ಪ್ರಶಾಂತ್‌ನೊಂದಿಗೇ ಬಂಧನಕ್ಕೊಳಗಾದ ನಿಕೋಲಸ್‌; 20 ಕೋಟಿ ಅವ್ಯವಹಾರ ಪ್ರಕರಣಕ್ಕೆ ಮರುಜೀವ?

ಬೆಂಗಳೂರು:ರಾಸಾಯನಿಕ ಪೂರೈಸುವ ಗುತ್ತಿಗೆಯ ಕಾರ್ಯಾದೇಶ ನೀಡಲು 40 ಲಕ್ಷ ರು. ಲಂಚ ಪಡೆಯುತ್ತಿದ್ದ ವೇಳೆಯಲ್ಲಿ ಬಿಜೆಪಿ ಶಾಸಕ ಮಾಡಾಳು ಕೆ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳು ಅವರೊಂದಿಗೇ  ಅರೋಮಾ ಕಂಪನಿ ಸಿಬ್ಬಂದಿ ಆಲ್ಬರ್ಟ್ ನಿಕೋಲಾ ಮತ್ತು  ಗಂಗಾಧರ ಎಂಬುವರು ಬಂಧನಕ್ಕೊಳಗಾಗಿರುವ ಬೆನ್ನಲ್ಲೇ ಇದೇ ಅರೋಮಾ ಕಂಪನಿ ಮತ್ತು ಇದರ ಸೋದರ ಸಂಸ್ಥೆಯ ಕಂಪನಿಯಿಂದ ಸೋಪ್‌  ನೂಡಲ್ಸ್‌  ಖರೀದಿಯಲ್ಲಿ   20 ಕೋಟಿ ಮೊತ್ತದ ಅವ್ಯವಹಾರ ನಡೆದಿತ್ತು.

 

ಈ ಕುರಿತು ಸೂಕ್ತ ತನಿಖೆ ನಡೆಯದ ಕಾರಣ ಐಎಎಸ್‌ ಅಧಿಕಾರಿಗಳ ಲಾಬಿಯಿಂದಾಗಿ ಮುಚ್ಚಿ ಹೋಗಿತ್ತು. ಆದರೀಗ ಪ್ರಶಾಂತ್‌ ಮಾಡಾಳುವಿನೊಂದಿಗೇ ಅರೋಮಾ ಕಂಪನಿಯ ಇಬ್ಬರು ಸಿಬ್ಬಂದಿಯನ್ನೂ ಬಂಧಿಸಿರುವುದರಿಂದ 20 ಕೋಟಿ ಅವ್ಯವಹಾರ ನಡೆದಿದೆ ಎನ್ನಲಾಗಿರುವ ಈ  ಪ್ರಕರಣಕ್ಕೀಗ ಮರು ಜೀವ ದೊರೆತಂತಾಗಿದೆ.

 

ಲೋಕಾಯುಕ್ತ ಪೊಲೀಸರು ಪ್ರಶಾಂತ್ ಮಾಡಾಳು ಅವರನ್ನು ಬಲೆಗೆ ಕೆಡವಲು ಹೋದ ಸಂದರ್ಭದಲ್ಲೂ ಅರೋಮಾ ಕಂಪನಿಯ  ಸಿಬ್ಬಂದಿ ಇದ್ದರು. ಲೋಕಾಯುಕ್ತ ಸಂಸ್ಥೆಯ ಮೂಲಗಳ ಪ್ರಕಾರ ಅರೋಮಾ ಕಂಪನಿಯ ಇಬ್ಬರು ಸಿಬ್ಬಂದಿ ಒಟ್ಟು 90 ಲಕ್ಷ (ತಲಾ 45 ಲಕ್ಷ) ರು.ಗಳನ್ನು ಪ್ರಶಾಂತ್‌ ಅವರಿಗೆ ನೀಡಲು ತಂದಿದ್ದರು. ಹೀಗಾಗಿ ಅರೋಮಾ ಕಂಪನಿಯ ಇಬ್ಬರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆಯಲ್ಲದೇ ಈ ಇಬ್ಬರನ್ನೂ ಬಂಧಿಸಲಾಗಿದೆ.

 

ಕರ್ನಾಟಕ ಕೆಮಿಕಲ್‌ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿತ್ತು.  ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಉಲ್ಲಂಘಿಸಲಾಗಿದೆ ಎಂದು ಕೆಎಸ್‌ಡಿಎಲ್‌  ನೌಕರರ ಸಂಘವು ನೀಡಿದ್ದ ದೂರನ್ನಾಧರಿಸಿ ಸೂಕ್ತ ತನಿಖೆ ನಡೆಸದೆಯೇ ಪ್ರಕರಣವನ್ನು ಮುಚ್ಚಿ ಹಾಕಿತ್ತು.

 

ಪ್ರತಿಷ್ಠಿತ ಕಂಪನಿಗಳ ಬಿಡ್‌ಗಳನ್ನು ತಿರಸ್ಕರಿಸಿದ್ದ  ಅಧಿಕಾರಿಗಳು ನೂಡಲ್ಸ್‌ ಸರಬರಾಜು ಮಾಡಿದ ಅನುಭವವೇ ಇಲ್ಲದ ಕರ್ನಾಟಕ ಕೆಮಿಕಲ್ಸ್‌ ಕಂಪನಿಯ ಬಿಡ್‌ನ್ನು ಅನುಮೋದಿಸಿದ್ದರ ಹಿಂದೆ  ಅಕ್ರಮ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ವಿಶೇಷವೆಂದರೆ  ಈ ಪ್ರಕರಣದ ಕುರಿತು ಕಾರ್ಖಾನೆಯ ನೌಕರರ ಸಂಘ ದೂರು ನೀಡುವವರೆಗೂ ಕೈಗಾರಿಕೆ ಸಚಿವ ಜಗದೀಶ್‌ ಶೆಟ್ಟರ್‌ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಗಮನಕ್ಕೂ ಬಂದಿರಲಿಲ್ಲ.

 

ಪ್ರಕರಣದ ಹಿನ್ನೆಲೆ

 

 

ಸಾಬೂನು ತಯಾರಿಸಲು ಬಳಸುವ ಕಚ್ಛಾ ಸಾಮಗ್ರಿಯಾದ 17 ಸಾವಿರ ಮೆಟ್ರಿಕ್‌ ಟನ್‌ ಪ್ರಮಾಣದ  ಸೋಪ್‌ ನೂಡಲ್ಸ್‌ ಖರೀದಿಸಲು 2019ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ ಕುಂಟು ನೆಪಗಳನ್ನೊಡ್ಡಿದ್ದ ಅಧಿಕಾರಿಗಳು ಟೆಂಡರ್‌ ಪ್ರಕ್ರಿಯೆಯನ್ನು  5 ಬಾರಿ ಮುಂದೂಡಿದ್ದರು. 6ನೇ ಬಾರಿಗೆ ಪುನಃ ಟೆಂಡರ್‌ ಕರೆದಿದ್ದ ಅಧಿಕಾರಿಗಳು ನೂಡಲ್ಸ್‌ ಪ್ರಮಾಣವನ್ನು 17 ಸಾವಿರ ಮೆಟ್ರಿಕ್‌ ಟನ್‌ನಿಂದ 12 ಸಾವಿರಕ್ಕಿಳಿಸಿದ್ದರು.

 

ಆದರೆ 6ನೇ ಬಾರಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಿಲ್ಲ.  2020ರ ಜನವರಿವರೆಗೆ ಪುನಃ 12 ಸಾವಿರ ಮೆಟ್ರಿಕ್‌ ಟನ್‌ ಟನ್‌ ಪ್ರಮಾಣಕ್ಕೆ ಕರೆಯಲಾಗಿತ್ತಾದರೂ ಏಪ್ರಿಲ್‌, ಆಗಸ್ಟ್‌, ಸೆಪ್ಟಂಬರ್‌ವರೆಗೂ ಈ ಪ್ರಕ್ರಿಯೆ  ಮುಂದುವರೆಯಿತು. ಇದಾದ ನಂತರ ಅದಾನಿ ವಿಲ್‌ಮರ್‌ ಸಂಸ್ಥೆಗೆ ಪ್ರತಿ ಟನ್‌ಗೆ 59 ಸಾವಿರ ರು.ನಂತೆ  ಖರೀದಿ ಆದೇಶ ನೀಡಲಾಗಿತ್ತು ಎಂದು ತಿಳಿದು ಬಂದಿದೆ.

 

 

ಇದಾದ ನಂತರ ಮತ್ತೊಮ್ಮೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 6 ಸಾವಿರ ಮೆಟ್ರಿಕ್‌ ಟನ್‌ಗೆ 3 ಎಫ್‌ ಇಂಡಸ್ಟ್ರೀಸ್‌ಗೆ ಪ್ರತಿ ಮೆಟ್ರಿಕ್‌ ಟನ್‌ಗೆ 71,500 ರು.ಗೆ ಖರೀದಿ ಆದೇಶ ನೀಡಿದ್ದರು. ಪುನಃ ಅಕ್ಟೋಬರ್‌ 2020ಕ್ಕೆ ಟೆಂಡರ್‌ ಕರೆದಿದ್ದ ಅಧಿಕಾರಿಗಳು 2020ರ ನವೆಂಬರ್‌ 20ರಂದು ಪ್ರತಿ ಮೆಟ್ರಿಕ್‌ ಟನ್‌ 87,000 ರು.ಗಳಂತೆ, 104 ಕೋಟಿ 40 ಲಕ್ಷ ರು.ಗೆ ಕರ್ನಾಟಕ ಕೆಮಿಕಲ್‌ ಇಂಡಸ್ಟ್ರೀಸ್‌ಗೆ ಖರೀದಿ ಆದೇಶ ನೀಡಲಾಗಿತ್ತು. ಪದೇ ಪದೇ ಟೆಂಡರ್‌ ಕರೆದಿದ್ದ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿತ್ತು.

 

 

ಕರ್ನಾಟಕ ಕೆಮಿಕಲ್‌ ಮತ್ತು ಕರ್ನಾಟಕ ಅರೋಮಾ ಕಂಪನಿ ಸೋದರ ಸಂಸ್ಥೆಗಳಾಗಿವೆ. ಇವೆರಡೂ ಒಂದೇ ವಿಳಾಸದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕ ಕೆಮಿಕಲ್‌ ಕಂಪನಿಯು ತನ್ನ ಸೇವಾವಧಿಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ಕೂಡ  ನೂಡಲ್ಸ್‌  ಸರಬರಾಜು ಮಾಡಿಲ್ಲ ಎಂದು ನೌಕರರ ಸಂಘವು ದೂರಿನಲ್ಲಿ ವಿವರಿಸಿತ್ತು. ಇಂತಹ ಸಂಸ್ಥೆಗಳಿಗೆ ಆರ್ಥಿಕ ಬಿಡ್‌ನಲ್ಲಿ ಅವಕಾಶ ನೀಡಿ ಕೆಟಿಪಿಪಿ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇನ್ನು ನೂಡಲ್ಸ್‌ ಹೊರತುಪಡಿಸಿ ಇನ್ನಿತರೆ ಸಾಮಗ್ರಿಗಳ ಖರೀದಿಗೆ ವಾರ್ಷಿಕ ಟೆಂಡರ್‌ ಕರೆದಿದ್ದ ಅಧಿಕಾರಿಗಳು ನೂಡಲ್ಸ್‌ ಖರೀದಿಗೆ ಮಾತ್ರ  ಪದೇ ಪದೇ ಟೆಂಡರ್‌ ಪ್ರಕ್ರಿಯೆಗಳನ್ನು   ಮುಂದೂಡಿದ್ದು  ಸಂಶಯಗಳಿಗೆ ಕಾರಣವಾಗಿತ್ತು.

 

 

ಅಲ್ಲದೆ ಜಾಗತಿಕ ಮಾರುಕಟ್ಟೆಯಲ್ಲಿ ಪಾನ್‌ ಸೆಂಚುರಿ, ಬಿರ್ಲಾ ಕಂಪನಿ, ಮಲೇಶಿಯಾ, ಕೆಎಲ್‌ಕೆ ಪಾಲ್ಮೋಸಾ, ಇಜೀಲ್‌ ಕೆಮಿಕಲ್ಸ್‌ ಪ್ರೈವೈಟ್‌ ಲಿಮಿಟೆಡ್‌ ಚೆನ್ನೈ, ಕರನೀತ್‌ ಎಂಟರ್‌ಪ್ರೈಸೆಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌, ಬೆಂಗಳೂರು ಬಿರ್ಲಾ ಲಿಮಿಟೆಡ್‌, ಮಲೇಷಿಯಾ ಕಂಪನಿ 3ಎಫ್‌ ಇಂಡಸ್ಟ್ರೀಸ್‌ ಇಂಡಿಯಾ ಸೇರಿದಂತೆ ಹಲವು ಕಂಪನಿಗಳು ನೂಡಲ್ಸ್‌ನ್ನು ಕೇವಲ 55ರಿಂದ 60 ಸಾವಿರ ರು.ಗೆ ಮಾರಾಟ ಮಾಡುತ್ತಿದ್ದವು. ಆದರೆ ಕೆಎಸ್‌ಡಿಎಲ್‌ನ ಭ್ರಷ್ಟ ಅಧಿಕಾರಿಗಳು ಕರ್ನಾಟಕ ಕೆಮಿಕಲ್ಸ್‌ ಕಂಪನಿಯಿಂದ ಖರೀದಿಸಿ ಕಂಪನಿಯ ಬೊಕ್ಕಸಕ್ಕೆ ನಷ್ಟಕ್ಕೆ ಕಾರಣರಾಗಿದ್ದರು   ಎಂಬ ಆರೋಪಕ್ಕೆ ಗುರಿಯಾಗಿದ್ದರು.

 

 

ಅವ್ಯವಹಾರದಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರೆ ಅಧಿಕಾರಿಗಳ ವಿರುದ್ಧ ವಿಚಾರಣೆ ಮತ್ತು ತನಿಖೆ ನಡೆಸುವ ಸಲುವಾಗಿ ಸರ್ಕಾರ ತನಿಖಾ/ವಿಚಾರಣಾಧಿಕಾರಿಯನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ನೂಡಲ್ಸ್‌ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ 20 ಕೋಟಿ ಅಕ್ರಮದ ಬಗ್ಗೆ 10 ದಿನದ ಒಳಗೆ ವರದಿ ಸಲ್ಲಿಸಲು ಸೂಚಿಸಿತ್ತು.

 

 

 

20 ಕೋಟಿ ಅವ್ಯವಹಾರ ತನಿಖೆ ಏನಾಯಿತು?

 

ವಿಶೇಷವೆಂದರೇ  ಸೋಪ್‌ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಹಿರಿಯ ಐಎಎಸ್‌ ಅಧಿಕಾರಿ ಗುಂಜನ್‌ ಕೃಷ್ಣ ಅವರು ಮೈಸೂರ್‌ ಸ್ಯಾಂಡಲ್‌ ಸೋಪ್‌ ಕಾರ್ಖಾನೆಯ ಆರೋಪಿತ ಅಧಿಕಾರಿಗಳ ವಿರುದ್ಧದ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ವರದಿ ನೀಡಿದ್ದರು.

 

ಸೋಪ್‌ ನೂಡಲ್ಸ್‌ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕುರಿತು ಕಾರ್ಮಿಕ ಸಂಘಟನೆ ದಾಖಲೆ ಸಮೇತ ದೂರು ನೀಡಿದ್ದರೂ ಕ್ರಮಬದ್ಧವಾಗಿ ತನಿಖೆ ನಡೆಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಅಧಿಕಾರಿಗಳು ನೀಡಿದ್ದ ಲಿಖಿತ ಉತ್ತರ ಮತ್ತು ಸಮಜಾಯಿಷಿ ಆಧರಿಸಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿತ್ತು.

ಸೋಪ್‌ ನೂಡಲ್ಸ್‌ ಖರೀದಿ; 20 ಕೋಟಿ ಅವ್ಯವಹಾರ ಪ್ರಕರಣಕ್ಕೆ ಎಳ್ಳು ನೀರು?

ಗುಂಜನ್‌ ಕೃಷ್ಣ ಅವರು ನೀಡಿದ್ದ  ತನಿಖಾ ವರದಿಯನ್ನಾಧರಿಸಿ ‘ದಿ ಫೈಲ್‌’ ಈ ಕುರಿತು ವರದಿ ಪ್ರಕಟಿಸಿತ್ತು.

 

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಂಪನಿ (ಕೆಎಸ್‌ಡಿಎಲ್‌) ಕಚ್ಚಾ ಸಾಮಗ್ರಿಗಳ ಪೈಕಿ ಒಂದಾದ ನೂಡಲ್ಸ್‌ ಖರೀದಿಯಲ್ಲಿ 20.00 ಕೋಟಿಗೂ ಅಧಿಕ ಮೊತ್ತದಲ್ಲಿ ಅವ್ಯವಹಾರ ನಡೆದಿದೆ ಎಂದು ಕಾರ್ಖಾನೆಯ ಕಾರ್ಮಿಕ ಸಂಘಟನೆಯು ದಾಖಲೆ ಸಮೇತ ದೂರು ಸಲ್ಲಿಸಿತ್ತು. ಆದರೂ ತನಿಖಾಧಿಕಾರಿ ಗುಂಜನ್‌ ಕೃಷ್ಣ ಅವರು ಪೂರಕ ದಾಖಲೆಗಳನ್ನು ಸಂಘಟನೆಯು ಹಾಜರುಪಡಿಸಿಲ್ಲ. ದಾಖಲೆಗಳು ಸುಳ್ಳು ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ ಎಂದು ಷರಾ ಬರೆದಿದ್ದರು.

‘ಡಿಎಫ್‌ಎ ಸೋಪ್‌ ನೂಡಲ್‌ ಖರೀದಿಯಲ್ಲಿ  20 ಕೋಟಿಗೂ ಅದಿಕ ಅವ್ಯವಹಾರವಾಗಿದೆ ಎಂದು ಆಪಾದಿಸಿ ಯಾವ ರೀತಿ ಅವ್ಯವಹಾರವಾಗಿದೆ ಎಂಬ ಬಗ್ಗೆ ಪೂರಕ ದಾಖಲೆಳನ್ನಾಗಲೀ, ಮಾಹಿತಿಗಳನ್ನಾಗಲಿ ಒದಗಿಸದೇ ಇರುವುದರಿಂದ ತನಿಖೆಗೆ ಸೂಚಿಸಿರುವ ಆರೋಪದ ಅಂಶವು ಸಾಬೀತಾಗಿರುವುದಿಲ್ಲ,’ ಎಂದು ಗುಂಜನ್‌ ಕೃಷ್ಣ ಅವರು ಹೇಳಿದ್ದು  ವರದಿಯಿಂದ ತಿಳಿದು ಬಂದಿತ್ತು.

ಕರ್ನಾಟಕ ಕೆಮಿಕಲ್‌ ಕಂಪನಿಯು ತನ್ನ ಸೇವಾವಧಿಯಲ್ಲಿ ಎಂದಿಗೂ ಯಾರಿಗೂ 1 ಟನ್‌ನಷ್ಟೂ ನೂಡಲ್ಸ್‌ ಕೂಡ ಸರಬರಾಜು ಮಾಡಿಲ್ಲ. ಇಂತಹ ಕಂಪನಿಗೆ ಖರೀದಿ ಆದೇಶ ನೀಡಿದ್ದರ ಹಿಂದೆಯೂ ಕಿಕ್‌ ಬ್ಯಾಕ್‌ ಆರೋಪ ಕೇಳಿ ಬಂದಿದ್ದನ್ನು ಸ್ಮರಿಸಬಹುದು.

 

ಜಗದೀಶ್‌ ಶೆಟ್ಟರ್‌ ಅವರು ಕೈಗಾರಿಕೆ ಸಚಿವರಾಗಿದ್ದ ಅವಧಿಯಲ್ಲಿ ಕೆಎಸ್‌ಡಿಎಲ್‌ಗೆ  ಸೋಪ್‌ ನೂಡಲ್ಸ್‌ ಸರಬರಾಜು ಮಾಡುತ್ತಿದ್ದ ಈ ಕಂಪನಿಯು ಮುರುಗೇಶ್‌ ಆರ್‌ ನಿರಾಣಿ ಅವರು ಕೈಗಾರಿಕೆ ಸಚಿವರಾದ ನಂತರ ಮತ್ತು ಮಾಡಾಳು ಕೆ ವಿರೂಪಾಕ್ಷಪ್ಪ ಅವರು ಅಧ್ಯಕ್ಷರಾದ ನಂತರವೂ  ಸೋಪ್‌ ನೂಡಲ್ಸ್‌ ಸೇರಿದಂತೆ ಇನ್ನಿತರೆ ರಾಸಾಯನಿಕಗಳನ್ನು ಸರಬರಾಜು ಮಾಡುತ್ತಲೇ ಬಂದಿದೆ ಎಂದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts