ಕಲ್ಯಾಣ ಕರ್ನಾಟಕಕ್ಕಿಲ್ಲ ಪ್ರತ್ಯೇಕ ಪಟ್ಟಿ, ಒಂದೇ ಜೇಷ್ಠತೆಗೆ ಸೂಚನೆ, ಶೇ.8ರಷ್ಟು ಮೀಸಲಾತಿ ನಿಗದಿಗೆ ತಿದ್ದುಪಡಿ

ಬೆಂಗಳೂರು; 371 (ಜೆ) ಭಾಗದ ರಾಜ್ಯ ವೃಂದದಲ್ಲಿ ಜೇಷ್ಠತೆಯನ್ನು ಕಲ್ಯಾಣ ಕರ್ನಾಟಕದವರಿಗೆ ಪ್ರತ್ಯೇಕವಾಗಿ ಪ್ರಕಟಿಸದೇ ಒಂದೇ ಜೇಷ್ಠತೆ ಪ್ರಕಟಿಸಲು ಸಚಿವ ಸಂಪುಟ ಉಪ ಸಮಿತಿಯು ಸೂಚಿಸಿರುವುದು ಅಧಿಕಾರಶಾಹಿಯೊಳಗೆ ಮತ್ತೊಮ್ಮೆ ಅಸಮಾಧಾನ ಭುಗಿಲೇಳಲು ದಾರಿಮಾಡಿಕೊಟ್ಟಿದೆ. ಅಲ್ಲದೇ ರಿಕ್ತ ಸ್ಥಾನ ಆಧಾರಿತ ಶೇ. 8ರಷ್ಟು ಮೀಸಲಾತಿ ನಿಗದಿಪಡಿಸಲು ಸೂಕ್ತ ತಿದ್ದುಪಡಿ ತರಲು ಸರ್ಕಾರವು ಮುಂದಾಗಿದೆ.

 

371 (ಜೆ) ಅಡಿಲ್ಲಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಮೀಸಲಾತಿ ನೀತಿ ಪಾಲನೆ ಬಗ್ಗೆ ರಚಿಸಿರುವ ಸಚಿವ ಸಂಪುಟ ಉಪ ಸಮಿತಿಯ ಅಧ್ಯಕ್ಷ ಬಿ ಶ್ರೀರಾಮುಲು ಅಧ್ಯಕ್ಷತೆಯಲ್ಲಿ 2023ರ ಮಾರ್ಚ್‌ 24ರಂದು ನಡೆದಿದ್ದ ಸಭೆಯು ಈ ಸೂಚನೆ ನೀಡಿದೆ. ಸಭೆಯ ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

‘ರಾಜ್ಯ ವೃಂದದಲ್ಲಿ ಜೇಷ್ಠತೆಯನ್ನು ಕಲ್ಯಾಣ ಕರ್ನಾಟಕದವರಿಗೆ ಪ್ರತ್ಯೇಕವಾಗಿ ಪ್ರಕಟಿಸುವುದನ್ನು ಬಿಟ್ಟು ಒಂದೇ ಜೇಷ್ಠತೆ ಪ್ರಕಟಿಸುವುದು. ಈ ಜೇಷ್ಠತೆಯಲ್ಲಿ ಅಧಿಕಾರಿ, ನೌಕರರ ಹೆಸರಿನ ಮುಂದೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಂದು ನಮೂದಿಸುವ ರೀತಿಯಲ್ಲೇ 371 (ಜೆ) ಎಸ್‌ ಸಿ, ಎಸ್‌ ಟಿ, ಸಾಮಾನ್ಯ, ಮಹಿಳೆ ಎಂದು ನಮೂದಿಸಬೇಕು. ರಾಜ್ಯವೃಂದದಲ್ಲಿ ಟಾರ್ಗೆಟ್‌ ಮೀಸಲಾತಿ ಬದಲು ರಿಕ್ತ ಸ್ಥಾನ ಆಧಾರಿತ ಶೇ. 8ರಷ್ಟು ಮೀಸಲಾತಿ ನಿಗದಿಪಡಿಸಲು ಸೂಕ್ತ ತಿದ್ದುಪಡಿ ಪ್ರಸ್ತಾವನೆಯನ್ನು 7 ದಿನದೊಳಗೆ ಮಂಡಿಸಬೇಕು,’ ಎಂದು ಸಚಿವ ಸಂಪುಟ ಉಪ ಸಮಿತಿಯು ಸೂಚಿಸಿರುವುದು ನಡವಳಿಯಿಂದ ಗೊತ್ತಾಗಿದೆ.

 

371(ಜೆ) ಭಾಗದ ರಾಜ್ಯ ವೃಂದದಲ್ಲಿ ಶೇ. 8ರಷ್ಟು ಹುದ್ದೆಗಳನ್ನು ಕಲ್ಯಾಣ ಕರ್ನಾಟಕದ ಭಾಗಕ್ಕೆ ಮೀಸಲಿಟ್ಟಿದೆ. ಜೇಷ್ಠತೆ ಪಟ್ಟಿಗಳನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತಿದೆ. ಹೀಗಾಗಿ ರಾಜ್ಯ ವೃಂದದ ಮೀಸಲಾತಿ ಅಡಿಯಲ್ಲಿ ಬಡ್ತಿ ಪಡೆದವರ ಹುದ್ದೆಗಳು ಮುಂಬಡ್ತಿ, ನಿವೃತ್ತಿ, ಸ್ವಯಂ ನಿವೃತ್ತಿ ಅಥವಾ ಮರಣ ಮುಂತಾದ ಕಾರಣಗಳಿಂದ ಹುದ್ದೆ ಖಾಲಿಯಾಗದಿದ್ದಲ್ಲಿ ನಂತರದ ಜೇಷ್ಠತೆಯಲ್ಲಿರುವವರಿಗೆ ಬಡ್ತಿಯ ಅವಕಾಶ ದೊರಕುವುದಿಲ್ಲ. ಇವರಿಗಿಂತ ಕಿರಿಯರಾದವರಿಗೆ ರಾಜ್ಯ ವಲಯದಲ್ಲಿ ಬಡ್ತಿ ದೊರೆತರೂ ಕಲ್ಯಾಣ ಕರ್ನಾಟಕ ಭಾಗದವರಿಗೆ ಬಡ್ತಿ ದೊರೆಯಲು ಅವಕಾಶವಿಲ್ಲ ಎಂಬ ಅಂಶವು ನಡವಳಿಯಿಂದ ತಿಳಿದು ಬಂದಿದೆ.

 

 

ಶೇ. 8ರಷ್ಟು ಮೀಸಲಿಟ್ಟಿರುವ ಎಲ್ಲಾ ಹುದ್ದೆಗಳನ್ನು ವಿಲೇ ಇಟ್ಟು ಆ ಹುದ್ದೆಗಳನ್ನು ಹೊರತುಪಡಿಸಿ  ಇನ್ನಿತರೆ ಶೇ. 92ರಲ್ಲಿನ ಹುದ್ದೆಗಳಲ್ಲಿ ಆ ಸಂದರ್ಭಗಳಲ್ಲಿ ಎಲ್ಲಾ ನೌಕರರನ್ನು ಒಳಗೊಂಡು ಬಡ್ತಿಗಳನ್ನು ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯು ಮಧ್ಯಂತ ತಡೆಯಾಜ್ಞೆ ನೀಡಿದೆ. 2017ರ ಆಗಸ್ಟ್‌ 17ರಂದು ನೀಡಿರುವ ಅಂತಿಮ ಆದೇಶದ ಪ್ರಕಾರ ಸ್ಥಳೀಯ ವೃಂದದ ನೌಕರರ ಸೇವಾ ಅವಧಿಯೆಂದು ಪರಿಗಣಿಸಿ ಈನೌಕರರಿಗೆ ಕಾಲ್ಪನಿಕ ಸೇವಾ ಜೇಷ್ಠತೆ ನೀಡಿ ಸಾಮಾನ್ಯ ವರ್ಗದಡಿ ಮುಂಬಡ್ತಿ ಪಡೆದಿರುವ ಕರ್ನಾಟಕ ಸರ್ಕಾರದ ಸಚಿವಾಲಯದ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಎಲ್ಲಾ ಅಧಿಕಾರಿ, ನೌಕರರ ಮುಂಬಡ್ತಿಯನ್ನು ಮರು ಹೊಂದಾಣಿಕೆ ಮಾಡಿ 2014ರ ಜೂನ್‌ 9ರಿಂದ ಜಾರಿಗೆ ಬರುವಂತೆ ಸೇವಾ ಜೇಷ್ಠತೆ ಸಿದ್ಧಪಡಿಸಲು ಸೂಕ್ತ ಆದೇಶ ಹೊರಡಿಸಲೂ ಸೂಚಿಸಿದೆ.

 

ಅಲ್ಲದೇ ಗೆಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳಿಗೆ ಮಾತ್ರ ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಆಯ್ಕೆ ಕೇಳುವುದು ಮತ್ತು ರಾಜ್ಯದಲ್ಲಿ ಸ್ಥಳೀಯ ವೃಂದ ಮತ್ತು ಮಿಕ್ಕುಳಿದ ವೃಂದದ ಎರಡೂ ಹುದ್ದೆಗಳಿಗೆ ಒಂದೇ ಅರ್ಜಿ ಕರೆಯುವ ಸಂಬಂಧ ಕ್ರಮವಾಗಿ 2020ರ ಜೂನ್‌ 6 ಮತ್ತು 2016ರ ನವೆಂಬರ್‌ 16 ರಂದು ಹೊರಡಿಸಿರುವ ಸುತ್ತೋಲೆಯನ್ನೇ ಮುಂದುವರೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಗೊತ್ತಾಗಿದೆ.

 

‘ಜನರಲ್‌ ಮೆರಿಟ್‌ ಪಟ್ಟಿಯಲ್ಲಿ ಆಯ್ಕೆಯಾಗಿರುವ 371 (ಜೆ) ಅಡಿಯಲ್ಲಿ ಮುಂದಿನ ದಿನಗಳಲ್ಲಿ ಮುಂಬಡ್ತಿ ಮೀಸಲಾತಿ ನೀಡಲು 2013ರಲ್ಲಿ ಹೊರಡಿಸಿದ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ, 2013ರ ಅಧಿಸೂಚನೆ ಕಂಡಿಕೆ 5(1)ನ್ನು ತಿದ್ದುಪಡಿ ಮಾಡಬೇಕಿದೆ,’ ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸಭೆಯ ಗಮನಕ್ಕೆ ತಂದಿದ್ದರು. ಈ ಕುರಿತು ಕಡತವನ್ನು ಕಳಿಸಿ ಅನುಮೋದನೆ ಪಡೆದು ಸೂಕ್ತ ಆದೇಶ ಹೊರಡಿಸಬೇಕು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ಸಭೆಯು ಸೂಚಿಸಿದೆ.

the fil favicon

SUPPORT THE FILE

Latest News

Related Posts