿದ್ದ ಡಾ ಅಜಯ್ ನಾಗಭೂಷಣ್ ಅವರ ವಿರುದ್ಧವೂ ಆಯೋಗವು ಆದೇಶ ಹೊರಡಿಸಿತ್ತು.
ದಲಿತ ಅಧಿಕಾರಿ ಮೇಲೆ ಜಾತಿ ದೌರ್ಜನ್ಯ, ಕಿರುಕುಳ; ಅಜಯ್ ನಾಗಭೂಷಣ್ ವಿರುದ್ಧ ಆರೋಪ ರುಜುವಾತು
ಆದರೆ ಇದುವರೆಗೂ ಸಚಿವ ಬೈರತಿ ಸುರೇಶ್ ಅವರು ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ ಹಾಗೂ ದೌರ್ಜನ್ಯಕ್ಕೆ ಒಳಗಾದ ಅಧಿಕಾರಿಗೆ ರಕ್ಷಣೆಯನ್ನೂ ನೀಡಿಲ್ಲ. ಈ ಪ್ರಕರಣದ ಬೆನ್ನಲ್ಲೇ ಡಾ ಅಜಯ್ ನಾಗಭೂಷಣ್ ಅವರು ಜಾತಿ ದೌರ್ಜನ್ಯ ಎಸಗಿದ್ದಾರೆ ಎಂದು ಮತ್ತೊಬ್ಬ ದಲಿತ ಅಧಿಕಾರಿಯು ಆಯೋಗಕ್ಕೆ ಮೊರೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸತೀಶ್ ಕಬಾಡೆ ಅವರ ದೂರಿನಲ್ಲೇನಿದೆ?
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು 2022ರ ಫೆ.17ರಲ್ಲಿ ಸತೀಶ್ ಕಬಾಡೆ ಅವರನ್ನು ಶಾಖಾಧಿಕಾರಿ ಹುದ್ದೆಯಿಂದ ಸರ್ಕಾರದ ಅಧೀನ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿತ್ತು. ಮುಂದಿನ ಆದೇಶದವರೆಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇದ್ದ ಅಧೀನ ಕಾರ್ಯದರ್ಶಿ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿತ್ತು. ಆದರೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ ಅವರು ಮಹಾನಗರಪಾಲಿಕೆ ಹುದ್ದೆ-2ಗೆ ಕಾರ್ಯವರದಿ ಮಾಡಿಸಿಕೊಳ್ಳದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆ (ಸಂಖ್ಯೆ ಸಿಆಸುಇ 286 ಎಸ್ಆರ್‍ಇ 2021-ದಿನಾಂಕ 17-02-2022) ಉಲ್ಲಂಘಿಸಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿದೆ.
2022ರ ಮಾರ್ಚ್ 4ರಂದು ಸತೀಶ್ ಕಬಾಡೆ ಅವರನ್ನು ಮುನ್ಸಿಪಲ್ ಆಡಳಿತ -2 ಮತ್ತು ಬೋರ್ಡ್ಸ್ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಲಾಗಿತ್ತು. ‘ಈ ಕ್ರಮವು ಭಾರತದ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ ನ್ಯಾಯ, ಸ್ಥಾನಮಾನ ಮತ್ತು ಅವಕಾಶದಲ್ಲಿ ಸಮಾನತೆ ಒದಗಿಸಬೇಕು ಮತ್ತು ವ್ಯಕ್ತಿ ಗೌರವನ್ನು ಸುನಿಶ್ಚಿತಗೊಳಿಸಿ ಭ್ರಾತೃ ಭಾವನೆ ವೃದ್ಧಿಗೊಳಿಸಬೇಕು ಎಂಬ ಭಾರತ ಸಂವಿಧಾನದ ಪೀಠಿಕೆಯಲ್ಲಿನ ಪ್ರಸ್ತಾವನೆ ಆಶಯಕ್ಕೆ ಧಕ್ಕೆಯನ್ನುಂಟು ಮಾಡಿದ ಕ್ರಮವಾಗಿ ಕಂಡು ಬರುತ್ತದೆ,’ ಎಂದು ಬಾಧಿತ ಅಧಿಕಾರಿ ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಸತೀಶ್ ಕಬಾಡೆ ಅವರು ಯಾವುದೇ ಕರ್ತವ್ಯಲೋಪ ಎಸಗದೇ ಇದ್ದರೂ ಸಕಾರಣವಿಲ್ಲದೇ ಏಕಾಏಕೀ ಕೇವಲ 7 ತಿಂಗಳಲ್ಲಿ ಇಲಾಖೆಯ ಮತ್ತೊಂದು ಶಾಖೆಗೆ ವರ್ಗಾವಣೆಗೆ ಒಳಗಾಗಿದ್ದರು. ಈ ವರ್ಗಾವಣೆಯಾದ ಪುನಃ 6 ತಿಂಗಳೊಳಗೇ (05-06-2023) ಆ ಹುದ್ದೆಯಿಂದ ವರ್ಗಾವಣೆ ಮಾಡಲಾಗಿತ್ತು. ಸತೀಶ್ ಕಬಾಡೆ ಅವರು ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಸ್ವಜಾತಿ ಅಧಿಕಾರಿ ಲತಾ ಎಂಬುವರನ್ನು ನಿಯುಕ್ತಿಗೊಳಿಸಲಾಗಿತ್ತು ಎಂದು ಆಪಾದಿಸಲಾಗಿದೆ.
‘ನಾನು ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಗೆ ಸೇರಿದ ಗ್ರೂಪ್ ಎ ವೃಂದದ ಅಧಿಕಾರಿಯಾಗಿದ್ದರೂ ಸಹ ನಾನು ಪರಿಶಿಷ್ಟ ಜಾತಿಗೆ ಸೇರಿದವನೆಂಬ ಒಂದೇ ಕಾರಣಕ್ಕಾಗಿ ಸರ್ಕಾರಿ ಕಚೇರಿಯಲ್ಲಿ ನಾನು ಒಂದು ಸ್ಥಳದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡದ ಡಾ ಅಜಯ್ ಭೂಷಣ್ ಅವರು 7-8 ತಿಂಗಳಿಗೊಮ್ಮೆ ನನ್ನನ್ನು ಈ ರೀತಿ ವರ್ಗಾವಣೆ ಮಾಡಿ ಅವಮಾನಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಕ್ರಮವುಇ ಭಾರತ ಸಂವಿಧಾನದ ಅನುಚ್ಛೇಧ 14, 15 ಮತ್ತು 17ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ,’ಎಂದು ದೂರಿನಲ್ಲಿ ಕಬಾಡೆ ಅವರು ವಿವರಿಸಿದ್ದಾರೆ.
ಕಬಾಡೆ ಅವರ ಸ್ಥಾನಕ್ಕೆ ನಿಯುಕ್ತಿಗೊಳಿಸಿದ್ದ ಲತಾ ಎಂಬ ಅಧಿಕಾರಿಯ ವಿರುದ್ಧವೂ ಹಲವು ಆರೋಪಗಳು ಕೇಳಿ ಬಂದಿವೆ. ಇವರ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಡಾ ಅಜಯ್ ನಾಗಭೂಷಣ್ ಅವರು ನೋಟೀಸ್ ಕೂಡ ನೀಡಿದ್ದರು. ಆದೂ ಸ್ವಜಾತಿ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸದೇ ಕಬಾಡೆ ಅವರನ್ನು ಎತ್ತಂಗಡಿಗೊಳಿಸಿ ಅವರ ಜಾಗಕ್ಕೆ ವರ್ಗಾವಣೆ ಮಾಡಿರುವುದು ಆಯೋಗಕ್ಕೆ ಸಲ್ಲಿಸಿರುವ ದೂರಿನಿಂದ ಗೊತ್ತಾಗಿದೆ.
‘ಸ್ವಜನಪಕ್ಷಪಾತ, ಜಾತಿ ತಾರತಮ್ಯ ಮಾಡಿ ಪರಿಶಿಷ್ಟ ಜಾತಿಗೆ ಸೇರಿದ ನನ್ನ ವಿರುದ್ಧ ಯಾವುದೇ ಕರ್ತವ್ಯ ಲೋಪವಿಲ್ಲದೇ ಸಕಾರಣವಿಲ್ಲದೇ ವಿನಾ ಕಾರಣ ನನ್ನನ್ನು ಪದೇ ಪದೇ ಆಂತರಿಕ ವರ್ಗಾವಣೆ ಮಾಡಿ ಅವಮಾನಿಸಿದ್ದಾರೆ. ಸಂವಿಧಾನದ ಪೀಠಿಕೆಯಲ್ಲಿನ ಪ್ರಸ್ತಾವನೆಯಲ್ಲಿನ ಆಶಯಕ್ಕೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವ ಸಲುವಾಗಿ ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ್ನನು ರದ್ದುಪಡಿಸಬೇಕು ಮತ್ತು ತಮಗೆ ಸಾಮಾಜಿಕ ನ್ಯಾಯ ಒದಗಿಸಬೇಕು,’ ಎಂದು ಕಬಾಡೆ ಅವರು ದೂರಿನಲ್ಲಿ ಕೋರಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯು ಸಚಿವರ ನಡೆಯಿಂದ ನೊಂದು ತಮಗಾಗಿರುವ ಅನ್ಯಾಯವನ್ನು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್ ನಾಗಭೂಷಣ್ ಅವರಿಗೆ ವಾಟ್ಸಾಪ್ ಮೂಲಕ ಮನವರಿಕೆ ಮಾಡಿಕೊಟ್ಟಿದ್ದರು.
ಸ್ವಜಾತಿ ಅಧಿಕಾರಿಗೆ ಸ್ಥಳಾವಕಾಶಕ್ಕೆ ದಲಿತ ಅಧಿಕಾರಿ ಎತ್ತಂಗಡಿ; ಸಚಿವ, ಕಾರ್ಯದರ್ಶಿ ವಿರುದ್ಧ ಆರೋಪ
ಇದಕ್ಕೆ ಡಾ ಅಜಯ್ ನಾಗಭೂಷಣ್ ಅವರು ಯಾವುದೇ ಪ್ರತಿಕ್ರಿಯೆ ಮತ್ತು ಸ್ಪಂದಿಸದ ಕಾರಣ ಬಾಧಿತ ಅಧಿಕಾರಿ ಕಬಾಡೆ ಅವರು ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟು ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.