36,689 ನಕಲಿ ಆಧಾರ್‌ ಪ್ರಕರಣ ಪತ್ತೆ; ಸಾಮಾಜಿಕ ಭದ್ರತೆ ಪಿಂಚಣಿ ಪಾವತಿಯಲ್ಲೂ ಅಕ್ರಮ?

ಬೆಂಗಳೂರು; ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನ, ಅಂಗವಿಕಲ ವೇತನ, ಮನಸ್ವಿನಿ, ಮೈತ್ರಿ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ, ರೈತ ವಿಧವಾ ವೇತನ ಯೋಜನೆಗಳ ಫಲಾನುಭವಿಗಳಿಗೆ ಪಿಂಚಣಿ ಯೋಜನೆಗೆ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿ ಮಾಡಲಾಗುತ್ತಿದೆ ಎಂಬುದು ಇದೀಗ ಬಹಿರಂಗವಾಗಿದೆ.

 

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸುವ ಸಂಬಂಧ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಮೇ 24 ಮತ್ತು 25ರಂದು ನಡೆಸಿದ ವಿಡಿಯೋ ಸಂವಾದದಲ್ಲಿ ಈ ವಿಚಾರವು ಪ್ರಸ್ತಾಪವಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಅಧಿಕಾರ ವಹಿಸಿಕೊಂಡಿರುವ ಬೆನ್ನಲ್ಲೇ ನಕಲಿ ಆಧಾರ್‌ ಸೀಡಿಂಗ್‌ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು 2023ರ ಜೂನ್‌ 2ರಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯದಲ್ಲಿ 39,689 ಡ್ಯೂಪ್ಲಿಕೇಟ್‌ ಆಧಾರ್ ಪ್ರಕರಣಗಳಿವೆ. ಈ ಪ್ರಕರಣಗಳ ಸಂಬಂಧ ಜಿಲ್ಲೆಗಳಲ್ಲಿ ಪರಿಶೀಲಿಸಿ ಒಬ್ಬ ಫಲಾನುಭವಿ ಎರಡೆರಡು ಪಿಂಚಣಿ ಪಡೆಯುತ್ತಿದ್ದಲ್ಲಿ ಸರಿಯಾದ ಮಾಹಿತಿಯುಳ್ಳ ಪ್ರಕರಣವನ್ನು ಉಳಿಸಿಕೊಂಡು ಇನ್ನೊಂದು ಪ್ರಕರಣವನ್ನು ರದ್ದುಪಡಿಸಬೇಕು. ಒಂದೇ ಆಧಾರ್‍‌ ಸಂಖ್ಯೆಯನ್ನು ಒಬ್ಬರು ಹಾಗೂ ಅದಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಜೋಡಣೆಯಾಗಿದ್ದಲ್ಲಿ ಅಂತಹ ಪ್ರಕರಣಗಳಲ್ಲಿ ಫಲಾನುಭವಿಗಳ ಸರಿಯಾದ ಮಾಹಿತಿಯನ್ನು ಸಂಗ್ರಹಿಸಿ ಸರಿಯಾದ ಆಧಾರ್‍‌ ಮಾಹಿತಿಯನ್ನು ಫಲಾನುಭವಿಗೆ ಜೋಡಣೆ ಮಾಡಬೇಕು,’ ಎಂದು ಪತ್ರದಲ್ಲಿ ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ನಿರ್ದೇಶನಾಲಯದ ನಿರ್ದೇಶಕರು ಬರೆದಿರುವ ಪತ್ರದ ಪ್ರಕಾರ ಫಲಾನುಭವಿಗಳಿಗೆ ಎರಡೆರಡು ಪಿಂಚಣಿ ಪಾವತಿಯಾಗುತ್ತಿರುವ ಈ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆಯೇ ಎಂಬ ಅನುಮಾನಗಳಿಗೂ ದಾರಿಮಾಡಿಕೊಟ್ಟಂತಾಗಿದೆ.

 

‘ರಾಜ್ಯದಲ್ಲಿ ಇನ್ನೂ 69,745 ಪ್ರಕರಣಗಳು ಆಧಾರ್‍‌ ಸೀಡಿಂಗ್‌ಗೆ ಬಾಕಿ ಇವೆ. ಈ ಕುರಿತು ಕೂಡಲೇ ಪರಿಶೀಲಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರಿಗೆ ಪಟ್ಟಿಯನ್ನು ಒದಗಿಸಿ ಅರ್ಹ ಫಲಾನುಭವಿಗಳಿಂದ ಬಾಕಿ ಇರುವ ಪ್ರಕರಣಗಳ ಆಧಾರ್‍‌ ಮಾಹಿತಿಯನ್ನು ಸಂಗ್ರಹಿಸಿ ಬ್ಯಾಂಕ್‌ಗಳ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು,’ ಎಂದು ಇದೇ ಪತ್ರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

 

ರಾಜ್ಯದಲ್ಲಿ 33,327 ಪ್ರಕರಣಗಳಲ್ಲಿ ಪಿಂಚಣಿಯನ್ನು ಇಎಂಒ ಮೂಲಕ ಪಡೆಯುತ್ತಿದ್ದ ಕಾರಣ ಪಿಂಚಣಿಯನ್ನು ಸ್ಥಗಿತಗೊಳಿಸಲಾಗಿತ್ತು. ಈ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಪರಿಶೀಲಿಸಿ ಅಂಚೆ ಇಲಾಖೆಯ ಸಮನ್ವಯದೊಂದಿಗೆ ಅಂಚೆ ಉಳಿತಾಯ ಖಾತೆ ಅಥವಾ ಬ್ಯಾಂಕ್‌ ಖಾತೆ ತೆರೆದು ಬ್ಯಾಂಕ್‌ ಸಮನ್ವಯದೊಂದಿಗೆ ಎನ್‌ಪಿಸಿಐ ಮ್ಯಾಪಿಂಗ್‌ಗೆ ಕ್ರಮ ವಹಿಸಬೇಕು ಎಂದು ನಿರ್ದೇಶಿಸಿರುವುದು ಪತ್ರದಿಂದ ಗೊತ್ತಾಗಿದೆ.

 

ಪಿಂಚಣಿ ಯೋಜನೆಯನ್ನು ಇದೀಗ ನೇರ ಹಣ ಸಂದಾಯ ಯೋಜನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಉಡುಪಿ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಈ ಯೋಜನೆಯಡಿ ಪ್ರಾಯೋಗಿಕ ಜಿಲ್ಲೆಗಳನ್ನಾಗಿ ಪರಿಗಣಿಸಿ, ಮೊದಲನೆ ಹಂತದಲ್ಲಿ ಈ ಜಿಲ್ಲೆಗಳಲ್ಲಿ ಮಾಸಿಕ ಪಿಂಚಣಿ ಯೋಜನೆಗಳನ್ನು ಆಧಾರ್‍‌ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿರುವುದು ಪತ್ರದಿಂದ ತಿಳಿದು ಬಂದಿದೆ.

 

ನೇರ ಹಣ ಸಂದಾಯ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಎನ್‌ಪಿಸಿಐ ಸೀಡಿಂಗ್‌ ಸ್ಟೇಟಸ್‌, ಹೆಸರು ಹೊಂದಾಣಿಕೆಯಾಗದ ಪ್ರಕರಣಗಳಲ್ಲಿ ಪ್ರಾಥಮಿಕ ಹಂತದ ಕಾರ್ಯಗಳನ್ನು ನಿರ್ದೇಶನಾಲಯದ ಮಟ್ಟದಲ್ಲಿ ಕೈಗೊಳ್ಳಲಾಗುತ್ತಿದೆ. ಈ ಪ್ರಕರಣಗಳನ್ನು ಎನ್‌ ಪಿಸಿಐನಲ್ಲಿ2016ರ ಹಿಂದಿನ ಸೀಡಿಂಗ್ ಪ್ರಕರಣಗಳು, ಎನ್‌ಪಿಸಿಐ ಸೀಡಿಂಗ್‌ ಬಾಕಿ ಇರುವ ಪ್ರಕರಣಗಳು, ಡ್ಯೂಪ್ಲಿಕೇಟ್‌ ಆಧಾರ್‍‌ ಪ್ರಕರಣಗಳು ಎಂದು ವರ್ಗೀಕರಿಸಲಾಗಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

‘ಜೂನ್‌ 2023ರಿಂದಲೇ ಮಾಸಿಕ ಪಿಂಚಣಿ ಯೋಜನೆಯನ್ನು ಆಧಾರ್ ಆಧರಿತ ನೇರ ಹಣ ಸಂದಾಯ ಯೋಜನೆಯಡಿ ತರಲು ನಿರ್ಧರಿಸಿರುವುದರಿಂದ ಆಧಾರ್‍‌ ಸಂಗ್ರಹಣೆ ಕಾರ್ಯಕ್ಕೆ ಆದ್ಯತೆ ನೀಡಿ ಪೂರ್ಣಗೊಳಿಸಬೇಕು. ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡಿರುವ ಉಡುಪಿ,ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಡವರು ಅಂಚೆ ಇಲಾಖೆ ಹಾಗೂ ಲೀಡ್‌ ಬ್ಯಾಂಕ್‌ ನೊಂದಿಗೆ ತುರ್ತಾಗಿ ಸಭೆ ನಡೆಸಿ ಪ್ರಗತಿ ಸಾಧಿಸಬೇಕು,’ ಎಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.

 

ಆಧಾರ್‌, ಪಾನ್‌ ಲಿಂಕ್‌ ಮಾಡುವ ಸಮಸ್ಯೆಯಿಂದಾಗಿ ಬೆಂಗಳೂರು ನಗರವೊಂದರಲ್ಲೇ ಸುಮಾರು 300 ಹಿರಿಯ ನಾಗರಿಕರು ಹಲವು ತಿಂಗಳಿಂದ ಪಿಂಚಣಿ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಏಳು ವಾರ್ಡ್‌ಗಳಲ್ಲಿ ಸ್ಲಂ ಮಹಿಳಾ ಸಂಘಟನೆ ಯೊಂದು ನಡೆಸಿದ್ದ ಸಮೀಕ್ಷೆ ತಿಳಿಸಿತ್ತು.

 

ಈ ಪೈಕಿ ಶೇ.90 ರಷ್ಟು ನಾಗರಿಕರು ಪರಿಶಿಷ್ಟ ಸಮುದಾಯಗಳಿಗೆ ಸೇರಿದ್ದಾರೆ. ಅವರಲ್ಲಿ ವಯಸ್ಸಾದವರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರು ಇದ್ದಾರೆ. ಹಲವರು ಹಣಕಾಸಿನ ಸಮಸ್ಯೆಯಿಂದಾಗಿ ಔಷಧಗಳನ್ನು ಕೊಳ್ಳುವುದನ್ನು ನಿಲ್ಲಿಸಿದ್ದಾರೆ ಎಂದೂ ಸಮೀಕ್ಷೆಯಿಂದ ತಿಳಿದು ಬಂದಿತ್ತು.

 

ಅದೇ ರೀತಿ ಹಲವರಿಗೆ ಸರಿಯಾಗಿ ಪಿಂಚಣಿ ಬರುತ್ತಿಲ್ಲ. ಪಿಪಿಒ (ಪೆನ್ಷನ್‌ ಪೇಮಂಡ್‌ ಆರ್ಡರ್‌) ಐಡಿ ಮತ್ತು ಬ್ಯಾಂಕ್‌ ಖಾತೆಗೆ ಪಾನ್‌ ನಂಬರ್‌, ಆಧಾರ್‌ ಜೋಡಣೆಯಾಗದಿರುವುದೇ ಪಿಂಚಣಿ ಸ್ಥಗಿತಗೊಳ್ಳಲು ಪ್ರಮುಖ ಕಾರಣವಾಗಿದೆ ಎಂಬುದು ಸಮೀಕ್ಷೆಯು ಬಹಿರಂಗಪಡಿಸಿತ್ತು.

 

ಹಲವರು ಆಧಾರ್‌ ಕಾರ್ಡ್‌ ಪಡೆಯುವಾಗ ನೀಡಿದ ಮೊಬೈಲ್‌ ಸಂಖ್ಯೆಯನ್ನು ಈಗ ಹೊಂದಿಲ್ಲ. ಹೀಗಾಗಿ ಒಟಿಪಿ ಮೂಲಕ ವೆರಿಫಿಕೇಶನ್‌ ಪೂರ್ಣಗೊಳ್ಳದೆ ಹಲವರ ಪಿಂಚಣಿ ಸ್ಥಗಿತಗೊಂಡಿತ್ತು. ಆಧಾರ್‌ ಜತೆ ಜೋಡಣೆಯಾಗಿರುವ ಮೊಬೈಲ್‌ ನಂಬರ್‌ ಇಲ್ಲದೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾನಾ ಸೇವೆ, ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್‌ ಪಡೆಯಲು ಕೂಡ ತೊಂದರೆಯಾಗಿತ್ತು ಎಂಬುದನ್ನು ಸಮೀಕ್ಷೆಯು ಹೊರಗೆಡವಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts