ಬೆಂಗಳೂರು; ಆದಾಯಕ್ಕೂ ಮೀರಿದ ಆಸ್ತಿ ಗಳಿಸಿದ ಆರೋಪದ ಮೇರೆಗೆ ಬಿಜೆಪಿಯ ಮತ್ತೊಬ್ಬ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ ಪಿ ರೇಣುಕಾಚಾರ್ಯ ಅವರ ಮನೆ, ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 8 ವರ್ಷಗಳಾದರೂ ಅಂತಿಮ ತನಿಖಾ ವರದಿಯನ್ನೇ ಸಲ್ಲಿಸದೇ ವಿಳಂಬ ಧೋರಣೆ ಅನುಸರಿಸುತ್ತಿರುವುದು ಇದೀಗ ಬಹಿರಂಗವಾಗಿದೆ.
ರಾಸಾಯನಿಕ ಸರಬರಾಜು ಮಾಡುವ ಗುತ್ತಿಗೆದಾರರೊಬ್ಬರಿಂದ 40 ಲಕ್ಷ ರು ಲಂಚ ಪಡೆಯುತ್ತಿದ್ದ ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರನ್ನು ಸೆರೆಹಿಡಿದಿದ್ದಲ್ಲದೇ ಅವರ ಮನೆ, ಕಚೇರಿ ಶೋಧಿಸಿ 6 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡು ಭ್ರಷ್ಟರಲ್ಲಿ ನಡುಕ ಹುಟ್ಟಿಸಿರುವ ಲೋಕಾಯುಕ್ತ ಪೊಲೀಸರು, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಪ್ರಕರಣದಲ್ಲಿ ಅಂತಿಮ ತನಿಖಾ ವರದಿ ಮತ್ತು ದೋಷಾರೋಪಣೆ ಪಟ್ಟಿ ಸಲ್ಲಿಸದೇ ವಿಳಂಬ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದ್ದಾರೆ.
ಶಾಸಕ ಎಂ ಪಿ ರೇಣುಕಾಚಾರ್ಯ ಅವರ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಆರೋಪದ ಮೇರೆಗೆ ಗುರುಪಾದಯ್ಯ ಮಠದ್ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೂರು ಮತ್ತು ದಾಖಲೆಗಳನ್ನು ಪರಿಶೀಲಿಸಿದ್ದ ಲೋಕಾಯುಕ್ತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ದೂರಿನ ಕುರಿತು ತನಿಖೆ ನಡೆಸಬೇಕು ಎಂಧು ಸಿಆರ್‌ಪಿಸಿ ಕಲಂ 156(3)ರ ಅಡಿಯಲ್ಲಿ ಆದೇಶಿಸಿದ್ದರು. ಅದರಂತೆ ರೇಣುಕಾಚಾರ್ಯ ಸೇರಿದಂತೆ ಸೋದರರ ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದ ಲೋಕಾಯುಕ್ತ ಪೊಲೀಸರು (ದಾವಣಗೆರೆ ಲೋಕಾಯುಕ್ತ ಠಾಣೆ ಗುನ್ನೆ ನಂ 6/2015ರ) ದಾಳಿ ನಡೆಸಿದ್ದರು.
ಅಲ್ಲದೇ ದೂರುದಾರ ಇದೇ ಮಾಹಿತಿಯನ್ನು ಮಾಹಿತಿ ಹಕ್ಕಿನ ಅಡಿಯಲ್ಲಿಯೂ ಕೋರಿದ್ದರು. ಇದಕ್ಕೆ 2018ರ ಅಕ್ಟೋಬ್ 31ರಂದು ಉತ್ತರಿಸಿದ್ದ ಲೋಕಾಯುಕ್ತ ಡಿವೈಎಸ್ಪಿ ಪ್ರಕರಣವು ತನಿಖೆಯಲ್ಲಿರುತ್ತದೆ. ಅಂತಿಮ ತನಿಖಾ ವರದಿಯನ್ನು ತಯಾರಿಸಲಾಗುತ್ತಿದೆ ಎಂದು ಮಾಹಿತಿ ನೀಡಿ ಕೈತೊಳೆದುಕೊಂಡಿದ್ದರು.
