ಪಿಎಫ್‌ನಲ್ಲೂ ಮೋಸ; ಏಜೆನ್ಸಿಗೆ ಅಕ್ರಮವಾಗಿ ಹಣ ಸಂಪಾದನೆಗೆ ದಾರಿಮಾಡಿಕೊಟ್ಟ ಜಲಮಂಡಳಿ

ಬೆಂಗಳೂರು; ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ಸ್‌ ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಶಾಸನಬದ್ಧವಾಗಿ ಪಾವತಿಸಬೇಕಾದ ಕೂಲಿ, ಭವಿಷ್ಯ ನಿಧಿಯನ್ನು ಪಾವತಿಸದ ಹೊರಗುತ್ತಿಗೆ ಏಜೆನ್ಸಿಯು ಅಕ್ರಮ ಮತ್ತು ಕಾನೂನುಬಾಹಿರವಾಗಿ ಹಣ ಸಂಪಾದನೆಗೆ ದಾರಿಮಾಡಿಕೊಟ್ಟಿತ್ತು ಎಂಬ ಪ್ರಕರಣವನ್ನು ಸಿಎಜಿಯು ಹೊರಗೆಡವಿದೆ.

 

ಹೊರಗುತ್ತಿಗೆ ಉದ್ಯೋಗಿಗಳಿಗೆ ಶಾಸನಬದ್ಧ ಪ್ರಯೋಜನಗಳನ್ನು ನಿರಾಕರಿಸಲಾಗಿತ್ತಲ್ಲದೇ ಹೊರಗುತ್ತಿಗೆ ಸಂಸ್ಥೆಗೆ ನೀಡಬೇಕಿದ್ದ ಸೇವಾ ಶುಲ್ಕ, ಒಟ್ಟು ವೇತನ, ಕೂಲಿ ವೇತನಗಳನ್ನು ಸಮರ್ಪಕವಾಗಿ ಲೆಕ್ಕ ಹಾಕುವಲ್ಲಿ ಬಿಡಬ್ಲ್ಯೂಎಸ್‌ಎಸ್‌ಬಿ ಕರ್ತವ್ಯಲೋಪವೂ ಎಸಗಿತ್ತು ಎಂಬ ಅಂಶವನ್ನೂ ಸಿಎಜಿಯು ಬಹಿರಂಗಗೊಳಿಸಿದೆ.

 

‘ಹೊರಗುತ್ತಿಗೆ ಸಂಸ್ಥೆಗೆ ಪಾವತಿಸಲಾಗಿರುವ ಶಾಸನಬದ್ಧ ಕೊಡುಗೆಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ, ಉದ್ಯೋಗಿಗಳ ರಾಜ್ಯ ವಿಮೆ ದಾಖಲೆಗಳ ಜೊತೆಯಲ್ಲಿ ಸಮನ್ವಯಗೊಳಿಸಬೇಕು. ತಪ್ಪಾಗಿ ಮಾಡಲಾದ ಲೆಕ್ಕಾಚಾರಗಳ ಕಾರಣ ಹೊರಗುತ್ತಿಗೆ ಸಂಸ್ಥೆಗೆ ಅಧಿಕ ಪ್ರಮಾಣದಲ್ಲಿ ಮಾಡಲಾಗಿರುವ ಪಾವತಿಗಳನ್ನು ವಸೂಲು ಮಾಡಬೇಕು. ಲೆಕ್ಕಪರಿಶೋಧನೆಯಲ್ಲಿ ಸ್ಪಷ್ಟಪಡಿಸಿರುವ ಲೋಪದೋಷಗಳಿಗೆ ಕಾರಣವಾಗಿರುವ ಅಧಿಕಾರಿಗಳು, ಸಿಬ್ಬಂದಿ ಮೇಲೆ ಹೊಣೆಗಾರಿಕೆ, ಜವಾಬ್ದಾರಿ ನಿಗದಿಗೊಳಿಸಬೇಕು,’ ಎಂದು ಸಿಎಜಿ ವರದಿಯು ಶಿಫಾರಸ್ಸು ಮಾಡಿದೆ.

 

‘ಗುತ್ತಿಗೆ ಷರತ್ತುಗಳಿಗೆ ಬದ್ಧತೆಯಿಂದ ಕೂಡಿರುವಲ್ಲಿನ ಹಾಗೂ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ರಾಜ್ಯ ವಿಮೆಯ ಶಾಸನಬದ್ಧ ಕೊಡುಗೆಗಳ ಪಾವತಿಗಳನ್ನು ಮೇಲ್ವಿಚಾರಣೆ ಮಾಡುವಲ್ಲಿ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯ ವಿಫಲತೆಯು 32.11 ಕೋಟಿ ಮೊತ್ಗತದಷ್ಟು ಕೊಡುಗೆಗಳನ್ನು ಕಡಿಮೆ ಪ್ರಮಾಣದಲ್ಲಿ ಮಾಡುವಲ್ಲಿ ದಾರಿಮಾಡಿಕೊಟ್ಟಿತ್ತು,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಹೊರಗುತ್ತಿಗೆ ಸಂಸ್ಥೆಯು ಕ್ರೋಢೀಕೃತ ಚಲನ್‌ಗಳನ್ನು ಸಲ್ಲಿಸಿತ್ತು. ಅವು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ ಹೊರಗುತ್ತಿಗೆ ಉದ್ಯೋಗಿಗಳಿಗೆ ಸಂಬಂಧಿಸಿದಂತೆ ಉದ್ಯೋಗಿಗಳ ಭವಿಷ್ಯ ನಿಧಿ ಮತ್ತು ಉದ್ಯೋಗಿಗಳ ರಾಜ್ಯ ವಿಮೆ ಕೊಡುಗೆಗಳನ್ನು ಪ್ರತ್ಯೇಕವಾಗಿ ತೋರಿಸಿರಲಿಲ್ಲ.

 

ಡಿಡಿಒ ಹಾಗೂ ಮುಖ್ಯ ಲೆಕ್ಕಪತ್ರಗಳ ಮುಖ್ಯಾಧಿಕಾರಿಯು ಹೊರಗುತ್ತಿಗೆ ಉದ್ಯೋಗಿಗಳ ದಿನಗೂಲಿ ವೇತನ ಬಿಲ್‌ಗಳನ್ನು ಅನುಮೋದಿಸುವ ವೇಳೆಯಲ್ಲಿ ಉದ್ಯೋಗಿವಾರು ಕೊಡುಗೆ ವಿವರಗಳನ್ನು ಒಳಗೊಂಡಿರುವಂತಹ ವಿದ್ಯುನ್ಮಾನ ಸಲ್ಲಿಕೆ ಜೊತೆಯಲ್ಲಿ ಚಲನ್‌ಗಳನ್ನು ಪರಿಶೀಲಿಸಿರುತ್ತಿರಲಿಲ್ಲ. ಕೇವಲ ಒಟ್ಟಾರೆ ಕೊಡುಗೆಗಳ ಪಾವತಿ ಸ್ಥಿತಿಗತಿಗಳನ್ನು ಮಾತ್ರ ಪರಿಶೀಲಿಸುತ್ತಿದ್ದರು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

‘ಈ ರೀತಿಯಾಗಿ ಗುತ್ತಿಗೆ ಷರತ್ತುಗಳಿಗೆ ಬದ್ದವಾಗಿರುವಲ್ಲಿ ಹಾಗೂ ಶಾಸನಬದ್ಧ ಕೊಡುಗೆಗಳ ಮೇಲ್ವಿಚಾರಣೆ ಮಾಡುವಲ್ಲಿ ಬೆಂಗಳೂರು ನೀರು ಸರಬರಾಜು ಒಳಚರಂಡಿ ಮಂಡಳಿಯು ವಿಫಲವಾಗಿತ್ತು. ಹೊರಗುತ್ತಿಗೆ ಉದ್ಯೋಗಿಗಳಿಗೆ ಸಂಚಿತಗೊಳ್ಳಬೇಕಿದ್ದಂತಹ ನ್ಯಾಯಸಮ್ಮತ ಪ್ರಯೋಜನಗಳಿಂದ ಅವರನ್ನು ವಂಚಿಸಲಾಗಿತ್ತು. ಹೊರಗುತ್ತಿಗೆ ಸಂಸ್ಥೆಯು ಅನುಕ್ರಮವಾಗಿ 24.83 ಕೋಟಿ ಹಾಗೂ 7.28 ಕೋಟಿ ರು.ಗಳನ್ನು ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ರಾಜ್ಯ ವಿಮೆ ಕೊಡುಗೆಗಳನ್ನು ನಿಯಮಬಾಹಿರವಾಗಿ/ಅನಧಿಕೃತವಾಗಿ ಉಳಿಸಿಕೊಳ್ಳುವಲ್ಲಿ ಪರಿಣಿಮಿಸಿತು,’ ಎಂದು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

ಬಿಡಬ್ಲ್ಯುಎಸ್‌ಎಸ್‌ಬಿಯು ಉದ್ಯೋಗಿಗಳ ಭವಿಷ್ಯ ನಿಧಿ, ಉದ್ಯೋಗದಾತರ ಕೊಡುಗೆಯನ್ನು ವೇತನದ ಶೇ.13.16 ದರದಲ್ಲಿ ಹಾಗೂ ಉದ್ಯೋಗಿಗಳ ರಾಜ್ಯ ವಿಮಾ ಉದ್ಯೋಗದಾತರ ಕೊಡುಗೆಯನ್ನು ಶೇ.4.75ರ ದರದಲ್ಲಿ ಪಾವತಿಸುತ್ತಿತ್ತು. ಆಡಳಿತಾತ್ಮಕ ವೆಚ್ಚ, ಶುಲ್ಕಗಳಲ್ಲಿನ ಇಳಿಕೆಯಿಂದಾಗಿ ಉದ್ಯೋಗಿಗಳ ಭವಿಷ್ಯ ನಿಧಿಗೆ ಉದ್ಯೋಗದಾತರ ಕೊಡುಗೆ ದರವು 2018ರ ಜೂನ್‌ 1ರಿಂದ ಇಳಿಮುಖವಾಯಿತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.

 

ಅದೇ ರೀತಿಯಲ್ಲಿ ಉದ್ಯೋಗಿಗಳ ರಾಜ್ಯ ವಿಮೆಗೆ ಉದ್ಯೋಗದಾತರ ಕೊಡುಗೆಯ ದರವನ್ನು 2019ರ ಜುಲೈ 1ರಿಂದ ಜಾರಿಗೆ ಬಂದಂತೆ ಶೇ.4.75ರಿಂದ ಶೇ.3.25ಕ್ಕೆ ತಗ್ಗಿಸಲಾಗಿತ್ತು. ಹೀಗೆ ದರಗಳ ತಗ್ಗುವಿಕೆಯನ್ನು ಪರಿಗಣಿಸದೆಯೇ ಕೊಡುಗೆಗಳನ್ನು ಪರಿಷ್ಕರಣೆ ಪೂರ್ವ ದರಗಳಲ್ಲಿಯೆ ಪಾವತಿಸಲಾಗಿತ್ತು. ಇದರಿಂದಾಗಿ ಹೊರಗುತ್ತಿಗೆ ಸಂಸ್ಥೆಗೆ 1.82 ಕೋಟಿ ಮೊತ್ತವನ್ನು (ಉದ್ಯೋಗಿಗಳ ಭವಿಷ್ಯ ನಿಧಿ ಕಡೆಗೆ 0.25 ಕೋಟಿ ಮೊತ್ತ ಹಾಗೂ ಉದ್ಯೋಗಿಗಳ ರಾಜ್ಯವಿಮೆ ಕಡೆಗೆ 1.57 ಕೋಟಿ) ಅಧಿಕ ಪ್ರಮಾಣದಲ್ಲಿ ಪಾವತಿಸಲು ದಾರಿಮಾಡಿಕೊಟ್ಟಿತ್ತು ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ.

SUPPORT THE FILE

Latest News

Related Posts