ಅಕ್ರಮಗಳ ಸರಮಾಲೆ; ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿ ವಿ ಕುಲಪತಿ ಕಡ್ಡಾಯ ನಿವೃತ್ತಿ

photo credit;prajavani

ಬೆಂಗಳೂರು; ಅಕ್ರಮ ನೇಮಕಾತಿ, ವರ್ಗಾವಣೆ, ಎನ್‌ಆರ್‌ಐ ಕೋಟಾದಡಿಯಲ್ಲಿ ಸೀಟು ಹಂಚಿಕೆ, ಆರ್ಥಿಕ ಇಲಾಖೆ ಅನುಮತಿ ಪಡೆಯದೇ ಗುತ್ತಿಗೆ ನೌಕರರಿಗೆ ವೇತನ ವಿಸ್ತರಣೆ ಸೇರಿದಂತೆ ಇನ್ನಿತರೆ ಗಂಭೀರ ಆರೋಪಗಳಿಗೆ ಗುರಿಯಾಗಿದ್ದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಹಿಂದಿನ ಉಪ ಕುಲಪತಿ ಹಾಗೂ ಹಾಲಿ ಪ್ರಾಧ್ಯಾಪಕರೂ ಆಗಿರುವ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲಾಗಿದೆ.

 

ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಲವು ರೀತಿಯ ಅಕ್ರಮಗಳು ನಡೆದಿವೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯ ಹಾಗೂ ಶಾಸಕರೂ ಆಗಿರುವ ಈಶ್ವರ್‌ ಖಂಡ್ರೆ ಮತ್ತಿತರರು ನೀಡಿದ್ದ ದೂರನ್ನಾಧರಿಸಿ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ರತ್ನಕಲಾ ನೇತೃತ್ವದ ಏಕ ಸದಸ್ಯ ವಿಚಾರಣೆ ಆಯೋಗವು ತನಿಖೆ ನಡೆಸಿತ್ತು.

 

ಈ ಆಯೋಗವು ನೀಡಿದ್ದ ವರದಿ ಹಾಗೂ ಶಿಫಾರಸ್ಸುಗಳನ್ವಯ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯು 2023ರ ಮಾರ್ಚ್‌ 14ರಂದು ಹೆಚ್‌ ಡಿ ನಾರಾಯಣಸ್ವಾಮಿ ಅವರನ್ನು ಸೇವೆಯಿಂದಲೇ ಕಡ್ಢಾಯ ನಿವೃತ್ತಿಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಈ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ, ವರ್ಗಾವಣೆ, ಎನ್‌ಆರ್‌ಐ ಕೋಟಾದಡಿಯಲ್ಲಿ ಸೀಟು ಹಂಚಿಕೆಯಲ್ಲಿ ಅಕ್ರಮ, ರಾಜ್ಯ ಸರ್ಕಾರದ ಹಾಗೂ ವಿವಿಧ ಬಾಹ್ಯ ಸಂಸ್ಥೆಗಳಿಂದ ವಿಶ್ವವಿದ್ಯಾಲಯಕ್ಕೆ ದೊರೆತಿರುವ ಅನುದಾನ ದುರ್ಬಳಕೆ, ಸರ್ಕಾರದ ಅನುಮತಿ ಇಲ್ಲದೇ ಗುತ್ತಿಗೆ ಸಿಬ್ಬಂದಿಗಳ ವೇತನ ಹೆಚ್ಚಳ, ಗುತ್ತಿಗೆ ನೌಕರರಿಗೆ 6ನೇ ವೇತನ ಆಯೋಗದ ಶಿಫಾರಸ್ಸಿನಂತೆ ಪರಿಷ್ಕೃತ ವೇತನ ನಿಗದಿಪಡಿಸಿರುವುದು ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಕುಲಪತಿ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಭಾಗಿ ಆಗಿದ್ದಾರೆ ಎಂದು ಹಲವು ದೂರುಗಳು ಸಲ್ಲಿಕೆಯಾಗಿದ್ದವು.

 

ಈ ದೂರುಗಳ ಅಧಾರದ ಮೇಲೆ ಪರಿಶೀಲಿಸಿ ವಾಸ್ತವಾಂಶದ ವರದಿಯೊಂದಿಗೆ ಸಮಜಾಯಿಷಿ ಸಲ್ಲಿಸಬೇಕು ಎಂದು ಅಂದಿನ ಕುಲಸಚಿವರಿಗೆ ನೋಟೀಸ್‌ ಜಾರಿಗೊಳಿಸಿತ್ತು. ಇದಕ್ಕೆ ಕುಲಸಚಿವರು ನೀಡಿದ್ದ ಸಮಜಾಯಿಷಿಯನ್ನು ಇಲಾಖೆಯು ಒಪ್ಪಿರಲಿಲ್ಲ.

 

ಹೀಗಾಗಿ ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿ ಎಸಗಿದ್ದಾರೆ ಎನ್ನಲಾದ ಗಂಭೀರ ಸ್ವರೂಪದ ಅಕ್ರಮಗಳು ಮತ್ತು ಆರ್ಥಿಕ ದುರುಪಯೋಗ ಅರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ರತ್ನಕಲಾ ಅವರ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣೆ ಆಯೋಗವನ್ನು ರಚಿಸಿತ್ತು. ಈ ಆಯೋಗವು 2022ರ ಡಿಸೆಂಬರ್‌ 19ರಂದು ವಿಚಾರಣೆ ವರದಿ ಸಲ್ಲಿಸಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

 

ಆದರೆ ಏಕ ಸದಸ್ಯ ವಿಚಾರಣೆ ಆಯೋಗದ ವರದಿಯಲ್ಲಿ ಕೇವಲ ವಾಸ್ತವಾಂಶಗಳನ್ನು ಮತ್ತು ಕೆಲ ಆರೋಪಗಳನ್ನು ಸಾಬೀತುಗೊಳಿಸಿತ್ತು. ಸಾಬೀತಾದ ಆರೋಪಗಳಿಗೆ ಸರ್ಕಾರವು ಕೈಗೊಳ್ಳಬೇಕಾದ ಕ್ರಮ ಹಾಗೂ ಯಾವ ವಿಧವಾದ ದಂಡನೆ ವಿಧಿಸಬೇಕು ಎಂದು ನಮೂದಿಸಿರಲಿಲ್ಲ. ಹೀಗಾಗಿ ಈ ಕುರಿತು ನಿಖರವಾದ ಅಭಿಪ್ರಾಯ, ವಿಧಿಸಬಹುದಾದ ದಂಡನೆಗಳೊಂದಿಗೆ ಸರ್ಕಾರವು ಕೈಗೊಳ್ಳಬೇಕಾದ ಕ್ರಮದ ಕುರಿತು ಪರಿಷ್ಕೃತ ವರದಿ ನೀಡಲು ವಿಚಾರಣೆ ಆಯೋಗವನ್ನು ಸರ್ಕಾರವು ಕೋರಿತ್ತು.

 

‘ಡಾ ಹೆಚ್‌ ಡಿ ನಾರಾಯಣಸ್ವಾಮಿ ಅವರು ಶಿಕ್ಷೆಗೆ ಅರ್ಹರು. ಸೇವೆಯಿಂದಲೇ ಕಡ್ಡಾಯ ನಿವೃತ್ತಿಗೊಳಿಸಬೇಕು. 2017-18 ಮತ್ತು 2018-19ರ ಲೆಕ್ಕ ಪರಿಶೋಧನೆ ವರದಿಗಳಲ್ಲಿನ ಕಂಡಿಕೆಗಳಿಗೆ ಇವರು ಹೊಣೆಗಾರರಾಗಿದ್ದಾರೆ. 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಸರ್ಕಾರದ ಅನುಮತಿ ಪಡೆಯದೇ 128 ಗುತ್ತಿಗೆ ನೌಕರರಿಗೆ ವೇತನ ವಿಸ್ತರಿಸಿ ಹಣಕಾಸು ದುರುಪಯೋಗ ಎಸಗಿದ್ದಾರೆ. ಇವರಿಂದ ನಿಯಮಾನುಸಾರವಾಗಿ ವಸೂಲಾತಿ ಮಾಡಬೇಕು,’ ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ರತ್ನಕಲಾ ಅವರ ನೇತೃತ್ವದ ಏಕ ಸದಸ್ಯ ವಿಚಾರಣೆ ಆಯೋಗವು ಶಿಫಾರಸ್ಸು ಮಾಡಿತ್ತು.

 

ಇದನ್ನಾಧರಿಸಿ ಪಶು ಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯು ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಕಲಂ 13 ಅನ್ವಯ ಲೋಕಾಯುಕ್ತಕ್ಕೆ ವಹಿಸಿದೆ.

 

 

ಮತ್ತು ವಿಶ್ವವಿದ್ಯಾಲಯದ ಕಾಯ್ದೆ 2004ರ ಕಲಂ 13(8)ರ ಅಡಿ ಇವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ರಾಜ್ಯಪಾಲರೂ ಅನುಮತಿ ನೀಡಿದ್ದಾರೆ. ಹಾಗೆಯೇ ವಿಶ್ವವಿದ್ಯಾಲಯದ ಹಿಂದಿನ ಹಣಕಾಸು ಅಧಿಕಾರಿ ಕೆ ಎಲ್‌ ಸುರೇಶ್‌ ಅವರಿಂದ ವಿ ವಿ ಗೆ ಹಾಗೂ ಸರ್ಕಾರಕ್ಕೆ ಉಂಟಾಗಿರುವ ಹಣಕಾಸಿನ ನಷ್ಟವನ್ನು ಗುರುತಿಸಿ ವಸೂಲಾತಿ ಮಾಡಬೇಕು ಎಂದು ರಾಜ್ಯಪಾಲರು ನಿರ್ದೇಶನ ನೀಡಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts