ಬೆಂಗಳೂರು; ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನಿಂದ ಗುಜರಾತ್‌ನ ಕಛ್ ಮತ್ತು ಮಾಂಡ್ವಿಯಲ್ಲಿ 48.3 ಮೆಗಾ ವ್ಯಾಟ್ ಪವನ ವಿದ್ಯುತ್ ಉತ್ಪಾದನೆಯ ಗುತ್ತಿಗೆ ಪಡೆದಿರುವ ಸುಝಲೋನ್ ಎನರ್ಜಿ ಲಿಮಿಟೆಡ್ ಕರ್ನಾಟಕದ ಬೆಳಗಾವಿ ಮತ್ತು ಬಳ್ಳಾರಿಯಲ್ಲಿ 87.36 ಕೋಟಿ ರು. ಮೊತ್ತದಲ್ಲಿ ಪಡೆದಿರುವ ಪವನ ವಿದ್ಯುತ್ ಯೋಜನೆಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿರಲಿಲ್ಲ ಎಂಬ ಸಂಗತಿಯನ್ನು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯು ಬಹಿರಂಗೊಳಿಸಿದೆ.
ಬೆಳಗಾವಿಯ ಮಾವಿನಹುಂಡ ಮತ್ತು ಬಳ್ಳಾರಿಯ ಸೋಗಿ ಯೋಜನೆಯನ್ನು ಆರಂಭಿಸುವುದಕ್ಕೆ ಮುನ್ನ ಯೋಜನಾ ವರದಿಗಳನ್ನು ತಯಾರಿಸದೇ ಇರುವುದು ಮತ್ತು ಅಗತ್ಯ ಶಾಸನಬದ್ಧ ಅನುಮತಿಗಳನ್ನು ಪಡೆಯದೇ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕಂಪನಿಯು ಟೆಂಡರ್ ಕರೆದಿತ್ತಲ್ಲದೇ ಇದರಲ್ಲಿ ಏಕೈಕ ಬಿಡ್‌ದಾರರಾಗಿ ಹೊರಹೊಮ್ಮಿದ್ದ ಸುಝಲೋನ್ ಎನರ್ಜಿ ಲಿಮಿಟೆಡ್‌ಗೆ ಗುತ್ತಿಗೆ ನೀಡಲಾಗಿತ್ತು. ಮತ್ತು ಮುಂಗಡವಾಗಿ 24.67 ಕೋಟಿ ರು. ಪಾವತಿಯಾಗಿತ್ತು ಎಂಬುದು ಸಿಎಜಿ ವರದಿಯಿಂದ ತಿಳಿದು ಬಂದಿದೆ.
ನಿವೇಶನಕ್ಕೆ ಸಂಪರ್ಕ ರಸ್ತೆಯ ಅನಾನುಕೂಲತೆ, ರಸ್ತೆ ಅಗಲೀಕರಣಕ್ಕೆ ಅರಣ್ಯ ಭೂಮಿಯ ಮಾರ್ಗಾಂತರಕ್ಕೆ ಅರಣ್ಯ ಅಧಿಕಾರಿಗಳಿಂದ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿನ ಆದ ವಿಳಂಬ ಮತ್ತಿತರ ಲೋಪದೋಷಗಳಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹೀಗಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕಂಪನಿಯು ಬೆಳಗಾವಿಯ ಮಾವಿನಹುಂಡದಲ್ಲಿ 65.78 ಕೋಟಿ ರು ಹೂಡಿಕೆ ಮಾಡಿದ್ದ ಯಂತ್ರಗಳನ್ನು (ಗಾಳಿ ಟರ್ಬೈನ್) ವಿದ್ಯುತ್ ಉತ್ಪಾದನೆಗೆ ಒಳಪಡಿಸದ ಕಾರಣ 2017ರ ಅಕ್ಟೋಬರ್‌ನಿಂದ 2018ರ ಮಾರ್ಚ್ ಹಾಗೂ ಬಳ್ಳಾರಿಯ ಸೋಗಿಯಲ್ಲಿ 2016ರ ಫೆಬ್ರುವರಿಯಿಂದ 2020ರ ಮೇ ತಿಂಗಳವರೆಗೆ ಯಾವುದೇ ಉತ್ಪಾದನೆಯಿಲ್ಲದೆಯೇ ವ್ಯರ್ಥವಾಗಿ ಉಳಿದುಕೊಂಡಿದ್ದವು ಎಂಬ ಅಂಶವನ್ನು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
ಅಲ್ಲದೇ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕಂಪನಿಯು 30.34 ಕೋಟಿ ಮೊತ್ತದಷ್ಟು ಸಂಭಾವ್ಯ ವರಮಾನ ಮತ್ತು ಬಳಸದೇ ಇದ್ದ ಯಂತ್ರಗಳ ಸರಬರಾಜುಗಳ ಕಡೆಗೆ ಗುತ್ತಿಗೆದಾರರಿಗೆ ನೀಡಿದ್ದ ಮುಂಗಡದ ಮೇಲೆ 9.61 ಕೋಟಿ ಮೊತ್ತದಷ್ಟು ಬಡ್ಡಿ ಗಳಿಕೆಯನ್ನೂ ಕಳೆದುಕೊಂಡಿತ್ತು.ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಳಗೊಳಿಸುವ ಉದ್ದೇಶವನ್ನು (2005ರ ಸೆಪ್ಟಂಬರ್‌ನಲ್ಲಿ ಪರಿಕಲ್ಪನೆಗೆ ಬಂದಂತಹ ವಿದ್ಯುತ್ ಉತ್ಪಾದನೆ ಸಾಮರ್ಥ್ಯ) ಕೇವಲ 2018ರ ಮಾರ್ಚ್, 2020ರ ಮೇ ತಿಂಗಳಲ್ಲಿ ಅಂದರೆ 13ರಿಂದ 15 ವರ್ಷಗಳು ಕಳೆದ ನಂತರ ಸಾಧಿಸಲಾಗಿತ್ತು. ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.
‘ಕಂಪನಿಯು ಓರ್ವ ಏಕೈಕ ಸವಾಲುದಾರರಿಗೆ ಏಪ್ರಿಲ್ 2015ರಲ್ಲಿ ಗುತ್ತಿಗೆ ನೀಡುವುದರೊಂದಿಗೆ ಅಂತಿಮವಾಗಿ ಮುಕ್ತಾಯಗೊಂಡಿತ್ತಾದ್ದರಿಂದ ಏಕೈಕ/ಅಧಿಕ ಮೌಲ್ಯದ ಸವಾಲುಗಳ ಕಾರಣ ಯೋಜನೆಯು ವಿಳಂಬಗೊಂಡಿತು ಎಂಬ ವಾದವನ್ನು ಒಪ್ಪಿಕೊಳ್ಳುವಂತಿಲ್ಲ. ಮತ್ತು ಕಂಪನಿಯು ಸವಿವರ ಯೋಜನೆ ವರದಿಗಳನ್ನು ತಯಾರಿಸಲು, ಟೆಂಡರ್ ಆಹ್ವಾನಿಸಲು ನಾಲ್ಕು ವರ್ಷಗಳಷ್ಟು ತೆಗೆದುಕೊಂಡಿತ್ತು. ಅರಣ್ಯ ಇಲಾಖೆಯ ಅನುಮತಿಗೆ ಸಂಬಂಧಿಸಿದಂತೆ ಕಂಪನಿಯು ಅವಿರತವಾಗಿ ಪ್ರಯತ್ನಿಸಿತ್ತು ಎಂಬ ನೀಡಿರುವ ಉತ್ತರವು ಯಾವುದೇ ಸಾಕ್ಷ್ಯಾಧಾರಗಳ ಬೆಂಬಲದಿಂದ ಕೂಡಿರಲಿಲ್ಲ,’ ಎಂದು ಸಿಎಜಿ ವರದಿಯು ಅಭಿಪ್ರಾಯಪಟ್ಟಿದೆ.
29.24 ದಶಲಕ್ಷ ಯೂನಿಟ್ ನಿವ್ವಳ ವಾರ್ಷಿಕ ವಿದ್ಯುತ್ ಉತ್ಪಾದನೆಯ ಟೆಂಡರ್‌ನಲ್ಲಿ ಭಾಗವಹಿಸಿದ್ದ ಕಂಪನಿಗಳ ಪೈಕಿ ಏಕೈಕ ಬಿಡ್‌ದಾರನಾಗಿ ಹೊರಹೊಮ್ಮಿದ್ದ ಸುಝಲೋನ್ ಎನರ್ಜಿ ಲಿಮಿಟೆಡ್‌ಗೆ 87.36 ಕೋಟಿ ಮೊತ್ತದ ಯೋಜನೆಗೆ ಏಪ್ರಿಲ್ 2015ರಲ್ಲಿ ಗುತ್ತಿಗೆ ನೀಡಲಾಗಿತ್ತು.
ಮಾವಿನಹುಂಡದಲ್ಲಿ 8.4 ಮೆಗಾ ವ್ಯಾಟ್, ಸೋಗಿಯಲ್ಲಿ 4.2 ಮೆಗಾ ವ್ಯಾಟ್ ಸಾಮರ್ಥ್ಯದೊಂದಿಗಿನ ಯೋಜನೆಗಳನ್ನು ಕಾಮಗಾರಿ ನೀಡಿದ ದಿನಾಂಕದಿಂದ ಹನ್ನೆರಡು ತಿಂಗಳುಗಳ ಒಳಗೆ ಅಂದರೆ 2016ರ ಏಪ್ರಿಲ್ 2016ರ ಒಳಗೆ ಪೂರ್ಣಗೊಳಿಸಬೇಕಿತ್ತು. ಗುತ್ತಿಗೆ ವಿಶೇಷ ಷರತ್ತುಗಳ ಪ್ರಕಾರ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಕಂಪನಿಯು ಗುತ್ತಿಗೆದಾರರಿಗೆ ತಮ್ಮ ಗುತ್ತಿಗೆ ಕಾಮಗಾರಿಗಳಿಗೆ ಸಜ್ಜುಗೊಳ್ಳುವ ಸಲುವಾಗಿ ಗುತ್ತಿಗೆ ಮೌಲ್ಯದ ಶೇ. 30ರಂತೆ ಏಪ್ರಿಲ್ 2015ರಲ್ಲಿ ಬಡ್ಡಿ ರಹಿತವಾಗಿ ಮುಂಗಡವಾಗಿ 24.67 ಕೋಟಿ ರು. ಪಾವತಿಸಿತ್ತು.
ಅಲ್ಲದೇ ಕಾಮಗಾರಿ ನಿವೇಶನಕ್ಕೆ ತರಲಾಗಿದ್ದ ಸಾಮಗ್ರಿಗಳ ಸರಬರಾಜುಗಳ ಮೌಲ್ಯದ ಶೇ.50ರಂತೆ 2016ರ ಫೆಬ್ರುವರಿ ಮತ್ತು 2017ರ ಅಕ್ಟೋಬರ್‌ನಲ್ಲಿ 41.11 ಕೋಟಿ (ಮಾವಿನಹುಂಡ ಯೋಜನೆಗೆ 27.68 ಕೋಟಿ ಹಾಗೂ ಸೋಗಿ ಯೋಜನೆಗೆ 13.48 ಕೋಟಿ) ನೀಡಿತ್ತು. ಆದರೂ ಸುಝಲೋನ್ ಎನರ್ಜಿ ಲಿಮಿಟೆಡ್ ನಿಗದಿತ ದಿನಾಂಕಗಳಿಂದ ಅನುಕ್ರಮವಾಗಿ ಎರಡು ಹಾಗೂ ನಾಲ್ಕು ವರ್ಷಗಳು ಕಳೆದ ನಂತರ ಚಾಲನೆ ನೀಡಿತ್ತು ಎಂದು ಸಿಎಜಿ ವರದಿಯಲ್ಲಿ ವಿವರಿಸಲಾಗಿದೆ.