ತುಂಗಾ ಮೇಲ್ದಂಡೆ; 9 ವರ್ಷಗಳ ನಂತರ ಅಂದಾಜು ಪರಿಷ್ಕರಣೆ, ಪಿಡಬ್ಲ್ಯೂಡಿ ಸಂಹಿತೆಯೂ ಉಲ್ಲಂಘನೆ

photo credit; govindkarjola official twitter page

ಬೆಂಗಳೂರು; ತುಂಗಾ ಮೇಲ್ದಂಡೆ ಯೋಜನೆಗೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂ ಪರಿಹಾರ ದರಗಳಂತೆ ಭೂ ಸ್ವಾಧೀನ ಅಂದಾಜನ್ನು ತಯಾರಿಸಿ ಅನುಮೋದನೆ ಪಡೆಯದೇ 9 ವರ್ಷಗಳ ನಂತರ ಅಂದಾಜನ್ನು ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದು ಲೋಕೋಪಯೋಗಿ ಇಲಾಖೆಯ ಸಂಹಿತೆಯ ಅನುಸಾರ ಇರಲಿಲ್ಲ ಎಂಬ ಹೊಸ ಅಂಶ ಇದೀಗ ಬಹಿರಂಗವಾಗಿದೆ.

 

ಸರ್ಕಾರದ ಅನುಮೋದನೆ ಇಲ್ಲದೆಯೇ 702.12 ಕೋಟಿ ರು ಹೆಚ್ಚುವರಿಯಾಗಿ ವೆಚ್ಚ ಮಾಡಿರುವ ಪ್ರಕರಣವು ಹೊರಬಿದ್ದ ಬೆನ್ನಲ್ಲೇ ಇದೀಗ ಭೂಸ್ವಾಧೀನ ಅಂದಾಜನ್ನು 9 ವರ್ಷಗಳ ನಂತರ ಪರಿಷ್ಕರಿಸಲಾಗಿತ್ತು ಎಂಬ ವಿಚಾರವು ಮುನ್ನೆಲೆಗೆ ಬಂದಿದೆ. ಈ ಸಂಬಂಧ ‘ದಿ ಫೈಲ್‌’ ಸಮಗ್ರ ದಾಖಲೆಗಳನ್ನು ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.

 

‘ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ 2013ರಲ್ಲಿ ಹೊಸ ಕಾಯ್ದೆ ಜಾರಿಯಾಗಿತ್ತು. 620.08 ಕೋಟಿ ರುಗಳಷ್ಟು ಭೂ ಸ್ವಾಧೀನ ವೆಚ್ಚಕ್ಕಾಗಿ ಹೆಚ್ಚುವರಿಯಾಗಿದೆ ಎಂದು ಆಡಳಿತ ಇಲಾಖೆ ತಿಳಿಸಿದೆ. ಸರ್ಕಾರದ ಆದೇಶದ ಪ್ರಕಾರ (ಸಂಖ್ಯೆ ಜಸಂಇ 234 ವಿಭ್ಯಾಇ 2013 ದಿನಾಂಕ 05.10.2013) ಈ ಯೋಜನೆಯು 2,561.88 ಕೋಟಿ ರು. ಪರಿಷ್ಕೃತ ಅಂದಾಜಿಗೆ ಅನುಮೋದನೆ ಪಡೆಯಲಾಗಿದ್ದು ಭೂ ಸ್ವಾಧೀನ ಕಾಯ್ದೆ 2013ರ ಜಾರಿಯಾದ ನಂತರ ಸದರಿ ಕಾಯ್ದೆಯನ್ವಯ ಭೂ ಪರಿಹಾರ ದರಗಳಂತೆ ಭೂ ಸ್ವಾಧೀನ ಅಂದಾಜನ್ನು ತಯಾರಿಸಿ ಅನುಮೋದನೆ ಪಡೆಯದೇ 09 ವರ್ಷಗಳ ನಂತರ ಅಂದಾಜನ್ನು ಪರಿಷ್ಕರಿಸಿ ಸಲ್ಲಿಸಿರುವುದು ಲೋಕೋಪಯೋಗಿ ಇಲಾಖೆ ಸಂಹಿತೆ ಅನುಸಾರ ಇರುವುದಿಲ್ಲ,’ಎಂದು ಜಲಸಂಪನ್ಮೂಲ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು 2022ರ ಜನವರಿ 19ರಂದು ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸ್ಪಷ್ಟೀಕರಣ ನೀಡಬೇಕು ಎಂದು ನಿರ್ದೇಶಿಸಿದ್ದರು.

 

ಅಷ್ಟೇ ಅಲ್ಲ ಸಿವಿಲ್‌ ಕಾಮಗಾರಿಗಳಲ್ಲಿ 183.60 ಕೋಟಿ ಹೆಚ್ಚುವರಿಯಾಗಿದ್ದು ಇದಕ್ಕೆ ಪರಿಷ್ಕೃತ ಅಂದಾಜು ಪಟ್ಟಿಯನ್ನು 2018-19ನೇ ಸಾಲಿನ ದರಗಳನ್ನು ಅಳವಡಿಸಿದ್ದೇ ಕಾರಣ ಎಂದು ನಿಗಮವು ಸಮಜಾಯಿಷಿ ನೀಡಿತ್ತು.

 

ನಿಗಮದ ಸಮಜಾಯಿಷಿ

 

ಪ್ರಸ್ತಾಪಿತ ಹೆಚ್ಚುವರಿ ಮೊತ್ತವು ಹೊಸ ಭೂ ಸ್ವಾಧೀನ ಕಾಯ್ದೆ 2013ರಿಂದಾಗಿ ಭೂ ಸ್ವಾಧೀನ ವೆಚ್ಚದಲ್ಲಿ ಹೆಚ್ಚುವರಿಯಾಗಿರುತ್ತದೆ. ಅನುಮೋದಿತ 2,561.88 ಕೋಟಿಯು 2012-13ನೇ ಸಾಲಿನ ದರಪಟ್ಟಿ ಪ್ರಕಾರ ತಯಾರಿಸಲಾಗಿದ್ದು ಪ್ರಸ್ತುತ ರು. 3,395.02 ಕೋಟಿ ರು. ಪರಿಷ್ಕೃತ ಅಂದಾಜು ಆಗಸ್ಟ್‌ 2018ರಲ್ಲಿ 2018-19ನೇ ಸಾಲಿನ ದರಪಟ್ಟಿಯ ದರಗಳನ್ವಯ ತಯಾರಿಸಲಾಗಿತ್ತು. ದರಸೂಚಿಯ ದರಗಳಲ್ಲಿನ ವ್ಯತ್ಯಾಸದಿಂದಾಗಿ ಹೆಚ್ಚುವರಿಯಾಗಿತ್ತು. ಕಾಮಗಾರಿಗಳನ್ನು ನಿರ್ವಹಿಸುವ ಸಂದರ್ಭದಲ್ಲಿ ಸ್ಥಳದ ವಸ್ತು ಸ್ಥಿತಿಗನುಗುಣವಾಗಿ ಕೆಲವು ಹೆಚ್ಚುವರಿ ಕಾಮಗಾರಿಗಳನ್ನು ಅಳವಡಿಸಿಕೊಂಡಿದ್ದರಿಂದಾಗಿ ಅಂದಾಜು ಮೊತ್ತದಲ್ಲಿ ಹೆಚ್ಚುವರಿಯಾಗಿರುತ್ತದೆ.

 

ಹಾಗೆಯೇ ‘2013ನೇ ಸಾಲಿನ ಹೊಸ ಭೂ ಸ್ವಾಧೀನ ಕಾಯ್ದೆ ಅನ್ವಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು ನ್ಯಾಯಾಲಯದ ಆದೇಶದ ಮೇರೆಗೆ ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗಿರುವುದರಿಂದ ಇದಕ್ಕೆ 463.50 ಕೋಟಿ ವೆಚ್ಚವಾಗಿರುತ್ತದೆ. ಭೂ ಸ್ವಾಧೀನ ಪ್ರಕ್ರಿಯೆಯು ಹಲವಾರು ಹಂತಗಳನ್ನು ಹೊಂದಿದ್ದು ಅವುಗಳ ಅನುಮೋದನೆ ಪಡೆದು ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ನಿಗದಿತ ಅವಧಿಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣವಾಗದೇ ಇರುವುದರಿಂದ ನಿಖರವಾಗಿ ಪರಿಷ್ಕೃತ ಮೊತ್ತದ ಅಂದಾಜು ಮಾಡಿ ಸಲ್ಲಿಸಲು ವಿಳಂಬವಾಗಿರುತ್ತದೆ,’ ಎಂದೂ ಸರ್ಕಾರಕ್ಕೆ ಸಮಜಾಯಿಷಿ ನೀಡಿತ್ತು ಎಂಬುದು ದಾಖಲೆಯಿಂದ ಗೊತ್ತಾಗಿದೆ.

 

ಆದರೆ ಇದಕ್ಕೆ ಜಲಸಂಪನ್ಮೂಲ ಇಲಾಖೆಯು ಆಕ್ಷೇಪಿಸಿತ್ತು. ‘ಯೋಜನೆಯು 2013ರಲ್ಲೇ ಅನುಮೋದನೆಗೊಂಡಿರುವುದರಿಂದ ಯೋಜನೆಯಡಿ ಎಲ್ಲ ಉಪ ಕಾಮಗಾರಿಗಳ ಗುತ್ತಿಗೆಯನ್ನು 2013-14ರಲ್ಲೇ ಟೆಂಡರ್‌ ಕರೆದು ವಹಿಸಿದ್ದಲ್ಲಿ inlfation index ಪ್ರಕಾರ ಗುತ್ತಿಗೆದಾರರಿಗೆ ಪ್ರತಿ ವರ್ಷದ ದರ ಹೆಚ್ಚಳ ನೀಡಲು ನಿಯಮಗಳಲ್ಲಿ ಅವಕಾಶವಿದೆ. 2018-19ನೇ ಸಾಲಿನ ಅನುಸೂಚಿ ದರಗಳನ್ನು ಅಳವಡಿಸಿ ಅಂದಾಜು ಪಟ್ಟಿ ಪರಿಷ್ಕರಿಸಿದ್ದ ನಿಗಮವು ಇದಕ್ಕೆ ಸವಿವರವಾದ ಸಮರ್ಥನೆಗಳನ್ನು ಸರ್ಕಾರಕ್ಕೆ ಒದಗಿಸಿರಲಿಲ್ಲ ಎಂಬುದು ಪತ್ರದಿಂದ ಗೊತ್ತಾಗಿದೆ.

 

ಆದರೂ ಸಚಿವ ಗೋವಿಂದ ಕಾರಜೋಳ ಅವರು ನಿಗಮ ನೀಡಿದ್ದ ಸಮಜಾಯಿಷಿಯನ್ನೇ ಒಪ್ಪಿ ಹೆಚ್ಚುವರಿ ವೆಚ್ಚದ ಅಂದಾಜಿಗೆ ಅನುಮೋದಿಸಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ.

the fil favicon

SUPPORT THE FILE

Latest News

Related Posts