ಮೈಸೂರ್‌ ಸ್ಯಾಂಡಲ್‌ ಸೋಪ್‌ ಕಾರ್ಖಾನೆಯಲ್ಲಿ ಭ್ರಷ್ಟಾಚಾರ; ಸರಬರಾಜುದಾರರಿಗೆ 139 ಕೋಟಿ ಅಕ್ರಮ ಲಾಭ!

ಬೆಂಗಳೂರು; ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಯಲ್ಲಿ 2022-23ನೇ ಸಾಲಿಗೆ 800 ಕೋಟಿಗೂ ಹೆಚ್ಚು ಮೊತ್ತದಲ್ಲಿ ಕಚ್ಚಾ ಸಾಮಗ್ರಿಗಳನ್ನು ಮಾರುಕಟ್ಟೆ ದರಕ್ಕಿಂತಲೂ ಮೂರ್ನಾಲ್ಕು ಪಟ್ಟು ಹೆಚ್ಚಿನ ದರದಲ್ಲಿ ಖರೀದಿಸುವ ಮೂಲಕ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವುದು ಇದೀಗ ಬಹಿರಂಗವಾಗಿದೆ.

 

ಅಲ್ಲದೇ ವಿಧಾನಸಭೆ ಚುನಾವಣೆಗೆ ಇನ್ನೇನು ಮೂರ್ನಾಲ್ಕು ತಿಂಗಳು ಬಾಕಿ ಇರುವಾಗ ಯಾವುದೇ ಟೆಂಡರ್‌ ಕರೆಯಲು ಅವಕಾಶಗಳಿಲ್ಲ. 15ಕ್ಕೂ ಹೆಚ್ಚು ಕಚ್ಛಾ ಸಾಮಗ್ರಿಗಳ ಖರೀದಿಗೆ ತರಾತುರಿಯಲ್ಲಿ ಟೆಂಡರ್‌ ಕರೆದಿರುವ ಕಾರ್ಖಾನೆಯ ಆಡಳಿತ ಮಂಡಳಿಯು ಅಂದಾಜು 139 ಕೋಟಿಗೂ ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಅಕ್ರಮವಾಗಿ ಲಾಭ ಮಾಡಿಕೊಟ್ಟು ಅದರಲ್ಲಿ ಕಮಿಷನ್‌ ವ್ಯವಹಾರ ನಡೆಸಿದೆ ಎಂದು ಗುರುತರವಾದ ಆರೋಪಗಳೂ ಕೇಳಿ ಬಂದಿವೆ.

 

ರಾಸಾಯನಿಕ ಪೂರೈಸುವ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು 40 ಲಕ್ಷ‌ ಲಂಚ ಪಡೆಯುವಾಗ ಕಾರ್ಖಾನೆಯ ಅಧ್ಯಕ್ಷರೂ ಆಗಿರುವ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಮಗ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಬೆನ್ನಲ್ಲೇ ಇದೀಗ ಇದೇ ಕಾರ್ಖಾನೆಯಲ್ಲಿ ನಡೆದಿರುವ ಬಹುದೊಡ್ಡ ಭ್ರಷ್ಟಾಚಾರ ಪ್ರಕರಣಗಳು ಮುನ್ನೆಲೆಗೆ ಬಂದಿವೆ.

 

ಪ್ರಶಾಂತ್‌ ಮಾಡಾಳ್‌ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬೀಳುವ ಮುನ್ನವೇ ಜಿ ಆರ್‌ ಶಿವಶಂಕರ್‌ ಅಧ್ಯಕ್ಷತೆಯಲ್ಲಿರುವ ಕಾರ್ಖಾನೆಯ ನೌಕರರ ಸಂಘವು ಲೋಕಾಯುಕ್ತರಿಗೆ ದಾಖಲೆ ಸಹಿತ 2023ರ ಫೆ.21ರಂದೇ ದೂರು ಸಲ್ಲಿಸಿತ್ತು. ಕಚ್ಛಾ ಸಾಮಗ್ರಿಗಳ ಖರೀದಿಗೆ ಸಂಬಂಧಿಸಿದಂತೆ ಖರೀದಿ ನಿಯಮಗಳು, ಮಾರ್ಗಸೂಚಿಗಳು ಮತ್ತು ಸ್ಟೋರ್‌ ಮ್ಯಾನುಯಲ್‌ ನಿಯಮಾವಳಿಗಳನ್ನು ಹೇಗೆ ಉಲ್ಲಂಘಿಸಲಾಗುತ್ತಿದೆ ಎಂದು ವಿವರಿಸಿದೆ. ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಕಚ್ಛಾ ಸಾಮಗ್ರಿ ಮತ್ತು ಸುಗಂಧ ದ್ರವ್ಯಗಳನ್ನ ಪರಿಶೀಲಿಸಲು ಕೇಂದ್ರ ಸರ್ಕಾರವು Fragrance and Flaouvr Development center ಸ್ಥಾಪಿಸಿದೆ. ಆದರೆ ಕೆಎಸ್‌ಡಿಎಲ್‌ನಲ್ಲಿ ಕಚ್ಛಾ ಸಾಮಗ್ರಿಗಳನ್ನು ಹಾಗೂ ಸುಗಂಧ ದ್ರವ್ಯಗಳನ್ನು ಈ ಸಂಸ್ಥೆಯಿಂದ ಪರಿಶೀಲಿಸುತ್ತಿಲ್ಲ ಮತ್ತು ಕಚ್ಛಾ ಸಾಮಗ್ರಿಗಳ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಕಾರ್ಖಾನೆಯ ಆಡಳಿತ ಮಂಡಳಿ ಮತ್ತು ಅಧಿಕಾರಿಶಾಹಿಯು ಗುತ್ತಿಗೆದಾರರೊಂದಿಗೇ ಶಾಮೀಲಾಗಿ ಮಾರುಕಟ್ಟೆಯಲ್ಲಿನ ದರಕ್ಕಿಂತಲೂ ಹೆಚ್ಚಿನ ದರ ನಮೂದಿಸಿ ಭಾರೀ ಪ್ರಮಾಣದಲ್ಲಿ ಕಮಿಷನ್‌ ಪಡೆಯಲಾಗುತ್ತಿದೆ. ಇದು ಕಾರ್ಖಾನೆ ಬೊಕ್ಕಸಕ್ಕೂ ನೂರಾರು ಕೋಟಿ ರುಪಾಯಿ ನಷ್ಟಕ್ಕೆ ದಾರಿಮಾಡಿಕೊಟ್ಟಿದೆ ಎಂದು ತಿಳಿದು ಬಂದಿದೆ.

 

ಕಚ್ಛಾ ಸಾಮಗ್ರಿಗಳಿಗೆ ಶೇ.2, 3ರಷ್ಟು ಮಾತ್ರ ದರ ಹೆಚ್ಚಿಸಲು ಅವಕಾಶವಿದೆ. ಆದರೆ 20 ಈ ಕಂಪನಿಯು ಕರೆದಿರುವ ಟೆಂಡರ್‌ನಲ್ಲಿ ಶೇ.70, 71, 83, 145 ರಷ್ಟು ದರವನ್ನು ಹೆಚ್ಚಳಗೊಳಿಸಿದ್ದಾರೆ ಎಂದು ಗೊತ್ತಾಗಿದೆ. ಇದರ ಬಗ್ಗೆ ಖರೀದಿ ಸಂಧಾನ ಸಮಿತಿ ಮತ್ತು ಹಣಕಾಸು ಸಮಿತಿ ಯಾವುದೇ ಕ್ರಮ ವಹಿಸಿಲ್ಲ ಎಂಬ ದೂರು ಕೇಳಿ ಬಂದಿದೆ.

 

ಸ್ಯಾಂಡ್ರೋಲ್‌, ಸ್ಯಾಂಡಲ್‌ ಮೈಸೂರ್‌ ಕೋರ್‌, ಮೀಥೇಲ್‌, ಟೋನಾಲಿಡ್ಡ್‌, ಪ್ಯಾಚ್‌ ಆಯಿಲ್‌, ಸ್ಯಾಂಡಲ್‌ವುಡ್‌ ಆಯಿಲ್‌, ಜೆರಾನಿಯಮ್‌ ಆಯಿಲ್‌, ಸೋಪ್‌ ನ್ಯೂಡಲ್ಸ್‌ ಸೇರಿದಂತೆ ಒಟ್ಟು 15 ಕಚ್ಚಾ ಸಾಮಗ್ರಿಗಳ ಖರೀದಿಗೆ ಟೆಂಡರ್‌ ಕರೆದಿತ್ತು. ಈ ಎಲ್ಲಾ ಕಚ್ಛಾ ಸಾಮಗ್ರಿಗಳನ್ನು ಸರಬರಾಜು ಮಾಡಲು ಗುತ್ತಿಗೆದಾರರು ಮಾರುಕಟ್ಟೆಯಲ್ಲಿರುವ ದರಕ್ಕಿಂತಲೂ ಹೆಚ್ಚುವರಿ ದರ ನಮೂದಿಸಿದ್ದರು.

 

ಗುತ್ತಿಗೆದಾರರಿಗೆ 139 ಕೋಟಿ ಅಕ್ರಮ ಲಾಭ

 

ಒಂದು ಕೆ ಜಿ ಸ್ಯಾಂಡ್ರೋನೋಲ್‌ಗೆ ಮಾರುಕಟ್ಟೆಯಲ್ಲಿ 1,550 ರು. ಇದೆ. 92,300 ಕೆ ಜಿ ಪ್ರಮಾಣದಲ್ಲಿ ಖರೀದಿಸಿದರೆ 14,30,65,000 ರು. ಆಗಲಿದೆ. ಆದರೆ ಗುತ್ತಿಗೆದಾರರು ಪ್ರತಿ ಕೆ ಜಿಗೆ 2,625 ರು. ನಮೂದಿಸಿದ್ದಾರೆ. ಇದರ ಪ್ರಕಾರ 92,300 ಕೆ ಜಿ ಗೆ 24,22,87,500 ರು. ಆಗಲಿದೆ. ಅಂದರೆ ಪ್ರತಿ ಕೆ ಜಿ ಗೆ 1,075 ಹೆಚ್ಚುವರಿ ದರ ತೆತ್ತು ಒಟ್ಟು 9.92 ಕೋಟಿ ರು.ಗಳನ್ನು ಇದೊಂದೇ ಕಚ್ಚಾ ಸಾಮಗ್ರಿಗೆ ಪಾವತಿಸಲಾಗುತ್ತಿದೆ. ಇದೊಂದೇ ಸಾಮಗ್ರಿಗೆ ಗುತ್ರಿಗೆದಾರರಿಗೆ ಶೇ.69.35ರಷ್ಟು ಹೆಚ್ಚುವರಿ ಲಾಭ ನೀಡಿದಂತಾಗಿದೆ ಎಂದು ಲೋಕಾಯುಕ್ತಕ್ಕೆ ಸಲ ಸಲ್ಲಿಕೆಯಾಗಿರುವ ದೂರಿನಲ್ಲಿ ವಿವರಿಸಲಾಗಿದೆ.

 

ಐಬಿಸಿಎಚ್‌ ಹೆಸರಿನ ಕಚ್ಚಾ ಸಾಮಗ್ರಿಗೆ ಪ್ರತಿ ಕೆ ಜಿಗೆ 500 ರು. ಮಾರುಕಟ್ಟೆಯಲ್ಇ ದರವಿದೆ. ಈ ದರದಂತೆ 48,500 ಕೆ ಜಿಗೆ 2,42,50,000 ರು. ಆಗಲಿದೆ. ಆದರೆ ಗುತ್ತಿಗೆದಾರರು ಪ್ರತಿ ಕೆ ಜಿಗೆ 1,227 ರು. ನಮೂದಿಸಿದ್ದಾರೆ. ಈ ದರದಂತೆ 45,500 ಕೆ ಜಿ ಗೆ 5,95,09,500 ರು. ಅಗಲಿದೆ. ಅಂದರೆ ಪ್ರತಿ ಕೆ ಜಿ ಗೆ 727 ದರ (ಶೇ.145.40) ಹೆಚ್ಚುವರಿ ಲಾಭವನ್ನು ಮಾಡಿಕೊಟ್ಟಂತಾಗಿದೆ.

 

ಒಟ್ಟಾರೆ 15 ವಿವಿಧ ಮಾದರಿಯ ಕಚ್ಛಾ ಸಾಮಗ್ರಿಗಳಿಗೆ ಮಾರುಕಟ್ಟೆಯಲ್ಲಿಲ 205.92 ಕೋಟಿ ರು. ಇದ್ದರೆ ಗುತ್ತಿಗೆದಾರರು ಇದೇ ಸಾಮಗ್ರಿಗಳಿಗೆ 345.41 ಕೋಟಿ ರು. ನಮೂದಿಸಿದ್ದಾರೆ. ಮಾರುಕಟ್ಟೆಯಲ್ಲಿನ ದರಕ್ಕೆ ಹೋಲಿಸಿದರೆ ಗುತ್ತಿಗೆದಾರರು ನಮೂದಿಸಿರುವ ದರವು 139.49 ಕೋಟಿ ರು. ಹೆಚ್ಚುವರಿಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

 

ಕೆಎಸ್‌ಡಿಎಲ್‌ ಕಾರ್ಖಾನೆಯು ಖರೀದಿಸುವ ಕಚ್ಛಾ ಸಾಮಗ್ರಿಗಳಲ್ಲಿರುವ ನ್ಯೂನತೆಗಳ ಬಗ್ಗೆ ಪರಿಶೀಲಿಸಿ ಕಾನೂನಿನ ಚೌಕಟ್ಟಿನಲ್ಲಿ ಕ್ರಮವಹಿಸಲು ಇಲಾಖೆ ಸಮಿತಿಗಳನ್ನು ರಚಿಸಬೇಕು ಎಂದು ಆರ್ಥಿಕ ಇಲಾಖೆಯು 2022ರ ಜನವರಿ 29ರಂದು ಸುತ್ತೋಲೆ ಹೊರಡಿಸಿದ್ದರೂ ಕೆಎಸ್‌ಡಿಎಲ್‌ ಉದ್ದೇಶಪೂರ್ವಕವಾಗಿ ರಚಿಸಿಲ್ಲ ಎಂದು ನೌಕರರ ಸಂಘವು ದೂರಿನಲ್ಲಿ ಆಪಾದಿಸಿದೆ.

the fil favicon

SUPPORT THE FILE

Latest News

Related Posts