ಬಿಡದಿ, ಯಲಹಂಕ ವಿದ್ಯುತ್‌ ಯೋಜನೆ; 2,150 ಕೋಟಿ ವೆಚ್ಚವಾಗಿದ್ದರೂ ಬಿಡಿಗಾಸಿನ ವರಮಾನವಿಲ್ಲ

ಬೆಂಗಳೂರು; ವಿದ್ಯುತ್‌ ಕೊರತೆ ನೀಗಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಆರಂಭಿಸಿದ್ದ ರಾಜ್ಯದ ಪ್ರಪ್ರಥಮ ಅನಿಲ ಆಧಾರಿತ ಕ್ರೋಢೀಕೃತ ಆವರ್ತನ ವಿದ್ಯುತ್‌ ಸ್ಥಾವರ ಪೂರ್ಣಗೊಳ್ಳುವಲ್ಲಿನ ವಿಳಂಬದಿಂದಾಗಿ 2021ರ ಮಾರ್ಚ್‌ ಅಂತ್ಯಕ್ಕೆ 33.85 ಕೋಟಿ ಕ್ರೋಢೀಕೃತ ನಷ್ಟ ಅನುಭವಿಸಿದೆ. ಅದೇ ರೀತಿ ಯಲಹಂಕದಲ್ಲಿಯೂ ಅನಿಲ ಆಧರಿತ ವಿದ್ಯುತ್‌ ಸ್ಥಾವರ ಯೋಜನೆಗೆ 2022ರ ಜನವರಿ ಅಂತ್ಯಕ್ಕೆ 2,150.70ಕೋಟಿ ರು. ವೆಚ್ಚವಾಗಿದ್ದರೂ ಯಾವುದೇ ವರಮಾನವನ್ನೂ ಗಳಿಸಿರಲಿಲ್ಲ.

 

ಅನಿಲ ವಿದ್ಯುತ್‌ ನಿಗಮ ನಿಯಮಿತದ ಕುರಿತು ಸಿಎಜಿ ಮಂಡಿಸಿರುವ ಲೆಕ್ಕಪರಿಶೋಧನೆ ವರದಿಯ ಅನಿಲ ಆಧಾರಿತ ವಿದ್ಯುತ್‌ ಯೋಜನೆ ಅನುಷ್ಠಾನದ ಮೇಲೆ ಬೆಳಕು ಚೆಲ್ಲಿದೆ.

 

ಬಿಡದಿಯಲ್ಲಿ 700 ಮೆಗಾವ್ಯಾಟ್‌ ಸಾಮರ್ಥ್ಯದ ಕ್ರೋಢೀಕೃತ ಆವರ್ತನ ವಿದ್ಯುತ್‌ ಸ್ಥಾವರ ಸ್ಥಾಪನೆಗೆ 2001ರಲ್ಲೇ ಅನುಮೋದನೆ ನೀಡಲಾಗಿತ್ತು. 2010 ಮತ್ತು 2013ರಲ್ಲಿ ಆರಂಭಿಸಿದ್ದ ಟೆಂಡರ್‌ ಪ್ರಕ್ರಿಯೆಯು ಕಾನೂನು ಸವಾಲುಗಳನ್ನು ಎದುರಿಸಿತ್ತು. ಆದರೂ 350 ಮೆಗಾ ವ್ಯಾಟ್‌ಗಳಂತೆ ಬಿಡದಿ ಮತ್ತು ಯಲಹಂಕದಲ್ಲಿ ಎರಡು ಸ್ಥಾವರಗಳನ್ನು ಸ್ಥಾಪಿಸಲು ಪ್ರಸ್ತಾವಿಸಲಾಗಿತ್ತು.

 

ಆದರೆ ಬಿಡದಿಯಲ್ಲಿನ ಯೋಜನೆಯನ್ನು ವಿದ್ಯುತ್‌ ಅಧಿಕ ಪ್ರಮಾಣದಲ್ಲಿ ಸಿಗುತ್ತಿರುವ ಕಾರಣವನ್ನು ನೀಡಿ ಮುಂದೂಡಲಾಗಿತ್ತು. 2021ರ ಡಿಸೆಂಬರ್‌ ಅಂತ್ಯಕ್ಕೆ ಕರ್ನಾಟಕ ಸರ್ಕಾರವು ತನ್ನ ಅನುಮೋದನೆ ನೀಡಿದ ನಂತರ 20 ವರ್ಷಗಳು ಕಳೆದ ನಂತರವೂ ಕಾರ್ಯಾಚರಣೆಯನ್ನೇ ಆರಂಭಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.

 

ಇನ್ನು, ಬಿಎಚ್‌ಇಎಲ್‌ ಮೂಲಕ 1,571.18 ಕೋಟಿ ಮೊತ್ತದ 350 ಮೆಗಾವ್ಯಾಟ್‌ ಸಾಮರ್ಥ್ಯದ ಕ್ರೋಢೀಕೃತ ಆವರ್ತನ ವಿದ್ಯುತ್‌ ಸ್ಥಾವರವನ್ನು ಯಲಹಂಕದಲ್ಲಿ ಸ್ಥಾಪಿಸುವ ಯೋಜನೆಯೂ ಮುಗ್ಗುರಿಸಿ ಬಿದ್ದಿದೆ.

 

30 ತಿಂಗಳ ಒಳಗೇ ಅಂದರೆ ಮೇ 2018ರೊಳಗೆ ಯೋಜನೆಯನ್ನು ಪೂರ್ಣಗೊಳಿಸಬೇಕಿದ್ದ ಬಿಎಚ್‌ಇಎಲ್‌ ಅಗತ್ಯ ಸಿಬ್ಬಂದಿ, ಯಂತ್ರೋಪಕರಣ, ಸಾಮಗ್ರಿ ಸಂಗ್ರಹಿಸಲು ವಿಫಲವಾಗಿತ್ತು. ಅಸಾಮರ್ಥ್ಯದದ ಕಾರಣ ಇಡೀ ಯೋಜನೆಯು ವಿಳಂಬಗೊಂಡಿತ್ತು. ಅಲ್ಲದೇ ಹಿಂದಿನ ಹಲವು ಯೋಜನೆಗಳಲ್ಲಿ ವಿಳಂಬ ಧೋರಣೆ ಅನುಸರಿಸಿದ್ದರೂ ಪುನಃ ಬಿಎಚ್‌ಇಎಲ್‌ಗೆ ವಹಿಸಿತ್ತು. 2022ರ ಜನವರಿವರೆಗೂ ಯಲಹಂಕ ಯೋಜನೆಯನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಿರಲಿಲ್ಲ ಎಂದು ಸಿಎಜಿ ವರದಿಯಲ್ಲಿ ಹೇಳಲಾಗಿದೆ.

 

2022ರ ಜನವರಿ ಅಂತ್ಯಕ್ಕೆ 2,150.70ಕೋಟಿ ರು. ವೆಚ್ಚವಾಗಿದ್ದರೂ ಯಾವುದೇ ವರಮಾನವನ್ನೂ ಗಳಿಸಿರಲಿಲ್ಲ. 2019-20ರಲ್ಲಿ ವಿದ್ಯುತ್‌ ಮಾರಾಟ ದರವು ಯೂನಿಟ್‌ವೊಂದಕ್ಕೆ 6.35 ರು.ನಿಂದ 2021-22ರಲ್ಲಿ ಯೂನಿಟ್‌ ಒಂದಕ್ಕೆ 5.19 ರು.ಗೆ ಇಳಿಮುಖವಾಗಿತ್ತು. ಈಗಾಗಲೇ ಮಾಡಿರುವ ವೆಚ್ಚವನ್ನು ವಸೂಲು ಮಾಡುವಲ್ಲಿಯೂ ಹಿಂದೆ ಬಿದ್ದಿತ್ತು. ಅಲ್ಲದೆ ಇದರಿಂದಾಗಿಯೇ ಕಂಪನಿಯು ಇನ್ನೂ ಹೆಚ್ಚುವರಿ ನಷ್ಟಗಳನ್ನು ಅನುಭವಿಸಲಿದೆ ಎಂದು ಸಿಎಜಿ ಅಂದಾಜಿಸಿದೆ.

 

ಬಿಡದಿಯಲ್ಲಿ 15 ಮೆಗಾ ವ್ಯಾಟ್‌ ಸಾಮರ್ಥ್ಯದ ತ್ಯಾಜ್ಯದಿಂದ ಇಂಧನ ವಿದ್ಯುತ್‌ ಸ್ಥಾವರ ಯೋಜನೆಯನ್ನು 2022ರ ಅಕ್ಟೋಬರ್‌ನಲ್ಲಿ ಪೂರ್ಣಗೊಳಿಸಬೇಕಿತ್ತು. ಆದರೆ ವೆಚ್ಚಗಳನ್ನು ಕಡಿಮೆ ಪ್ರಮಾಣದಲ್ಲಿ ವಸೂಲಿ ಮಾಡಿರುವ ಕಾರಣ ಯೋಜನೆಯು ಕಾರ್ಯಸಾಧ್ಯತೆಯಿಂದ ಕೂಡಿರಲಿಲ್ಲ ಎಂದು ಲೆಕ್ಕಪರಿಶೋಧನೆಯು ಗಮನಿಸಿರುವುದು ವರದಿಯಿಂದ ಗೊತ್ತಾಗಿದೆ.

 

ಈ ಯೋಜನೆಗೆ ಒಟ್ಟಾರೆ 241.53 ಕೋಟಿ ರು. ವೆಚ್ಚವಾಗಲಿದೆ ಎಂದು ಅಂದಾಜಿಸಿತ್ತು. ಈ ಪೈಕಿ ಬಂಡವಾಳ ವೆಚ್ಚವು 132.58 ಕೋಟಿ ರು. ಆಗಿತ್ತು. ಹಾಗೂ 10 ವರ್ಷಗಳ ಕಾರ್ಯಾಚರಣೆ ವೆಚ್ಚವು 108.95 ಕೋಟಿ ಆಗಿತ್ತು. ಯೋಜನೆ ಗುತ್ತಿಗೆ ಪಡೆದಿದ್ದ ನೋಯ್ಡಾದ ಐಎಸ್‌ಜಿಇಸಿ ಹೆವಿ ಇಂಜಿನಿಯರಿಂಗ್‌ ಲಿಮಿಟೆಡ್‌ 2020ರ ಅಕ್ಟೋಬರ್‌ನಲ್ಲಿಯೇ ಕಾಮಗಾರಿ ನೀಡಿಕೆ ಪತ್ರ ಪಡೆದಿತ್ತು. ಇದುವರೆಗೂ 47.80 ಕೋಟಿ ರು. ವೆಚ್ಚವಾಗಿರುವುದು ವರದಿಯಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts