ಬಿಡಿಎ ದರಕ್ಕಿಂತಲೂ ಬಿಟಿಡಿಎ ದರ ದುಪ್ಪಟ್ಟು; 1,000 ಕೋಟಿ ಹೆಚ್ಚುವರಿ ದರ ನಮೂದಿಸಿ ಭ್ರಷ್ಟಾಚಾರಕ್ಕೆ ನಾಂದಿ

ಬೆಂಗಳೂರು; ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹೊಸ ಬಡಾವಣೆ ನಿರ್ಮಾಣ ಮತ್ತು ಅಭಿವೃದ್ಧಿಗೆ ಮಾಡುವ ವೆಚ್ಚಕ್ಕಿಂತಲೂ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ತನ್ನ ಹೊಸ ಬಡಾವಣೆ ನಿರ್ಮಾಣ, ಅಭಿವೃದ್ಧಿಗೆ ಎಕರೆಗೆ 2.8 ಕೋಟಿ ರು.ಗಳಂತೆ ದುಪ್ಪಟ್ಟು ಖರ್ಚು ಮಾಡಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.

 

ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೃಷ್ಣಾಭಾಗ್ಯ ಜಲನಿಗಮದ ವ್ಯಾಪ್ತಿಯಲ್ಲಿ ಬರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಹೊಸ ಬಡಾವಣೆ ನಿರ್ಮಾಣ ಮತ್ತು ಅಭಿವೃದ್ಧಿಗೆ ತರಾತುರಿಯಲ್ಲಿ ಕರೆದಿರುವ ಟೆಂಡರ್‌ ಸುತ್ತ ಭ್ರಷ್ಟಾಚಾರದ ಹುತ್ತ ಬೆಳೆದಿದೆ.

 

ಈಗಾಗಲೇ ಆಹ್ವಾನಿಸಿರುವ ಟೆಂಡರ್‌ನಲ್ಲಿ ಅತ್ಯಧಿಕ ಮೊತ್ತ ನಮೂದಾಗಿರುವುದು ಅಂದಾಜು 1,000 ಕೋಟಿಗೂ ಹೆಚ್ಚು ಮೊತ್ತದ ಅಕ್ರಮ ನಡೆಯಲು ದಾರಿಮಾಡಿಕೊಟ್ಟಿದೆ ಎಂಬ ಗಂಭೀರ ಆರೋಪಗಳೂ ಕೇಳಿ ಬಂದಿವೆ.

 

ಈ ಕುರಿತು ಕೊಪ್ಪಳ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಮುಕುಂದರಾವ್‌ ಭವಾನಿಮಠ ಎಂಬುವರು ಈಗಾಗಲೇ ಮುಖ್ಯ ಕಾರ್ಯದರ್ಶಿಗೆ  ದೂರು ನೀಡಿದ್ದಾರೆ ಎಂದು ಗೊತ್ತಾಗಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೃಷ್ಣಭಾಗ್ಯ ಜಲನಿಗಮದ ಅಧಿಕಾರಿಗಳು ಈ ಟೆಂಡರ್‌ನಲ್ಲಿ ಅತ್ಯಧಿಕ ಮೊತ್ತವನ್ನು ನಮೂದಿಸುವ ಮೂಲಕ ಕರ್ನಾಟಕ ಸರ್ಕಾರವು ನಿಗದಿಪಡಿಸಿರುವ ದರ ಒಪ್ಪಂದವನ್ನು ಧಿಕ್ಕರಿಸಿದ್ದಾರೆ. ಈ ದರಗಳಿಗಿಂತಲೂ ಹೆಚ್ಚು ಮೊತ್ತದ ಅಂದಾಜು ಪತ್ರಿಕೆಗಳನ್ನು ತಯಾರಿಸಲಾಗಿದೆ ಎಂದು ಗೊತ್ತಾಗಿದೆ.

 

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಹೊಸ ಬಡಾವಣೆ ನಿರ್ಮಾಣ ಮತ್ತು ಅಭಿವೃದ್ಧಿಗೆ ಟರ್ನ್ ಕೀ ಆಧಾರದ ಮೇಲೆ 4 ಕಾಮಗಾರಿಗಳಿಗಾಗಿ 2,600 ಕೋಟಿ ಮೊತ್ತದ ಟೆಂಡರ್‌ನ್ನು 2023ರ ಫೆಬ್ರುವರಿಯಲ್ಲಿ ಇ-ಪ್ರೊಕ್ಯೂರ್‌ಮೆಂಟ್‌ನಲ್ಲಿ ಆಹ್ವಾನಿಸಿದೆ. ಆದರೆ ಈ ಪ್ರಕ್ರಿಯೆ ನಡೆಯುವ ಮೊದಲೇ ನಿರ್ಮಾಣ ಕಂಪನಿಗಳೊಂದಿಗೆ ಪೂರ್ವ ನಿರ್ಧಾರಿತ ಒಪ್ಪಂದ ಮಾಡಿಕೊಂಡಿರುವ ಕೆಬಿಜೆಎನ್‌ಎಲ್‌ ಮತ್ತು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಅಧಿಕಾರಿಗಳು ಒಳಸಂಚು ಮತ್ತು ಅಕ್ರಮಕೂಟ ಕಟ್ಟಿಕೊಂಡು ಅಂದಾಜು ಪತ್ರಿಕೆಗಳನ್ನು ದುಪ್ಪಟ್ಟುಗೊಳಿಸಿದ್ದಾರೆ ಎಂದು ಮುಕುಂದರಾವ್‌ ಭವಾನಿ ಮಠ ಅವರು ದೂರಿನಲ್ಲಿ ಆರೋಪಿಸಿರುವುದು ತಿಳಿದು ಬಂದಿದೆ.

 

‘ಕೆಐಎಡಿಬಿಯು ಒಂದು ಎಕರೆ ಹೊಸ ಬಡಾವಣೆ ನಿರ್ಮಾಣಕ್ಕಾಗಿ 55 ಲಕ್ಷ ಖರ್ಚು ಮಾಡುತ್ತಿದೆ. ಬೆಂಗಳೂರು ಅಭಿವೃದ್ದಿ ಪ್ರಾಧಿಕಾರವು ಒಂದು ಎಕರೆಯಲ್ಲಿ ಹೊಸ ಬಡಾವಣೆ ನಿರ್ಮಾಣ ಮತ್ತು ಅಭಿವೃದ್ಧಿಗೆ ಗರಿಷ್ಠ 1 ಕೋಟಿ ವೆಚ್ಚ ಮಾಡುತ್ತಿದೆ. ಆದರೆ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರವು ಒಂದು ಎಕರೆಗೆ 2.8 ಕೋಟಿ ಖರ್ಚು ಮಾಡಲಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕೆಬಿಜೆಎನ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳು ಇದರಲ್ಲಿ ನೂರಾರು ಕೋಟಿ ರುಪಾಯಿಗಳನ್ನು ಲಂಚದ ರೂಪದಲ್ಲಿ ಪಡೆದಿದ್ದಾರೆ,’ ಎಂದು ದೂರಿನಲ್ಲಿ ಮುಕುಂದರಾವ್‌ ಭವಾನಿಮಠ ಅವರು ಆಪಾದಿಸಿದ್ದಾರೆ.

 

ಹೊಸ ಬಡಾವಣೆಗಳ ನಿರ್ಮಾಣದ ಕಾಮಗಾರಿ, ಸಿಮೆಂಟ್‌ ರಸ್ತೆ, ಕುಡಿಯುವ ನೀರಿನ ಪೈಪ್‌ಲೈನ್‌, ವಿದ್ಯುತ್‌ ಕಂಬ, ವಿದ್ಯುತ್‌ ಉಪಕರಣಗಳ ಅಳವಡಿಕೆ, ಚರಂಡಿ ಕಾಮಗಾರಿ, ಉದ್ಯಾನಗಳಿಗೆ ತಂತಿ ಬೇಲಿ ಒಳಗೊಂಡಂತೆ ಪ್ರತಿಯೊಂದು ಕಾಮಗಾರಿಗಳಿಗೆ ಕರ್ನಾಟಕ ಲೋಕೋಪಯೋಗಿ ಇಲಾಖೆಯು ದರ ನಿಗದಿಪಡಿಸಿದೆ.

 

ಈ ಕುರಿತು ಇತ್ತೀಚೆಗಷ್ಟೇ ಕರ್ನಾಟಕ ಸರ್ಕಾರವು ಹೊಸ ದರ ಒಪ್ಪಂದ ಲಿಖಿತ ರೂಪದ ದರಪಟ್ಟಿಯನ್ನು ಅಧಿಕೃತವಾಗಿ ಜಾರಿಗೊಳಿಸಿದೆ. ಆದರೆ ಈ ಎಲ್ಲವನ್ನೂ ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಮತ್ತು ಕೆಬಿಜೆಎನ್‌ಎಲ್‌ ಗಾಳಿಗೆ ತೂರಿದೆ ಎಂದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts