ದಲಿತ ಅಧಿಕಾರಿ ಮೇಲೆ ಜಾತಿ ದೌರ್ಜನ್ಯ, ಕಿರುಕುಳ; ಅಜಯ್‌ ನಾಗಭೂಷಣ್‌ ವಿರುದ್ಧ ಆರೋಪ ರುಜುವಾತು

ಬೆಂಗಳೂರು; ನಗರಾಭಿವೃದ್ಧಿ ಇಲಾಖೆಯ ಸಚಿವಾಲಯದ ಶಾಖೆಯ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿಯ ಅಧಿಕಾರಿಗಳ ಮೇಲೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್‌ ನಾಗಭೂಷಣ್‌ ಅವರು ಜಾತಿ ದೌರ್ಜನ್ಯ ಎಸಗಿರುವುದು ಮತ್ತು ಪರಿಶಿಷ್ಟ ಜಾತಿಯ ದೂರುದಾರರನ್ನು ಮಾನಸಿಕವಾಗಿ ನರಳುವಂತೆ ಮಾಡಿದ್ದು ಕಂಡುಬಂದಿದೆ ಎಂದು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಅಯೋಗವು ತೀರ್ಮಾನಿಸಿರುವುದು ಇದೀಗ ಬಹಿರಂಗವಾಗಿದೆ.

 

ನಗರಾಭಿವೃದ್ಧಿ ಇಲಾಖೆಯ ಸಚಿವಾಲಯದ ಶಾಖಾಧಿಕಾರಿ ಆರ್‍‌ ಬಸವರಾಜು ಎಂಬುವರು ಸಲ್ಲಿಸಿದ್ದ ದೂರನ್ನಾಧರಿಸಿ ವಿಚಾರಣೆ ನಡೆಸಿದ್ದ ಆಯೋಗವು 2023ರ ಮಾರ್ಚ್‌ 20ರಂದು ಪ್ರಕಟಿಸಿರುವ ಆದೇಶದಲ್ಲಿ ಸರ್ಕಾರಿ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೂರುದಾರರ ವಿರುದ್ಧ ದೌರ್ಜನ್ಯ ಎಸಗಿರುವುದು ಕಂಡು ಬರುತ್ತದೆ ಎಂದು ಉಲ್ಲೇಖಿಸಿದೆ. ಆಯೋಗದ ಆದೇಶದ ಪ್ರತಿ ಮತ್ತು ವಿಚಾರಣೆ ನಡವಳಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರಗಳ ಸೇವೆಗಳ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಅಧಿಕಾರಿಯೊಬ್ಬರನ್ನು ಏಕಾಏಕೀ ಎತ್ತಂಗಡಿ ಮಾಡಿರುವ ಪ್ರಕರಣವು ಇಲಾಖೆಯಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದ ಆದೇಶವು ಮುನ್ನೆಲೆಗೆ ಬಂದಿದೆ.

 

ಬಸವರಾಜು ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ವೇಳೆಯಲ್ಲಿ ಎದುರುದಾರರಾದ ಡಾ ಅಜಯ ನಾಗಭೂಷಣ್‌ ಅವರು ನೀಡಿದ್ದ ಲಿಖಿತ ಸಮಜಾಯಿಷಿಯನ್ನು ಒಪ್ಪದ ಆಯೋಗವು ‘ಎದುರುದಾರರು ಸರ್ಕಾರಿ ಕಚೇರಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ದೂರುದಾರರ ವಿರುದ್ಧ ದೌರ್ಜನ್ಯ ಎಸಗಿರುವುದು ಕಂಡುಬರುತ್ತದೆ,’ ಎಂದು ಆದೇಶದಲ್ಲಿ ದಾಖಲಿಸಿದೆ.

 

ಸರ್ಕಾರಿ ನೌಕರ ಮೇಲಿನ ಆಪಾದಿತ ದುರ್ನಡತೆಗೆ ಶಿಸ್ತಿನ ಕ್ರಮ ಜರುಗಿಸಲು ಗರಿಷ್ಠ 9 ತಿಂಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ಸರ್ಕಾರದ ಕಾರ್ಯದರ್ಶಿಗಳು ಮತ್ತು ಇಲಾಖೆ ಮುಖ್ಯಸ್ಥರು ಈ ಸೂಚನೆಗಳನ್ನು ಚಾಚೂತಪ್ಪದೇ ಕಡ್ಡಾಯವಾಗಿ ಪಾಲಿಸಬೇಕುಮತ್ತು ಇದನ್ನು ಸಂಬಂಧಪಟ್ಟ ಎಲ್ಲಾ ಶಿಸ್ತು ಪ್ರಾಧಿಕಾರಗಳ ಗಮನಕ್ಕೆ ಪಾಲನೆಗಾಗಿ ತರಬೇಕು. ಈ ಸೂಚನೆಯನ್ನು ಉಲ್ಲಂಘಿಸುವ ಅಧಿಕಾರಿಗಳು ತಾವೇ ಕರ್ತವ್ಯಲೋಪ ಎಸಗಿರುವ ಆರೋಪದ ಆಧಾರದ ಮೇಲೆ ಶಿಸ್ತಿನ ಕ್ರಮಕ್ಕೆ ಒಳಪಡಬೇಕಾಗುತ್ತದೆ ಎಂದು ತಿಳಿಸಿ ನಿಗದಿಪಡಿಸಲಾದ ಕಾಲಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿರುತ್ತದೆ.

 

ಆದೇಶದಲ್ಲಿ ಏನಿದೆ?

 

ಸರ್ಕಾರದ ಮಾರ್ಗಸೂಚಿಗಳಂತೆ 9 ತಿಂಗಳ ನಿಗದಿತ ಕಾಲಮಿತಿ ಮುಗಿದಿರುವುದರಿಂದ ದೂರುದಾರರ ಮೇಲೆ ಯಾವುದೇ ಇಲಾಖೆ ವಿಚಾರಣೆ ನಡೆಸುವ ಅಧಿಕಾರ ಸಕ್ಷಮ ಪ್ರಾಧಿಕಾರಕ್ಕೆ ಇರುವುದಿಲ್ಲ. ಆದ್ದರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆ ಪ್ರಕಾರ ಎದುರುದಾರರು ಹೊರಡಿಸಿರುವ ಅಧಿಕೃತ ಜ್ಞಾಪನ ಪತ್ರವನ್ನು (ನಅಇ 03 ಸಮನ್ವಯ 2022 ದಿನಾಂಕ 16-07-222) ರದ್ದುಪಡಿಸಬೇಕು ಎಂದು ಆಯೋಗದ ಅಧ್ಯಕ್ಷರಾಗಿದ್ದ ನೆಹರು ಓಲೆಕಾರ ಅವರು ಡಾ ಅಜಯ್‌ ನಾಗಭೂಷಣ್‌ ಅವರಿಗೆ 2023ರ ಮಾರ್ಚ್‌ 20ರಂದು ನಿರ್ದೇಶಿಸಿದ್ದರು.

 

‘ಹೀಗಿದ್ದರೂ ಸಹ ದೂರುದಾರರು 2022ರ ಅಕ್ಟೋಬರ್‍‌ 15 ಮತ್ತು ನವೆಂಬರ್‍‌ 10ರಂದು ಸಲ್ಲಿಸಿರುವ ಕೋರಿಕೆಯನ್ನು ಎದುರುದಾರರು ಪರಿಗಣಿಸದಿರುವುದು ದೂರುದಾರರನ್ನು ಮಾನಸಿಕವಾಗಿ ನರಳುವಂತೆ ಮಾಡಿದ ಕ್ರಮವಾಗಿ ಕಂಡುಬರುತ್ತದೆ, ‘ಎಂದು ಆಯೋಗವು ತನ್ನ ಆದೇಶದಲ್ಲಿ ಹೇಳಿದೆ.

 

 

 

ಪ್ರಕರಣದ ವಿವರ

 

ಶಾಖಾಧಿಕಾರಿ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಸಕ್ಷಮ ಪ್ರಾಧಿಕಾರವಾಗಿದ್ದರೂ ಇದನ್ನು ಬದಿಗೊತ್ತಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ ನಾಗಭೂಷಣ್‌ ಅವರು ಏಕಾಏಕೀ ರಾತೋರಾತ್ರಿ ಆಂತರಿಕವಾಗಿ ವರ್ಗಾವಣೆ ಮಾಡಿದ್ದರು ಎಂದು ಶಾಖಾಧಿಕಾರಿ ಬಸವರಾಜು ಎಂಬುವರು ಆಯೋಗಕ್ಕೆ ದೂರು ಸಲ್ಲಿಸಿದ್ದರು.

 

‘ಈ ಇಲಾಖೆಯಲ್ಲಿ 13 ಶಾಖಾಧಿಕಾರಿಗಳ ಪೈಕಿ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು ಹೋರಾಟ ಮಾಡುವ ಶಕ್ತಿ ಇಲ್ಲ ಎಂಬ ಒಂದೇ ಕಾರಣಕ್ಕಾಗಿ ಮೇಲ್ಜಾತಿಗೆ ಸೇರಿದ ಶಾಖಾಧಿಕಾರಿ ಪ್ರಿಯಾ ಪಿ ಬಿ ಎಂಬುವರ ಕೋರಿಕೆ ಮೇರೆಗೆ ತಮ್ಮನ್ನು ಆಂತರಿಕವಾಗಿ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಆದೇಶ ಮಾಡಿಸಿಕೊಂಡ ಪ್ರಿಯಾ ಪಿ ಬಿ ಅವರ 2022ರ ಜುಲೈ 1ರಂದೇ ರಾತ್ರೋರಾತ್ರಿ ಮಂಡಳಿ ಶಾಖೆಯ ಶಾಖಾಧಿಕಾರಿ ಹುದ್ದೆಯ ಕರ್ತವ್ಯಕ್ಕೆ ವರದಿ ಮಾಢಿಕೊಂಡಿಡು ಅದೇ ದಿನ ರಾತ್ರಿ 12 ಗಂಟೆಗೆ ತಾವು ಕಾರ್ಯದರ್ಶಿಯವರ ನಿರ್ದೇಶನದಂತೆ ಮಂಡಳಿ ಶಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವುದಾಗಿ ನನ್ನ ಮೊಬೈಲ್‌ ಸಂಖ್ಯೆಯ ವಾಟ್ಸಾಪ್‌ಗೆ ಮೆಸೇಜ್‌ ಕಳಿಸಿದ್ದರು,’ ಎಂದು ಬಸವರಾಜು ಅವರು ದೂರಿನಲ್ಲಿ ವಿವರಿಸಿದ್ದಾರೆ.

 

 

ಪ್ರಿಯಾ ಪಿ ಬಿ ಅವರು ಗಣಕ ಯಂತ್ರದಲ್ಲಿ ತಮ್ಮ ಹೆಸರಿಗೆ ಲಾಗಿನ್‌ ಬದಲಿಸಿಕೊಂಡು ಸಿಟಿಸಿ ಪತ್ರಕ್ಕೆ ಸಹಿ ಮಾಡಬೇಕು ಎಂದು ಒತ್ತಾಯಿಸಿದ್ದರು ಎಂದು ಬಸವರಾಜು ಅವರು ದೂರಿರುವುದು ಗೊತ್ತಾಗಿದೆ.
‘ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ವಿಕೃತಿ ಮನಸ್ಥಿತಿ ಎನ್ನಬೇಕೇ ಅಥವಾ ದ್ವೇಷ, ಸೇಡಿನ ಕ್ರಮ ಎನ್ನಬೇಕೇ ಅಥವಾ ಪ್ರಿಯಾ ಅವರಿಗೆ ನಿರಾಶೆ ಮಾಡಬಾರದು ಎಂಬ ಕಾರಣಕ್ಕಾಗಿ ಕೈಗೊಂಡ ಕ್ರಮವೇ ಎಂಬ ಬಗ್ಗೆ ತಾವೇ ನಿರ್ಣಯಿಸಬೇಕು,’ ಎಂದು ಬಸವರಾಜು ಅವರು ಆಯೋಗದ ಅಧ್ಯಕ್ಷರಿಗೆ ಸಲ್ಲಿಸಿದ್ದ ಮನವಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.

 

ಸಹಾಯಕ ಇಂಜಿನಿಯರ್‍‌ ಮಂಜುನಾಥ್‌ ಬಿ ಹೆಚ್‌ ಅವರಿಂದ 1 ಲಕ್ಷ ರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪಕ್ಕೂ ಗುರಿಯಾಗಿದ್ದ ಬಸವರಾಜು ಅವರ ವಿರುದ್ಧ 18 ತಿಂಗಳಾದರೂ ದೋಷಾರೋಪಣೆ ಪಟ್ಟಿಯನ್ನು ಜಾರಿಗೊಳಿಸಿರಲಿಲ್ಲ. ಅಲ್ಲದೇ ಈ ಪ್ರಕರಣ ಸಂಬಂಧ ನಡೆದ ವಿಚಾರಣೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಗಳು 1957ರ ಅನ್ವಯ ಭಾಗವಹಿಸಲು ಅವಕಾಶವನ್ನು ನೀಡಿರಲಿಲ್ಲ ಎಂಬ ಸಂಗತಿಯನ್ನೂ ಬಸವರಾಜು ಅವರು ದೂರಿನಲ್ಲಿ ವಿಸ್ತೃತವಾಗಿ ವಿವರಿಸಿರುವುದು ಗೊತ್ತಾಗಿದೆ.

 

‘ತಮ್ಮ ವಿರುದ್ಧದ ದೂರನ್ನು ನೆಪವಾಗಿರಿಸಿಕೊಂಡು ಒಳಸಂಚು ರೂಪಿಸಿ ನನ್ನ ಜಾಗಕ್ಕೆ ವರ್ಗಾವಣೆ ಮಾಡಿಸಿಕಂಡು ಅವಮಾನಿಸಲು ದುರುಪಯೋಗಪಡಿಸಿಕೊಂಡಿದ್ದಾರೆ. ಸರ್ಕಾರದ ಕಾರ್ಯದರ್ಶಿ ಅವರು ಇಲಾಖಾ ಮುಖ್ಯಸ್ಥರಾಗಿ ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರು ಎಲ್ಲಾ ಅಧಿಕಾರಿ, ನೌಕರರನ್ನು ಜಾತಿಭೇದವಿಲ್ಲದೇ ಸಮಾನ ದೃಷ್ಟಿಕೋನದಲ್ಲಿ ನೋಡಬೇಕು. ತಪ್ಪಿತಸ್ಥ ಅಧಿಕಾರಿ, ನೌಕರರ ವಿರುದ್ಧ ತಾರತಮ್ಯ ಮಾಡದೇ ನಿಯಮಾನುಸಾರ ಸಮಾನವಾಗಿ ದಂಡ ವಿಧಿಸಬೇಕು. ಯಾವುದೇ ಅಧಿಕಾರಿ, ನೌಕರರಲ್ಲಿ ಸ್ವಜನಪಕ್ಷಪಾತ, ಜಾತಿ ತಾರತಮ್ಯ ಮಾಡುವಂತಿಲ್ಲ ಎಂದು ಬಸವರಾಜು ಆಯೋಗಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು ಎಂಬುದು ದೂರಿನಿಂದ ತಿಳಿದು ಬಂದಿದೆ.

SUPPORT THE FILE

Latest News

Related Posts