ಅಲ್ಪಸಂಖ್ಯಾತರ ಅಧಿಕಾರಿಗಳನ್ನು ದೂರವಿರಿಸಿ, ಸ್ವಜಾತಿ, ಬಿಜೆಪಿ ದುರಾಡಳಿತ ಅವಧಿಯಲ್ಲಿನ ಅಧಿಕಾರಿಗಳಿಗೆ ಮಣೆ

ಬೆಂಗಳೂರು; ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಪಿಎಸ್‌ಐ ಹಗರಣ, ಲೋಕೋಪಯೋಗಿ ಇಲಾಖೆಯಲ್ಲೂ ಶೇ.40 ಕಮಿಷನ್‌ ಆರೋಪ ಮತ್ತು ಕೋಮು ಗಲಭೆ ಪ್ರಚೋದಿತ ಭಾಷಣಗಳು, ಟಿಪ್ಪುವಿನಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಿ ಎಂದು ಕೊಲೆಗೆ ಪ್ರಚೋದನೆ, ದ್ವೇಷ ಭಾಷಣ ಮಾಡಿದ್ದವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವಲ್ಲಿ ಭಂಡ ನಿರ್ಲಕ್ಷ್ಯ ವಹಿಸಿದ್ದ ಒಳಾಡಳಿತ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಅವರನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿರುವುದು ಅಧಿಕಾರಶಾಹಿಯೊಳಗೇ ಚರ್ಚೆ ಹುಟ್ಟು ಹಾಕಿದೆ.

 

ಅದೇ ರೀತಿ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಎನ್‌ ಜಯರಾಮ್‌ ಅವರು ರಾಷ್ಟ್ರೋತ್ಥಾನ ಪರಿಷತ್‌, ಸಂಘ ಪರಿವಾರದ ಹಿನ್ನೆಲೆಯ ಜನಸೇವಾ ಟ್ರಸ್ಟ್‌ಗೆ ನಿಯಮಬಾಹಿರವಾಗಿ ಗೋಮಾಳ ಮಂಜೂರು ಮಾಡಿ ಆದೇಶ ಹೊರಡಿಸಿದ್ದರು. ಅಲ್ಲದೇ ಹಾವೇರಿ, ಕಲ್ಬುರ್ಗಿ, ಚಿಕ್ಕಮಗಳೂರು, ಮೈಸೂರು ಸೇರಿದಂತೆ ಹಲವೆಡೆ ರಾಷ್ಟ್ರೋತ್ಥಾನ ಪರಿಷತ್‌ಗೆ ನಿಯಮಬಾಹಿರವಾಗಿ ಗೋಮಾಳ ಮಂಜೂರು ಮಾಡಿ ಆದೇಶಿಸಿದ್ದರು. ಆದರೂ ಇದೇ ಜಯರಾಮ್‌ ಅವರನ್ನು ಮುಖ್ಯಮಂತ್ರಿಗಳಿಗೆ  ಕಾರ್ಯದರ್ಶಿಯನ್ನಾಗಿ ನೇಮಿಸಿಕೊಳ್ಳಲಾಗಿದೆ.

 

ಈ ಬಾರಿ ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೇರಿರುವುದರ ಹಿಂದೆ ಅಲ್ಪಸಂಖ್ಯಾತ ಸಮುದಾಯಗಳ ಮತಗಳು ಬಹಳಷ್ಟು ಮಟ್ಟಿಗೆ ಕಾರಣವಾಗಿವೆ. ಆದರೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಯಾವೊಬ್ಬ ಅಧಿಕಾರಿಯನ್ನು ನೇಮಿಸದಿರುವುದು ಈ ಸಮುದಾಯಗಳ ಅಧಿಕಾರಿಗಳ ಕೆಂಗಣ್ಣಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರಿಯಾಗಿದ್ದಾರೆ. ಆದರೆ ಸ್ವಜಾತಿ ಅಧಿಕಾರಿಗಳಿಗೆ, ಸಂಬಂಧಿಕರಿಗೆ ಮುಖ್ಯಮಂತ್ರಿ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಯಂತಹ ಹುದ್ದೆಗಳನ್ನು ಸೃಜಿಸಿ ನೇಮಿಸಲಾಗಿದೆ.

 

ಗೋಯಲ್‌ ನೇಮಕಕ್ಕೆ ಆಕ್ಷೇಪವೇಕೆ?

 

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ಅರ್ಹ ಐಎಎಸ್‌ ಉನ್ನತ ಅಧಿಕಾರಿಗಳು ಇದ್ದರೂ ಸಿದ್ದರಾಮಯ್ಯ ಅವರು ರಜನೀಶ್‌ ಗೋಯಲ್‌ ಅವರನ್ನೇ ನೇಮಿಸಿಕೊಂಡಿರುವುದಕ್ಕೆ ಅಧಿಕಾರಶಾಹಿ ವಲಯದಲ್ಲಿ ತೀವ್ರ ಆಕ್ಷೇಪಗಳು ಕೇಳಿ ಬಂದಿವೆ.

 

ಬಿಜೆಪಿ, ಬಜರಂಗ ದಳ ಸೇರಿದಂತೆ ಹಿಂದೂ ಪರ ಸಂಘಟನೆಗಳಿಗೆ ಸೇರಿದ ನೂರಾರು ಕಾರ್ಯಕರ್ತರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದರೂ ಅವುಗಳನ್ನು ವಿಚಾರಣೆಯಿಂದಲೇ ಹಿಂಪಡೆಯುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್‌ ಗೋಯಲ್‌ ಅವರೇ ಸಚಿವ ಸಂಪುಟಕ್ಕೆ ಕಡತವನ್ನು ಮಂಡಿಸಿ ಸರ್ಕಾರದ ಆದೇಶವನ್ನು ಹೊರಡಿಸಿದ್ದರು.

 

ಅಲ್ಲದೇ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹಿಂಪಡೆದುಕೊಂಡಿದ್ದರು ಎಂದು ಬಿಜೆಪಿ ಸಚಿವರು ಪದೇ ಪದೇ ಟೀಕಿಸಿದ್ದರು. ಈ ಸಂಬಂಧ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಪಿಎಫ್‌ಐ, ಎಸ್‌ಡಿಪಿಐ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದುಕೊಂಡಿರುವ ಬಗ್ಗೆ ಮಾಹಿತಿ ಕೇಳಿದ್ದರೂ ಇದೇ ರಜನೀಶ್‌ ಗೋಯಲ್‌ ಅವರ ಕಚೇರಿಯು ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ.

 

ಅಷ್ಟೇ ಅಲ್ಲದೇ ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದ ಹಿಂದಿನ ಸರ್ಕಾರದ ಸಚಿವ ಡಾ ಅಶ್ವಥ್‌ನಾರಾಯಣ್‌ ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್‌ ಅಧಿಕಾರಿಗಳಿಗೆ ರಜನೀಶ್‌ ಗೋಯಲ್‌ ಅವರು ಸೂಚಿಸಿರಲಿಲ್ಲ. ಆದರೀಗ ಇವರನ್ನೇ ತಮ್ಮ ಕಚೇರಿಗೆ ನೇಮಿಸಿಕೊಂಡಿರುವುದು ವಿರೋಧಾಭಾಸಕ್ಕೆ ಕಾರಣವಾಗಿದೆ.

 

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಜಂಟಿಯಾಗಿ ನಡೆಸಿದ್ದ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿಯೂ ಟಿಪ್ಪುವಿನಂತೆ ಸಿದ್ದರಾಮಯ್ಯರನ್ನೂ ಹೊಡೆದು ಹಾಕಿ ಎಂದು ಕೊಲೆಗೆ ನೀಡಿದ್ದ ಪ್ರಚೋದನೆ, ದ್ವೇಷ ಭಾಷಣ ಮಾಡಿದ್ವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಅಶಾಂತಿ, ಗಲಭೆ ವಾತಾವರಣ ಸೃಷ್ಟಿಗೆ ಕಾರಣವಾಗಿದ್ದರೂ ಪೊಲೀಸ್‌ ಇಲಾಖೆಯು ನಿರ್ಲಕ್ಷ್ಯ ವಹಿಸಿದ್ದರ ಕುರಿತು ಪ್ರಸ್ತಾಪವಾಗಿತ್ತು. ಪೊಲೀಸ್‌ ಕೇಸರೀಕರಣದ ಕುರಿತು ಡಿ ಕೆ ಶಿವಕುಮಾರ್‌ ಅವರು ಕಿಡಿ ಕಾರಿದ್ದರು.

 

ಅಲ್ಲದೇ ಪಿಎಸ್‌ಐ ಹಗರಣದ ಕುರಿತು ದಾಖಲೆ ಬಿಡುಗಡೆ ಮಾಡಿದ್ದ ಪ್ರಿಯಾಂಕ್‌ ಖರ್ಗೆ ಅವರಿಗೆ ಪೊಲೀಸ್‌ ಇಲಾಖೆ ನೀಡಿದ್ದ ಕಿರುಕುಳದ ಬಗ್ಗೆಯೂ ಇದೇ ಸಭೆಯಲ್ಲಿಯೇ ಕಿಡಿ ಕಾರಿದ್ದರು. ಈ ಸಭೆಯಲ್ಲಿ ರಜನೀಶ್‌ ಗೋಯಲ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಭಾಗವಹಿಸಿದ್ದರು. ಆದರೆ ರಜನೀಶ್‌ ಗೋಯಲ್‌ ಅವರು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಿರುವುದಕ್ಕೆ ಇದುವರೆಗೂ ತಗಾದೆ ತೆಗೆಯದಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯಲ್ಲಿ ಲಂಚಗುಳಿತನ ನಡೆಯುತ್ತಿದೆ ಎಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ವಿಧಾನಸಭೆ ಅಧಿವೇಶನದಲ್ಲಿ ದನಿ ಎತ್ತಿದ್ದರು. ಪಿಎಸ್‌ಐ ಹಗರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗಂಭೀರ ಆರೋಪಕ್ಕೀಡಾಗಿದ್ದ ಎಡಿಜಿಪಿ ಅಮೃತ್‌ಪೌಲ್‌ ಅವರ 164 ಹೇಳಿಕೆಯನ್ನು ಪಡೆದುಕೊಳ್ಳುವಲ್ಲಿ ಪೊಲೀಸ್‌ ಅಧಿಕಾರಿಗಳು ವಿಳಂಬ ಎಸಗಿದ್ದಾರೆ ಎಂದೂ ವಿಧಾನಸಭೆ ಅಧಿವೇಶನದಲ್ಲಿ ಆರೋಪಿಸಿದ್ದರು. ಆದರೂ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಜನೀಶ್‌ ಗೋಯಲ್‌ ಅವರು ಈ ಸಂಬಂಧ ಯಾವುದೇ ಕಠಿಣ ನಿರ್ಧಾರ ಕೈಗೊಂಡಿರಲಿಲ್ಲ.

 

ಅಲ್ಲದೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ್ದ 40 ಪರ್ಸೆಂಟ್‌ ಕಮಿಷನ್‌ ಆರೋಪವು ಪಿಡಬ್ಲ್ಯೂಡಿ ಇಲಾಖೆಯ ಮೇಲಿತ್ತು. ಒಳಾಡಳಿತ ಇಲಾಖೆ ಜತೆಗೆ ಲೋಕೋಪಯೋಗಿ ಇಲಾಖೆಗೂ ರಜನೀಶ್‌ ಗೋಯಲ್‌ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಪಿಡಬ್ಲ್ಯೂಡಿ ಇಲಾಖೆಯು 4,500 ಕೋಟಿ ರು.ಗಳನ್ನು ಗುತ್ತಿಗೆದಾರರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಪ್ರಕರಣಗಳನ್ನೂ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು  ಆಗ್ರಹಿಸಿದ್ದನ್ನು ಸ್ಮರಿಸಬಹುದು.

 

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಎನ್‌ ಜಯರಾಮ್‌ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದಕ್ಕೆ ಅಧಿಕಾರಿಶಾಹಿಯಲ್ಲಿ ಭಿನ್ನಾಭಿಪ್ರಾಯಗಳು ಕೇಳಿ ಬಂದಿವೆ. ರಾಷ್ಟ್ರೋತ್ಥಾನ ಪರಿಷತ್‌ ಮತ್ತು ಸಂಘ ಪರಿವಾರದ ಹಿನ್ನೆಲೆಯ ಜನಸೇವಾ ಟ್ರಸ್ಟ್‌ಗೆ ಕಾನೂನುಬಾಹಿರವಾಗಿ ಗೋಮಾಳವನ್ನು ಮಂಜೂರು ಮಾಡಿದ್ದ ಅವಧಿಯಲ್ಲಿಯೂ ಎನ್‌ ಜಯರಾಮ್‌ ಅವರು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದರು.

 

ಜನಸೇವಾ ಟ್ರಸ್ಟ್‌ಗೆ ಮಾರ್ಗಸೂಚಿ ದರದ ಶೇ.5ರ ದರದಲ್ಲಿ 35 ಎಕರೆ ಮಂಜೂರು ಮಾಡಿದ್ದಲ್ಲದೇ ಸರ್ಕಾರದ ಬೊಕ್ಕಸಕ್ಕೆ 139 ಕೋಟಿಗೂ ಹೆಚ್ಚು ನಷ್ಟಕ್ಕೆ ಜಯರಾಮ್‌ ಅವರು ಕಾರಣರಾಗಿದ್ದರು. ಹಿಂದಿನ ಬಿಜೆಪಿ ಸರ್ಕಾರದೊಂದಿಗೆ ಸೈದ್ದಾಂತಿಕ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದ ಸಿದ್ದರಾಮಯ್ಯ ಅವರು ಇದೀಗ ಸಂಘ ಪರಿವಾರದ ಅಂಗ ಸಂಸ್ಥೆಗಳಿಗೆ ಕಾನೂನುಬಾಹಿರವಾಗಿ ಗೋಮಾಳ ಮಂಜೂರು ಮಾಡಿದ್ದ ಅಧಿಕಾರಿಯನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಸ್ವಜಾತಿ ಅಧಿಕಾರಿಗಳಿಗೆ ಮನ್ನಣೆ

 

ಅದೇ ರೀತಿ ಸ್ವಜಾತಿ ಕುರುಬ ಸಮುದಾಯಕ್ಕೆ ಸೇರಿದ ಕೆಎಎಸ್‌ ಅಧಿಕಾರಿ ಶಿವಸ್ವಾಮಿ, ನಿವೃತ್ತ ಅಧಿಕಾರಿ ರಾಮಯ್ಯ ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ, ಎನ್‌ ಮಹದೇವ್‌ ಅವರನ್ನು ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ, ಕೆ ವಿ ಪ್ರಭಾಕರ್‍‌ ಅವರನ್ನು ಮಾಧ್ಯಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಗಿದೆ. ಈ ಪೈಕಿ ಶಿವಸ್ವಾಮಿ ಮತ್ತು ಎನ್‌ ಮಹದೇವ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಬಂಧಿ ಎಂದೂ ಗೊತ್ತಾಗಿದೆ.

 

 

ಇನ್ನು ಸದಾನಂದಗೌಡ ಮತ್ತು ಬಿ ಎಸ್‌ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೆಚ್ಚುವರಿ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯವಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಕೆ ಚಿರಂಜೀವಿ ಅವರು ಈಗ ಮುಖ್ಯಮಂತ್ರಿಗಳಿಗೆ ವಿಶೇಷ ಕರ್ತವ್ಯಾಧಿಕಾರಿಯನ್ನಾಗಿ ನೇಮಿಸಿಕೊಂಡಿದ್ದಾರೆ.

 

ವೈಷ್ಣವಿ ಅವರು ಬಿ ಗುಂಪಿನ ಅಧಿಕಾರಿಯಾಗಿದ್ದರೂ ಅವರನ್ನು ಎ ಗುಂಪಿನ ದರ್ಜೆ ಅಧಿಕಾರಿಗಳ ಸ್ಥಾನಕ್ಕೆ ನೇಮಿಸಲಾಗಿದೆ. ಇವರು ಇತ್ತೀಚಿನವರೆಗೆ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಹೆಚ್ಚುವರಿ ಆಪ್ತ ಕಾರ್ಯದರ್ಶಿಯಾಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಕೊಂಡಿರುವ ಇವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಚೇರಿ ನೀಡಲಾಗಿದೆ.

 

ಸಿಎಂ ಕಚೇರಿಯಲ್ಲಿಲ್ಲ ಅಲ್ಪಸಂಖ್ಯಾತ ಸಮುದಾಯದ ಅಧಿಕಾರಿಗಳು

 

ಹಾಗೆಯೇ ಸಣ್ಣಪುಟ್ಟ ಜಾತಿಯವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಿ ಸಾಮಾಜಿಕ ನ್ಯಾಯ ನೀತಿಯನ್ನು ಪಾಲಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿರುವ ಅಧಿಕಾರಿ, ನೌಕರರನ್ನು ಮುಖ್ಯಮಂತ್ರಿಗಳ ಸಚಿವಾಲಯದಿಂದಲೇ ದೂರ ಇಟ್ಟಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿಲುವಿಗೆ ಈ ಎರಡೂ ಸಮುದಾಯಗಳಿಂದ ಅಸಮಾಧಾನ ವ್ಯಕ್ತವಾಗಿದೆ.

 

ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯಕ್ಕೆ ಸೇರಿದ ಅರ್ಹ ಉನ್ನತ ಅಧಿಕಾರಿಗಳಿದ್ದರೂ ಸಹ ಅವರನ್ನು ನೇಮಿಸಿಕೊಂಡಿಲ್ಲ. ಮುಖ್ಯಮಂತ್ರಿಗಳ ಸಚಿವಾಲಯಕ್ಕೆ ಮುಸ್ಲಿಂ ಅಧಿಕಾರಿಗಳನ್ನು ನೇಮಿಸಬಾರದು ಎಂದು ಸಿದ್ದರಾಮಯ್ಯ ಅವರ ನಿಕಟವರ್ತಿ ಶಾಸಕರೊಬ್ಬರ ಸಲಹೆ ಮೇರೆಗೆ ಯಾವೊಬ್ಬ ಮುಸ್ಲಿಂ ಅಧಿಕಾರಿಯನ್ನೂ ಸಿಎಂ ಕಚೇರಿಗೆ ನೇಮಿಸಿಲ್ಲ ಎಂದು ತಿಳಿದು ಬಂದಿದೆ. ಈ ಮಧ್ಯೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ವಿವಾದದ ತೀರ್ಮಾನಗಳನ್ನು ಕೈಗೊಂಡು ಆದೇಶ ಹೊರಡಿಸಿದ್ದ ಬಹುತೇಕ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಚಿವಾಲಯಕ್ಕೆ ನೇಮಿಸಿಕೊಂಡಿದ್ದಾರೆ.

 

‘ಈಗ ನಡೆದಿರುವ ಚುನಾವಣೆಯಲ್ಲಿ ಶೇ.96ರಿಂದ ಶೇ.99ರಷ್ಟು ಮತಗಳು ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದವರು ಕಾಂಗ್ರೆಸ್‌ಗೆ ಮತಗಳನ್ನು ಹಾಕಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ ಎಂದರೆ ಈ ಎರಡೂ ಸಮುದಾಯದ ಮತಗಳು ಪ್ರಧಾನವಾಗಿವೆ. ಕ್ರಿಶ್ಚಿಯನ್‌ ಮತ್ತು  ಮುಸ್ಲಿಂ ಸಮುದಾಯದಲ್ಲಿಯೂ ಅರ್ಹರಾದ ಉನ್ನತ ಅಧಿಕಾರಿಗಳಿದ್ದಾರೆ. ಏಕೆ ಅವರನ್ನು ಮುಖ್ಯಮಂತ್ರಿ ಸಚಿವಾಲಯದಲ್ಲಿ ನಿಯೋಜಿಸಿಲ್ಲ. ತಕ್ಷಣವೇ ಮುಖ್ಯಮಂತ್ರಿಗಳು ಇನ್ನಾದರೂ ಪರಿಶೀಲಿಸಿ ತಕ್ಷಣವೇ ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯದ ಅರ್ಹ ಅಧಿಕಾರಿಗಳನ್ನು ಸೇರಿಸಿಕೊಳ್ಳಬೇಕು,’  ಎನ್ನುತ್ತಾರೆ ಇಂಡಿಯನ್‌ ಕ್ರಿಶ್ಚಿಯನ್‌ ಯುನೈಟೆಡ್‌ ಫೋರಂ ಪ್ರಧಾನ ಕಾರ್ಯದರ್ಶಿ ಐದಾ ಮಾರ್ಗರೇಟ್‌ ‘ಡಿ’ ಕೋನ.

SUPPORT THE FILE

Latest News

Related Posts