ಬೆಂಗಳೂರು; ಕಾಸ್ಕಾರ್ಡ್ ಮತ್ತು ಪಿಕಾರ್ಡ್ ಬ್ಯಾಂಕ್‌ಗಳ ನಡುವಿನ ಸಾಲದ ಅಸಮತೋಲನವು ಕಳೆದ 2 ವರ್ಷಗಳಲ್ಲಿ ಒಟ್ಟಾರೆ 1,343.32 ಕೋಟಿ ರು.ಗಳಷ್ಟಿತ್ತು ಎಂಬುದು ಬಹಿರಂಗವಾಗಿದೆ.
ಅದೇ ರೀತಿ ಪರಿಶಿಷ್ಟ ಜಾತಿ ರೈತರುಗಳಿಗೆ ಸಾಲ ನೀಡುವ ಸಲುವಾಗಿ ನೀಡಿರುವ ವಿಶೇಷ ಘಟಕ ಯೋಜನೆ ಮೊತ್ತ 9,90,14,000 ರು ಅಸಲು ಮತ್ತು 5,78,21,236 ರು. ಬಡ್ಡಿ ಮರು ಪಾವತಿ ಬಗ್ಗೆ ಬ್ಯಾಂಕ್‌ನಲ್ಲಿ ವಿವರಗಳಿಲ್ಲ. ಹಾಗೆಯೇ ಬಡ್ಡಿ ಮನ್ನಾ ಯೋಜನೆಯಡಿ ಸರ್ಕಾರದ ಆದೇಶಕ್ಕೆ ವ್ಯತಿರಿಕ್ತವಾಗಿ ಕಸ್ಕಾರ್ಡ್ ಬ್ಯಾಂಕ್ ಪಿಕಾರ್ಡ್ ಬ್ಯಾಂಕ್‌ಗೆ 194.83 ಕೋಟಿ ರು.ಗಳನ್ನು ಪಾವತಿಸಿತ್ತು.
ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ 2020-21 ಮತ್ತು 2021-22ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ಈ ವಿವರಗಳಿವೆ. ಈ ಎರಡೂ ಆರ್ಥಿಕ ಸಾಲಿನ ಲೆಕ್ಕ ಪರಿಶೋಧನಾ ವರದಿಯು ‘ದಿ ಫೈಲ್’ಗೆ ಲಭ್ಯವಾಗಿವೆ.
‘2020ರ ಮಾರ್ಚ್ ಅಂತ್ಯಕ್ಕೆ ಪೀಕಾರ್ಡ್ ಬ್ಯಾಂಕ್‌ಗಳು ಕಸ್ಕಾರ್ಡ್ ಹಿಂಪಾವತಿಸುವ ಸಾಲ ಹೊರಬಾಕಿಯ 627.12 ಕೋಟಿ ರು ಮತ್ತು 2021ರ ಮಾರ್ಚ್ ಅಂತ್ಯಕ್ಕೆ 716.20 ಕೋಟಿ ಮೊತ್ತದಲ್ಲಿ ಅಸಮತೆ’ ಇದೆ ಎಂದು ಈ ಎರಡೂ ಸಾಲಿನ ಲೆಕ್ಕ ಪರಿಶೋಧನಾ ವರದಿಯಲ್ಲಿ ವಿವರಿಸಲಾಗಿದೆ.
ಈ ಅಸಮತೆಯ ಮೊತ್ತದಲ್ಲಿ ವಸೂಲಾಗದ ಮೊತ್ತವಿದ್ದಲ್ಲಿ ಅದರ ಮೇಲೆ ಕಲ್ಪಿಸಿಕೊಳ್ಳಬೇಕಾದ ಅವಕಾಶದ ಮೊತ್ತವನ್ನೂ ಗೊತ್ತುಪಡಿಸಿಕೊಳ್ಳಲಾಗುವುದಿಲ್ಲ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಗಳ ಕುರಿತು ಸಹಕಾರ ಸಚಿವರಾಗಿದ್ದ ಎಸ್ ಟಿ ಸೋಮಶೇಖರ್ ಅವರು ಗಮನ ಹರಿಸಿರಲಿಲ್ಲ ಎಂದು ಗೊತ್ತಾಗಿದೆ.
ಪರಿಶಿಷ್ಟ ಜಾತಿ ರೈತರುಗಳಿಗೆ ಸಾಲ ನೀಡುವ ಸಲುವಾಗಿ ನೀಡಿರುವ ವಿಶೇಷ ಘಟಕ ಯೋಜನೆ ಮೊತ್ತ 9,90,14,000 ರು ಅಸಲು ಮತ್ತು 5,78,21,236 ರು. ಬಡ್ಡಿ ಮರು ಪಾವತಿ ಬಗ್ಗೆ ಬ್ಯಾಂಕ್‌ನಲ್ಲಿ ವಿವರಗಳಿಲ್ಲ.
ಅದೇ ರೀತಿ ಸರ್ಕಾರದಿಂದ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಬಂದಿರುವ ಸಹಾಯಧನ ಹಲವಾರು ವರ್ಷಗಳಿಂದ ಹೊಂದಾಣಿಕೆಯಾಗದೇ ಬಾಕಿ ಇದೆ. ಸಹಾಯಧನ ಪಡೆದ ಮತ್ತು ಸದುಪಯೋಗವಾಗಿರುವ ಬಗ್ಗೆ ದೃಢೀಕರಿಸಿಕೊಳ್ಳಲು ಬ್ಯಾಂಕ್‌ನಲ್ಲಿ ಯಾವ ವಿವರಗಳು ಲಭ್ಯವಿಲ್ಲ ಎಂಬುದು ಲೆಕ್ಕಪರಿಶೋಧನಾ ವರದಿಯಿಂದ ತಿಳಿದು ಬಂದಿದೆ.
ಹಾಗೆಯೇ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ರಾಜ್ಯ ಸರ್ಕಾರಕ್ಕೆ 2020-21ನೇ ಸಾಲಿನ ಅಂತ್ಯಕ್ಕೆ 97,96,98,307 ರು ಮತ್ತು 2021-22ನೇ ಸಾಲಿಗೆ 108,70,26,962 ರು. ಖಾತರಿ ಕಮಿಷನ್ ಪಾವತಿಸಲು ಬಾಕಿ ಉಳಿಸಿಕೊಂಡಿದೆ.
ಬ್ಯಾಂಕ್‌ನ ಉಪ ವಿಧಿಗಳ ಪ್ರಕಾರ ಸಾಲಪತ್ರಗಳನ್ನು ಬಿಡುಗಡೆ ಮಾಡಿಸಿಕೊಳ್ಳಲು ಸಿಂಕಿಂಗ್ ನಿಧಿಯನ್ನು ಸೃಜಿಸಕೊಳ್ಳಬೇಕಿದ್ದರೂ ಈ ಬ್ಯಾಂಕ್‌ನಲ್ಲಿ ಈ ನಿಧಿಯನ್ನು ಸೃಜಿಸಿಕೊಂಡಿಲ್ಲ. ಪ್ರತಿ ವರ್ಷವೂ ನಿವ್ವಳ ಲಾಭದ ಲೆಕ್ಕಾಚಾರಕ್ಕಿಂತ ಮೊದಲು ಮುಂದಿನ ವರ್ಷದಲ್ಲಿ ಸಾಲಪತ್ರಗಳ ಮೇಲೆ ಉಂಟಾಗುವ ಅಸಲು ಮತ್ತು ಬಡ್ಡಿ ತಗಾದೆಯ ಪ್ರತಿಶತ 5 ರಷ್ಟು ಮೊತ್ತವನ್ನು ಸಿಂಕಿಂಗ್ ನಿಧಿಯಲ್ಲಿಡಬೇಕಕು. 2021ರ ಮಾರ್ಚ್ ಅಂತ್ಯಕ್ಕೆ ದ್ರವ್ಯಾಸ್ಥಿ ನಿಧಿ ಖಾತೆಯಲ್ಲಿ 14.56 ಕೋಟಿ ಮತ್ತು 2022ರ ಮಾರ್ಚ್ ಅಂತ್ಯಕ್ಕೆ 15.73 ಕೋಟಿ ರು. ಇದೆ. ಆದರೂ ಬ್ಯಾಂಕ್‌ನ ಲಾಭಗಳಿಂದ ಸಿಂಕಿಂಗ್ ನಿಧಿ ಮೀಸಲನ್ನು ಸೃಜಿಸಿಕೊಂಡಿಲ್ಲ ಎಂದು ಲೆಕ್ಕ ಪರಿಶೋಧನಾ ವರದಿಯು ಆಕ್ಷೇಪ ಎತ್ತಿದೆ.
ಇನ್ನು ನಿರ್ದಿಷ್ಟವಾಗಿ ದ್ರವ್ಯಾಸ್ಥಿ ನಿಧಿಗೆ ಸಂಬಂಧಿಸಿದಂತೆ ನಬಾರ್ಡ್ ಕಡ್ಡಾಯಪಡಿಸಿರುವಂತೆ ಬ್ಯಾಂಕ್ ಒಟ್ಟು ಠೇವಣಿಗಳ ಮೊತ್ತದ ಪ್ರತಿಶತ 15ರಷ್ಟು ಮೊತ್ತವನ್ನು ದ್ರವ್ಯಾಸ್ಥಿ ನಿಧಿಯಲ್ಲಿ ಇಟ್ಟುಕೊಂಡಿರಬೇಕು. ಆದರೆ 2021ರ ಮಾರ್ಚ್ ಅಂತ್ಯಕ್ಕೆ 88.49 ಕೋಟಿ ರು ಮೊತ್ತದ ಬದಲಾಗಿ ಬ್ಯಾಂಕ್ ಠೇವಣಿಗಳಲ್ಲಿದ್ದ 34.89 ಕೋಟಿ ಮೊತ್ತವನ್ನು ಮಾತ್ರ ದ್ರವ್ಯಾಸ್ಥಿ ನಿಧಿಯನ್ನಾಗಿ ಮೀಸಲಿಟ್ಟಿತ್ತು ಎಂಬುದನ್ನು ಲೆಕ್ಕಪರಿಶೋಧನಾ ವರದಿಯು ಗಮನಿಸಿರುವುದು ಗೊತ್ತಾಗಿದೆ.
ದಾಮ್ ದುಪ್ಪಟ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದಿಂದ 14.44 ಕೋಟಿ ರು. ಬರಬೇಕಿದ್ದರೂ ಕಸ್ಕಾರ್ಡ್ ಬ್ಯಾಂಕ್ ಪಿಕಾರ್ಡ್ ಬ್ಯಾಂಕ್‌ಗಳ ಪರವಾಗಿ ಹಣವನ್ನು ಕ್ಲೈಮ್ ಮಾಡಿತ್ತು. ಅಲ್ಲದೇ ಸರ್ಕಾರದಿಂದ ಹಣ ಬರುವ ಮುನ್ನವೇ ಪಿಕಾರ್ಡ್ ಬ್ಯಾಂಕ್‌ಗಳಿಗೆ ಹಣ ಪಾವತಿಸಿತ್ತು. ಆದರೆ ರಾಜ್ಯ ಸರ್ಕಾರವು ಕ್ಲೈಮ್‌ನ ಹಣದಲ್ಲಿ ಕಡಿಮೆ ಮಂಜೂರಾತಿ ಮಾಡಿತ್ತು. ಬಾಕಿ ಹಣವನ್ನು ಸರ್ಕಾರವು ಬಿಡುಗಡೆ ಮಾಡಿಲ್ಲ ಎಂದು ವರದಿಯಲ್ಲಿ ವಿವರಿಸಲಾಗಿದೆ.