ಬೆಂಗಳೂರು; ರಾಸಾಯನಿಕ ಸಾಮಗ್ರಿಗಳನ್ನು ಸರಬರಾಜು ಮಾಡುವ ಗುತ್ತಿಗೆದಾರರೊಬ್ಬರಿಂದ 40 ಲಕ್ಷ ರು. ಲಂಚ ಪಡೆಯುವಾಗ ಪ್ರಶಾಂತ ಮಾಡಾಳು ಮತ್ತಿತರರು ಸಿಕ್ಕಿಬಿದ್ದಿರುವ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕೆಎಸ್‌ಡಿಎಲ್‌ನ ಅಧ್ಯಕ್ಷರೂ ಆಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಅವರ ಪತ್ತೆಗೆ ಹುಡುಕಾಟ ನಡೆಸಿರುವ ಲೋಕಾಯುಕ್ತ ಪೊಲೀಸರು ಲುಕ್‌ಔಟ್ ನೋಟೀಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ.
ಬಂಧನದಿಂದ ಪಾರಾಗಲು ನೇರವಾಗಿ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿ ಕಾನೂನು ಮೊರೆಹೋಗುವ ಕುರಿತು ಮಾಡಾಳು ವಿರೂಪಾಕ್ಷಪ್ಪ ಅವರು ತಂತ್ರಗಾರಿಕೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪ್ರಕ್ರಿಯೆಗೂ ಮುನ್ನವೇ ವಿರೂಪಾಕ್ಷಪ್ಪ ಅವರನ್ನು ಬಂಧಿಸಲು ಲೋಕಾಯುಕ್ತ ಪೊಲೀಸರು ತಮ್ಮ ಕಾರ್ಯಾಚರಣೆಯನ್ನು ಬಿರುಸುಗೊಳಿಸಿದ್ದಾರೆ.
ಈ ಕುರಿತು ಮೂವರು ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡವನ್ನು ರಚಿಸಿರುವ ಲೋಕಾಯುಕ್ತ ಪೊಲೀಸ್ ವಿಭಾಗವು ಮಾಡಾಳು ವಿರೂಪಾಕ್ಷಪ್ಪ ಅವರ ನಡೆ, ಚಲನವಲನಗಳ ಮೇಲೆ ಹದ್ದಿನ ಕಣ್ಣು ಇರಿಸಿದೆ. ಪುತ್ರ ಪ್ರಶಾಂತ್ ಮಾಡಾಳು ಅವರು ಲೋಕಾಯುಕ್ತ ಬಲೆಗೆ ಬಿದ್ದ ಸುದ್ದಿ ಗೊತ್ತಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ವಿರೂಪಾಕ್ಷಪ್ಪ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಪತ್ರವನ್ನು ಮುಖ್ಯಮಂತ್ರಿಗೆ ರವಾನಿಸಿ ನಾಪತ್ತೆಯಾಗಿದ್ದರು.
ಭಾನುವಾರದೊಳಗೆ ಮಾಡಾಳು ವಿರೂಪಾಕ್ಷಪ್ಪ ಅವರು ಲೋಕಾಯುಕ್ತಕ್ಕೆ ಶರಣಾಗದೇ ಇದ್ದರೇ ಅಥವಾ ಪತ್ತೆಯಾಗದೇ ಇದ್ದರೇ ಅವರ ನಿವಾಸ, ಅವರಿಗೆ ಹಂಚಿಕೆಯಾಗಿರುವ ಶಾಸಕ ಭವನದ ಕೊಠಡಿಗೆ ಲುಕ್‌ಔಟ್ ನೋಟೀಸ್‌ನ್ನು ಲಗತ್ತಿಸಲಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ವಿಭಾಗದ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್’ಗೆ ಖಚಿತಪಡಿಸಿದ್ದಾರೆ.
ಇದೇ ಪ್ರಕರಣದಲ್ಲಿ ಈಗಾಗಲೇ 6 ಕೋಟಿಗೂ ಹೆಚ್ಚು ನಗದನ್ನು ವಶಪಡಿಸಿಕೊಂಡ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯೊಂದಿಗೆ ಮಾಹಿತಿ ಹಂಚಿಕೊಂಡಿರುವ ಲೋಕಾಯುಕ್ತ ಪೊಲೀಸರು ಈ ಸಂಬಂಧ ತನಿಖೆಗೆ ನೆರವು ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಕೋಟ್ಯಂತರ ರುಪಾಯಿ ನಗದು, ಚಿನ್ನ, ಕೃಷಿ ಜಮೀನು, ನಿವೇಶನಗಳು ಸೇರಿದಂತೆ ಇನ್ನಿತರೆ ಸ್ವರೂಪದ ಆಸ್ತಿಗಳನ್ನು ಹೊಂದಿದ್ದಾರೆ ಎಂಬ ಮಾಹಿತಿಯನ್ನು ಹರಪನಹಳ್ಳಿ, ಶಿವಮೊಗ್ಗ, ದಾವಣಗೆರೆ, ಚನ್ನಗಿರಿ ಸೇರಿದಂತೆ ವಿವಿಧೆಡೆಯಿಂದ ಲೋಕಾಯುಕ್ತಕ್ಕೆ ದೂರವಾಣಿ ಕರೆಗಳು ಬರಲಾರಂಭಿಸಿವೆ ಎಂದೂ ಗೊತ್ತಾಗಿದೆ.