1,118 ಕೋಟಿ ರು. ಅನುದಾನಕ್ಕೆ ಆರೋಗ್ಯ ಇಲಾಖೆ ಪ್ರಸ್ತಾವ; ಎಸ್‌ಸಿಎಸ್‌ಪಿ, ಟಿಎಸ್‌ಪಿ ನಿಧಿಗೆ ಕೈ ಹಾಕಿತೇ?

photo credit;dineshgundurao official twitter page

ಬೆಂಗಳೂರು; ಮೂರು ಹಂತದಲ್ಲಿ ಆರೋಗ್ಯ ಇಲಾಖೆಯನ್ನು ಬಲವರ್ಧನೆಗೊಳಿಸಲು ಹೆಚ್ಚುವರಿಯಾಗಿ 1,118.59 ಕೋಟಿ ರು. ಮೊತ್ತದ ಹೆಚ್ಚುವರಿ ಅನುದಾನ ಒದಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ಪ್ರಸ್ತಾವನೆ ಸಲ್ಲಿಸಿದೆ. ಅದೇ ರೀತಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕೆಲ ಕಾರ್ಯಕ್ರಮಗಳಿಗೆ ಹೆಚ್ಚುವರಿ ರಾಜ್ಯ ಅನುದಾನದ ಅವಶ್ಯಕತೆ ಇಲ್ಲ ಎಂದು ಹೇಳಿರುವ ಇಲಾಖೆಯು ಇವೇ ಕಾರ್ಯಕ್ರಮಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ಯೋಜನೆ ಮತ್ತು 15ನೇ ಹಣಕಾಸು ಆಯೋಗದಲ್ಲಿ ಲಭ್ಯವಿರುವ ಅನುದಾನದಿಂದ ಕಾರ್ಯಗತಗೊಳಿಸಲು ಮುಂದಾಗಿದೆ.

 

ಪ್ರಣಾಳಿಕೆಯಲ್ಲಿ ಘೋಷಿಸಿರುವ 5 ಗ್ಯಾರಂಟಿಗಳ ಅನುಷ್ಠಾನಕ್ಕಾಗಿ  ಅನುದಾನ ಹೊಂದಾಣಿಕೆಯ ತಲೆಬಿಸಿಯಲ್ಲಿರುವ ರಾಜ್ಯ ಸರ್ಕಾರವು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲವರ್ಧನೆಗಾಗಿ ಪರಿಶಿಷ್ಟ ಜಾತಿ, ಪಂಗಡದ ಉಪ ಯೋಜನೆಯಲ್ಲಿ ಲಭ್ಯವಿರುವ ಅನುದಾನವನ್ನು ಬಳಸಿಕೊಳ್ಳಲು ಹೊರಟಿರುವುದು ಇದೀಗ ಬಹಿರಂಗವಾಗಿದೆ.

 

 

ಇದೇ ಜುಲೈನಿಂದ ಆರಂಭವಾಗಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡನೆಯಾಗಲಿರುವ ಪರಿಷ್ಕೃತ ಆಯವ್ಯಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಆರೋಗ್ಯ ಇಲಾಖೆಯು 2023-24ನೇ ಸಾಲಿನ ಆರ್ಥಿಕ ವರ್ಷಕ್ಕೆ ಅವಶ್ಯವಿರುವ ಮತ್ತು ಹೆಚ್ಚುವರಿ ಅನುದಾನದ ವಿವರಗಳ ಪ್ರಾತ್ಯಕ್ಷಿಕೆಯನ್ನು ಒದಗಿಸಿದೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಡಾ ಪುನೀತ್‌ ರಾಜ್‌ಕುಮಾರ್‍‌ ಹೃದಯ ಜ್ಯೋತಿ ಯೋಜನೆ, ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ, ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಹೆಚ್ಚಳ, ನೂತನ ಸಮುದಾಯ ಆರೋಗ್ಯ ಕೇಂದ್ರಗಳ ಕಾರ್ಯಗತಗೊಳಿಸುವುದು, ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಯೂ ಸೇರಿದಂತೆ ಇನ್ನಿತರೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಅನುಷ್ಠಾನಕ್ಕೆ ಹೆಚ್ಚುವರಿಯಾಗಿ ರಾಜ್ಯ ಅನುದಾನದ ರೂಪದಲ್ಲಿ 1,118.59 ಕೋಟಿ ರು. ಒದಗಿಸಬೇಕು ಎಂದು ಇಲಾಖೆಯು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿದೆ.

 

ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಅವಶ್ಯಕ ಹೆಚ್ಚುವರಿ ರಾಜ್ಯ ಅನುದಾನವನ್ನು ಶೂನ್ಯ ಎಂದು ತೋರಿಸಿರುವ ಇಲಾಖೆಯು ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಹೆಚ್ಚಳಕ್ಕೆ 51.02 ಕೋಟಿ ರು., ನೂತನ ಸಮುದಾಯ ಆರೋಗ್ಯ ಕೇಂದ್ರಗಳ ಕಾರ್ಯಗತಗೊಳಿಸುವಿಕೆಗೆ 70.43 ಕೋಟಿ ರು., ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 114.00 ಕೋಟಿ ರು., ಡಾ ಪುನೀತ್‌ ರಾಜ್‌ಕುಮಾರ್‍‌ ಹೃದಯ ಜ್ಯೋತಿ ಯೋಜನೆಗೆ 5.38 ಕೋಟಿ ರು. ಗಳನ್ನು ಹೆಚ್ಚುವರಿಯಾಗಿ ರಾಜ್ಯ ಅನುದಾನದ ರೂಪದಲ್ಲಿ ಒದಗಿಸಬೇಕು ಎಂದು ಪ್ರಾತ್ಯಕ್ಷಿಕೆಯಲ್ಲಿ ನಮೂದಿಸಿರುವುದು ತಿಳಿದು ಬಂದಿದೆ.

 

ಅದೇ ರೀತಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕೆಲ ಕಾರ್ಯಕ್ರಮಗಳಿಗೆ ಹೆಚ್ಚುವರಿ ಅನುದಾನ ಶೂನ್ಯ ಎಂದು ತೋರಿಸಿರುವ ಇಲಾಖೆಯು ಅದೇ ಕಾರ್ಯಕ್ರಮಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಉಪ ಯೋಜನೆಯಲ್ಲಿ ಲಭ್ಯ ಇರುವ ಅನುದಾನದ ಮೊತ್ತವನ್ನು ತೋರಿಸಿರುವುದು ಪ್ರಾತ್ಯಕ್ಷಿಕೆಯಿಂದ ಗೊತ್ತಾಗಿದೆ.

 

ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಹೆಚ್ಚುವರಿ ಅನುದಾನ ಕೋರದ ಇಲಾಖೆಯು 28.42 ಕೋಟಿ ರು., ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನ ಹೆಚ್ಚಳಕ್ಕೆ 430.00 ಕೋಟಿ ರು., ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆಗೆ 172 ಕೋಟಿ ರು., ಡಾ ಪುನೀತ್‌ ರಾಜ್‌ಕುಮಾರ್‍‌ ಹೃದಯ ಜ್ಯೋತಿ ಯೋಜನೆಗೆ 13.02 ಕೋಟಿ ರು., ಸೇರಿದಂತೆ ಇದುವರೆಗೂ ಎಸ್‌ಸಿಪಿ ಮತ್ತು ಎಸ್‌ಟಿಪಿಯಲ್ಲಿ ಒಟ್ಟಾರೆ 1,013.85 ಕೋಟಿ ರು. ಅನುದಾನ ಲಭ್ಯವಿದೆ ಎಂದು ಉಲ್ಲೇಖಿಸಿದೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 50 ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಎಸ್‌ಸಿಸಿಪಿ ಮತ್ತು ಎಸ್‌ಟಿಪಿ ಅನುದಾನದಡಿಯಲ್ಲಿ 34 ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಿದೆ. ಪ್ರತೀ ಸಂಚಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ವಹಣೆಗೆ ಪ್ರತಿ ತಿಂಗಳಿಗೆ 2.82 ಲಕ್ಷ ರು.ನಂತೆ ಒಟ್ಟಾರೆ ವಾರ್ಷಿಕವಾಗಿ 28.42 ಕೋಟಿ ರು.ಗಳನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಅನುದಾನಗಳಡಿಯಲ್ಲಿ ಭರಿಸಲಾಗುತ್ತದೆ. ಇದಕ್ಕಾಗಿ ಹೆಚ್ಚುವರಿ ಅನುದಾನದ ಅವಶ್ಯವಿರುವುದಿಲ್ಲ ಎಂದು ವಿವರಿಸಿದೆ.

 

ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ಪ್ರತಿ ಜಿಲ್ಲೆಗೆ ಎರಡರಂತೆ ಕೈ ಚಾಲಿತ ಕ್ಷ-ಕಿರಣ ಉಪಕರಣಗಳನ್ನು ರಾಜ್ಯದ 4 ವಿಭಾಗಗಳಲ್ಲಿ ಒದಗಿಸುವ ಉದ್ದೇಶಿಸಿರುವ ಇಲಾಖೆಯು ಪ್ರತಿ ಎಕ್ಸ್‌-ರೇ ಯಂತ್ರಕ್ಕೆ 20 ಲಕ್ಷ ರು ನಂತೆ ಒಟ್ಟು 3.20 ಕೋಟಿ ರು.ಗಳನ್ನು 15ನೇ ಹಣಕಾಸು ಆಯೋಗದ ಅನುದಾನದಡಿಯಲ್ಲಿ ಮೀಸಲಿಡುವುದಾಗಿ ತಿಳಿಸಿದೆ. ಹೀಗಾಗಿ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಅನುದಾನದ ಅವಶ್ಯವಿಲ್ಲ ಎಂದು ಹೇಳಿದೆ.

 

ರಾಜ್ಯದಲ್ಲಿ ನವಜಾತ ಶಿಶುಗಳು, ಮಕ್ಕಳು ಹದಿಹರೆಯದವರು, ಗರ್ಭೀಣಿ, ಹಾಲುಣಿಸುವ ತಾಯಂದಿರು ಮತ್ತು ಸಂತಾನೋತ್ಪತ್ತಿ (15-49) ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆ ಮತ್ತು ಅಪೌಷ್ಠಿಕತೆ ಸವಾಲು ಎದುರಿಸಲು ಸಮಗ್ರವಾದ ಕ್ರಿಯಾ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿರುವ ಇಲಾಖೆಯು ಇದಕ್ಕಾಗಿ ಹೆಚ್ಚುವರಿ ರಾಜ್ಯದ ಅನುದಾನದ ರೂಪದಲ್ಲಿ 25 ಕೋಟಿ ರು. ನೆರವು ಕೇಳಿರುವುದು ಪ್ರಾತ್ಯಕ್ಷಿಕೆಯಿಂದ ತಿಳಿದು ಬಂದಿದೆ.

 

ಸಮಗ್ರ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಅಭಿಯಾನದಡಿಯಲ್ಲಿ ಅಂಧತ್ವ ಮುಕ್ತ ಕರ್ನಾಟಕ ಕಾರ್ಯೊಕ್ರಮಕ್ಕೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಲಭ್ಯವಿರುವ 21.12 ಕೋಟಿ ರು. ಸೇರಿ ಹೆಚ್ಚುವರಿಯಾಗಿ ರಾಜ್ಯವು 8.02 ಕೋಟಿ ಅನುದಾನಕ್ಕೆ ಪ್ರಸ್ತಾವಿಸಿದೆ. ಈ ಯೋಜನೆಯನ್ನು ಚಿತ್ರದುರ್ಗ, ರಾಯಚೂರು, ಉತ್ತರ ಕನ್ನಡ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ.

 

ಮೆದುಳಿನ ಆರೋಗ್ಯ ಕಾರ್ಯಕ್ರಮದ ವಿಸ್ತರಣೆಗೆ ಹೆಚ್ಚುವರಿಯಾಗಿ ರಾಜ್ಯ ನಿಧಿ ರೂಪದಲ್ಲಿ 25 ಕೋಟಿ ರು. ಅಗತ್ಯವಿದೆ ಎಂದು ಪ್ರಸ್ತಾವಿಸಿದೆ. ಆಶಾ ಕಾರ್ಯಕರ್ತೆಯರ ಮಾಸಿಕ ಗೌರವ ಧನವನ್ನು ತಿಂಗಳಿಗೆ 6,000 ರು. ಹೆಚ್ಚಿಸಲು ಪ್ರಸ್ತಾವಿಸಿರುವ ಇಲಾಖೆಯು ಇದಕ್ಕಾಗಿ ವಾರ್ಷಿಕವಾಗಿ ಹೆಚ್ಚುವರಿ ರಾಜ್ಯ ನಿಧಿಯಾಗಿ 51.02 ಕೋಟಿ ರು. ಅಗತ್ಯವಿದೆ. ನಾಗರೀಕರಿಗೆ ತಜ್ಞ ವೈದ್ಯರ ಸೇವೆಗಳನ್ನು ಒದಗಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೆಫರಲ್‌ ವ್ಯವಸ್ಥೆಯನ್ನು ಬಲಪಡಿಸಲು ಎನ್‌ಹೆಚ್‌ಎಂ ಅನುದಾನದಡಿಯಲ್ಲಿ ಒಟ್ಟು 23 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಿಎಚ್‌ಸಿಗಳಾಗಿ ನವೀಕರಿಸಿದ್ದು ಇವುಗಳನ್ನು ಪ್ರಸಕ್ತ ವರ್ಷದಲ್ಲಿಯೇ ಕಾರ್ಯಗತಗೊಳಿಸಲು ಒಟ್ಟು 70.43 ಕೋಟಿ ರು. ಅಗತ್ಯವಿದೆ ಎಂದು ಹೇಳಿದೆ.

 

2022ರ ಜನಸಂಖ್ಯೆಯ ಪ್ರಕಾರ 232 ಹೆಚ್ಚುವರಿಯಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅವಶ್ಯಕತೆ ಇದೆ ಎಂದು ಅಂದಾಜಿಸಿರುವ ಇಲಾಖೆಯು ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಪ್ರದೇಶಗಳಲ್ಲಿ ಮುಂದಿನ ಎರಡು ವರ್ಷಗಳಲ್ಲಿ 100 ನೂತನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪಿಸಲು ಹೆಚ್ಚುವರಿ ರಾಜ್ಯ ಅನುದಾನ ರೂಪದಲ್ಲಿ 114 ಕೋಟಿ ರು ಬೇಕಿದೆ ಎಂದು ಪ್ರಾತ್ಯಕ್ಷಿಕೆಯಲ್ಲಿ ವಿವರಿಸಿದೆ.

 

ರಾಜ್ಯದ ಎಲ್ಲಾ ಡಯಾಲಿಸಿಸ್‌ ಕೇಂದ್ರಗಳಲ್ಲಿ ಉಚಿತ ಮತ್ತು ಗುಣಮಟ್ಟದ ಸೇವೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಂಗಲ್‌ ಯೂಸ್‌ ಡಯಾಲಿಸಿಸ್‌ ವ್ಯವಸ್ಥೆ ಅಳವಡಿಸಲು ಮುಂದಾಗಿರುವ ಇಲಾಖೆಯು ಇದಕ್ಕಾಗಿ ರಾಜ್ಯ ಸರ್ಕಾರದಿಂದ 32 ಕೋಟಿ ರ. ಅನುದಾನದ ಅಗತ್ಯವಿದೆ ಎಂದು ಹೇಳಿದೆ. 7 ತಾಲೂಕುಗಳಲ್ಲಿ 100 ಹಾಸಿಗೆ ತಾಲೂಕು ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೇರಿಸಿವುದು ಮತ್ತು ಮುಂಬರುವ ಮೂರು ವರ್ಷಗಳಲ್ಲಿ ಪ್ರತಿ ಸಮುದಾಯ ಆರೋಗ್ಯ ಕೇಂದ್ರಗಳ ಉನ್ನತೀಕರಣಕ್ಕೆ 36 ಕೋಟಿ ರು. ಸೇರಿದಂತೆ ಒಟ್ಟಾರೆ 252 ಕೋಟಿ ರು. ಅಗತ್ಯವಿದೆ ಎಂದು ಪ್ರಸ್ತಾವಿಸಿದೆ.

 

ಅದೇ ರೀತಿ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ನವೀಕರಣ ಕಾಮಗಾರಿಗಳನ್ನು ಈ ವರ್ಷವೇ ಆಯ್ದ ಆಸ್ಪತ್ರೆಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿರುವ ಇಲಾಖೆಯು 14 ಜಿಲ್ಲಾ ಆಸ್ಪತ್ರೆಗಳಿಗೆ 53 ಕೋಟಿ ರು., 85 ತಾಲೂಕು ಆಸ್ಪತ್ರೆಗಳಿಗೆ 122 ಕೋಟಿ ರು. ಸೇರಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 175.00 ಕೋಟಿ ರು. ಅಗತ್ಯವಿದೆ ಎಂದು ವಿವರಿಸಿದೆ.

 

ಆಯುಷ್ಮಾನ್‌ ಭಾರತ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ನೋಂದಣಿ ಮಾಡಲು ಉದ್ದೇಶಿಸಿರುವ ಇಲಾಖೆಯು ಇದಕ್ಕಾಗಿ ವಾರ್ಷಿಕ 500 ಕೋಟಿ ರು. ಹೆಚ್ಚುವರಿ ರಾಜ್ಯ ನಿಧಿ ಅಗತ್ಯವಿದೆ ಎಂದು ಅಂದಾಜಿಸಿದೆ.

 

ಮಹಾನಗರ ಸರ್ವೆಕ್ಷಣಾ ಘಟಕ, ದೀರ್ಘಕಾಲದ ಶ್ವಾಸಕೋಶ ರೋಗದ ನಿರ್ವಹಣೆ, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ನಾಗರೀಕ ಸಹಾಯ ವಾಣಿ ಕೇಂದ್ರ, ಗುಣಮಟ್ಟದ ಡಯಾಲಿಸಿಸ್‌ ಸೇವೆಗಳು, ಹಳೆಯ 7 ತಾಲೂಕುಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳನ್ನು ತಾಲೂಕು ಆರೋಗ್ಯ ಆಸ್ಪತ್ರೆಗಳಾಗಿ ಮೇಲ್ದರ್ಜೆಗೇರಿಸುವುದು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳ ನವೀಕರಣ, ನಾನ್‌ ಆಲ್ಕೋಹಾಲಿಕ್‌ ಫ್ಯಾಟಿ ಲಿವರ್‍‌ ಖಾಯಿಲೆ ತಡೆಗಟ್ಟುವಿಕೆಯ ಕಾರ್ಯಕ್ರಮ, ಕರ್ನಾಟಕ ಆರೋಗ್ಯ ತಂತ್ರಜ್ಞಾನ ಪ್ರಯೋಗಾಲಯ, ಎಬಿ-ಎಆರ್‍‌ಕೆ ಯೋಜನೆಗಾಗಿ ಆರೋಗ್ಯ ಪ್ರಯೋಜನಗಳ ಪ್ಯಾಕೇಜ್‌ 2022 ಅಳವಡಿಕೆ, ,ಕ್ಷಯ ರೋಗ ನಿವಾರಣೆ ಕಾರ್ಯಕ್ರಮ ಬಲವರ್ಧನೆ, ಮಧುಮೇಹ, ಅಧಿಕ ರಕ್ತದೊತ್ತಡ, ಸಮಗ್ರ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಅಭಿಯಾನವೂ ಕಾರ್ಯಕ್ರಮದಲ್ಲಿ ಸೇರಿಸಿರುವುದು ಪ್ರಾತ್ಯಕ್ಷಿಕೆಯಿಂದ ಗೊತ್ತಾಗಿದೆ.

the fil favicon

SUPPORT THE FILE

Latest News

Related Posts