ಉಕ್ಕು ಕಾರ್ಖಾನೆ ಸ್ಥಾಪಿಸದ ಮಿತ್ತಲ್‌ ಕಂಪನಿಯ ಓಲೈಕೆ, ವಿಐಎಸ್‌ಎಲ್‌ನ್ನು ಸುಪರ್ದಿಗೆ ಪಡೆಯಲು ಹಿಂದೇಟೇಕೆ?

ಬೆಂಗಳೂರು; ಹನ್ನೆರಡು ವರ್ಷಗಳಾದರೂ ಬಳ್ಳಾರಿಯಲ್ಲಿ ಉಕ್ಕು ಕೈಗಾರಿಕೆ ಸ್ಥಾಪನೆ ಮಾಡದ ಮಿತ್ತೆಲ್‌ ಕಂಪನಿಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ 6,000 ಕೋಟಿ ರು ಬಂಡವಾಳ ಹೂಡಲು ಮತ್ತೊಂದು ಒಪ್ಪಂದ ಮಾಡಿಕೊಂಡು ಖಾಸಗಿ ಕಂಪನಿಗಳಿಗೇ ಮನ್ನಣೆ ನೀಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರವು ಸಾರ್ವಜನಿಕ ಸ್ವಾಮ್ಯದಲ್ಲಿರುವ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ತನ್ನ ಸುಪರ್ದಿಗೆ ಪಡೆದು ಪುನಶ್ಚೇತನಗೊಳಿಸಲು ಮುಂದಾಗದೇ ನಿರ್ಲಕ್ಷ್ಯ ವಹಿಸಿದೆ.

 

ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಡಳಿತಾವಧಿಯಲ್ಲಿ ಭದ್ರಾವತಿಯಲ್ಲಿ ಆರಂಭವಾಗಿದ್ದ ಮೈಸೂರು ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ಹಾಲಿ ವಿಐಎಸ್‌ಎಲ್‌)ಯನ್ನು ಮುಚ್ಚಲು ಭಾರತೀಯ ಉಕ್ಕು ಪ್ರಾಧಿಕಾರವು ನಿರ್ಧಾರ ಕೈಗೊಂಡಿದ್ದರೂ ಕಾರ್ಖಾನೆಯನ್ನು ತನ್ನ ಸುಪರ್ದಿಗೆ ಪಡೆಯುವ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನಿರಿಸಿಲ್ಲ. ಈ ಕುರಿತು ‘ದಿ ಫೈಲ್‌’ 347 ಪುಟಗಳನ್ನೊಳಗೊಂಡ ಸಮಗ್ರ ಕಡತವನ್ನು ಆರ್‌ಟಿಐ ಮೂಲಕ ಪಡೆದುಕೊಂಡಿದೆ.

 

ಆರ್ಸೆಲರ್‌ ಮಿತ್ತೆಲ್‌ ಕಂಪನಿಗೆ 2011ರಲ್ಲಿ 1,827.60 ಎಕರೆಯನ್ನು 2011ರ ಡಿಸೆಂಬರ್‌ 5ರಂದು ಮತ್ತು 2012ರ ಅಕ್ಟೋಬರ್‌ 19ರಂದು 832.15 ಎಕರೆ ಮಂಜೂರು ಮಾಡಿಸಿಕೊಂಡಿತ್ತು. 12 ವರ್ಷಗಳಾದರೂ ಈ ಕಂಪನಿಯು ಒಂದೇ ಒಂದು ಘಟಕವನ್ನು ಆರಂಭಿಸದೆಯೇ ಸಾವಿರಾರು ಎಕರೆಯನ್ನು ಬೀಳು ಬಿಟ್ಟಿದೆ. ಮಿತ್ತಲ್‌ನಂತಹ ಖಾಸಗಿ ಕಂಪನಿಗಳನ್ನು ಓಲೈಸುವುದನ್ನು ಬಿಟ್ಟು 108 ವರ್ಷಗಳಿಂದಲೂ ಉಕ್ಕು, ಕಬ್ಬಿಣ ಉತ್ಪಾದನೆ ಚಟುವಟಿಕೆ ನಡೆಸುತ್ತಿರುವ ವಿಐಎಸ್‌ಎಲ್‌ ಕಾರ್ಖಾನೆಯನ್ನೇ ತನ್ನ ಸುಪರ್ದಿಗೆ ಪಡೆಯಲು ಮುಂದಾಗಬಾರದೇಕೆ ಎಂಬ ಚರ್ಚೆಯೂ ನಡೆದಿದೆ.

 

ವಿಐಎಸ್‌ಎಲ್‌ನ್ನು ಮುಚ್ಚುವ ಸಂಬಂಧ ಭದ್ರಾವತಿಯಲ್ಲಿ ಕಳೆದ ಹಲವು ತಿಂಗಳುಗಳಿಂದಲೂ ನಿರಂತರವಾಗಿ ಪ್ರತಿಭಟನೆ, ಧರಣಿ ಮುಂದುವರೆದಿದ್ದರೂ ಕೈಗಾರಿಕೆ ಸಚಿವ ಮುರುಗೇಶ್‌ ಆರ್‌ ನಿರಾಣಿ ಅವರು ಇದುವರೆಗೂ ಒಂದೇ ಒಂದು ಪ್ರತಿಕ್ರಿಯೆ ನೀಡಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಸಂಬಂಧ ಚರ್ಚಿಸಲಾಗುವುದು ಎಂದಷ್ಟೇ ಹೇಳಿ ಕೈತೊಳೆದುಕೊಂಡಿದ್ದಾರೆ.

 

1,661 ಎಕರೆ ವಿಸ್ತೀರ್ಣ ಹೊಂದಿರುವ ವಿಐಎಸ್‌ಎಲ್‌ನಲ್ಲಿ 1,400ಕ್ಕೂ ಹೆಚ್ಚು ಮಂದಿ ಗುತ್ತಿಗೆ ನೌಕರರಿದ್ದಾರೆ. 2015ರಿಂದ 2019 ರ ಅವಧಿಯ 5 ವರ್ಷದಲ್ಲಿ ಒಟ್ಟು 908.31 ಕೋಟಿಯಷ್ಟು ಒಟ್ಟು ವ್ಯವಹಾರ ನಡೆಸಿದೆ. 511.88 ಕೋಟಿಯಷ್ಟು  ನಷ್ಟ ಅನುಭವಿಸಿದೆ.  ಅಲ್ಲದೇ ಇದೇ ಕಾರ್ಖಾನೆಯು ಅಣುಶಕ್ತಿ ಕೇಂದ್ರಗಳು, ರೈಲ್ವೆ ಇಲಾಖೆ, ಆಟೊಮೊಬೈಲ್‌ ಕ್ಷೇತ್ರಕ್ಕೆ ಗುಣಮಟ್ಟದ ಉಕ್ಕಿನ ಉತ್ಪನ್ನಗಳನ್ನು ಒದಗಿಸುತ್ತಿತ್ತು.

 

ಆತ್ಮನಿರ್ಭರ ಭಾರತಕ್ಕೆ ಈ ಕಾರ್ಖಾನೆ ಹೆಚ್ಚಿನ ಕೊಡುಗೆ ನೀಡಬಲ್ಲದು. ರಕ್ಷಣಾ ಕ್ಷೇತ್ರ, ಪರಮಾಣು ವಲಯ, ಆಟೋಮೊಬೈಲ್‌ ಹಾಗೂ ರೈಲ್ವೆ ಉಪಕರಣಗಳಿಗೆ ಪೂರಕ ಉತ್ಪನ್ನಗಳನ್ನು ಇದರಿಂದ ಪೂರೈಕೆ ಮಾಡಬಹುದು. ಈ ಹಿನ್ನೆಲೆಯಲ್ಲಿ ವಿಐಎಸ್‌ಎಲ್‌ನ್ನೇ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದ್ದ ರಾಜ್ಯ ಸರ್ಕಾರವು ಈ ಅಂಶಗಳನ್ನು ಪರಿಗಣಿಸದೆಯೇ ಮಿತ್ತಲ್‌ನಂತಹ ಖಾಸಗಿ ಉದ್ಯಮಗಳಿಗೇ ಹೆಚ್ಚಿನ ಮನ್ನಣೆ ನೀಡುತ್ತಿರುವುದು ಕಾರ್ಮಿಕ ವಲಯದಿಂದ ಆಕ್ಷೇಪಗಳು ವ್ಯಕ್ತವಾಗಿವೆ.

 

ಅದೇ ರೀತಿ ವಿಐಎಸ್‌ಎಲ್‌ಗೆ ಮಂಜೂರಾತಿಗಾಗಿ ಮೀಸಲಿಟ್ಟಿದ್ದ 60.70 ಹೆಕ್ಟೇರ್‌ ಗಣಿ ಗುತ್ತಿಗೆಯನ್ನು ಕಾರ್ಯಗತಗೊಳಿಸಿಲ್ಲ. ಅಲ್ಲದೇ ಇದನ್ನು ವಿಐಎಸ್‌ಎಲ್‌ ಆಸ್ತಿಯನ್ನಾಗಿ ಮೆಮೋರೆಂಡಮ್‌ನಲ್ಲಿಯೂ ಸೇರ್ಪಡೆಗೊಳಿಸಿಲ್ಲ. ಹಾಗೆಯೇ ಮಂಜೂರಾಗಿರುವ ಗಣಿ ಪ್ರದೇಶದಲ್ಲಿ ವಿಐಎಸ್‌ಎಲ್‌ ಗಣಿಗಾರಿಕೆ ಚಟುವಟಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, 2024ಕ್ಕೆ ಅದಿರು ಉತ್ಪಾದನೆ ಆರಂಭಗೊಳ್ಳಲಿದೆ. ಆದರೂ ಸೈಲ್‌ ಈ ಘಟಕವನ್ನು ಮುಚ್ಚಲು ನಿರ್ಧರಿಸಿದೆ. 2024ರಿಂದ ಅದಿರು ಉತ್ಪಾದನೆ ಆಗಲಿರುವ ಹೊತ್ತಿನಲ್ಲಾದರೂ ವಿಐಎಸ್‌ಎಲ್‌ನ್ನು ತನ್ನ ಸುಪರ್ದಿಗೆ ಪಡೆದುಕೊಳ್ಳಲು ರಾಜ್ಯ ಸರ್ಕಾರವು ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿದೆ.

