ರಾಜ್ಯದಲ್ಲಿ ಬ್ಯಾಂಕ್‌ಗಳ ಎನ್‌ಪಿಎ ಮೊತ್ತ 51,089 ಕೋಟಿ; ಬ್ಯಾಂಕರ್‍‌ಗಳ ಸಲಹಾ ಸಮಿತಿ ಸಭೆಯಲ್ಲಿ ಬಹಿರಂಗ

photo credit;deccan hearald

ಬೆಂಗಳೂರು; ರಾಜ್ಯದಲ್ಲಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವು 2022ರ ಡಿಸೆಂಬರ್‍‌ 31ರ ಅಂತ್ಯಕ್ಕೆ ರಾಜ್ಯದಲ್ಲಿ 51,089 ಕೋಟಿ ರು ನಷ್ಟಿರುವುದು ಇದೀಗ ಬಹಿರಂಗವಾಗಿದೆ.

 

ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿಯು ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅಧ್ಯಕ್ಷತೆಯಲ್ಲಿ 2023ರ ಫೆ.14ರಂದು ನಡೆಸಿದ್ದ 160ನೇ ಸಭೆಯಲ್ಲಿ ಎನ್‌ಪಿಎ ಪ್ರಮಾಣದ ಕುರಿತು ಚರ್ಚೆ ನಡೆದಿವೆ. ಆದರೆ ಯಾವ್ಯಾವ ಬ್ಯಾಂಕ್‌ಗಳು ಎಷ್ಟೆಷ್ಟು ಕೋಟಿ ಮೊತ್ತದ ಅನುತ್ಪಾದಕ ಆಸ್ತಿ ಹೊಂದಿದೆ ಎಂಬ ವಿವರಗಳನ್ನು ಸಭೆಯ ನಡವಳಿಗಳಲ್ಲಿ ನಮೂದಿಸಿಲ್ಲ. ಈ ಸಭೆಯ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

2020ರ ಡಿಸೆಂಬರ್‌ 31ರ ಅಂತ್ಯಕ್ಕೆ ಅನುತ್ಪಾದಕ ಆಸ್ತಿ ಪ್ರಮಾಣವು 48,722.17 ಕೋಟಿಯಷ್ಟಿತ್ತು. 2021ರ ಮಾರ್ಚ್‌ 31ರ ಅಂತ್ಯಕ್ಕೆ 54,756.47 ಕೋಟಿಯಷ್ಟಾಗಿದೆ. ಕೇವಲ ಮೂರೇ ಮೂರು ತಿಂಗಳಲ್ಲಿ 6,0343.3 ಕೋಟಿಯಷ್ಟು ಹೆಚ್ಚಳ ಕಂಡಿತ್ತು. 2021ರ ಸೆಪ್ಟಂಬರ್‍‌ 30ರ ಅಂತ್ಯಕ್ಕೆ 56,337 ಕೋಟಿಯಷ್ಟು ಬ್ಯಾಂಕ್‌ಗಳು ಎನ್‌ಪಿಎ ಹೊಂದಿದ್ದವು.

 

2020ರ ಡಿಸೆಂಬರ್‌ ಮತ್ತು 2021ರ ಮಾರ್ಚ್‌ 31ರ ಅಂತ್ಯಕ್ಕೆ ಬ್ಯಾಂಕ್‌ಗಳಲ್ಲಿನ ಅನುತ್ಪಾದಕ ಆಸ್ತಿ ಪ್ರಮಾಣಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 5ರಂದು ನಡೆದಿದ್ದ ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿತ್ತು.

 

2020ರಲ್ಲಿ ಕೃಷಿ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ವಲಯದ ಕೈಗಾರಿಕೆ, ವಸತಿ, ಶಿಕ್ಷಣ, ಇತರೆ ಆದ್ಯತೆ ಮತ್ತು ಆದ್ಯತೆಯೇತರ ವಲಯದಲ್ಲಿ ಒಟ್ಟು (2948205 ಖಾತೆಗಳು) 54,756.46 ಕೋಟಿಯಷ್ಟು ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ 21,773.89 ಕೋಟಿ ಎನ್‌ಪಿಎ ಇರುವುದು ದಾಖಲೆಯಿಂದ ತಿಳಿದು ಬಂದಿದೆ.

 

ಎನ್‌ಪಿಎನಲ್ಲಿ ಪಿಎಂಇಜಿಪಿ ಯೋಜನೆಯ ಪಾಲು ಶೇ. 21.10ರಷ್ಟಿದೆ. ಹೀಗಾಗಿ ಬಾಕಿ ಹಣವನ್ನು ವಸೂಲು ಮಾಡಲು ಬ್ಯಾಂಕ್‌ಗಳಿಗೆ ಬೆಂಬಲ ನೀಡಬೇಕು ಎಂದು ಬ್ಯಾಂಕರ್‍‌ಗಳ ಸಮಿತಿಯಲ್ಲಿ ಸಮಾಲೋಚಕರು ಕೋರಿರುವುದು ಗೊತ್ತಾಗಿದೆ.

 

ಕೋವಿಡ್‌ ಎರಡನೇ ಅಲೆ ಆರಂಭವಾಗಿದ್ದ (2021ರ ಮಾರ್ಚ್‌ ಅಂತ್ಯಕ್ಕೆ) ಹೊತ್ತಿನಲ್ಲೇ ರಾಜ್ಯದಲ್ಲಿ ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣವು 54,756.47 ಕೋಟಿ ರು. ನಷ್ಟಿತ್ತು. ಎನ್‌ಪಿಎ ಪೈಕಿ ಕೃಷಿ ವಲಯದಲ್ಲಿಯೇ ಲಾಕ್‌ಡೌನ್‌ನಿಂದಾಗಿ ಉದ್ಭವಿಸಿದ ಆರ್ಥಿಕ ವಲಯದಲ್ಲಿನ ಬಿಕ್ಕಟ್ಟು, ಬ್ಯಾಂಕ್‌ಗಳ ಅನುತ್ಪಾದಕ ಆಸ್ತಿ ಪ್ರಮಾಣದಲ್ಲಿ ಹೆಚ್ಚಳಕ್ಕೆ ದಾರಿ ಮಾಡಿಕೊಟ್ಟಿದ್ದು ಮೇಲ್ನೋಟಕ್ಕೆ ಕಂಡು ಬಂದಿತ್ತು.

 

ಅದೇ ರೀತಿ 2021ರ ಮಾರ್ಚ್‌ ಅಂತ್ಯಕ್ಕೆ ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ವಲಯದಲ್ಲಿ (ಎಂಎಸ್‌ಎಂಇ) 11,652.59 ಕೋಟಿ ರು., ವಸತಿ ವಲಯದಲ್ಲಿ 1,682.88 ಕೋಟಿ, ಶಿಕ್ಷಣ ವಲಯದಲ್ಲಿ 510.02 ಕೋಟಿ, ಇತರೆ ಆದ್ಯತೆ ವಲಯದಲ್ಲಿ 4,293.99 ಕೋಟಿ, ಆದ್ಯತೆಯೇತರ ವಲಯದಲ್ಲಿ 14,843.1 ಕೋಟಿ ರು.ಗಳಷ್ಟು ಎನ್‌ಪಿಎ ಇರುವುದು ದಾಖಲೆಯಿಂದ ಗೊತ್ತಾಗಿದೆ.

 

ಕಳೆದ 2020ಕ್ಕೆ ಹೋಲಿಸಿದರೆ ಕೃಷಿ ವಲಯದಲ್ಲಿ ಎನ್‌ಪಿಎ ಪ್ರಮಾಣ (18,111.58 ಕೋಟಿ), ಒಂದು ವರ್ಷದಲ್ಲಿ 3,662.31 ಕೋಟಿ ಹೆಚ್ಚಳವಾಗಿದೆ. ಎಂಎಸ್‌ಎಂಇ ವಲಯದಲ್ಲಿ (8,425.96 ಕೋಟಿ), 3,226.63 ಕೋಟಿ, ವಸತಿ ವಲಯದಲ್ಲಿ (1,208.35 ಕೋಟಿ) 474.53 ಕೋಟಿ, ಶಿಕ್ಷಣದಲ್ಲಿ (498.49 ಕೋಟಿ)11.53 ಕೋಟಿ, ಇತರೆ ವಲಯದಲ್ಲಿ (6,351.92 ಕೋಟಿ) 2,057.93 ಕೋಟಿ, ಆದ್ಯತೆಯೇತರ ವಲಯದಲ್ಲಿ (14,125.87 ಕೋಟಿ) 713.23 ಕೋಟಿ ಸೇರಿದಂತೆ ಒಟ್ಟು 6,0304.3 ಕೋಟಿ ರು. ಹೆಚ್ಚಳವಾಗಿರುವುದು ಕಂಡು ಬಂದಿದೆ.

 

 

ಕೃಷಿ ವಲಯ (ಬ್ಯಾಂಕ್‌ವಾರು) ಎನ್‌ ಪಿ ಎ ವಿವರ

 

 

ಕೆನರಾ ಬ್ಯಾಂಕ್‌ – 6,503.63 ಕೋಟಿ, ಸ್ಟೇಟ್‌ ಬ್ಯಾಂಕ್‌ ಅಫ್ ಇಂಡಿಯಾ 3,223.42 ಕೋಟಿ, ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ- 895.44 ಕೋಟಿ, ಬ್ಯಾಂಕ್‌ ಆಫ್‌ ಬರೋಡ – 681.90 ಕೋಟಿ, ಬ್ಯಾಂಕ್‌ ಆಫ್‌ ಇಂಡಿಯಾ – 359.38 ಕೋಟಿ, ಬ್ಯಾಂಕ್‌ ಅಫ್‌ ಮಹಾರಾಷ್ಟ್ರ – 76.42 ಕೋಟಿ, ಸೆಂಟ್ರಲ್‌ ಬ್ಯಾಂಕ್‌ ಆಫ್ ಇಂಡಿಯಾ- 95.01 ಕೋಟಿ, ಇಂಡಿಯನ್‌ ಬ್ಯಾಂಕ್‌- 31.54 ಕೋಟಿ,ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌- 170.86 ಕೋಟಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌- 149.72 ಕೋಟಿ, ಪಂಜಾಬ್‌ ಸಿಂಡ್‌ ಬ್ಯಾಂಕ್‌ – 0.85 ಕೋಟಿ. ಯುಕೋ ಬ್ಯಾಂಕ್‌ – 52.90 ಕೋಟಿ ರು. ಎನ್‌ಪಿಎ ಇರುವುದು ದಾಖಲೆಯಿಂದ ತಿಳಿದು ಬಂದಿದೆ.

 

 

ಕೋವಿಡ್‌ ಹೊಡೆತಕ್ಕೆ ಬ್ಯಾಂಕ್‌ಗಳು ತತ್ತರ; ಕೃಷಿ ವಲಯದಲ್ಲಿ 21,773.89 ಕೋಟಿ ಎನ್‌ಪಿಎ

ಖಾಸಗಿ ಬ್ಯಾಂಕ್‌ಗಳಲ್ಲಿನ ಎನ್‌ಪಿಎ ವಿವರ;  ಐಡಿಬಿಐ- 65.43 ಕೋಟಿ, ಕರ್ನಾಟಕ ಬ್ಯಾಂಕ್‌- 303.13 ಕೋಟಿ, ಕೋಟಕ್‌ ಮಹೀಂದ್ರಾ – 17.43 ಕೋಟಿ, ಕ್ಯಾಥರಿಕ್‌ ಸಿರಿಯನ್‌ ಬ್ಯಾಂಕ್‌ – 161.53 ಕೋಟಿ, ಸಿಟಿಯೂನಿಯನ್‌ ಬ್ಯಾಂಕ್‌ – 3.69 ಕೋಟಿ, ಧನಲಕ್ಷ್ಮಿ ಬ್ಯಾಂಕ್‌ – 0.08 ಕೋಟಿ, ಫೆಡರಲ್‌ ಬ್ಯಾಂಕ್‌ – 34.03 ಕೋಟಿ, ಜೆ ಅಂಡ್‌ ಕೆ ಬ್ಯಾಂಕ್- 8.27 ಕೋಟಿ, ಕರೂರ್‌ ವೈಶ್ಯ ಬ್ಯಾಂಕ್ – 17.86 ಕೋಟಿ, ಲಕ್ಷ್ಮಿ ವಿಲಾಸ್‌ ಬ್ಯಾಂಕ್‌ – 160.01 ಕೋಟಿ, ರತ್ನಾಕರ್‌ ಬ್ಯಾಂಕ್‌- 232.78 ಕೋಟಿ, ಸೌತ್‌ ಇಂಡಿಯನ್‌ ಬ್ಯಾಂಕ್‌ – 13.58 ಕೋಟಿ, ಇಂಡಸ್‌ಲಡ್‌ ಬ್ಯಾಂಕ್‌- 96.33 ಕೋಟಿ, ಎಚ್‌ಡಿಎಫ್‌ಸಿ – 195.72 ಕೋಟಿ, ಆಕ್ಸಿಸ್‌ – 60.00 ಕೋಟಿ, ಐಸಿಐಸಿಐ – 78 ಕೋಟಿ, ಯೆಸ್‌ ಬ್ಯಾಂಕ್‌ – 488.32 ಕೋಟಿ, ಬಂಧನ್‌ ಬ್ಯಾಂಕ್‌ – 1.97 ಕೋಟಿ, ಡಿಸಿಬಿ ಬ್ಯಾಂಕ್‌ – 8.63 ಕೋಟಿ, ಐಡಿಎಫ್‌ಸಿ – 930.57 ಕೋಟಿ ರು.ಎನ್‌ಪಿಎ ಇರುವುದು ತಿಳಿದು ಬಂದಿದೆ.

 

 

ಸಹಕಾರಿ ವಲಯ ಬ್ಯಾಂಕ್‌ ಎನ್‌ಪಿಎ ವಿವರ; ಕಸ್ಕಾರ್ಡ್‌ – 1,840.10 ಕೋಟಿ, ಅಪೆಕ್ಸ್‌ ಬ್ಯಾಂಕ್‌ – 1,480.28 ಕೋಟಿ ರು. ಇದೆ.

 

 

ಸಣ್ಣ ಹಣಕಾಸಿನ ಸಂಸ್ಥೆಗಳ ಎನ್‌ಪಿಎ ವಿವರ; ಈಕ್ವಟಾಸ್‌ ಸ್ಮಾಲ್‌ ಫೈನಾನ್ಸ್‌ – 7.49 ಕೋಟಿ, ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ – 10.73 ಕೋಟಿ, ಸೂರ್ಯೋದಯ ಸ್ಮಾಲ್‌ ಫೈನಾನ್ಸ್‌ – 5.85 ಕೋಟಿ, ಇಎಸ್‌ಎಎಫ್‌ ಸ್ಮಾಲ್‌ ಫೈನಾನ್ಸ್‌ – 11.53 ಕೋಟಿ ರು. ಎನ್‌ಪಿಎ ಇರುವುದು ಗೊತ್ತಾಗಿದೆ.

 

 

ಅನುತ್ಪಾದಕ ಆಸ್ತಿಯ ಪ್ರಮಾಣ ಹೆಚ್ಚಾಗಿರುವುದರಿಂದ ಬ್ಯಾಂಕ್‌ಗಳ ದೈನಂದಿನ ಹಣಕಾಸಿನ ವಹಿವಾಟಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಯೋಗದೊಂದಿಗೆ ಜಂಟಿಯಾಗಿ ಸಾಲ ವಸೂಲಾತಿ ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts