ಆಯುಷ್‌ ಔಷಧ ಖರೀದಿ; ತಾಂತ್ರಿಕ ಸಮಿತಿ ವರದಿ ಬದಿಗೊತ್ತಿ 4(ಜಿ) ವಿನಾಯಿತಿ, 30 ಕೋಟಿಗೂ ಹೆಚ್ಚು ಅಕ್ರಮ

ಬೆಂಗಳೂರು; ಆಯುರ್ವೇದ, ಯುನಾನಿ ಮತ್ತು ಹೋಮಿಯೋಪತಿ  ಔಷಧಗಳ ಉತ್ಪಾದನೆ ಮಾಡದ ಹೆಚ್‌ಎಲ್‌ಎಲ್‌ ಸಂಸ್ಥೆಗೆ   4 (ಜಿ) ವಿನಾಯಿತಿಗೆ ಪರಿಗಣಿಸುವುದು ಸೂಕ್ತವಲ್ಲ ಎಂದು ತಾಂತ್ರಿಕ ಪರಿಶೀಲನೆ ಸಮಿತಿಯು ಸ್ಪಷ್ಟವಾಗಿ ವರದಿ ನೀಡಿದ್ದರೂ  ಕೆಟಿಪಿಪಿ ನಿಯಮಗಳನ್ನು ಉಲ್ಲಂಘಿಸಿ ಅಂದಾಜು 30 ಕೋಟಿಗೂ ಹೆಚ್ಚು ಮೌಲ್ಯದ ಔಷಧಗಳನ್ನು  ಖರೀದಿಸಲು ಆದೇಶ ಹೊರಡಿಸಿರುವುದು ಇದೀಗ ಬಹಿರಂಗವಾಗಿದೆ.

 

ಸ್ವಂತ ತಯಾರಿಕೆ ಘಟಕವನ್ನೇ ಹೊಂದಿಲ್ಲದ ಕಂಪನಿಗೆ ಕೆಟಿಪಿಪಿ ನಿಯಮ 4 (ಜಿ) ವಿನಾಯಿತಿ ಪರಿಗಣಿಸುವುದು ಸೂಕ್ತವಲ್ಲ, ಟೆಂಡರ್‌ ಮೂಲಕವೇ ಖರೀದಿಸಬೇಕು ಎಂದು ತಾಂತ್ರಿಕ ಸಮಿತಿ ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿರುವ ಇಲಾಖೆಯು  ತರಾತುರಿಯಲ್ಲಿ 15.22 ಕೋಟಿ ರು. ವೆಚ್ಚದಲ್ಲಿ ಔಷಧ ಸರಬರಾಜು ಆದೇಶವನ್ನು  2023ರ ಮಾರ್ಚ್‌ 27ರಂದು ಹೊರಡಿಸಿದೆ. ಈ ಪ್ರಕ್ರಿಯೆಯಲ್ಲಿ ಕಿಕ್‌ ಬ್ಯಾಕ್‌ ವ್ಯವಹಾರ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಅಲ್ಲದೇ 2018ನೇ ಸಾಲಿನಿಂದ 2021ನೇ ಸಾಲಿನವರೆಗೂ ಹೆಚ್‌ಎಲ್‌ಎಲ್‌ ಸಂಸ್ಥೆಯಿಂದ ಆಯುಷ್‌ ಔಷಧಗಳನ್ನು ಖರೀದಿಸಿರಲಿಲ್ಲ. ಆದರೆ 2021ರ ನಂತರ ಆಯುಷ್‌ ಇಲಾಖೆಗೆ ಬಂದ ಮುಖ್ಯಸ್ಥರುಗಳು ತಾಂತ್ರಿಕ ಸಮಿತಿಯ ವರದಿಯನ್ನೇ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ ಎಂಬ ಗುರುತರವಾದ ಆರೋಪವೂ ಕೇಳಿ ಬಂದಿದೆ. ತಾಂತ್ರಿಕ ಸಮಿತಿ ನೀಡಿದ್ದ ವರದಿಯನ್ನು ಮರೆಮಾಚಿ 4(ಜಿ) ವಿನಾಯಿತಿ ಆದೇಶ ಹೊರಡಿಸುವ ಕಡತಕ್ಕೆ ಸಚಿವ ಡಾ ಕೆ ಸುಧಾಕರ್‌ ಅವರು ಅನುಮೋದಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಈ ಸಂಬಂಧ ‘ದಿ ಫೈಲ್‌’ಗೆ ತಾಂತ್ರಿಕ ಸಮಿತಿಯ ವರದಿ ಸೇರಿದಂತೆ ಮಹತ್ವದ ದಾಖಲೆಗಳು ಲಭ್ಯವಾಗಿವೆ.

 

ತಾಂತ್ರಿಕ ಸಮಿತಿಯ ವರದಿಯಲ್ಲೇನಿದೆ?

 

ಹೆಚ್‌ ಎಲ್‌ ಎಲ್‌ ಸಂಸ್ಥೆಯು ಹಾಲಿ ನೀಡಿರುವ ವಿಳಾಸ, ಕಟ್ಟಡ ಮತ್ತು ಯಂತ್ರೋಪಕರಣ ಸೌಲಭ್ಯಗಳು ಮೂಲತಃ ಮುಲ್ತಾನಿ ಫಾರ್ಮಾಸ್ಯುಟಿಕಲ್ಸ್‌ಗೆ ಸೇರಿದವರಾಗಿರುತ್ತವೆ. ಹೆಚ್‌ ಎಲ್‌ ಎಲ್‌ ಸಂಸ್ಥೆಯವರು ಮುಲ್ತಾನಿ ಸಂಸ್ಥೆಯವರೊಂದಿಗೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು ಎಲ್ಲಾ ಸೌಲಭ್ಯಗಳು ಮುಲ್ತಾನಿ ಫಾರ್ಮಾಸ್ಯುಟಿಕಲ್ಸ್‌ ಒಡೆತನದಲ್ಲಿರುತ್ತವೆ. ನಮ್ಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಯಂತ್ರೋಪಕರಣಗಳನ್ನು ಪರಿಶೀಲಿಸಲಾಗಿದ್ದು ಯಂತ್ರೋಪಕರಣಗಳು ಬಳಕೆಯಾಗಿರುವ ಹಾಗೂ ನಿಯಮಿತವಾಗಿ ಔಷಧಗಳನ್ನು ಉತ್ಪಾದಿಸುತ್ತಿರುವ ಯಾವುದೇ ಕುರುಹುಗಳು ಕಂಡು ಬಂದಿರುವುದಿಲ್ಲ.

 

ತಾಂತ್ರಿಕ ಪರಿಶೀಲನಾ ಸಮಿತಿ ನೀಡಿರುವ ವರದಿ ಪ್ರತಿ

 

ಹೆಚ್‌ಎಲ್‌ಎಲ್‌ ಸಂಸ್ಥೆಯು ಸ್ವಂತ ಔಷಧ ತಯಾರಿಕೆ ಗುಣಮಟ್ಟ ವಿಭಾಗವನ್ನು ಹೊಂದಿರುವುದಿಲ್ಲ. ಆದರೆ ಮುಲ್ತಾನಿ ಫಾರ್ಮಾಸ್ಯುಟಿಕಲ್ಸ್‌ ಹೆಸರಿನಲ್ಲಿರುವ ಔಷಧ ಗುಣಮಟ್ಟ ಪರೀಕ್ಷಾ ಕೇಂದ್ರವನ್ನು ಉಪಯೋಗಿಸಿಕೊಳ್ಳುತ್ತಿರುತ್ತಾರೆ. ತಯಾರಿಕೆ ಸೌಲಭ್ಯ ಹಾಗೂ ಕಚ್ಛಾ ದ್ರವ್ಯಗಳ ಸಂಗ್ರಹಣೆ ಕನಿಷ್ಟ 1;1 ಅನುಪಾತದಲ್ಲಿ ಇರಬೇಕಿರುವುದು ವಾಡಿಕೆ. ಆದರೆ ಹೆಚ್‌ಎಲ್‌ಎಲ್‌ ಸಂಸ್ಥೆಯು ಗುರುತಿಸಿರುವ ಸಂಗ್ರಹಣಾ ವಿಭಾಗವು ಸುಮಾರು 200 ಚದರ ಅಡಿ ವಿಸ್ತೀರ್ಣ ಇದ್ದು ತಾಳೆಯಾಗುತ್ತಿಲ್ಲ ಎಂಬುದು ತಾಂತ್ರಿಕ ಸಮಿತಿಯು ನೀಡಿರುವ ವರದಿಯಿಂದ ತಿಳಿದು ಬಂದಿದೆ.

 

 

ಹೆಚ್‌ಎಲ್‌ಎಲ್‌ ಸಂಸ್ಥೆಯು 2017-18ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆಯುಷ್‌ ಇಲಾಖೆಯ ಆಯುರ್ವೇದ ಆಸ್ಪತ್ರೆ, ಚಿಕಿತ್ಸಾಲಯಗಳಿಗೆ ಕೆಟಿಪಿಪಿ ಕಾಯ್ದೆ ನಿಯಮ 4 (ಜಿ) ವಿನಾಯಿತಿ ಅಡಿಯಲ್ಲಿ ಔಷಧಗಳನ್ನು ಸರಬರಾಜು ಮಾಡಿರುವುದು ತಿಳಿದು ಬಂದಿರುತ್ತದೆ. ಇದನ್ನು ಹೊರತುಪಡಿಸಿ ಇನ್ನಿತರೆ ಸರ್ಕಾರಿ, ಸರ್ಕಾರೇತರ, ಖಾಸಗಿ ಅಥವಾ ಸ್ಥಳೀಯ ಮಾರುಕಟ್ಟೆಗಳಿಗೆ ಅಗತ್ಯತೆಗೆ ಈ ಸಂಸ್ಥೆಯು ಆಯುರ್ವೇದದ ಔಷಧಗಳನ್ನು ತಯಾರಿಸಿ ಸರಬರಾಜು ಮಾಡಿರುವ ಯಾವುದೇ ದಾಖಲಾತಿಗಳೂ ಇರುವುದಿಲ್ಲ. ಕಚ್ಛಾ ದ್ರವ್ಯಗಳ ದಾಸ್ತಾನು, ಕಂಟ್ರೋಲ್‌ ಸ್ಯಾಂಪಲ್‌ ರಿಜಿಸ್ಟರ್‌ಗಳನ್ನು ತಾಂತ್ರಿಕ ಸಮಿತಿಗೆ ನಿಗದಿತ ಅವಧಿಯೊಳಗೆ ಹಾಜರುಪಡಿಸುವಲ್ಲಿ ವಿಫಲವಾಗಿತ್ತು.

 

‘ಈ ಮೇಲೆ ತಿಳಿಸಿರುವ ವರದಿಯ ಹಿನ್ನೆಲೆಯಲ್ಲಿ ಹೆಚ್‌ಎಲ್‌ಎಲ್‌ ಸಂಸ್ಥೆಯು ಸ್ವಂತ ತಯಾರಿಕಾ ಘಟಕ ಹೊಂದಿರುವುದಿಲ್ಲದಿರುವುದುಹಾಗೂ ಸದರಿ ಸಂಸ್ಥೆಯು ಮುಲ್ತಾನಿ ಫಾರ್ಮಾಸ್ಯುಟಿಕಲ್ಸ್‌ರಿಂದ ಒಪ್ಪಂದ ಆಧಾರದ ಮೇಲೆ ಔಷಧಗಳನ್ನು ತಯಾರಿಸಿಕೊಂಡು ಬೇಡಿಕೆ ಪೂರೈಸುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಈ ಸಂಸ್ಥೆಯಿಂದ ಆಯುಷ್‌ ಇಲಾಖೆಗೆ ಔಷಧಗಳನ್ನು ಪೂರೈಸಲು ಕೆಟಿಪಿಪಿ ನಿಯಮ 4(ಜಿ) ವಿನಾಯಿತಿಗೆ ಪರಿಗಣಿಸುವುದು ಸೂಕ್ತವಲ್ಲವೆಂದು ಸಮಿತಿಯು ಅಭಿಪ್ರಾಯಪಟ್ಟಿದೆ,’ಎಂದು ತಾಂತ್ರಿಕ ಸಮಿತಿ ವರದಿಯಲ್ಲಿ ವಿವರಿಸಲಾಗಿದೆ.

 

ಈ ವರದಿಗೆ ಅಯುಷ್‌ ನಿರ್ದೇಶನಾಲಯದ ಉಪ ನಿರ್ದೇಶಕ ಡಾ ಸಿ ಬಿ ನಂಜರಾಜು, ಆಯುಷ್‌ ನಿರ್ದೇಶನಾಲಯದ ಲೆಕ್ಕಾಧಿಕಾರಿ ಮಂಜುನಾತ ಸ್ವಾಮಿ, ಸರ್ಕಾರಿ ಕೇಂದ್ರೀಯ ಔಷಧಾಗಾರದ ಉಪ ನಿರ್ದೇಶಕ ಡಾ ಹೆಚ್‌ ವೈ ರಾಥೋಡ್‌ ಅವರು ಸಹಿ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

ತಾಂತ್ರಿಕ ಸಮಿತಿ ವರದಿಯನ್ನು ಬದಿಗೊತ್ತಿದ ಆಯುಷ್‌ ನಿರ್ದೇಶನಾಲಯವು ಆಯುಷ್‌ ನಿರ್ದೇಶಾನಲಯವು 15.22 ಕೋಟಿ ರು.ಗಳ ವೆಚ್ಚದಲ್ಲಿ ಔಷಧ ಖರೀದಿಸಲು 2023ರ ಮಾರ್ಚ್‌ 27ರಂದು ಈ ಸಂಸ್ಥೆಗೆ 4 (ಜಿ) ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.
2023-24ನೇ ಸಾಲಿಗೆ 29.83 ಕೋಟಿ ವೆಚ್ಚದ ಔಷಧಗಳನ್ನು ಖರೀದಿಸಲು ಕೆಟಿಪಿಪಿ ನಿಯಮ 4 ಜಿ ಅನ್ವಯ ವಿನಾಯಿತಿ ನೀಡಬೇಕು ಎಂದು ಆಯುಷ್‌ ಇಲಾಖೆಯ ಆಯುಕ್ತರು 2022ರ ಅಕ್ಟೊಬರ್ 17ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದು ತಿಳಿದು ಬಂದಿದೆ. ಈ ಪ್ರಸ್ತಾವನೆಯ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ಕುರಿತು ಪ್ರಸ್ತಾವನೆಯನ್ನು ಪರಿಶೀಲಿಸಲು 2022ರ ಡಿಸೆಂಬರ್‌ 30ರಂದು ಹೆಚ್ಚುವರಿ ಮಾಹಿತಿ ಕೋರಿತ್ತು. ಆದರೆ ಆಯುಕ್ತರು ಸಮರ್ಪಕ ಮಾಹಿತಿ ನೀಡದ ಕಾರಣ ಆರ್ಥಿಕ ಇಲಾಖೆಯು 2023-24ನೇ ಸಾಲಿನ 4 ಜಿ ವಿನಾಯಿತಿ ಪ್ರಸ್ತಾವನೆ ಪರಿಗಣಿಸಿರಲಿಲ್ಲ. 2023-24ನೇ ಸಾಲಿಗೆ ಇಲಾಖೆಗೆ ಅಗತ್ಯವಾದ ಔಷಧಗಳನ್ನು ಟೆಂಡರ್‌ ಮೂಲಕ ಖರೀದಿಸಬೇಕು ಎಂದು ಸ್ಪಷ್ಟ ಸೂಚನೆ ನೀಡಿತ್ತು ಎಂದು ಗೊತ್ತಾಗಿದೆ.

 

ಸರ್ಕಾರದಿಂದ ಪ್ರಸ್ತಾವನೆ ತಿರಸ್ಕೃತಗೊಂಡರೂ ಸಹ ಆಯುಷ್‌ ಇಲಾಖೆಯ ಆಯುಕ್ತರು ಕಂಪನಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಈಗಾಗಲೇ ಮುಕ್ತಾಯಗೊಳಿಸಿದ್ದ ಕಡತವನ್ನು ರೀ ಕಾಲ್‌ ಮಾಡಿಸಿದ್ದರು. ಆಯುಕ್ತರ ಮೂಲ ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾಗಿದ್ದ ಇನ್ನಿತರ 4 ಸಂಸ್ಥೆಗಳನ್ನು 4 ಜಿ ವಿನಾಯಿತಿಗೆ ಪರಿಗಣಿಸಿರಲಿಲ್ಲ ಎಂದು ತಿಳಿದು ಬಂದಿದೆ.

 

ಈ ಪ್ರಕರಣದ ಕುರಿತು ಕಡತ ಸಂಖ್ಯೆ ಆಯುಷ್‌ /01/ಸಂಗ್ರಹಣ/21-22, 02/ಸಂಗ್ರಹಣ/22-23, ಸಂಖ್ಯೆ 10/ಸಂಗ್ರಹಣ/23-24, ಸಂಖ್ಯೆ ಆಕುಕ/132/ಪಿಐಎಂ/2021 ಭಾಗ-2, ಆಕುಕ/132/ಪಿಐಎಂ/2021/ಭಾಗ 1, ಆಕುಕ/147/ಪಿಐಎಂ/2022 (ಇಆ), ಆಕುಕ/331/ಪಿಐಎಂ/2022, ಆಇ/119/ವೆಚ್ಚ-12/2022 (ಇಆ), ಆಇ/781/ವೆಚ್ಚ-12/2022, ಆರೋಗ್ಯ ಕುಟುಂಬ ಕಲ್ಯಾಣ ಸಚಿವರ ಟಿಪ್ಪಣಿ ಸಂಖ್ಯೆ ಆಕು,/ಆಕಾ/2442/2022 ದಿನಾಂಕ 09.05.22 ಕಡತಗಳನ್ನು ಪರಿಶೀಲಿಸಬೇಕು ಎನ್ನುತ್ತಾರೆ ಇಲಾಖೆಯ ಮತ್ತೊಬ್ಬ ಅಧಿಕಾರಿ.

the fil favicon

SUPPORT THE FILE

Latest News

Related Posts