 

ವಿಐಎಸ್‌ಎಲ್‌ನ್ನು ನಷ್ಟದಲ್ಲಿರುವ ಉದ್ದಿಮೆ ಎಂದು ಪರಿಗಣಿಸಿರುವ ಕಾರಣ ಯಾವುದೇ ಖಾಸಗಿ ಉದ್ದಿಮೆದಾರರು ಬಂಡವಾಳ ತೊಡಗಿಸಿಲು ಮುಂದೆ ಬರುತ್ತಿಲ್ಲ. ಹೀಗಾಗಿ ವಿಐಎಸ್‌ಎಲ್‌ನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸಂಸದ ಬಿ ವೈ ರಾಘವೇಂದ್ರ ಅವರು 2021ರ ಸೆ.14ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಎಚ್ಚರಿಸಿದ್ದರು.

 

ಸಂಸದ ಬಿ ವೈ ರಾಘವೇಂದ್ರ ಅವರು ಬರೆದಿರುವ ಪತ್ರದ ಪ್ರತಿ

 

ಅಲ್ಲದೆ ರಾಜ್ಯ ಸರ್ಕಾರವು ವಿಐಎಸ್‌ಎಲ್‌ ಕಾರ್ಖಾನೆಯನ್ನು ತನ್ನ ಸುಪರ್ದಿಗೆ ಪಡೆದು ಖನಿಜ ಇಲಾಖೆಯ ಮೂಲಕ ಬಂಡವಾಳ ತೊಡಗಿಸಿ ಪುನಶ್ಚೇತನಗೊಳಿಸಲು ಸೂಕ್ತವಾಗಿದೆ. ಹೀಗಾಗಿ ವಿಐಎಸ್‌ಎಲ್‌ನ್ನು ಪುನಃ ತನ್ನ ಸುಪರ್ದಿಗೆ ವಾಪಸ್‌ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಕೋರಿದ್ದರು.

 

ವಿಐಎಸ್‌ಎಲ್‌ನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯು ಅನುಷ್ಠಾನಗೊಳ್ಳದಿದ್ದಲ್ಲಿ ರಾಜ್ಯ ಸರ್ಕಾರದ ವತಿಯಿಂದಲೇ ಪುನಶ್ಚೇತನಗೊಳಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು 2021ರ ಅಕ್ಟೋಬರ್‌ 5 ರಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ (ತಾಂತ್ರಿಕ ಕೋಶ) ನಿರ್ದೇಶಕರಿಗೆ ಪತ್ರ ಬರೆದಿದ್ದರು. ಇದನ್ನು ಹೊರತುಪಡಿಸಿದರೆ ಈ ಬಗ್ಗೆ ಯಾವುದೇ ಕ್ರಮವಹಿಸಿರುವ ಬಗ್ಗೆ ಕಡತದಲ್ಲಿ ಯಾವುದೇ ದಾಖಲೆ ಲಭ್ಯವಿಲ್ಲ.

 

2010ರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ವೇಳೆ ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಸಹಿ ಮಾಡಿತ್ತು. 6 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿತ್ತು.

 

ನಂತರ ಈ ಉದ್ದೇಶದಿಂದ ಹಿಂದೆ ಸರಿದಿದ್ದ ಈ ಕಂಪನಿಯು ಜಮೀನು ಹಂಚಿಕೆಯಾದ ನಂತರ ಕೆಲವು ಕಾರಣಗಳನ್ನು ಮುಂದಿಟ್ಟಿತ್ತು. ಸೋಲಾರ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಕಂಪನಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದು ಸೋಲಾರ್‌ ಪವರ್‌ ಘಟಕಗಳನ್ನು ಉತ್ಪಾದಿಸಲು ಕೋರಿತ್ತಾದರೂ ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ.

 

ಉಕ್ಕು ಉತ್ಪಾದನಾ ಘಟಕ ಆರಂಭಿಸಲು ಬಳ್ಳಾರಿಯ ಸಂಡೂರು ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಇಂಡಿಯಾ ಲಿಮಿಟೆಡ್‌ಗೆ 2,659.75 ಎಕರೆ ಹಂಚಿಕೆಯಾಗಿತ್ತು. ಹಂಚಿಕೆಯಾದ 8 ವರ್ಷದ ಬಳಿಕ ಆರ್ಸೆಲರ್‌ ಮಿತ್ತಲ್‌ ಕಂಪನಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊಂಡಿತ್ತು. ಆದರೂ ಉದ್ಧೇಶಿತ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಇದಲ್ಲದೇ ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ಧೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಪ್ರಕ್ರಿಯೆ ನಡೆದು 5 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

the fil favicon

SUPPORT THE FILE

Latest News

Related Posts