108 ಆರೋಗ್ಯ ಕವಚ; ಹಲವು ಸಮಿತಿಗಳು 14 ಸಭೆ ನಡೆಸಿದ್ದರೂ ಟೆಂಡರ್‌ ಅಂತಿಮಗೊಳಿಸುವಲ್ಲಿ ವಿಫಲ

ಬೆಂಗಳೂರು; ಆರೋಗ್ಯ ಕವಚ 108 ಯೋಜನೆ ಅನುಷ್ಠಾನಗೊಳಿಸಲು ಸೇವಾದಾರರನ್ನು ಆಯ್ಕೆ ಮಾಡಲು ಒಂದರ ಮೇಲೆ ಒಂದು ಸಮಿತಿಗಳನ್ನು ರಚಿಸಿದ್ದರೂ ಇದುವರೆಗೂ ಟೆಂಡರ್‌ನ್ನು ಅಂತಿಮಗೊಳಿಸುವಲ್ಲಿ ವಿಫಲವಾಗಿರುವುದು ಇದೀಗ ಬಹಿರಂಗವಾಗಿದೆ.

 

ಆರೋಗ್ಯ ಕವಚ ಯೋಜನೆಗೆ ಸೇವಾದಾರರನ್ನು ಆಯ್ಕೆ ಮಾಡುವ ಸಂಬಂಧ ರಚಿಸಿರುವಷ್ಟು ಸಮಿತಿಗಳಿಗೆ ಹೋಲಿಸಿದರೆ ಇಷ್ಟೊಂದು ಸಮಿತಿಗಳು ಬೇರೆ ಯಾವುದೇ ವಿಷಯಕ್ಕೂ ರಚನೆಯಾಗಿರಲಿಲ್ಲ. 2022ರ ಡಿಸೆಂಬರ್‌ವರೆಗೆ ಒಟ್ಟು 14 ಸಭೆಗಳನ್ನು ಸಮಿತಿಯು ನಡೆಸಿದ್ದರೂ ಟೆಂಡರ್‌ನ್ನು ಅಂತಿಮಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದಕ್ಕೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯೂ ಗಂಭೀರವಾದ ಆಕ್ಷೇಪ ಎತ್ತಿತ್ತು.

 

ಈ ಸಂಬಂಧ ‘ದಿ ಫೈಲ್‌’ಗೆ ಹಲವು ಮಹತ್ವದ ದಾಖಲೆಗಳು ಲಭ್ಯವಾಗಿವೆ. ಈ ದಾಖಲೆಗಳನ್ನಾಧರಿಸಿ ‘ದಿ ಫೈಲ್‌’ ಇದೀಗ  ಟೆಂಡರ್ ಪ್ರಕ್ರಿಯೆ ವಿವಿಧ ಮುಖಗಳನ್ನು ತೆರೆದಿಟ್ಟಿದೆ.

 

ತಾಂತ್ರಿಕ ಸಮಿತಿ, ತಾಂತ್ರಿಕ ಮತ್ತು ಸಲಹಾ ಸಮಿತಿಗಳು 9 ಸಭೆಗಳು, ಪ್ರಸ್ತಾವನೆ ಪರಿಶೀಲನಾ ಸಮಿತಿಯು 4 ಸಭೆಗಳನ್ನು ಮಾಡಿದೆ. ಮುಖ್ಯ ಕಾರ್ಯದರ್ಶಿ ಹಂತದಲ್ಲಿ ಎಷ್ಟು ಸಭೆಗಳಾಗಿವೆ ಎಂಬ ಮಾಹಿತಿ ಇಲ್ಲ. ಹೈಕೋರ್ಟ್‌ ಪದೇಪದೇ ಟೆಂಡರ್‌  ಪೂರ್ಣಗೊಳಿಸುವಂತೆ ಹೇಳಿತ್ತು. ಮುಖ್ಯ ನ್ಯಾಯಾಧೀಶರ ಪೀಠವೇ ಇದನ್ನು ಹಿಂಬಾಲಿಸಿದ್ದರೂ 5 ವರ್ಷದಿಂದಲೂ ಟೆಂಡರ್‌ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗಿಲ್ಲ ಎಂಬುದು ದಾಖಲೆಗಳಿಂದ ಗೊತ್ತಾಗಿದೆ. ಸಚಿವ ಸುಧಾಕರ್‌ ಅವರ ಸೂಚನೆ ಮೇರೆಗೆ ಹಿಂದಿನ ಟೆಂಡರ್‌ಗಳನ್ನು ರದ್ದುಪಡಿಸಲಾಗಿತ್ತು ಎಂಬುದು ತಿಳಿದು ಬಂದಿದೆ.

 

ರಾಜ್ಯದ ಜನತೆಗೆ ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ ಸೇವೆ ಒದಗಿಸಲು ಆರೋಗ್ಯ ಕವಚ 108 ಯೋಜನೆಯನ್ನು ಜಿವಿಕೆ ಇಎಂಆರ್‌ಐ ಸಂಸ್ಥೆ ಸಿಕಂದರಾಬಾದ್‌ ಜತೆ 2007ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. 2017-18ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾದ ಮೇಲೆ 827 ರಾಜ್ಯ ಆಂಬ್ಯುಲೆನ್ಸ್‌ ಹಾಗೂ ಆರೋಗ್ಯ ಕವಚ 108ರ 711 ಆಂಬ್ಯುಲೆನ್ಸ್‌ ಸೇರಿ ಒಟ್ಟು    1,538 ಆಂಬ್ಯುಲೆನ್ಸ್‌ ಗಳಿಗೆ ಪ್ರಸ್ತಾವನೆ ಅಧಿಸೂಚನೆ ಹೊರಡಿಸಿ ಟೆಂಡರ್‌ ಆಹ್ವಾನಿಸಲಾಗಿತ್ತು. ಅಲ್ಲದೇ ಹೊಸ ಸಂಸ್ಥೆ ಆಯ್ಕೆಯಾಗುವವರೆಗೂ ಜಿವಿಕೆ ಇಎಂಆರ್‌ಐ ಸಂಸ್ಥೆಯ ಸೇವೆಯನ್ನು ಮುಂದುವರೆಸಲು 2017ರ ಜುಲೈ 1ರಂದು ಸರ್ಕಾರಿ ಆದೇಶವನ್ನೂ ಹೊರಡಿಸಿತ್ತು.

 

ಇದರ ಮಧ್ಯೆ 2017ರ ಜುಲೈ 14ರಂದು ಆಯುಕ್ತರು ಒಪ್ಪಂದವನ್ನು ರದ್ದುಗೊಳಿಸಬೇಕು ಮತ್ತು ಅವರು ಸರಿಯಾಗಿ ಸೇವೆ ನೀಡುತ್ತಿಲ್ಲವೆಂದು ಕಡತಕ್ಕೆ ಒಪ್ಪಿಗೆ ತೆಗೆದುಕೊಂಡಿದ್ದರು. 2017ರ ಜೂನ್‌ 29ರಂದು ಇ ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‍‌ ಆಹ್ವಾನಿಸಲಾಗಿತ್ತು. 2017ರ ಆಗಸ್ಟ್‌ 11ರಂದು ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿತ್ತು. ಇದರಲ್ಲಿ ಜಿವಿಕೆ ಇಎಂಆರ್‌ಐ ಮತ್ತು ಬಿವಿಜಿ ಇಂಡಿಯಾ ಲಿಮಿಟೆಡ್‌ ಸಂಸ್ಥೆಗಳಿಂದ ಮಾತ್ರ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

 

ಈ ಎರಡೂ ಸಂಸ್ಥೆಗಳ ತಾಂತ್ರಿಕ ಪ್ರಸ್ತಾವನೆಗಳನ್ನು ಮೌಲ್ಯಮಾಪನದ ವೇಲೆ ಸೆಂಟರ್‍‌ ಫಾರ್‌ ಇ- ಗೌವರ್ನಸ್‌ ಅವರು ಐ ಟಿ ಸೊಲ್ಯೂಷನ್ಸ್‌ಗಳ ತಾಂತ್ರಿಕ ವೈಶಿಷ್ಟ್ಯತೆಯಲ್ಲಿ ಸರಿ ಇಲ್ಲವೆಂದು ಮತ್ತು ಇದನ್ನು ಮರುಪರಿಶೀಲಿಸಬೇಕು ಎಂದು ಹೇಳಿದ್ದರು. ದೂರುಗಳು ಸ್ವೀಕೃತವಾದ ಮೇಲೆ ನವೆಂಬರ್‌ 2017ರಲ್ಲಿ ಟೆಂಡರ್‍‌ನ್ನು ಹಿಂಪಡೆಯಲಾಗಿತ್ತು. 2017ರ ನಂತರ 2022ರಲ್ಲಿ ಮೊದಲ ಬಾರಿ ಟೆಂಡರ್‍‌ ಕರೆಯಲಾಗಿತ್ತು.

 

ಇದಾದ ನಂತರ 2018ರ ಆಕ್ಟೋಬರ್‍‌ 16ರಲ್ಲಿ ಸರ್ಕಾರಿ ಆದೇಶವನ್ನು ಜಾರಿಗೊಳಿಸಿ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಹೊಸ ಸೇವಾದಾರರು ಬರುವವರೆಗೂ ಹಳೆಯ ಸೇವೆಯನ್ನು 2018ರ ಆಗಸ್ಟ್‌ 14ರಿಂದ ಮುಂದಿನ ಒಂದು ವರ್ಷದ ಅವಧಿಗೆ ಅಥವಾ ಹೊಸ ಸೇವಾದಾರರೊಂದಿಗೆ ಮಾಡಿಕೊಳ್ಳುವ ಕರಾರು ಜಾರಿಗೆ ಬರುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮೂಲ ಒಡಂಬಡಿಕೆ ಹಾಗೂ ಅದರ ತಿದ್ದುಪಡಿಯನ್ವಯ ಮುಂದುವರೆಸಿಕೊಂಡು ಹೋಗಬೇಕು ಎಂದು ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

 

2018ರ ವಿಧಾನಸಭೆ ಚುನಾವಣೆ ನಂತರ 2018ರ ಅಕ್ಟೋಬರ್‍‌ 1ರಂದು ಐಡೆಕ್‌ ಸಂಸ್ಥೆಯನ್ನು ಈ ಸಂಬಂಧ ಸಮಾಲೋಚಕರಾಗಿ ನೇಮಕ ಮಾಡಿಕೊಳ್ಳಲಾಗಿತ್ತು. 2018ರ ಡಿಸೆಂಬರ್‌  29ರಂದು ಪ್ರಸ್ತಾವನೆ ಅಂತಿಮಗೊಳಿಸಲು ಹಾಗೂ ಅಗತ್ಯವಾದ ತಾಂತ್ರಿಕ ಸಲಹೆ ಮತ್ತು ಮಾರ್ಗದರ್ಶನ ನೀಡಲು ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಐಡೆಕ್‌ ಸಂಸ್ಥೆಯು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲು ಹಲವು ಬಾರಿ ಸಭೆ ನಡೆಸಿತ್ತು ಕೆಲವೊಂದು ಮಾರ್ಪಾಡಗಳನ್ನು ಮಾಡಲು ಸಮಿತಿಗೆ ಸೂಚಿಸಲಾಗಿತ್ತು ಎಂಬುದು ಗೊತ್ತಾಗಿದೆ.

 

ತಾಂತ್ರಿಕ ಸಮಿತಿಯು 2019ರ ಜನವರಿ 19, ಜೂನ್‌ 27, ಆಗಸ್ಟ್‌ 29, 2020ರ ಜುಲೈ 13 ಮತ್ತು 14ರಂದು ಸಭೆಗಳನ್ನು ಮಾಡಿತ್ತು. ಸಮಿತಿ ಶಿಫಾರಸ್ಸಿನ್ವಯ ಪ್ರಸ್ತಾವನೆಯಲ್ಲಿ ಕೆಲವೊಂದು ಮಾರ್ಪಾಡಗಳನ್ನು ಮಾಡಲು ಸಮಾಯವಾಕಾಶ ಅವಶ್ಯವಿದ್ದ ಕಾರಣ ಹಾಗೂ ಜಿವಿಕೆ ಇಎಂಆರ್‌ಐ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆ ಅವಧಿಯು ಮುಕ್ತಾಯವಾದ ಕಾರಣ 2019ರ ಆಗಸ್ಟ್‌ 14ರಿಂದ ಮುಂದಿನ 9 ತಿಂಗಳ ಅವಧಿಗೆ ಅಥವಾ ಹೊಸ ಸೇವಾದಾರರೊಂದಿಗೆ ಮಾಡಿಕೊಳ್ಳುವ ಕರಾರು ಜಾರಿಗೆ ಬರುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮುಂದುವರೆಸಿ 2019ರ ಡಿಸೆಂಬರ್‌  23ರಂದು ಅನುಮೋದನೆ ನೀಡಿತ್ತು.

 

ಪ್ರಸ್ತಾವನೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ನಿಟ್ಟಿನಲ್ಲಿ ಪ್ರಸ್ತಾವನೆಯನ್ನು ಮತ್ತೊಮ್ಮೆ ತಾಂತ್ರಿಕ ಸಲಹಾ ಸಮಿತಿ ಮುಂದೆ ಮಂಡಿಸಿ ಸಮಿತಿಯು ನೀಡಿರುವ ಅಭಿಪ್ರಾಯ ಮತ್ತು ನಿರ್ಣಯಗಳನ್ನು ಪ್ರಸ್ತಾವನೆಯಲ್ಲಿ ಅಳವಡಿಸಿ 2020ರ ಸೆ.5ರಂದು ಸಚಿವ ಸಂಪುಟದ ಅನುಮೋದನೆಯನ್ನು ಪಡೆದಿತ್ತು. ಅದರಂತೆ 2020ರ ಸೆ.14ರಂದು ಟೆಂಡರ್  ಆಹ್ವಾನಿಸಲಾಗಿತ್ತು.

 

ಇದಾದ ನಂತರ ಈ ಟೆಂಡರ್ ಗೆ ಸಂಬಂಧಿಸಿದಂತೆ ಪ್ರಿ-ಬಿಡ್‌ ಷರತ್ತುಗಳನ್ನು 4-5 ಬಾರಿ ಪರಾಮರ್ಶಿಸಿದ್ದು ಹಾಗೂ ಸಾರ್ವಜನಿಕ ರಂಗದಲ್ಲಿ ತಜ್ಞರ ಅಭಿಪ್ರಾಯದಲ್ಲಿ ಟೆಂಡರ್  ಪ್ರಕ್ರಿಯೆ ಹಾಗೂ ಖರೀದಿಯಲ್ಲಿನ ವಿಧಾನವನ್ನು ಟೆಂಡರ್ ನಲ್ಲಿನ ನ್ಯೂನತೆಗಳು, ವ್ಯವಸ್ಥೆಯಲ್ಲಿನ ಸುಧಾರಣೆ, ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿರುವುದರಿಂದ ಈ ಬಗ್ಗೆ ಸೂಕ್ತ ಪರಿಶೀಲನೆ ಕೈಗೊಂಡು ಉನ್ನತ ಅಧಿಕಾರಿಗಳ ಹಾಗೂ ತಜ್ಞರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ಅಭಿಪ್ರಾಯ, ಸಲಹೆಗಳನ್ನು ಅಳವಡಿಸಿಕೊಂಡು ಟೆಂಡರ್ ಪರಿಷ್ಕರಿಸಿ ಹೊಸದಾಗಿ ಟೆಂಡರ್ ಆಹ್ವಾನಿಸಬೇಕು ಎಂದು ಸಚಿವರು 2020ರ ಡಿಸೆಂಬರ್‍‌ 17ರಂದು ಸೂಚನೆ ನೀಡಿದ್ದರು ಎಂಬುದು ತಿಳಿದು ಬಂದಿದೆ.

 

ಅದರಂತೆ 2020ರ ಡಿಸೆಂಬರ್‍‌ 17ರಂದು ಟೆಂಡರ್ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿತ್ತು. ತದನಂತರ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಲಹಾ ಸಮಿತಿ ಹಾಗೂ ಬೆಂಗಳೂರು ಐಐಟಿಯ ನಿರ್ದೇಶಕರಾದ ಪ್ರೊ ಎಸ್‌ ಸದಗೋಪಾಲನ್‌ ಅಧ್ಯಕ್ಷತೆಯಲ್ಲಿ ತಾಂತ್ರಿಕ ಸಮಿತಿ ರಚಿಸಿ 20221ರ ಜನವರಿ 6ರಂದು ಆದೇಶ ಹೊರಡಿಸಲಾಗಿತ್ತು. ಆದರೆ ಕಾರ್ಯದೊತ್ತಡದಿಂದ ಸಮಿತಿ ಸಭೆಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪ್ರೊ ಎಸ್‌ ಸದಗೋಪಾಲನ್‌ ಅವರು ಹೇಳಿದ್ದರಿಂದ ಇವರ ಬದಲಿಗೆ ನಿಮ್ಹಾನ್ಸ್‌ನ ಪ್ರಭಾರ ನಿರ್ದೇಶಕರಾಗಿದ್ದ ಡಾ ಗುರುರಾಜ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ 2021ರ ಫೆ.11ರಂದು ನೇಮಿಸಿ ಆದೇಶ ಹೊರಡಿಸಲಾಗಿತ್ತು.

 

ಈ ಸಮಿತಿಯು 20221ರ ಜನವರಿ 11, 21, ಫೆ.3, 12, 18, 22, ಮಾರ್ಚ್‌ 8, 19, 20ರಂದು ಸಭೆಗಳನ್ನು ನಡೆಸಿತ್ತು. ಈ ನಡುವೆ 2020ರ ಸೆ 14ರ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಭಾರತ ಪುನರುತ್ಥಾನ ಟ್ರಸ್ಟ್‌ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ರಿಟ್‌ ಅರ್ಜಿ (ಸಂಖ್ಯೆ 6073/2020) ದಾಖಲಿಸಿತ್ತು. ಈ ಅರ್ಜಿಯನ್ನು ಪರಿಶೀಲಿಸಿದ್ದ ಉಚ್ಛ ನ್ಯಾಯಾಲಯವು 20221ರ ಆಗಸ್ಟ್‌ 31 ಮತ್ತು ನವೆಂಬರ್‍‌ 10ರಂದು ಮಧ್ಯಂತರ ಆದೇಶದಲ್ಲಿ ಹೊಸದಾಗಿ ಟೆಂಡರ್  ಆಹ್ವಾನಿಸಲು ಸಚಿವ ಸಂಪುಟದ ಅನುಮೋದನೆ ಪಡೆಯಲು ಅನುಮತಿ ನೀಡಿತ್ತು.

 

ಸಚಿವ ಸಂಪುಟದ ಅನುಮೋದನೆ ಮೇರೆಗೆ 2022ರ ಮಾರ್ಚ್‌ 4ರಂದು ಸರ್ಕಾರಿ ಆದೇಶವನ್ನೂ ಹೊರಡಿಸಿತ್ತು. 2022ರ ಮಾರ್ಚ್‌ 4ರ ಆದೇಶದ ಪ್ರಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ 108-ಆರೋಗ್ಯ ಕವಚ ಸೇವೆಯನ್ನು ಒದಗಿಸಲುಉ ಸೇವಾದಾರರನ್ನು ಆಯ್ಕೆ ಮಾಡಲು 2022ರ ಏಪ್ರಿಲ್‌ 22ರಂದು ಪ್ರೊಕ್ಯೂರ್  ಮೆಂಟ್‌ ಸಭೆ ನಡೆಸಲಾಗಿತ್ತು. ಈ ಸಭೆಯ ತೀರ್ಮಾನದಂತೆ ಟೆಂಡರ್‌ ಆಹ್ವಾನಿಸಲು ಸರ್ಕಾರದ ಅನುಮೋದನೆಗೆ ಸಲ್ಲಿಸಿತ್ತು.

 

2022ರ ಮೇ 4ರಂದು ದಾಖಲಾತಿ ಸಲ್ಲಿಕೆ ಮಾಡಿದ ನಂತರ ಟೆಂಡರ್‍‌ ಪೂರ್ವ ಪರಿಶೀಲನಾ ಸಮಿತಿ ಮುಂದೆ ಮಂಡಿಸಬೇಕಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಿತ್ತು. 2022ರ ಮೇ 7ರಂದು ಟೆಂಡರ್  ಪೂರ್ವ ಪರಿಶೀಲನಾ ಸಮಿತಿಯನ್ನು ರಚಿಸಲಾಗಿತ್ತು. 2017ರಿಂದ ಇಲ್ಲಿಯವರೆಗೆ 2 ಬಾರಿ ಟೆಂಡರ್ ಆಗಿದೆ. ಈಗ ಮೂರನೆಯ ಟೆಂಡರ್  ದಾಖಲಾತಿಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿತ್ತು ಎಂಬುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts