ಸ್ವಜಾತಿ ಅಧಿಕಾರಿಗೆ ಸ್ಥಳಾವಕಾಶಕ್ಕೆ ದಲಿತ ಅಧಿಕಾರಿ ಎತ್ತಂಗಡಿ; ಸಚಿವ, ಕಾರ್ಯದರ್ಶಿ ವಿರುದ್ಧ ಆರೋಪ

photo credit;oneindiakannada

ಬೆಂಗಳೂರು; ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ನಗರ, ಗ್ರಾಮಾಂತರ ಯೋಜನಾ ಪ್ರಾಧಿಕಾರಗಳ ಸೇವೆಗಳ ಶಾಖೆಯಲ್ಲಿ ಹಿಂದಿನ ಸಚಿವ ಬೈರತಿ ಬಸವರಾಜು ಅವರ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕುರುಬ ಸಮುದಾಯದ ಅಧಿಕಾರಿಗಳನ್ನೇ ಮುಂದುವರೆಸಿರುವ ಹಾಲಿ ಸಚಿವ ಬೈರತಿ ಸುರೇಶ್‌ ಅವರು ಇದೀಗ ಆ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಅಧಿಕಾರಿಯೊಬ್ಬರನ್ನು ಏಕಾಏಕೀ ಎತ್ತಂಗಡಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

 

ಸಾಮಾಜಿಕ ನ್ಯಾಯ ಅದರಲ್ಲೂ ಮುಖ್ಯವಾಗಿ ದಲಿತರ ಶ್ರೇಯೋಭಿವೃದ್ಧಿಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೆಮ್ಮೆಯಿಂದ ಬೀಗಿದ್ದ ಕಾಂಗ್ರೆಸ್‌ ಸರ್ಕಾರವು ಆರಂಭದಲ್ಲೇ ನಗರಾಭಿವೃದ್ಧಿ ಇಲಾಖೆಯ ಸಚಿವಾಲಯದ ಶಾಖೆಯಲ್ಲಿದ್ದ  ಪರಿಶಿಷ್ಟ ಜಾತಿಗೆ ಸೇರಿದ  ಏಕೈಕ  ಅಧಿಕಾರಿಯೊಬ್ಬರನ್ನು ಎತ್ತಂಗಡಿ ಮಾಡಿರುವುದು ದಲಿತ ಸಮುದಾಯದ ಅಧಿಕಾರಿ ವರ್ಗದಲ್ಲಿ ಆಕ್ರೋಶಕ್ಕೆ ದಾರಿಮಾಡಿಕೊಟ್ಟಂತಾಗಿದೆ.

 

ಅಸಮಾನತೆ ಮತ್ತು ಜಾತಿ ವ್ಯವಸ್ಥೆಯನ್ನು ಅಳಿಸಿ ಹಾಕಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರ ಬೆನ್ನಲ್ಲೇ ದಲಿತ ಅಧಿಕಾರಿಯನ್ನು  ಏಕಾಏಕೀ ಎತ್ತಂಗಡಿ ಮಾಡಿರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ವಿಕಾಸ ಸೌಧ ನಾಲ್ಕನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 428 ರಲ್ಲಿ ಆರೇಳು ತಿಂಗಳಿನಿಂದಲೂ ಇದೇ ಶಾಖೆಯಲ್ಲಿ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯು ಸಚಿವರ ನಡೆಯಿಂದ ನೊಂದು ತಮಗಾಗಿರುವ ಅನ್ಯಾಯವನ್ನು ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್‌ ನಾಗಭೂಷಣ್‌ ಅವರಿಗೆ ವಾಟ್ಸಾಪ್‌ ಮೂಲಕ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ವಾಟ್ಸಾಪ್‌ನ ಸ್ಕ್ರೀನ್‌ ಶಾಟ್‌ ‘ದಿ ಫೈಲ್‌’ಗೆ ಲಭ್ಯವಾಗಿದೆ. ಗೌಪ್ಯತೆ ಕಾಪಾಡುವ ನಿಟ್ಟಿನಲ್ಲಿ ಅಧಿಕಾರಿ ಹೆಸರು ಮತ್ತು ವಾಟ್ಸಾಪ್‌ನ ಸ್ಕ್ರೀನ್‌ ಶಾಟ್‌ನ್ನು ಬಹಿರಂಗಪಡಿಸುತ್ತಿಲ್ಲ.

 

ಈ ಕುರಿತು ಡಾ ಅಜಯ್‌ ನಾಗಭೂಷಣ್‌ ಅವರಿಂದ ಪ್ರತಿಕ್ರಿಯೆ ಬಯಸಿ ‘ದಿ ಫೈಲ್‌’ ವಾಟ್ಸಾಪ್‌ ಮೂಲಕ ಲಿಖಿತ ಸಂದೇಶದ ಮೂಲಕ ಕೋರಿತ್ತು. ಇದುವರೆಗೂ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿ ಕಾರ್ಯನಿರ್ವಹಿಸುತ್ತಿದ್ದ ಹುದ್ದೆಗೆ ಸ್ವಜಾತಿ ಕುರುಬ ಸಮುದಾಯದ ಅಧಿಕಾರಿಯೊಬ್ಬರನ್ನು ನೇಮಿಸಲಾಗಿದೆ ಎಂದು ಗೊತ್ತಾಗಿದೆ. ಅಲ್ಲದೇ ಇದೇ ಶಾಖೆಯಲ್ಲಿ ಸರ್ಕಾರದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ, ಶಾಖಾಧಿಕಾರಿ ಮತ್ತು ಡೇಟಾ ಎಂಟ್ರಿ ಆಪರೇಟರ್ಸ್‌ ಸೇರಿದಂತೆ ಬಹುತೇಕರು ಕುರುಬ ಸಮುದಾಯಕ್ಕೆ ಸೇರಿದ ಅಧಿಕಾರಿಗಳಾಗಿದ್ದಾರೆ ಎಂದು ಗೊತ್ತಾಗಿದೆ.

 

ಸರ್ಕಾರದ ಕಾರ್ಯದರ್ಶಿ ಡಾ ಅಜಯ್‌ ನಾಗಭೂಷಣ್‌ (ಕುರುಬ), ಜಂಟಿ ಕಾರ್ಯದರ್ಶಿ ಸಂಗಪ್ಪ (ಕೆಎಎಸ್‌) ಚಂದ್ರು ಮತ್ತು ರಮೇಶ್‌ (ಸಹಾಯಕ, ಕಿರಿಯ ಸಹಾಯಕ)(ಜಂಟಿ ಕಾರ್ಯದರ್ಶಿ ಕಚೇರಿ) ಲತಾ ಕೆ (ಕುರುಬರು ) ಅಧೀನ ಕಾರ್ಯದರ್ಶಿ, ಲತಾ ಅವರಿಗೆ ಆಪ್ತ ಸಹಾಯಕ ಕುಶಾಲ್‌ (ಕುರುಬ), ನಾಗೇಶ್‌ (ಶಾಖಾಧಿಕಾರಿ), ನಟರಾಜ್‌, (ಕುರುಬ) ಉಮೇಶ್‌ (ಹಿರಿಯ ಸಹಾಯಕ) ಇವರು ಬೈರತಿ ಬಸವರಾಜು ಅವರು ಸಚಿವರಾಗಿದ್ದಾಗ ಕಾರ್ಯನಿರ್ವಹಿಸುತ್ತಿದ್ದರು. ಅದೇ ಅಧಿಕಾರಿಗಳನ್ನೂ ಬೈರತಿ ಸುರೇಶ್‌ ಅವರು ಮುಂದುವರೆಸಿದ್ದಾರೆ. ಜತೆಗೆ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯನ್ನು ಅಲ್ಲಿಂದ ಏಕಾಏಕೀ ಎತ್ತಂಗಡಿ ಮಾಡಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

 

ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯನ್ನು ನಗರಾಭಿವೃದ್ಧಿ ಇಲಾಖೆಯ ಕಾರ್ಪೋರೇಷನ್‌ (2) ವಿಭಾಗಕ್ಕೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ನಿಯೋಜಿಸಿತ್ತು. ಆದರೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಅಜಯ್‌ ನಾಗಭೂಷಣ್‌ ಅವರು ದಲಿತ ಅಧಿಕಾರಿಗೆ ಆ ಹುದ್ದೆ ನೀಡದೇ ಪೌರಾಡಳಿತ (2) ಮತ್ತು ಇಲಾಖೆ ವ್ಯಾಪ್ತಿಯ ಬೋರ್ಡ್‌ ವಿಭಾಗದಲ್ಲಿ ಅಧೀನ ಕಾರ್ಯದರ್ಶಿಯಾಗಿ ಆಂತರಿಕ ವರ್ಗಾವಣೆ ಮಾಡಿದ್ದರು. ಡಿಪಿಎಆರ್‍‌ ಮಾರ್ಗಸೂಚಿ ಪಾಲನೆ ಮಾಡದೆಯೇ ದಲಿತ ಅಧಿಕಾರಿಯನ್ನು ಆಂತರಿಕ ವರ್ಗಾವಣೆ ಮಾಡಿದ್ದರು ಎಂಬ ಆಪಾದನೆ ಕೇಳಿ ಬಂದಿದೆ.

 

2022ರ ನವೆಂಬರ್‍‌ನಲ್ಲಿ ಅಭಿವೃದ್ಧಿ ಪ್ರಾಧಿಕಾರಗಳು ಮತ್ತು ನಗರ, ಗ್ರಾಮಾಂತರ ಸೇವೆಗಳು ಶಾಖೆಗೆ ಇದೇ ಅಧಿಕಾರಿಯನ್ನು ಆಂತರಿಕ ವರ್ಗಾವಣೆ ಮಾಡಲಾಗಿತ್ತು. 2023ರ ಜೂನ್‌ನಲ್ಲಿ ಪೌರಾಡಳಿತ ಮತ್ತು ಬೋರ್ಡ್‌ಗೆ ಪುನಃ ಈ ಹಿಂದಿನ ಜಾಗಕ್ಕೆ ಆಂತರಿಕ ವರ್ಗಾವಣೆ ಮಾಡಲಾಗಿತ್ತು. ಈ ಹುದ್ದೆಯಲ್ಲಿ ಐದಾರು ತಿಂಗಳು ಕಾರ್ಯನಿರ್ವಹಿಸಿದ್ದರು. ಆದರೀಗ ಆ ಹುದ್ದೆಯಿಂದಲೂ ದಲಿತ ಅಧಿಕಾರಿಯನ್ನು ಎತ್ತಂಗಡಿ ಮಾಡಿ ಸ್ವಜಾತಿ ಕುರುಬ ಸಮುದಾಯಕ್ಕೆ ಸೇರಿದ ಮಹಿಳಾ ಅಧಿಕಾರಿ ಲತಾ ಎಂಬುವರನ್ನು ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಶಾಖೆಯಲ್ಲಿ ಇದ್ದ ಏಕೈಕ ದಲಿತ ಅಧಿಕಾರಿಯನ್ನು ಎತ್ತಂಗಡಿ ಮಾಡಿರುವ ಕಾರಣ ಇಡೀ ಶಾಖೆಯಲ್ಲಿ ಕುರುಬ ಸಮುದಾಯದ ಅಧಿಕಾರಿಗಳನ್ನು ನಿಯೋಜಿಸಿದಂತಾಗಿದೆ.

 

‘ಇಡೀ ಶಾಖೆಯಲ್ಲಿ ನಾನೊಬ್ಬನೇ ಪರಿಶಿಷ್ಟ ಜಾತಿಗೆ ಸೇರಿದ ಅಧಿಕಾರಿಯಾಗಿದ್ದೆ. ನನ್ನನ್ನು ಏಕಾಏಕೀ ವರ್ಗಾವಣೆ ಮಾಡುವ ಮೂಲಕ ನನಗೆ ಘೋರ ಅನ್ಯಾಯ ಮಾಡಲಾಗಿದೆ. ನಿಮ್ಮ ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಗೆ ಮನ್ನಣೆ ನೀಡುವ ಉದ್ದೇಶದಿಂದ ನನ್ನನ್ನು ವರ್ಗಾವಣೆ ಮಾಡುವ ಮೂಲಕ ನನಗೆ ಅಗೌರವ ತೋರಿಸಿದಂತಾಗಿದೆಯಲ್ಲದೇ ನನಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದರಿಂದ ತುಂಬಾ ಮನ ನೊಂದಿದ್ದೇನೆ. ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸದ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ನಾನು ಭಯದಲ್ಲಿದ್ದೇನೆ. ನಿಮ್ಮದೇ ಜಾತಿಗೆ ಸೇರಿದ ಅಧಿಕಾರಿ, ನೌಕರರಿಗೆ ಅವಕಾಶ ನೀಡಲು ನನ್ನನ್ನು ಕಡೆಗಣಿಸಿ ವರ್ಗಾವಣೆ ಮಾಡಿದ್ದು ಸರಿಯೇ,’ ಎಂದು ಡಾ ಅಜಯ್‌ ನಾಗಭೂಷಣ್‌ ಅವರಿಗೆ ವಾಟ್ಸಾಪ್‌ ಮೂಲಕ ಕಳಿಸಿರುವ ಸಂದೇಶದಲ್ಲಿ ದುಃಖವನ್ನು ತೋಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

SUPPORT THE FILE

Latest News

Related Posts