6 ಕೋಟಿ ಬೇನಾಮಿ ಖಾತೆಗೆ ವರ್ಗಾವಣೆ ಆರೋಪ; ಕುಲಪತಿ ವಿರುದ್ಧ ಪ್ರಕರಣ ಲೋಕಾ ತನಿಖೆಗೆ ಆದೇಶ

photo credit;prajavani

ಬೆಂಗಳೂರು; ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಬೇನಾಮಿ ಹೆಸರಿನಲ್ಲಿ ತೆರೆದಿರುವ ಖಾತೆಗಳಿಗೆ ವಿಶ್ವವಿದ್ಯಾಲಯಕ್ಕೆ ಸೇರಿದ 6.00 ಕೋಟಿ ರು. ಮೊತ್ತದ ಹಣವನ್ನು ವರ್ಗಾವಣೆ ಮಾಡಿದ್ದಾರೆ ಎಂಬ ಪ್ರಕರಣವನ್ನು ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಹೆಚ್ಚಿನ ತನಿಖೆಗಾಗಿ ಲೋಕಾಯುಕ್ತಕ್ಕೆ ವಹಿಸಿ ಆದೇಶಿಸಿದೆ.

 

ಕುಲಪತಿ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಕುಲಪತಿ ಹುದ್ದೆ ಅಧಿಕಾರವನ್ನು ವಹಿಸಿಕೊಂಡ ದಿನದಿಂದ ಇವರ ವೈಯಕ್ತಿಕ ಬ್ಯಾಂಕ್‌ ಖಾತೆಗಳಿಗೆ ಕಾನೂನುಬಾಹಿರವಾಗಿ ವಿಶ್ವವಿದ್ಯಾಲಯದ ಹಣವು ಸಂದಾಯವಾಗಿದೆ ಮತ್ತು ವಿಶ್ವವಿದ್ಯಾಲಯದ ಹಣವನ್ನು ಬೇನಾಮಿ ಹೆಸರುಗಳಲ್ಲಿ ತೆರೆದಿರುವ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ ಎಂದು ಡಾ ಕೆ ವೆಂಕಟರೆಡ್ಡಿ ಎಂಬುವರು ರಾಜ್ಯಪಾಲರ ಕಚೇರಿಗೆ ದೂರು ಸಲ್ಲಿಸಿದ್ದರು.

 

ಈ ದೂರನ್ನಾಧರಿಸಿ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಿ 2023ರ ಮಾರ್ಚ್‌ 14ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಕುಲಪತಿ ಹುದ್ದೆ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಇವರ ವೈಯಕ್ತಿಕ ಬ್ಯಾಂಕ್‌ ಖಾತೆಗಳಿಗೆ ಕಾನೂನುಬಾಹಿರವಾಗಿ ವಿಶ್ವವಿದ್ಯಾಲಯದ ಹಣವು ಹಣ ಸಂದಾಯವಾಗಿದೆ. ಹಾಗೂ ವಿಶ್ವವಿದ್ಯಾಲಯದ ಹಣವನ್ನು ಬೇನಾಮಿ ಹೆಸರುಗಳಲ್ಲಿ ತೆರೆದಿರುವ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಮತ್ತು ಗಂಗಾನಗರದಲ್ಲಿ ಬ್ಯಾಂಕ್‌ ಆಫ್‌ ಬರೋಡ ಶಾಖೆಯಲ್ಲಿ ವೈಯಕ್ತಿಕ ಖಾತೆಗೆ 6 ಕೋಟಿಗೂ ಹೆಚ್ಚು ಹಣವನ್ನು ಜಮಾ ಮಾಡಿದ್ದಾರೆ. ಈ ಬಗೆಗಿನ ಆರೋಪಗಳ ಕುರಿತಂತೆ ಇವರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13 ಅನ್ವಯ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ವಹಿಸಿರುವುದು ಆದೇಶದ ಪ್ರತಿಯಿಂದ ತಿಳಿದು ಬಂದಿದೆ.

 

ಲೋಕಾಯುಕ್ತಕ್ಕೆ ವಹಿಸುವ ಮುನ್ನ ಇಲಾಖೆಯು ಡಾ ಹೆಚ್‌ ಡಿ ನಾರಾಯಣ ಸ್ವಾಮಿ ಅವರಿಗೆ 2022ರ ಜುಲೈ 5ರಂದು ನೋಟೀಸ್‌ ಜಾರಿಗೊಳಿಸಿತ್ತು. ಆದರೆ ಅವರಿಂದ ಯಾವುದೇ ವಿವರಣೆ/ಉತ್ತರ ಬಂದಿಲ್ಲ. ಹೀಗಾಗಿ 2022ರ ಆಗಸ್ಟ್‌ 1ರೊಳಗೆ ವಿವರಣೆ ನೀಡಬೇಕು ಎಂದು 2022ರ ಜುಲೈ 23ರಂದು ಮತ್ತೊಂದು ನೋಟೀಸ್‌ ನೀಡಿತ್ತು. ಆದರೆ ಎರಡನೇ ನೋಟೀಸ್‌ಗೂ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ವಿವರಣೆ/ಉತ್ತರವನ್ನು ಇಲಾಖೆಗೆ ನೀಡಿರಲಿಲ್ಲ ಎಂಬ ಅಂಶ ಆದೇಶದಿಂದ ತಿಳಿದು ಬಂದಿದೆ.

 

‘ಮೇಲ್ನೋಟಕ್ಕೆ ಹಣವು ವೈಯಕ್ತಿಕ ಬ್ಯಾಂಕ್‌ ಖಾತೆಗೆ ವರ್ಗಾವಣೆಯಾಗಿರುವುದನ್ನು ವಿಶ್ವವಿದ್ಯಾಲಯವು ಗಮನಿಸಿದೆ. ಕಾಲಾವಕಾಶ ನೀಡಿದ ದಿನಾಂಕದ ನಂತರವೂ ಬರದಿದ್ದಲ್ಲಿ ಅವರಿಂದ ಯಾವುದೇ ಹೇಳಿಕೆ ಇರುವುದಿಲ್ಲವೆಂದು ಈಗಾಗಲೇ ಅವರಿಗೆ ತಿಳಿಸಲಾಗಿದೆ. ವಿಶ್ವವಿದ್ಯಾಲಯದ ಅಭಿಪ್ರಾಯದೊಂದಿಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು,’ ಎಂದು ಕುಲಸಚಿವರು ಸರ್ಕಾರಕ್ಕೆ ತಿಳಿಸಿದ್ದರು.

SUPPORT THE FILE

Latest News

Related Posts