ಅಲ್ಲದೇ ‘ಆರೋಪಿತರಾದ ಹಾಲಿ ಶಾಸಕ ಎಂ ಪಿ ರೇಣುಕಾಚಾರ್ಯ ಮತ್ತು ಇತರರ ಮೇಲಿನ ಲೋಕಾಯುಕ್ತ ಪ್ರಕರಣದಲ್ಲಿ ತನಿಖಾಧಿಕಾರಿಗಳು ಅಂತಿಮ ವರದಿಯನ್ನು ಸಲ್ಲಿಸಿದ್ದು ಕೇಂದ್ರ ಕಚೇರಿಗೆ ಬಂದು ಚರ್ಚಿಸುವುದು ಬಾಕಿಯಿರುತ್ತದೆ,’ ಎಂದು ಕರ್ನಾಟಕ ಲೋಕಾಯುಕ್ತ ಅಪರ ಪೊಲೀಸ್ ಮಹಾನಿರ್ದೇಶಕರು ದೂರುದಾರ ಗುರುಪಾದಯ್ಯ ಮಠದ್ ಅವರಿಗೆ 2020ರ ಸೆ.4ರಂದು ಹಿಂಬರಹ ನೀಡಿದ್ದರು. 2 ವರ್ಷಗಳಾದರೂ ಲೋಕಾಯುಕ್ತ ಪೊಲೀಸರು ಈ ಮಾಹಿತಿಯನ್ನೂ ನೀಡದಿರುವುದು ಪ್ರಕರಣವನ್ನು ಮುಚ್ಚಿ ಹಾಕಲಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಿಂಬರಹದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಎಂ.ಪಿ. ರೇಣುಕಾಚಾರ್ಯ ಹಾಗೂ ಅವರ ಸಂಬಂಧಿಕರ ಮನೆಗಳು ಮತ್ತು ಅವರಿಗೆ ಸೇರಿದ ಶಿವಮೊಗ್ಗದ ಬಾಪೂಜಿ ಶಿಕ್ಷಣ ಸಂಸ್ಥೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು 3 ಲಕ್ಷ ನಗದು ಹಾಗೂ 10 ಲಕ್ಷ ಮೌಲ್ಯದ ಚಿನ್ನಾಭರಣ, 20 ವಿವಿಧ ವಾಹನ ಹಾಗೂ ಸಾಕಷ್ಟು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು.
ಅದೇ ರೀತಿ ಶಿವಮೊಗ್ಗದಲ್ಲಿ ಬಾಪೂಜಿ ವಿದ್ಯಾಸಂಸ್ಥೆಯ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಹಾಸ್ಟೆಲ್‌ಗೆ ದಾಳಿ ನಡೆಸಿ ಅಲ್ಲಿ ಪರಿಶೀಲನೆ ನಡೆಸಿದ್ದರು. ಅಲ್ಲಿ 10 ವಿವಿಧ ವಾಹನಗಳಿದ್ದವು. ಅಲ್ಲಿನ ಪೀಠೋಪಕರಣ ಸೇರಿದಂತೆ ಅಂದಾಜು 80 ಲಕ್ಷ ಮೌಲ್ಯದ ಆಸ್ತಿ ಇರಬಹುದು. ದಾವಣಗೆರೆಯಲ್ಲಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು ಲಭ್ಯವಾಗಿರಲಿಲ್ಲ. ಆದರೆ, ಹೊನ್ನಾಳಿಯಲ್ಲಿ ಅವರಿಗೆ ಒಂದು ಮನೆ, 5 ಕಾರು, ಒಂದು ಟ್ರ್ಯಾಕ್ಟರ್ ಇದೆ. ಬೆಂಗಳೂರಿನಲ್ಲಿ ಇರುವ ಮನೆ ಅವರ ಅಳಿಯ ತಿಪ್ಪೇಸ್ವಾಮಿ ಹೆಸರಿನಲ್ಲಿದೆ ಎಂದು ಮಾಹಿತಿ ನೀಡಿದ್ದರು.
ಈ ಪ್ರಕ್ರಿಯೆ ನಡೆದು 8 ವರ್ಷಗಳಾದರೂ ಇದರ ಕುರಿತಾದ ತನಿಖಾ ವರದಿ ಸಿದ್ಧವಾಗಿದೆಯೇ , ಸಿದ್ಧವಾಗಿದ್ದರೆ ಆ ವರದಿ ಏನಾಯಿತು, ದೋಷಾರೋಪಣೆ ಪಟ್ಟಿ ಸಲ್ಲಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಾಥಮಿಕ ಮಾಹಿತಿಯನ್ನು ಲೋಕಾಯುಕ್ತ ಪೊಲೀಸರು ದೂರುದಾರನಿಗೆ ನೀಡಿಲ್ಲ ಎಂದು ಗೊತ್ತಾಗಿದೆ.
‘ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಗಿಫ್ಟ್ ಪ್ರಕರಣದ ಬಗ್ಗೆ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೂ ತಮಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಹೇಳಿದ್ದರು. ಆದರೆ ಪ್ರಶಾಂತ್ ಮಾಡಾಳು ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಟ್ರ್ಯಾಪ್ ಕೇಸಿನ ಬಗ್ಗೆ ಪತ್ರಿಕಾಗೋಷ್ಠಿಯನ್ನು ಹೇಗೆ ಮಾಡಿದರು, ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಮತ್ತು ಸಚಿವ ಸಂಪುಟದಲ್ಲಿದ್ದ ಅಂದಿನ ಹಲವು ಸಚಿವರ ವಿರುದ್ಧ 2010 ದೂರಿನ ಬಗ್ಗೆ ಇವರು ಪತ್ರಿಕಾಗೋಷ್ಠಿ ಮಾಡಿ ಚಕಾರ ಎತ್ತುತ್ತಿಲ್ಲವೇಕೆ, ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಪ್ರಕರಣದಲ್ಲಿಯೂ ಆಗಿರುವ ವಿಳಂಬದ ಬಗ್ಗೆ ಯಾವ ಮಾಹಿತಿಯನ್ನೂ ನೀಡುತ್ತಿಲ್ಲವೇಕೆ, ಲೋಕಾಯುಕ್ತ ಪೊಲೀಸರ ಕಾರ್ಯಕ್ಷಮತೆಯನ್ನು ತಮ್ಮ ವರ್ಚಸ್ಸು ವೃದ್ಧಿಗೆ ಉಪಯೋಗಿಸಿಕೊಳ್ಳುತ್ತಿರುವುದು ದುರಾದೃಷ್ಟಕರ ಸಂಗತಿ,’ ಎನ್ನುತ್ತಾರೆ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್.
ಗುರುಪಾದಯ್ಯ ಮಠದ್ ನೀಡಿದ್ದ ದೂರಿನಲ್ಲೇನಿತ್ತು?
ಎಂ ಪಿ ರೇಣುಕಾಚಾರ್ಯ ಅವರು ತಮ್ಮ ಸಹೋದರರ ಸಹಾಯದೊಂದಿಗೆ ತಮ್ಮ ಅಧಿಕಾರ ಮತ್ತು ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಕಲಂ 13(1)(ಡಿ) ಅಡಿ ಮತ್ತು (ಇ) ಅಡಿಯಲ್ಲಿ ಅಪರಾಧ ಎಸಗಿದ್ದಾರೆ. ಭಾರತೀಯ ದಂಡಸಂಹಿತೆ ಕಲಂ 42-ರ ಅಡಿಯಲ್ಲಿ ಮೋಸ ಮ್ತು ಕಲಂ 120(ಬಿ) ಅಡಿಯಲ್ಲಿ ಇತರೆ ಆರೋಪಿಗಳ ಸಹಕಾರದೊಂದಿಗೆ ಪಿತೂರಿ ನಡೆಸಿ ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂದು ದೂರಲಾಗಿತ್ತು.
ರೇಣುಕಾಚಾರ್ಯ ಅವರು ಚುನಾವಣಾ ಘೋಷಣಾ ಪತ್ರದಲ್ಲಿ ತಮ್ಮ ಆಸ್ತಿ 2004ರಲ್ಲಿ 26,07,319 , 2008ರಲ್ಲಿ 73,97,828 ಮತ್ತು 2013ರಲ್ಲಿ 4,95,32,608ರು. ಮತ್ತು ವಾರ್ಷಿಕ ಆದಾಯ 27,58,288 ರು ಎಂದು ಘೋಷಿಸಿಕೊಂಡಿದ್ದರು. ತಮ್ಮ ಹೆಸರಿನಲ್ಲಿ ಸುಮಾರು 8 ಎಕರೆ ಕೃಷಿ ಭೂಮಿ ಘೋಷಿಸಿಕೊಂಡಿದ್ದರು.
ಇದಲ್ಲದೇ ಬೇರೆ ಯಾವ ವರಮಾನವು ಇಲ್ಲವೆಂದು ಹೇಳಿಕೊಂಡಿದ್ದರು. 2004ರಲ್ಲಿ ಇದ್ದ ಸುಮಾರು 26 ಲಕ್ಷ ಮೌಲ್ಯದ ಆಸ್ತಿಯು 2013ರಲ್ಲಿ ಏಕಾಏಕೀ ಸುಮಾರು 5 ಕೋಟಿಗೂಈ ಅಧಿಕವಾಗಿತ್ತು. 67,48,608 ಹೂಡಿಕೆ ಎಂದು ತೋರಿಸಲಾಗಿತ್ತು. ಅದಲ್ಲದೇ 30,35,054 ರು.ಗಳನ್ನು ರಾಜಪ್ಪ ಡಿ ಜೆ ಎಂಬುವರಿಂದ ಮತ್ತು 10,75,000 ರು.ಗಳನ್ನು ತಮ್ಮ ಸೋದರ ಮತ್ತು ತಮ್ಮ ಪತ್ನಿ ಸುಮಿತ್ರ ಅವರಿಂದ 6,00,000 ರು.ಗಳನ್ನು ಪಡೆಯಲಾಗಿದೆ ಎಂದು ಹೇಳಿದ್ದರು.
2013ರ ಚುನಾವಣಾ ಘೋಷಣಾ ಪ್ರಮಾಣ ಪತ್ರದಲ್ಲಿ ತಮ್ಮ ಹೆಸರಿನಲ್ಲಿ ಯಾವುದೇ ಕೃಷಿಯೇತರ ಭೂಮಿ ಇಲ್ಲವೆಂದು ಹೇಳಿದ್ದರು. ಆದರೆ ಅವರು ಶಿವಮೊಗ್ಗ ತಾಲೂಕು ಚನ್ನಮುಂಬಾಪುರ ಗ್ರಾಮದ ಸರ್ವೆ ನಂಬರ್ 29ರಲ್ಲಿ 0.36 ಗುಂಟೆ ಮತ್ತು ಸರ್ವೆನಂಬರ್ 30ರಲ್ಲಿ 0.36 ಗುಂಟೆ ತಮ್ಮ ಹೆಸರಿನಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ/ಶೈಕ್ಷಣಿಕ ಉದ್ದೇಶಕ್ಕೆ ಪರಿವರ್ತನೆ ಮಾಡಿಸಿಕೊಂಡು ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ಆಯುರ್ವೇದ ಕಾಲೇಜು, ವಸತಿ ನಿಲಯಗಳನ್ನು ನಿರ್ಮಿಸಿದ್ದರು.
ಈ ಜಾಗದ ಮೌಲ್ಯವು 1,25,00,000 ರು ಎಂದು ತೋರಿಸಲಾಗಿತ್ತು. ಆದರೆ ಭೂಮಿ, ಕಟ್ಟಡ ಮತ್ತು ಅಭಿವೃದ್ದಿ ವೆಚ್ಚ ಸೇರಿ ಸುಮಾರು 5 ಕೋಟಿಗೂಈ ಮೀರಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು.
ಅಲ್ಲದೇ 2013ರ ಚುನಾವಣಾ ಘೋಷಣಾ ಪ್ರಮಾಣ ಪತ್ರದಲ್ಲಿ ವಾರ್ಷಿಕ ಆದಾಯ 27,58,288 ಎಂದು ಘೋಷಿಸಿದ್ದರು. 1,01,57,276 ರು. ಬ್ಯಾಂಕ್ ಸಾಲವಿದೆ. ಪಿಎಲ್‌ಡಿ ಬ್ಯಾಂಕ್‌ನಿಂದ 1,62,000 ರು., ಕಾರ್ಪೋರೇಷನ್ ಬ್ಯಾಂಕ್‌ನಿಂದ 69,60,222 ರು., ಎಸ್‌ಬಿಐನಿಂದ 30,35,054 ರು. ಸಾಲವಿದೆ ಎಂದು ತೋರಿಸಿದ್ದರು. ಸಾಲದ ಮರುಪಾವತಿಯ ಮೂಲ ತನಿಖೆ ಮಾಡಬೇಕು ಎಂದು ದೂರುದಾರ ಗುರುಪಾದಯ್ಯ ಅವರು ಕೋರಿದ್ದರು.
2004ರಲ್ಲಿ 5,00,000 ರು. ಮೌಲ್ಯದ ಟಯೋಟಾ ಕ್ವಾಲೀಸ್ ಕಾರು, 2008ರಲ್ಲಿ 17,00,000 ರು. ಮೌಲ್ಯದ ಫೋರ್ಡ್ ಎಂಡಿವರ್, 2013ರಲ್ಲಿ 20,00,000 ರು. ಮೌಲ್ಯದ ಫಾರ್ಚುನರ್ ಕಾರು, 2013ರಲ್ಲಿ 85,00,000 ರು. ಮೌಲ್ಯದ ಆಡಿ ಕಾರು ಮತ್ತು 40,50,000 ಮೌಲ್ಯದ ಜೆಸಿಬಿ ಯಂತ್ರಗಳಿದ್ದವು.
2004ರಲ್ಲಿ 87,114 ರು. ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು, 2008ರಲ್ಲಿ 1,65,000 ರು., ಮತ್ತು 2013ರಲ್ಲಿ 26,30,000 ರು. ಮೌಲ್ಯ ಏರಿಕೆಯಾಗಿತ್ತು. ಆರ್‌ಎಸ್ ಸೆವೆನ್ ಹಿಲ್ಸ್ ಶೇಲ್ಟರ್ ಪ್ರೈವೈಟ್ ಲಿಮಿಟೆಡ್ ಕಂಪನಿಯಲ್ಲಿ ಇರುವ ಷೇರು ಬಂಡವಾಳವನ್ನು ತಮ್ಮ2013ರ ಚುನಾವಣಾ ಘೋಷಣಾ ಪ್ರಮಾಣ ಪತ್ರದಲ್ಲಿ ಘೋಷಿಸಿರಲಿಲ್ಲ.
ರೇಣುಕಾಚಾರ್ಯ ಅವರು 2004ರಲ್ಲಿ ಶಾಸಕರಾದ ನಂತರ ನಾಲ್ಕನೆ ಆರೋಪಿ ಹೆಸರಿನಲ್ಲಿ 2007, 2009 ಮತ್ತು 2010ರಲ್ಲಿ ಆಸ್ತಿಗಳನ್ನು ಖರೀದಿಸಿದ್ದಾರೆ. 2014ರಲ್ಲಿ ಮೂರನೇ ಆರೋಪಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದಾರೆ. ಇದರ ಅಂದಾಜು ಮೌಲ್ಯ 2,00,00,000 ರು ಗೂ ಅಧಿಕವಾಗಿರುತ್ತದೆ. ಮೂರನೇ ಮತ್ತು ನಾಲ್ಕನೇ ಆರೋಪಿಗಳಿಗೆ ಯಾವುದೇ ರೀತಿಯ ಆದಾಯ ಇಲ್ಲದಿರುವುದರಿಂದ ಈ ಆಸ್ತಿಗಳ ಖರೀದಿಗಳು ಮೊದಲನೇ ಆರೋಪಿಯಾದ ರೇಣುಕಚಾರ್ಯ ಅವರ ಬೇನಾಮಿ ಆಸ್ತಿಗಳಾಗಿವೆ ಎಂದು ದೂರಲಾಗಿತ್ತು.
ಎಂ ಪಿ ರೇಣುಕಾಚಾರ್ಯ ಅವರು 2004ರಲ್ಲಿ ಪ್ರಥಮ ಬಾರಿಗೆ ಮತ್ತು 2008ರಲ್ಲಿ ಎರಡನೇ ಬಾರಿಗೆ ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ಅಕ್ಟೋಬರ್ 10ರಿಂದ 2010ರ ನವೆಂಬರ್ 19ರವರೆಗೆ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾಗಿದ್ದರು. ಹಾಗೆಯೇ 2009ರ ನವೆಂಬರ್ 25ರಿಂದ 2013ರ ಮಾರ್ಚ್ 27ರವರೆಗೆ ಅಬಕಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.